ವಿಷಮುಕ್ತ ಕೃಷಿ ಮಾಡುತ್ತಿರುವವರಿಗೂ, ಈ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವವರಿಗೂ ಇದು ಉಪಯುಕ್ತ ಕೈಪಿಡಿ

0 minutes, 4 seconds Read

ಡಾ. ರೆಡ್ಡಿಯವರ ಅನುಭವ ವಿಷರಹಿತ ಕೃಷಿಯ ವಿವಿಧ ಪ್ರಕಾರಗಳ ಅನನ್ಯ ಸಂಗಮ. ಈಗಾಗಲೆ ವಿಷಮುಕ್ತ ಕೃಷಿ ಮಾಡುತ್ತಿರುವವರಿಗೂ, ಈ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವವರಿಗೂ ಇದು ಉಪಯುಕ್ತ ಕೈಪಿಡಿ; ದಾರಿದೀಪ.

——————————————————————–

ರಾಸಾಯನಿಕ ಕೃಷಿಯಿಂದ ಬೇಸತ್ತಿರುವವರು ಅಥವಾ ಹೊಸದಾಗಿ ವಿಷಮುಕ್ತ ಕೃಷಿ ಮಾಡಬಯಸುವವರು ಕೇಳುವ ಪ್ರಶ್ನೆ: ಮಣ್ಣಿಗೆ ರಸಗೊಬ್ಬರ ಉಣ್ಣಿಸದೆಯೇ, ಗಿಡಗಳಿಗೆ ವಿಷ ಸಿಂಪಡಿಸದೆಯೇ ಬೆಳೆ ಬೆಳೆಯಬೇಕಿದ್ದರೆ ಯಾವ ವಿಧಾನ ಅನುಸರಿಸಬೇಕು?

ಸುಲಭಕ್ಕೆ ಉತ್ತರಿಸುವುದು ಕಷ್ಟ. ವಿಷಮುಕ್ತ ಕೃಷಿ ಇಂದು ಅಷ್ಟೊಂದು ಕವಲುಗಳಲ್ಲಿ ಹರಡಿಹೋಗಿದೆ. ಸಾವಯವ ಕೃಷಿ, ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ, ಪರಿಸರಸ್ನೇಹಿ ಕೃಷಿ, ಜೀವಚೈತನ್ಯ ಕೃಷಿ, ಶಾಶ್ವತ ಕೃಷಿ ಹೀಗೆ. ಡಾ. ನಾರಾಯಣ ರೆಡ್ಡಿ ಅವರು ಇವೆಲ್ಲವುಗಳ ಸಂಗಮದಂತಿದ್ದರು.

ಅವರು ರಾಸಾಯನಿಕ ಕೃಷಿಗೆ ವಿದಾಯ ಹೇಳಿ ಸಾವಯವದ ದಾದಿ ಹಿಡಿದ ಸಂದರ್ಭದಲ್ಲಿ ಈಗಿನ ಹಾಗೆ ಸಿದ್ಧ ಸೂತ್ರಗಳಿರಲಿಲ್ಲ. ಜಪಾನಿನ ಮಸನೊಬು ಫುಕುವೊಕಾ ಸಹಜ ಕೃಷಿಯ ಸಾಧ್ಯತೆಗಳನ್ನು ಮುಂದಿಟ್ಟಿದ್ದರೂ ತಮ್ಮ ತತ್ವಗಳನ್ನು ಎಲ್ಲಾ ಕಡೆಗಳಲ್ಲಿಯೂ ಯಥಾವತ್ತಾಗಿ ಅನುಸರಿಸುವುದು ಸೂಕ್ತವಲ್ಲ ಎಂಬ ಕಿವಿಮಾತನ್ನೂ ಹೇಳಿದ್ದರು.

ಫುಕುವೊಕಾ ಅವರ ‘ಒಂದು ಹುಲ್ಲಿನ ಕ್ರಾಂತಿ’ ಮತ್ತು ರುಡೋಲ್ಫ್ ಸ್ಟೀನರ್ ಅವರ ‘ಅಗ್ರಿಕಲ್ಚರ್’ ಕೃತಿಯ ಅಂತಃಸತ್ವವನ್ನು ಅರಗಿಸಿಕೊಂಡಿದ್ದ ರೆಡ್ಡಿ ಅವರು ತಾವು ಮಣ್ಣಿನ ವಿಚಾರವಾಗಿ The Soul of Soil ಮತ್ತು Secrets of Fertile Soils ಪುಸ್ತಕಗಳನ್ನು ಲೆಕ್ಕವಿಲ್ಲದಷ್ಟು ಬಾರಿ ಓದಿದ್ದಾಗಿ ಹೇಳಿದ್ದಾರೆ. ಇವೆಲ್ಲವುಗಳ ಜತೆಗೆ ನಮ್ಮ ಸಾಂಪ್ರದಾಯಿಕ ಕೃಷಿಯಲ್ಲಿ ಅಡಕವಾಗಿದ್ದ ನೆಲಮೂಲ ಜ್ಞಾನಭಂಡಾರವನ್ನೂ ಶೋಧಿಸಿ ತಮ್ಮ ಭೂಮಿ-ಬೆಳೆಗಳಿಗೆ ಬೇಕಾದ ಹತ್ಯಾರುಗಳನ್ನು ಆರಿಸಿಕೊಂಡಿದ್ದರು.

ಹೀಗೆ ವ್ಯಾಪಕ ಓದು ಮತ್ತು ಸತತ ಪ್ರಯೋಗದ ಮೂಲಕ ತಾವು ಕಂಡುಕೊಂಡ ಸಂಗತಿಗಳನ್ನು ಆಸಕ್ತ ರೈತರೊಂದಿಗೆ ಹಂಚಿಕೊಳ್ಳುವುದಕ್ಕೆ ಅವರು ಸದಾ ಸಿದ್ಧರಾಗಿದ್ದರು. ಬಸ್ಸೋ ರೈಲೋ ಹತ್ತಿ ಎಲ್ಲೆಂದರಲ್ಲಿಗೆ ಹೋಗಿಬಿಡುತ್ತಿದ್ದರು. ಹೀಗೆ ಒಮ್ಮೆ ತಮಿಳುನಾಡಿನ ಸತ್ಯಮಂಗಲ ತಲುಪಿ ಅಲ್ಲಿನ ಸಾವಯವ ಕೃಷಿಕ ಎಸ್.ಆರ್. ಸುಂದರರಾಮನ್ ಅವರ ಗುಂಪಿನೊಂದಿಗೆ ಕುಳಿತು ಚರ್ಚಿಸಿದರು. ನಂತರದ ದಿನಗಳಲ್ಲಿ ಆ ಊರಿಗೆ ರೆಡ್ಡಿಯವರು ಅದೆಷ್ಟು ಸಲ ಹೋದರೋ ಏನೋ. ರೆಡ್ಡಿಯವರಷ್ಟೇ ಪ್ರಯೋಗಶೀಲರು, ಸಾಧಕರು ಸುಂದರರಾಮನ್. ಈ ಪುಸ್ತಕಕ್ಕೆ ಅವರದೇ ಮುನ್ನುಡಿ. ಮೌಲಿಕ ನುಡಿಗಳು.

‘ನಾರಾಯಣ ರೆಡ್ಡಿಯವರಿಗೆ ವಿಶಾಲವಾಗಿ ಯೋಚಿಸುವುದು ಸಾಧ್ಯವಾಗುತ್ತಿತ್ತು. ತಮ್ಮ ಸಿದ್ಧಾಂತಕ್ಕೆ, ನಂಬಿಕೆಗೆ ಧಕ್ಕೆಯಾಗುವಂತಿದ್ದರೂ, ಎಲ್ಲಾ ರೈತರಿಗೂ ಅನುಕೂಲವಾಗುವ ದಿಕ್ಕಿನಲ್ಲೇ ಅವರು ನಡೆಯುತ್ತಿದ್ದರೇ ಹೊರತು ಯಾವುದನ್ನೂ ಧಿಕ್ಕರಿಸುತ್ತಿರಲಿಲ್ಲ. ಸಾವಯವ ಕೃಷಿಯಲ್ಲಿ ಯಾವುದೇ ಉತ್ತಮ ವಿಧಾನವನ್ನು ಯಾರೇ ಅನುಸರಿಸುತ್ತಿರಲಿ, ಅದನ್ನು ಉತ್ತೇಜಿಸುತ್ತಿದ್ದರು. ನಿಮಗೆ ಯಾವುದು ಹೊಂದಾಣಿಕೆಯಾಗುತ್ತದೋ ಅದನ್ನೇ ಮಾಡಿ ಎನ್ನುತ್ತಿದ್ದರೇ ಹೊರತು ತಮ್ಮದೇ ಸರಿ ಎನ್ನುವುದು ಅವರಲ್ಲಿ ಇರಲಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ ಸುಂದರರಾಮನ್.

ಚಾಮರಾಜನಗರ ಜಿಲ್ಲೆ ಸತ್ಯಗಾಲದ ಕೃಷಿಕ ಪ್ರಶಾಂತ್ ಜಯರಾಮ್ ಅವರು ಈ ಪುಸ್ತಕದಲ್ಲಿ ರೆಡ್ಡಿಯವರ ಸುಸ್ಥಿರ-ಸಾವಯವ ಕೃಷಿ ಪ್ರಯೋಗಗಳನ್ನೆಲ್ಲ ವಿವರವಾಗಿ ದಾಖಲಿಸಿದ್ದಾರೆ. ರೆಡ್ಡಿಯವರೇ ತಮ್ಮ ಅನುಭವ-ವಿಚಾರಗಳನ್ನು ಬರೆದಿರುವ ರೀತಿಯಲ್ಲಿ ನಿರೂಪಿಸಿರುವುದರಿಂದ ಲೇಖನಗಳನ್ನು ಓದುತ್ತ ಹೋದಂತೆ ಮತ್ತೆ ಅವರ ಮಾತುಗಳನ್ನು ಪ್ರತ್ಯಕ್ಷ ಆಲಿಸಿದಂತೆನಿಸುತ್ತದೆ.

‘ನಮ್ಮೆಲ್ಲರ ಹೊಟ್ಟೆ ತುಂಬಿಸುತ್ತಿರುವ ಆಹಾರ ಬರುವುದು ಕೃಷಿಯಿಂದಲೇ ಹೊರತು, ಕೈಗಾರಿಕೆಗಳಿಂದಲ್ಲ. ಕೃಷಿ ಇಲ್ಲದೆ ಬೇರೆ ಯಾವುದೇ ಉದ್ಯಮ, ವ್ಯವಹಾರ ನಡೆಯುವುದಿಲ್ಲ. ಶಾಲೆಗಳಲ್ಲಿ ಕಡ್ಡಾಯವಾಗಿ ಕೃಷಿಯ ಮಹತ್ವ ತಿಳಿಸಿಕೊಡಬೇಕು. ಮಕ್ಕಳ ಹುಟ್ಟಿದ ದಿನ ಸಂಭ್ರಮಾಚರಣೆಯಲ್ಲಿ ದುಂದುವೆಚ್ಚ ಮಾಡುವ ಬದಲು, ಗಿಡ ನೆಟ್ಟು ಪೋಷಿಸುವ ನೈತಿಕ ಜವಾಬ್ದಾರಿ ಬೆಳೆಸಬೇಕು’ ಎಂದು ಪ್ರತಿಪಾದಿಸುವ ರೆಡ್ಡಿಯವರು, ‘ನನ್ನ ಅನುಭವದ ಪ್ರಕಾರ ಕೃಷಿಗಿಂದ ಗೌರವಯುತವಾದ ವೃತ್ತಿ ಮತ್ತೊಂದಿಲ್ಲ. ಯಾರ ಅನುಕಂಪ, ಮರ್ಜಿಗೆ ಒಳಗಾಗದೆ, ಸ್ವತಂತ್ರವಾಗಿ ಬದುಕಬಹುದಾದ ವೃತ್ತಿ ಇದು. ಕೃಷಿಕರಿಗೆ ಉತ್ತಮ ಭವಿಷ್ಯವಿದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಸ್ಪಷ್ಟಪಡಿಸುತ್ತಾರೆ.

ಮಣ್ಣಿನ ಸಂರಕ್ಷಣೆ ಮತ್ತು ಸುಧಾರಣೆಯ ಕ್ರಮಗಳು, ವಿವಿಧ ರೀತಿಯ ಜೈವಿಕ ಗೊಬ್ಬರಗಳನ್ನು ತಯಾರಿಸುವ ವಿಧಾನ, ರೋಗ-ಕೀಟ ನಿಯಂತ್ರಣ ತಂತ್ರಗಳು, ತೋಟಗಾರಿಕಾ ಬೆಳೆಗಳ ಮಹತ್ವ.ಸೇರಿದಂತೆ ಏಳು ಅಧ್ಯಾಯಗಳಿವೆ. ‘ಸುಸ್ಥಿರ ಕೃಷಿ ಹಾದಿಗಳು’ ಅಧ್ಯಾಯದಲ್ಲಿ ರೆಡ್ಡಿಯವರು ‘ನಿಮ್ಮ ಆಹಾರವನ್ನು ನೀವೇ ಬೆಳೆಯುವುದು ಎಂದರೆ ನಿಮ್ಮ ಹಣವನ್ನು ನೀವೇ ಮುದ್ರಿಸಿಕೊಂಡ ಹಾಗೆ’ ಎನ್ನುತ್ತ ಹದಿನೈದು ಗುಂಟೆಯಲ್ಲಿ ಸುಖೀ ಸಂಸಾರ ಸಾಕಾರಗೊಳಿಸುವ ಮಾರ್ಗೋಪಾಯಗಳನ್ನು ಲೆಕ್ಕಾಚಾರದ ಸಮೇತ ವಿಶದಪಡಿಸುತ್ತಾರೆ.

ದಕ್ಷಿಣ ಕೊರಿಯಾದ ‘ಚೊ ನೈಸರ್ಗಿಕ ಕೃಷಿ ಕೇಂದ್ರ’ಕ್ಕೆ ಭೇಟಿನೀಡಿದಾಗ ತಾವು ಕಲಿತುಕೊಂಡ ನೈಸರ್ಗಿಕ ಕೋಳಿ ಸಾಕಾಣಿಕೆ ಕ್ರಮವನ್ನೂ ರೆಡ್ಡಿಯವರು ಇಲ್ಲಿ ಹಂಚಿಕೊಂಡಿದ್ದಾರೆ. ಹೊರಗಿನಿಂದ ಯಾವುದೇ ರೀತಿಯ ಹೆಚ್ಚುವರಿ ಆಹಾರ ನೀಡದೆ, ಕೋಳಿ ಸಾಕಾಣಿಕೆ ಮನೆಯಲ್ಲಿ ನಿರಂತರವಾಗಿ ಕೋಳಿ ಕಸವನ್ನು ತೆಗೆಯದೆ, ವಾಸನೆಯಿಲ್ಲದಂತೆ ರೋಗಮುಕ್ತವಾಗಿ ಕೋಳಿ ಸಾಕುವ ವಿಧಾನವಿದು.ಅದನ್ನು ತಮ್ಮ ತೋಟದಲ್ಲೂ ಅಳವಡಿಸಲು ಅವರು ಸಿದ್ಧತೆ ಮಾಡಿಕೊಂಡಿದ್ದರು.

ಕೃಷಿ ರಂಗದ ಸಮಸ್ಯೆಗಳಿವೆ ಪರಿಹಾರ ಸಾಧ್ಯವೇ ಎಂಬ ಪ್ರಶ್ನೆಗೆ ನಾಡೋಜ ರೆಡ್ಡಿ ಅವರು ಉತ್ತರಿಸುತ್ತ, ಪಾರಂಪರಿಕ ಕೃಷಿ ಜ್ಞಾನ ಅಳವಡಿಸಿಕೊಂಡು, ಬೀಜ ಮತ್ತು ಗೊಬ್ಬರದ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸುವುದು, ಬಹುಬೆಳೆ ಬೆಳೆಯುವುದು, ಮರಾಧರಿತ ಕೃಷಿ, ಮೌಲ್ಯವರ್ಧನೆ, ನೇರ ಮಾರಾಟ ಸೇರಿದಂತೆ ಹಲವು ಸಲಹೆಗಳನ್ನು ಮುಂದಿಡುತ್ತಾರೆ. ‘ಪರಿಸರಸ್ನೇಹಿ ಕೃಷಿಯ ಮೂಲಕ ನಮ್ಮ ಬಹು ಸಂಸ್ಕೃತಿ, ವಿವಿಧತೆ, ಬಹುಬೆಳೆ ಪದ್ಧತಿ, ಆಹಾರ ಸಂಸ್ಕೃತಿ, ಶುದ್ಧ ಪರಿಸರ ಉಳಿಸಿಕೊಳ್ಳಬಹುದೇ ವಿನಃ ರಾಸಾಯನಿಕ ಕೃಷಿಯಿಂದ ಸಾಧ್ಯವಿಲ್ಲ’ ಎಂಬುದು ಅವರ ದೃಢ ನಂಬಿಕೆ.

ಕೃಷಿಯಲ್ಲಿ ಹೆಚ್ಚು ಬಂಡವಾಳ ಹಾಕಿ ಹೆಚ್ಚು ಇಳುವರಿ ಪಡೆಯುವ ದುಸ್ಸಾಹಸಕ್ಕೆ ಇಳಿಯದಂತೆ ಈ ಕೃಷಿ ಸಂತ ಎಚ್ಚರಿಸುತ್ತಾರೆ. ಇಂತಹ ಹುಚ್ಚು ಕಲ್ಪನೆ ಪರಿಸರ ಮತ್ತು ರೈತರ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡುವಂಥದ್ದು; ಆದ್ದರಿಂದ ನಾವು ಹೆಚ್ಚು ಬಂಡವಾಳ ಹಾಕದೆ ಸಹಜ ಇಳುವರಿ ಪಡೆಯುವ ಬಗ್ಗೆ ಗಮನಹರಿಸಬೇಕು ಎಂಬ ಕಿವಿಮಾತು ಹೇಳುತ್ತಾರೆ.

ರೆಡ್ಡಿಯವರು ನಮ್ಮ ನಡುವೆ ಇದ್ದಾಗಲೇ ಅವರ ಕೃಷಿ ಪ್ರಯೋಗ-ಅನುಭವ-ಚಿಂತನೆಗಳ ವಿಸ್ತೃತ ದಾಖಲಾತಿ ಆಗಬೇಕಿತ್ತು ಎಂದೆನಿಸುವುದು ಸಹಜ. ಅವರನ್ನು ಕುರಿತ ‘ಈ ಭೂಮಿ ಈ ಸಸ್ಯ’ ಮತ್ತು ‘ನೆಲದೊಡಲ ಚಿಗುರು’ ಕೃತಿಗಳ ಸಾಲಿಗೆ ಈ ಪುಸ್ತಕದ ಸೇರ್ಪಡೆ ಸಕಾಲಿಕವಾದುದು.ಈಗಾಗಲೆ ವಿಷಮುಕ್ತ ಕೃಷಿ ಮಾಡುತ್ತಿರುವವರಿಗೂ, ಈ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವವರಿಗೂ ಇದು ಉಪಯುಕ್ತ ಕೈಪಿಡಿ. ಲೇಖಕ ಪ್ರಶಾಂತ್ ಜಯರಾಮ್ ಹಾಗೂ ಇಕ್ರಾಗೆ ಅಭಿನಂದನೆಗಳು.

– ಶಿವರಾಂ ಪೈಲೂರು

Similar Posts

Leave a Reply

Your email address will not be published. Required fields are marked *

X
× How can I help you?