ಬೀಜ

‘ಬಂಪರ್ ಬೆಳೆ-ಭಾರೀ ಲಾಭ’ದ ಆಮಿಷ ಒಡ್ಡಿದ್ದ ರಾಸಾಯನಿಕ ಕೃಷಿ ಕ್ರಮೇಣ ಮಣ್ಣಿನ ಫಲವತ್ತತೆಯನ್ನು ನುಂಗಿಹಾಕಿ ವಿಷಭರಿತ ಫಸಲನ್ನು ನೀಡುತ್ತ ಮನುಷ್ಯನ ಆರೋಗ್ಯವನ್ನೂ, ಮಾನಸಿಕ ನೆಮ್ಮದಿಯನ್ನೂ ಹಿಂಡತೊಡಗಿದಾಗ ಅನೇಕರು ಸಾವಯವದ ಹಾದಿ ಹಿಡಿದು ಮಣ್ಣಿಗೂ ಮನಸ್ಸಿಗೂ ಹಿತವೆನಿಸುವ ರೀತಿಯಲ್ಲಿ ಹೆಜ್ಜೆಹಾಕತೊಡಗಿದ್ದಾರೆ. ಆರಂಭದಲ್ಲಿ ಕೇಳಿಬರುತ್ತಿದ್ದ ‘ಸಾವಯವದಲ್ಲಿ ಒಳ್ಳೆ ಇಳುವರಿ ಸಾಧ್ಯವೇ’ ಎಂಬ ಪ್ರಶ್ನೆ ಈಗೀಗ ಮೌನವಾಗುತ್ತಿದೆ. ವಿಷಮುಕ್ತ ಕೃಷಿಯಲ್ಲಿ ರಸಗೊಬ್ಬರ ಅಥವಾ ರಾಸಾಯನಿಕ ಕೀಟನಾಶಕಗಳ ಬಳಕೆ ಇಲ್ಲದ ಕಾರಣ ಮಣ್ಣಿನ ಫಲವತ್ತತೆ ಗಣನೀಯವಾಗಿ ಸುಧಾರಣೆಯಾಗುತ್ತದೆ; ಇದರಿಂದಾಗಿ ಇಳುವರಿ ಹೆಚ್ಚುತ್ತದೆ. ಮಾತ್ರವಲ್ಲ, ಈ ಫಸಲು ಹೆಚ್ಚು ಆರೋಗ್ಯಪೂರ್ಣವೂ ಸತ್ವಪೂರ್ಣವೂ ಆಗಿರುತ್ತದೆ ಎಂಬುದನ್ನು ಹಲವರು ಅನುಭವದಿಂದ ಕಂಡುಕೊಳ್ಳುತ್ತಲೇ ಇನ್ನಷ್ಟು ಮಂದಿ ಈ ಹಾದಿಯತ್ತ ಹೊರಳಿದರು. ಜಾಗತಿಕ ಮಟ್ಟದಲ್ಲೂ ಸಾವಯವ ಆಂದೋಲನ ಪ್ರವರ್ಧಮಾನಕ್ಕೆ ಬಂತು.
ಕಳೆದ ಮೂರು ದಶಕಗಳಲ್ಲಿ ಸುಸ್ಥಿರ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಾಗಿದ್ದು ಇದಕ್ಕೆ ಪೂರಕವಾಗಿ ನಾಟಿ ಬೀಜ-ತಳಿಗಳ ಸಂರಕ್ಷಣೆ, ದೇಸಿ ಆಹಾರ ಪದ್ಧತಿ ಹಾಗೂ ನೇರ ಮಾರುಕಟ್ಟೆ ಅಭಿಯಾನವೂ ಬೆಳೆದುಬಂತು. ನೆಲಮೂಲ ಜ್ಞಾನ ಭಂಡಾರದೊಳಗಿನಿಂದ ಸಾಂಪ್ರದಾಯಿಕ ಕೃಷಿಯ ಅನೇಕಾನೇಕ ಜಾಣ್ಮೆ-ತಂತ್ರಗಾರಿಕೆಗಳು ಒಂದೊಂದಾಗಿ ಹೊರಬರತೊಡಗಿದವು. ಬೀಜ ಸ್ವಾತಂತ್ರ್ಯ ಆಂದೋಲನ ವ್ಯಾಪಕವಾಗಿ ಪಸರಿಸಿತು. ಇದರ ಫಲಶ್ರುತಿಯೆ ಈ ಪುಸ್ತಕ.
ಪುದುಚೇರಿಯ ಅರೋವಿಲ್ ನಲ್ಲಿರುವ ‘ಪೆಬೆಲ್ ಗಾರ್ಡನ್’ ಒಂದೊಮ್ಮೆ ಬರಡು ನೆಲ ಎನಿಸಿತ್ತು. ಅಲ್ಲಿ ಬರ್ನಾರ್ಡ್ ಹಾಗೂ ದೀಪಿಕಾ ಕುಂದಾಜಿ ಅವರು ಎರಡೂವರೆ ದಶಕಗಳಿಂದ ಮಣ್ಣು ಪುನರುಜ್ಜೀವನ, ನೆಲಜಲ ಸಂರಕ್ಷಣೆ, ಕಾಡುಪ್ರಭೇದಗಳನ್ನು ಬೆಳೆಸುವುದು, ಸಾವಯವ ಒಳಸುರಿಗಳ ಬಳಕೆ, ತರಕಾರಿ ತಳಿವೈವಿಧ್ಯ ಸಂರಕ್ಷಣೆ, ಬೀಜ ವಿನಿಮಯದಂಥ ಹತ್ತುಹಲವು ಬಗೆಯ ಕೆಲಸಗಳಲ್ಲಿ ತೊಡಗಿದ್ದಾರೆ. ಇದರಿಂದಾಗಿ ಆ ಏಳು ಎಕರೆ ಪ್ರದೇಶ ಒಂದು ಅನನ್ಯ ಸಸ್ಯಾವರಣವಾಗಿ ರೂಪುಗೊಂಡಿದೆ. ‘ಪ್ರತಿಯೊಬ್ಬರಿಗೂ ಒಂದು ಕೈತೋಟ’ ಅಲ್ಲಿನ ವಿಶಿಷ್ಟ ಚಟುವಟಿಕೆ. ಇದರ ಮೂಲಕ ವಾಣಿಜ್ಯೇತರ ಬೆಳೆಗಳ ತಳಿ ಸಂರಕ್ಷಣೆ ಹಾಗೂ ಪಾಳುನೆಲದಲ್ಲೂ ಕೈತೋಟ ಮಾಡಿ ಅವುಗಳನ್ನು ಹೇಗೆ ಬೆಳೆಸಬಹುದು ಎಂಬುದನ್ನು ಆಸಕ್ತರಿಗೆ ಕಲಿಸುತ್ತಿದ್ದಾರೆ.
‘ಭಾರತದಲ್ಲಿನ ಕೃಷಿ ಭೂಮಿಯ ಅರ್ಧದಷ್ಟು ಭಾಗ ಮೇಲ್ಮಣ್ಣು ಸವಕಳಿಯಿಂದ ಹಾಳಾಗಿದೆ. ಆದರೆ ನಾವು ನಡೆಸಿದ ಸಣ್ಣ ಪ್ರಯೋಗ ಹೊಸದೊಂದು ಸಾಧ್ಯತೆಯನ್ನು ತೋರಿಸಿದೆ. ಸ್ಥಳೀಯ ಜ್ಞಾನ-ಕೌಶಲ, ಅಲ್ಲೇ ಸಿಗುವ ಒಳಸುರಿ ಹಾಗೂ ಸಸ್ಯಗಳ ಬಳಕೆಯಂಥ ಸರಳ ವಿಧಾನಗಳ ಮೂಲಕ ಮಣ್ಣು ಸುಧಾರಣೆಯಾಗಬಲ್ಲದು ಎಂಬುದನ್ನು ಮನವರಿಕೆ ಮಾಡಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬೇಕಾದ ‘ಉನ್ನತ ತಂತ್ರಜ್ಞಾನ’ ಅಂದರೆ ನೆಲದೆಡೆಗಿನ ಪ್ರೀತಿ ಹಾಗೂ ಮಮತೆ’ ಎನ್ನುತ್ತಾರೆ ದೀಪಿಕಾ.
ಈ ಪುಸ್ತಕದಲ್ಲಿ ಅವರು ವಿವಿಧ ತರಕಾರಿಗಳಲ್ಲಿ ತಳಿ ಶುದ್ಧತೆಯನ್ನು ಕಾಪಾಡಿಕೊಳ್ಳುತ್ತ ಬೀಜೋತ್ಪಾದನೆ ಮಾಡುವ ವಿಧಾನವನ್ನು ತಿಳಿಸಿಕೊಟ್ಟಿದ್ದಾರೆ.
ಪರಾಗಸ್ಪರ್ಶದಿಂದ ಹೂವು ಕಾಯಿ-ಹಣ್ಣಾಗಿ ಅದರಲ್ಲಿ ಬೀಜ ರೂಪುಗೊಳ್ಳುವುದು ಮತ್ತು ಆ ಬೀಜ ಮಣ್ಣಿಗೆ ಬಿದ್ದಾಗ ಮೊಳೆತು ಮತ್ತೆ ಗಿಡವಾಗಿ ಬೆಳೆಯುವುದು ನಿಸರ್ಗ ನಿಯಮ. ಆದರೆ ಪರಾಗರೇಣು ಹೂವಿನ ಹೆಣ್ಣು ಭಾಗಕ್ಕೆ ಸೇರುವ ಪರಾಗಸ್ಪರ್ಶ ಕ್ರಿಯೆ ಎಲ್ಲ ತರಕಾರಿಗಳಲ್ಲಿ ಒಂದೇ ತೆರನಾಗಿರುವುದಿಲ್ಲ. ಇದಕ್ಕೆ ಕಾರಣ ಆಯಾ ಗಿಡದ ಹೂವಿನ ರಚನೆಯಲ್ಲಿನ ವಿಭಿನ್ನತೆ.
ಬದನೆ, ಬೆಂಡೆ, ಮೆಣಸಿನಕಾಯಿ, ಟೊಮೆಟೊ ಮತ್ತು ಬೀನ್ಸ್ ನಲ್ಲಿ ಗಂಡು ಮತ್ತು ಹೆಣ್ಣು ಭಾಗಗಳು ಒಂದೇ ಹೂವಿನಲ್ಲಿದ್ದರೆ ಕುಂಬಳ, ಸೋರೆ, ಹೀರೆ, ಸೌತೆ, ಪಡುವಲ ಮತ್ತು ಹಾಗಲದಲ್ಲಿ ಗಂಡು ಮತ್ತು ಹೆಣ್ಣು ಹೂವುಗಳು ಒಂದೇ ಸಸ್ಯದ ಬೇರೆಬೇರೆ ಕಡೆ ಇರುತ್ತವೆ. ಪಪ್ಪಾಯದಲ್ಲಿ ಇವು ಪ್ರತ್ಯೇಕ ಗಿಡಗಳಲ್ಲಿರುತ್ತವೆ.
ಈ ಹಿನ್ನೆಲೆಯಲ್ಲಿ ಕೆಲವು ಹೂವುಗಳಲ್ಲಿ ಸ್ವಕೀಯ ಪರಾಗಸ್ಪರ್ಶವಾದರೆ ಇನ್ನು ಕೆಲವುಗಳಲ್ಲಿ ಜೇನ್ನೊಣ-ದುಂಬಿ-ಪಾತರಗಿತ್ತಿಗಳ ಮೂಲಕ ಪರಕೀಯ ಪರಾಗಸ್ಪರ್ಶ ಏರ್ಪಡುತ್ತದೆ. ಗಾಳಿಯ ಮೂಲಕವೂ ಈ ಕೆಲಸ ನಡೆಯುತ್ತದೆ. ಆದರೆ ಶುದ್ಧ ತಳಿಯ ಬೀಜೋತ್ಪಾದನೆ ಮಾಡಬೇಕಿದ್ದರೆ ಒಂದೇ ಜಾತಿಯ ಎರಡು ತಳಿಗಳ ನಡುವೆ ಪರಾಗಸ್ಪರ್ಶವಾಗದಂತೆ ಎಚ್ಚರಿಕೆ ವಹಿಸಬೇಕು. ಮತ್ತು ಸೂಕ್ತ ತಂತ್ರಗಳ ಮೂಲಕ ನಾವೇ ಕೈಯಿಂದ ಈ ಕ್ರಿಯೆ ನಡೆಸಬೇಕು. ಈ ವಿಧಾನಗಳನ್ನು ಪುಸ್ತಕದಲ್ಲಿ ಚಿತ್ರಸಮೇತ ವಿವರಿಸಿದ್ದಾರೆ. ಇಡೀ ಪುಸ್ತಕವೇ ವರ್ಣದಲ್ಲಿರುವುದರಿಂದ ವಿಷಯವನ್ನು ಅರ್ಥಮಾಡಿಕೊಳ್ಳಲು ಸಹಕಾರಿ.
ಬೀಜ ಶುದ್ಧಗೊಳಿಸುವ ಕ್ರಮ, ಸಂಗ್ರಹಣಾ ವಿಧಾನ ಹಾಗೂ ಮೊಳಕೆ ಸಾಮರ್ಥ್ಯ ಪರೀಕ್ಷೆ ಬಗ್ಗೆಯೂ ಮಾಹಿತಿ ಇದೆ.
‘ರೈತ ಅಥವಾ ಸಮುದಾಯದ ತಳಿ ಸಂಗ್ರಹ ಆ ನಿರ್ದಿಷ್ಟ ಪ್ರದೇಶದಲ್ಲಿ ಬೀಜ ಹಂಚಿಕೆ ಹಾಗೂ ಇತರೆಡೆಗಳಿಗೂ ತಳಿ ವ್ಯಾಪಿಸಲು ನೆರವಾಗುತ್ತದೆ. ಈ ನಿಟ್ಟಿನಲ್ಲಿ ಬೀಜ ಬ್ಯಾಂಕ್ ಗಳೂ ಕೈಜೋಡಿಸಿವೆ. ಪ್ರಸ್ತುತ ಕೃಷಿ ವಲಯ ಎದುರಿಸುತ್ತಿರುವ ಬಿಕ್ಕಟ್ಟು ಹಾಗೂ ಹೈಬ್ರಿಡ್-ಕುಲಾಂತರಿ ತಳಿಗಳು ತಂದೊಡ್ಡುವ ಅಪಾಯವನ್ನು ದೂರಮಾಡಲು ಕೂಡ ಈ ಹಾದಿ ಸಹಕಾರಿ’ ಎನ್ನುತ್ತಾರೆ ದೀಪಿಕಾ.
‘ಹಳೆಯ ತಳಿಗಳನ್ನು ಈಗಿನ ತಂತ್ರಗಳಿಂದ ಉಳಿಸಿಕೊಳ್ಳುವುದು ಮತ್ತು ಮುಂದಿನ ಪೀಳಿಗೆಗೆ ಕೊಡುವುದು ಹೆಚ್ಚು ಆದ್ಯತೆಯ ಕೆಲಸವಾಗಬೇಕಿದೆ. ರೈತರ ಹೊಲದಲ್ಲಿ ಜನ್ಮ ತಳೆದ ತಳಿಗಳು ಬಹುರಾಷ್ಟ್ರೀಯ ಕಂಪನಿಗಳ ವಶವಾಗದೆ ಮತ್ತೆ ರೈತರ ಕೈಗಳಿಗೆ ಹೋಗಬೇಕಿದೆ’ ಎಂದು ಅವರು ಪ್ರತಿಪಾದಿಸುತ್ತಾರೆ.
ಇದು ಕನ್ನಡದಲ್ಲೇ ಬರೆದ ಪುಸ್ತಕ ಎಂಬಂತೆ ಆನಂದತೀರ್ಥ ಪ್ಯಾಟಿ ಅವರು ಸೊಗಸಾಗಿ ಅನುವಾದಿಸಿದ್ದಾರೆ.
****
ಪೂರಕ ಓದಿಗೆ – ಬೇಸಿಕ್ ಬುಕ್ಸ್ (2015) ಹೊರತಂದಿರುವ The Triumph of Seeds (ಲೇ: ಥೋರ್ ಹ್ಯಾನ್ಸನ್), ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ (2008) ಬೀಜ (ಲೇ: ಜಿ. ಕೃಷ್ಣಪ್ರಸಾದ್) ಹಾಗೂ ಗ್ರೀನ್ ಪ್ರತಿಷ್ಠಾನದ ಬೀಜದ ಬುಟ್ಟಿ (2002).

ಹಲಸು

ಈಗ ಹಲಸು ಸೀಸನ್. ರುಚಿರುಚಿಯಾದ ಹಲಸಿನ ಹಣ್ಣು ಮಲೆನಾಡು, ಬಯಲುಸೀಮೆಯಲ್ಲಿ ಲಭ್ಯ. ಈ ವರೆಗೆ ಹೆಚ್ಚಾಗಿ ಬೆಂಗಳೂರು ಹೊರವಲಯದಲ್ಲಷ್ಟೆ ಕಂಡುಬರುತ್ತಿದ್ದ ಈ ಹಣ್ಣಿನ ಮಾರಾಟ ಈ ಬಾರಿ ನಗರದೊಳಗೂ ಕಾಣಿಸುತ್ತಿದೆ. ವಿವಿಧೆಡೆ ರಸ್ತೆಯಂಚಿನಲ್ಲಿ ಹಣ್ಣುಗಳನ್ನು ರಾಶಿ ಹಾಕಿ ಮಾರುತ್ತಿದ್ದಾರೆ.
ಇನ್ನೊಂದೆಡೆ ಹಲಸಿನಿಂದ ತಯಾರಿಸಬಹುದಾದ ಪಾಕವೈವಿಧ್ಯಕ್ಕೆ ಹೊಸಹೊಸ ಸೇರ್ಪಡೆಗಳಾಗುತ್ತಿವೆ. ಹಲಸಿನ ಬೀಜದ ಮಿಲ್ಕ್ ಶೇಕ್ ಮತ್ತು ಚಿಪ್ಸ್ ರೆಸಿಪಿ ಸಾಮಾಜಿಕ ಮಾಧ್ಯಮಗಳಲ್ಲಿ ಚುರುಕಾಗಿ ಹರಿದಾಡುತ್ತಿದೆ. ಕೇರಳದಲ್ಲಂತೂ ಹೊಸಹೊಸ ಹಲಸಿನ ಉತ್ಪನ್ನಗಳು ಬಿಡುಗಡೆಯಾಗುತ್ತಲೇ ಇವೆ. ಮಹಾರಾಷ್ಟ್ರದಲ್ಲೂ ಹಲಸು ಉದ್ದಿಮೆ ಗರಿಗೆದರಿದೆ. ಕರ್ನಾಟಕ ಮತ್ತು ತಮಿಳುನಾಡು ಕೂಡ ಹಿಂದೆಬಿದ್ದಿಲ್ಲ.
ಗಿಡ ನೆಡುವವರಿಗಾಗಿ ಬಗೆಬಗೆಯ ಹಲಸಿನ ತಳಿಗಳೂ ಈಗ ಲಭ್ಯ. ಮಲೆನಾಡಿಗೆ, ಬಯಲುಸೀಮೆಗೆ ಸೂಕ್ತವೆನಿಸುವ, ನೆಟ್ಟ ಮರು ವರ್ಷವೇ ಫಸಲು ನೀಡುವ ತಳಿಗಳಿವೆ. ಅತ್ಯುತ್ಸಾಹಿಗಳು ಕುಂಡದಲ್ಲೇ ಫಸಲು ಇರುವ ಗಿಡವನ್ನು ಒಯ್ಯಬಹುದು! ಮೇಣವಿಲ್ಲದ ಹಲಸು ಕೂಡ ಕೆಲವರಿಗೆ ಆಕರ್ಷಣೆ. ಇನ್ನು ಕೆಲವರಿಗೆ ಗಾಢ ಕೆಂಪುಸೊಳೆಯ ಹಲಸೇ ಬೇಕು. ಹಪ್ಪಳಕ್ಕಾಗಿ, ಚಿಪ್ಸಿಗಾಗಿ, ಉಪ್ಪುಸೊಳೆಗಾಗಿ ಸೂಕ್ತವೆನಿಸುವ ತಳಿಗಳನ್ನು ಹುಡುಕುವವರೂ ಈಗಿನ ಸಣ್ಣ ಕುಟುಂಬಕ್ಕೆ ಹಿತವೆನಿಸುವ ಪುಟ್ಟ ಗಾತ್ರದ ಹಲಸು ನೀಡುವ ಗಿಡಗಳನ್ನೇ ಅಪೇಕ್ಷಿವವರೂ ಇದ್ದಾರೆ.
ಒಂದೂವರೆ ದಶಕದಿಂದ ಹಲಸು ಅಭಿಯಾನದಲ್ಲಿ ನಿರತರಾಗಿರುವ ಹಿರಿಯ ಪತ್ರಕರ್ತ ಶ್ರೀ ಪಡ್ರೆ ಅವರು ‘ಹಲಸಿನ ಅಂತಾರಾಷ್ಟ್ರೀಯ ರಾಯಭಾರಿ’ ಎಂಬ ಗೌರವಕ್ಕೆ ಭಾಜನರಾದವರು. ಅವರ ಸಂಪಾದಕತ್ವದ ‘ಅಡಿಕೆ ಪತ್ರಿಕೆ’ ಈವರೆಗೆ ಹಲಸಿನ ಕುರಿತಾಗಿಯೇ ಪ್ರಕಟಿಸಿರುವ ಮುಖಪುಟ ಲೇಖನಗಳ ಸಂಖ್ಯೆ 30 ದಾಟಿದೆ. ಕನ್ನಡ, ಇಂಗ್ಲಿಷ್ ಮತ್ತು ಮಲಯಾಳಂ ಮೂರೂ ಭಾಷೆಗಳಲ್ಲಿ ಅವರು ಹಲಸು ಜಾಗೃತಿಯ ಲೇಖನಗಳನ್ನು ಬರೆಯುತ್ತಲೇ ಇದ್ದಾರೆ. ಅನೇಕ ಹಲಸು ಹಬ್ಬಗಳಿಗೂ ಅವರೇ ಪ್ರೇರಣೆ.
ಎಲ್ಲಕ್ಕಿಂತ ಮುಖ್ಯವಾಗಿ, ಅವರು ನಡೆಸುತ್ತಿರುವ ‘ಅರಣ್ಮುಲ ಜಾಕ್ ಫ್ರುಟ್’ ವಾಟ್ಸಪ್ ಗುಂಪು ಹಲಸಿಗೆ ಸಂಬಂಧಿಸಿದ ಮಹತ್ವದ ಜಾಗತಿಕ ವೇದಿಕೆ. ಹಲಸು ಬೆಳೆಗಾರರು, ವಿಜ್ಞಾನಿಗಳು, ಉದ್ಯಮಿಗಳು, ಪಾಕಪ್ರವೀಣರು, ಬರಹಗಾರರು ಎಲ್ಲರನ್ನೊಳಗೊಂಡ ಈ ಗುಂಪು ದಿನದಿನವೂ ನಡೆಸುವ ಚರ್ಚೆ, ಮಾಹಿತಿವಿನಿಮಯ ಮಾದರಿಯೆನಿಸುವಂಥದ್ದು.
ನಾಲ್ಕು ವರ್ಷಗಳ ಹಿಂದೆ ಪಡ್ರೆ ಅವರು ಬರೆದಿರುವ ಈ ಪುಸ್ತಕ ಹಲಸು ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಅತ್ಯಂತ ಉಪಯುಕ್ತ ಕೈಪಿಡಿ. ಸ್ಫೂರ್ತಿಯ ಸೆಲೆ. ಶ್ರೀಲಂಕಾದಲ್ಲಿ ಹಲಸು ಆಂದೋಲನ ನಡೆಸಿದ್ದ ಅಲ್ಲಿನ ಸ್ವಾತಂತ್ರ್ಯಯೋಧ ದಿವಂಗತ ಆರ್ಥರ್ ವಿ. ಡಯಾಸ್ (ಕೋಸ್ ಮಾಮ) ಅವರು ‘ಹಸಿವೆ ಬೇಡವೆಂದಾದರೆ ಹಲಸು ನೆಡಿ’ ಎಂದು ಪ್ರತಿಪಾದಿಸುತ್ತಿದ್ದುದನ್ನು ಪಡ್ರೆಯವರು ನೆನಪಿಸಿದ್ದಾರೆ.
“ಹಲಸು ಸ್ಥಳೀಯ ಆಹಾರ ಸುರಕ್ಷತೆಗೆ ದೊಡ್ದ ಆಧಾರ. ಆರೋಗ್ಯದ ದೃಷ್ಟಿಯಿಂದ ಇದು ಒಂದಿನಿತೂ ವಿಷಾಂಶವಿಲ್ಲದ ತರಕಾರಿ; ಸ್ವಾದಿಷ್ತ-ಸತ್ವಭರಿತ ಹಣ್ಣು. ಹೆಚ್ಚು ಶ್ರಮ ಬೇಡದ, ತಪ್ಪದೆ ಪ್ರತಿ ವರ್ಷ ಧಾರಾಳ ಫಲಕೊಡುವ ಇದು ಭವಿಷ್ಯದ ಬೆಳೆ. ಹಲಸಿನ ಮನೆಮನೆ ಬಳಕೆ ಹೆಚ್ಚಿದಾಗ ತನ್ನಿಂತಾನೇ ಅದರ ಮಾನ ಮತ್ತು ಮೌಲ್ಯವರ್ಧನೆ ಆಗುತ್ತದೆ. ಹಲಸಿನ ಬಗ್ಗೆ ನಮ್ಮಲ್ಲಿರುವ ಪೂರ್ವಾಗ್ರಹ ಮತ್ತು ಕೀಳರಿಮೆ ಎಷ್ಟು ಬೇಗ ನಿವಾರಣೆ ಆಗುತ್ತದೆಯೋ ಅಷ್ಟು ಒಳ್ಳೆಯದು” ಎನ್ನುತ್ತಾರೆ ಶ್ರೀ ಪಡ್ರೆ.
ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೃಷಿ-ತೋಟಗಾರಿಕೆ ವಿವಿಗಳು, ಕೆವಿಕೆ ಮತ್ತು ಸಂಶೋಧನಾ ಕೇಂದ್ರಗಳು ಹಲಸಿಗೆ ಉತ್ತೇಜನ ನೀಡುತ್ತಿದ್ದು ವಾಣಿಜ್ಯಿಕವಾಗಿ ಹಲಸು ಬೆಳೆಯುವ ಪ್ರದೇಶ ಹೆಚ್ಚುತ್ತಿದೆ. ಇದಕ್ಕೆ ಪೂರಕವಾಗಿ ಇನ್ನಷ್ಟು ಗ್ರಾಮೀಣ ಉದ್ದಿಮೆಗಳು ರೂಪುಗೊಳ್ಳುವ ಸಾಧ್ಯತೆಯಿದೆ.
‘ಹಲಸು ಬೆಳೆಸೋಣ; ಹಲಸು ಬಳಸೋಣ’ ಅಭಿಯಾನದಲ್ಲಿ ಸಾಧ್ಯವಾದಷ್ಟೂ ಕೈಜೋಡಿಸೋಣ. ಈ ಮಳೆಗಾಲದಲ್ಲಿ ಗಿಡಗಳನ್ನು ನೆಡುವಾಗ ಹಲಸನ್ನು ಮರೆಯದಿರೋಣ.
ಎಂಟು ವರ್ಣ ಪುಟಗಳನ್ನೊಳಗೊಂಡ, ಸಮೃದ್ಧ ಮಾಹಿತಿಯನ್ನೊಳಗೊಂಡ, ಆಕರ್ಷಕ ವಿನ್ಯಾಸದ ‘ಹಲಸು’ ಪುಸ್ತಕದ ಪ್ರತಿಗಳಿಗಾಗಿ –
Adike Patike

ಅಡಿಕೆ ಪತ್ರಿಕೆ

ತರಕಾರಿ ಸ್ವಾವಲಂಬನೆ, ಪೌಷ್ಟಿಕಾಂಶ ಬಲವರ್ಧನೆ, ಜೀವವೈವಿಧ್ಯ ಸಂರಕ್ಷಣೆ ಮೂರನ್ನೂ ಸಾಧ್ಯಗೊಳಿಸುವ ವಿಶಿಷ್ಟ ‘ಎಲೆಯರಿವು’ ಆಂದೋಲನದ ಬಗ್ಗೆ ಬೆಳಕುಚೆಲ್ಲುವ ಅಡಿಕೆ ಪತ್ರಿಕೆ ಜುಲೈ ಸಂಚಿಕೆ
ಕೊರೋನಾ ಸಂಕಷ್ಟದ ನಡುವೆಯೆ ‘ಅಡಿಕೆ ಪತ್ರಿಕೆ’ಯ ಜುಲೈ ಸಂಚಿಕೆ ಕೈಸೇರಿದೆ. ಚೇತೋಹಾರಿ ಲೇಖನಗಳನ್ನು ಓದಿದಾಗ ಒಂದಿಷ್ಟು ಹಿತವೆನಿಸಿತು. ಧುತ್ತನೆ ಎರಗಿರುವ ಈ ಸೋಂಕು ತಂದೊಡ್ಡಿರುವ ನೂರೆಂಟು ಸಮಸ್ಯೆ, ತಲ್ಲಣಗಳಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಬಗೆಯಲ್ಲಿ ಭಾಗಿಯಾಗಲೇಬೇಕಿರುವ ಈ ಸಂಕೀರ್ಣ ಸ್ಥಿತಿಯಲ್ಲಿ ಸೃಜನಶೀಲವಾಗಿ ಯೋಚಿಸುವುದು ಮತ್ತು ಬರೆಯುವುದು ತುಂಬ ಸವಾಲಿನದ್ದು. ಇದನ್ನು ಅಪ ಸಮರ್ಥವಾಗಿ ನಿಭಾಯಿಸಿರುವುದು ಅಭಿಮಾನದ ವಿಷಯ.
ಇದಕ್ಕೂ ಮುನ್ನ ಹೊರತಂದಿದ್ದ ಮೇ-ಜೂನ್ ಪಿಡಿಎಫ್ ಸಂಚಿಕೆ ಕೂಡ ಮಹತ್ವದ್ದಾಗಿತ್ತು. ಅದು ಕೂಡ ವಿಶಿಷ್ಟ ಸಾಹಸವೆ.
‘ಜಗತ್ತಿನ, ದೇಶದ ನೋವಿನೆದುರು ಕೃಷಿರಂಗದ ನೋವು ಹೆಲುವವರೂ, ಕೇಳುವವರೂ ಇಲ್ಲದೆ ಕತ್ತಲೆಯ ಗರ್ಭಕ್ಕೇ ಸೇರಿಹೋಗಲಿದೆ’ ಎಂದಿರುವ ಸಂಪಾದಕ ಶ್ರೀ ಪಡ್ರೆ ಅವರು, ‘ಕೊರೋನಾ ಕಲಿಸಿದ ಅಮೂಲ್ಯ ಪಾಠಗಳು ನೆಲೆ ನಿಲ್ಲಲಿ. ನಮ್ಮೆಲ್ಲರ ಬದುಕಲ್ಲಿ ಕಹಿಯ ನಡುವೆಯೂ ಹೊಸ ಅಧ್ಯಾಯ ಚಿಗುರಲಿ’ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಮುಖಪುಟ ಲೇಖನ (‘ಆಹಾರ ಭದ್ರತೆಯ ದಾರಿದೀಪ – ಎಲೆಯರಿವು’) ಗಮನಸೆಳೆಯುತ್ತದೆ. ಇಂತಹ ವಿನೂತನ ಏಕವ್ಯಕ್ತಿ ಆಂದೋಲನ ಈಗಿನ ಸಂದರ್ಭಕ್ಕೆ ಹೆಚ್ಚು ಪ್ರಸ್ತುತ. ಇದು ತರಕಾರಿ ಸ್ವಾವಲಂಬನೆ, ಪೌಷ್ಟಿಕಾಂಶ ಬಲವರ್ಧನೆ, ಜೀವವೈವಿಧ್ಯ ಸಂರಕ್ಷಣೆ ಮೂರನ್ನೂ ಸಾಧ್ಯಗೊಳಿಸುವಂಥದ್ದು. ಸಜೀವನ್ ಅವರ ‘ವಿಭವ ದರ್ಶನಂ’ ಪುಸ್ತಕ ಪ್ರಕಟವಾಗುವುದರ ಜತೆಗೆ ಅದರ ಕನ್ನಡ ಅವತರಣಿಕೆಯೂ ಬೇಗನೆ ಬರಲಿ ಎಂದು ಆಶಯ. ಜಿ. ಕೃಷ್ಣಪ್ರಸಾದ್ ಅವರು ‘ಸಹಜ ಸಮೃದ್ಧ’ದ ವತಿಯಿಂದ ಈಗಾಗಲೆ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದರೂ ಅಚ್ಚರಿಯೇನಿಲ್ಲ.
ನಿಟ್ಟೂರಿನಲ್ಲಿ ಭತ್ತದ ಗದ್ದೆಗಳ ಮರುಚೇತನದ ಬಗ್ಗೆ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್ ಅವರಿಗೆ ಯೋಚನೆ ಬಂದದ್ದು, ಅದನ್ನವರು ಊರವರ ಸಹಭಾಗಿತ್ವದಲ್ಲಿ ಸಾಕಾರಗೊಳಿಸಿರುವುದು ಈಗಿನ ಕಾಲದಲ್ಲಿ ತೀರ ತೀರ ಅಪರೂಪದ್ದೆನಿಸುವ ವಿದ್ಯಮಾನ. ವಿದ್ಯಾರ್ಥಿನಿಯ ಕಣ್ಣು ಕೆಂಪಾಗಿ ಊದಿದ್ದನ್ನು ಗಮನಿಸಿ ಅದರ ಹಿನ್ನೆಲೆಯನ್ನು ಅರ್ಥಮಾಡಿಕೊಂಡು ಆ ನೋವಿಗೆ ಸ್ಪಂದಿಸಿದ ಸನ್ಮನಸ್ಸಿಗೆ ಗದ್ದೆಗಳಿಗೆ ಮರುಜೀವ ನೀಡುವ ಪ್ರೇರಣೆ ದೊರೆತದ್ದು ಆ ಊರಿನ ಭಾಗ್ಯ.
ಶಿಲ್ಲಾಂಗಿನ ಜಾಕೊಲೇಟ್ ಭರವಸೆಯ ಉತ್ಪನ್ನ. ‘ಅಡಿಕೆ ಕೌಶಲ್ಯ ಪಡೆ’ (ಅಕೌಪ) ತರಬೇತಿ ಪಡೆದ ಸುರೇಶ್ ಆ ಹಾದಿಯಲ್ಲಿ ಯಶ ಕಾಣುತ್ತಿರುವುದು ಸಂತಸದ ಸಂಗತಿ. ವಿಷಸಿಂಪಡಣೆಗೆ ನಿರಾಕರಿಸುವ ಅವರ ಬದ್ಧತೆಯೂ ಶ್ಲಾಘನೀಯ. ಮಲ್ಲಿಕಾರ್ಜುನ ಹೊಸಪಾಳ್ಯ ಅವರು ಗಂಧಸಾಲೆಯ ಘಮಲನ್ನು ಬಣ್ಣಿಸುತ್ತಲೇ ಅದು ನೇಪಥ್ಯಕ್ಕೆ ಸರಿಯುವ ಆತಂಕವನ್ನೂ ಮುಂದಿಟ್ಟಿದ್ದಾರೆ.
ಡಾ. ಮನೋಹರ ಉಪಾಧ್ಯ ಅವರ ಅಂಕಣ ಎಂದಿನಂತೆ ‘ಓಪನ್ ಸೋರ್ಸ್’ ಮಾಹಿತಿ ಭಂಡಾರ. ‘ರಾಜ ಸಂಬಾರ – ಕೃಷ್ಣ ಬಂಗಾರ’ ಬರಹ ಕಾಳುಮೆಣಸಿನ ಆರೋಗ್ಯ-ಔಷಧೀಯ ಮಹತ್ವವನ್ನು ಸರಳ-ಆಪ್ತವಾಗಿ ಮನಗಾಣಿಸಿಕೊಡುತ್ತದೆ. ‘ಜಾಗ ತುಂಬಿಸಲು ಹೇಳುವುದಿದ್ದರೆ…’ ಎನ್ನುವ ಮಾತು ಅವರದ್ದೇ ಒಗ್ಗರಣೆ ಸ್ಟೈಲು. ಇಡೀ ಅಡುಗೆಗೇ ಅದರ ಶ್ರೇಯ.
ಅಪ ತಂಡಕ್ಕೆ, ಎಲ್ಲ ಲೇಖಕರಿಗೆ ಅಭಿನಂದನೆಗಳು.
———————————————————–
ಮಣ್ಣಿನ ಗೆಳತಿ | Mannina Gelathi

ಎಲ್. ನಾರಾಯಣ ರೆಡ್ಡಿ – ಸುಸ್ಥಿರ ಕೃಷಿ ಪಾಠಗಳು

ಡಾ. ರೆಡ್ಡಿಯವರ ಅನುಭವ ವಿಷರಹಿತ ಕೃಷಿಯ ವಿವಿಧ ಪ್ರಕಾರಗಳ ಅನನ್ಯ ಸಂಗಮ. ಈಗಾಗಲೆ ವಿಷಮುಕ್ತ ಕೃಷಿ ಮಾಡುತ್ತಿರುವವರಿಗೂ, ಈ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವವರಿಗೂ ಇದು ಉಪಯುಕ್ತ ಕೈಪಿಡಿ; ದಾರಿದೀಪ.

ರಾಸಾಯನಿಕ ಕೃಷಿಯಿಂದ ಬೇಸತ್ತಿರುವವರು ಅಥವಾ ಹೊಸದಾಗಿ ವಿಷಮುಕ್ತ ಕೃಷಿ ಮಾಡಬಯಸುವವರು ಕೇಳುವ ಪ್ರಶ್ನೆ: ಮಣ್ಣಿಗೆ ರಸಗೊಬ್ಬರ ಉಣ್ಣಿಸದೆಯೇ, ಗಿಡಗಳಿಗೆ ವಿಷ ಸಿಂಪಡಿಸದೆಯೇ ಬೆಳೆ ಬೆಳೆಯಬೇಕಿದ್ದರೆ ಯಾವ ವಿಧಾನ ಅನುಸರಿಸಬೇಕು?

ಸುಲಭಕ್ಕೆ ಉತ್ತರಿಸುವುದು ಕಷ್ಟ. ವಿಷಮುಕ್ತ ಕೃಷಿ ಇಂದು ಅಷ್ಟೊಂದು ಕವಲುಗಳಲ್ಲಿ ಹರಡಿಹೋಗಿದೆ. ಸಾವಯವ ಕೃಷಿ, ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ, ಪರಿಸರಸ್ನೇಹಿ ಕೃಷಿ, ಜೀವಚೈತನ್ಯ ಕೃಷಿ, ಶಾಶ್ವತ ಕೃಷಿ ಹೀಗೆ. ಡಾ. ನಾರಾಯಣ ರೆಡ್ಡಿ ಅವರು ಇವೆಲ್ಲವುಗಳ ಸಂಗಮದಂತಿದ್ದರು.
ಮಣ್ಣಿನ ಗೆಳತಿ | Mannina Gelathi

ಅವರು ರಾಸಾಯನಿಕ ಕೃಷಿಗೆ ವಿದಾಯ ಹೇಳಿ ಸಾವಯವದ ದಾದಿ ಹಿಡಿದ ಸಂದರ್ಭದಲ್ಲಿ ಈಗಿನ ಹಾಗೆ ಸಿದ್ಧ ಸೂತ್ರಗಳಿರಲಿಲ್ಲ. ಜಪಾನಿನ ಮಸನೊಬು ಫುಕುವೊಕಾ ಸಹಜ ಕೃಷಿಯ ಸಾಧ್ಯತೆಗಳನ್ನು ಮುಂದಿಟ್ಟಿದ್ದರೂ ತಮ್ಮ ತತ್ವಗಳನ್ನು ಎಲ್ಲಾ ಕಡೆಗಳಲ್ಲಿಯೂ ಯಥಾವತ್ತಾಗಿ ಅನುಸರಿಸುವುದು ಸೂಕ್ತವಲ್ಲ ಎಂಬ ಕಿವಿಮಾತನ್ನೂ ಹೇಳಿದ್ದರು.

ಫುಕುವೊಕಾ ಅವರ ‘ಒಂದು ಹುಲ್ಲಿನ ಕ್ರಾಂತಿ’ ಮತ್ತು ರುಡೋಲ್ಫ್ ಸ್ಟೀನರ್ ಅವರ ‘ಅಗ್ರಿಕಲ್ಚರ್’ ಕೃತಿಯ ಅಂತಃಸತ್ವವನ್ನು ಅರಗಿಸಿಕೊಂಡಿದ್ದ ರೆಡ್ಡಿ ಅವರು ತಾವು ಮಣ್ಣಿನ ವಿಚಾರವಾಗಿ The Soul of Soil ಮತ್ತು Secrets of Fertile Soils ಪುಸ್ತಕಗಳನ್ನು ಲೆಕ್ಕವಿಲ್ಲದಷ್ಟು ಬಾರಿ ಓದಿದ್ದಾಗಿ ಹೇಳಿದ್ದಾರೆ. ಇವೆಲ್ಲವುಗಳ ಜತೆಗೆ ನಮ್ಮ ಸಾಂಪ್ರದಾಯಿಕ ಕೃಷಿಯಲ್ಲಿ ಅಡಕವಾಗಿದ್ದ ನೆಲಮೂಲ ಜ್ಞಾನಭಂಡಾರವನ್ನೂ ಶೋಧಿಸಿ ತಮ್ಮ ಭೂಮಿ-ಬೆಳೆಗಳಿಗೆ ಬೇಕಾದ ಹತ್ಯಾರುಗಳನ್ನು ಆರಿಸಿಕೊಂಡಿದ್ದರು.

ಹೀಗೆ ವ್ಯಾಪಕ ಓದು ಮತ್ತು ಸತತ ಪ್ರಯೋಗದ ಮೂಲಕ ತಾವು ಕಂಡುಕೊಂಡ ಸಂಗತಿಗಳನ್ನು ಆಸಕ್ತ ರೈತರೊಂದಿಗೆ ಹಂಚಿಕೊಳ್ಳುವುದಕ್ಕೆ ಅವರು ಸದಾ ಸಿದ್ಧರಾಗಿದ್ದರು.

ಚಾಮರಾಜನಗರ ಜಿಲ್ಲೆ ಸತ್ಯಗಾಲದ ಕೃಷಿಕ ಪ್ರಶಾಂತ್ ಜಯರಾಮ್ ಅವರು ಈ ಪುಸ್ತಕದಲ್ಲಿ ರೆಡ್ಡಿಯವರ ಸುಸ್ಥಿರ-ಸಾವಯವ ಕೃಷಿ ಪ್ರಯೋಗಗಳನ್ನೆಲ್ಲ ವಿವರವಾಗಿ ದಾಖಲಿಸಿದ್ದಾರೆ. ರೆಡ್ಡಿಯವರೇ ತಮ್ಮ ಅನುಭವ-ವಿಚಾರಗಳನ್ನು ಬರೆದಿರುವ ರೀತಿಯಲ್ಲಿ ನಿರೂಪಿಸಿರುವುದರಿಂದ ಲೇಖನಗಳನ್ನು ಓದುತ್ತ ಹೋದಂತೆ ಮತ್ತೆ ಅವರ ಮಾತುಗಳನ್ನು ಪ್ರತ್ಯಕ್ಷ ಆಲಿಸಿದಂತೆನಿಸುತ್ತದೆ.

ಮಣ್ಣಿನ ಗೆಳತಿ | Mannina Gelathi

‘ನಮ್ಮೆಲ್ಲರ ಹೊಟ್ಟೆ ತುಂಬಿಸುತ್ತಿರುವ ಆಹಾರ ಬರುವುದು ಕೃಷಿಯಿಂದಲೇ ಹೊರತು, ಕೈಗಾರಿಕೆಗಳಿಂದಲ್ಲ. ಕೃಷಿ ಇಲ್ಲದೆ ಬೇರೆ ಯಾವುದೇ ಉದ್ಯಮ, ವ್ಯವಹಾರ ನಡೆಯುವುದಿಲ್ಲ. ಶಾಲೆಗಳಲ್ಲಿ ಕಡ್ಡಾಯವಾಗಿ ಕೃಷಿಯ ಮಹತ್ವ ತಿಳಿಸಿಕೊಡಬೇಕು. ಮಕ್ಕಳ ಹುಟ್ಟಿದ ದಿನ ಸಂಭ್ರಮಾಚರಣೆಯಲ್ಲಿ ದುಂದುವೆಚ್ಚ ಮಾಡುವ ಬದಲು, ಗಿಡ ನೆಟ್ಟು ಪೋಷಿಸುವ ನೈತಿಕ ಜವಾಬ್ದಾರಿ ಬೆಳೆಸಬೇಕು’ ಎಂದು ಪ್ರತಿಪಾದಿಸುವ ರೆಡ್ಡಿಯವರು, ‘ನನ್ನ ಅನುಭವದ ಪ್ರಕಾರ ಕೃಷಿಗಿಂದ ಗೌರವಯುತವಾದ ವೃತ್ತಿ ಮತ್ತೊಂದಿಲ್ಲ. ಯಾರ ಅನುಕಂಪ, ಮರ್ಜಿಗೆ ಒಳಗಾಗದೆ, ಸ್ವತಂತ್ರವಾಗಿ ಬದುಕಬಹುದಾದ ವೃತ್ತಿ ಇದು. ಕೃಷಿಕರಿಗೆ ಉತ್ತಮ ಭವಿಷ್ಯವಿದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಸ್ಪಷ್ಟಪಡಿಸುತ್ತಾರೆ.

ಮಣ್ಣಿನ ಸಂರಕ್ಷಣೆ ಮತ್ತು ಸುಧಾರಣೆಯ ಕ್ರಮಗಳು, ವಿವಿಧ ರೀತಿಯ ಜೈವಿಕ ಗೊಬ್ಬರಗಳನ್ನು ತಯಾರಿಸುವ ವಿಧಾನ, ರೋಗ-ಕೀಟ ನಿಯಂತ್ರಣ ತಂತ್ರಗಳು, ತೋಟಗಾರಿಕಾ ಬೆಳೆಗಳ ಮಹತ್ವ.ಸೇರಿದಂತೆ ಏಳು ಅಧ್ಯಾಯಗಳಿವೆ. ‘ಸುಸ್ಥಿರ ಕೃಷಿ ಹಾದಿಗಳು’ ಅಧ್ಯಾಯದಲ್ಲಿ ರೆಡ್ಡಿಯವರು ‘ನಿಮ್ಮ ಆಹಾರವನ್ನು ನೀವೇ ಬೆಳೆಯುವುದು ಎಂದರೆ ನಿಮ್ಮ ಹಣವನ್ನು ನೀವೇ ಮುದ್ರಿಸಿಕೊಂಡ ಹಾಗೆ’ ಎನ್ನುತ್ತ ಹದಿನೈದು ಗುಂಟೆಯಲ್ಲಿ ಸುಖೀ ಸಂಸಾರ ಸಾಕಾರಗೊಳಿಸುವ ಮಾರ್ಗೋಪಾಯಗಳನ್ನು ಲೆಕ್ಕಾಚಾರದ ಸಮೇತ ವಿಶದಪಡಿಸುತ್ತಾರೆ.

ರೆಡ್ಡಿಯವರು ನಮ್ಮ ನಡುವೆ ಇದ್ದಾಗಲೇ ಅವರ ಕೃಷಿ ಪ್ರಯೋಗ-ಅನುಭವ-ಚಿಂತನೆಗಳ ವಿಸ್ತೃತ ದಾಖಲಾತಿ ಆಗಬೇಕಿತ್ತು ಎಂದೆನಿಸುವುದು ಸಹಜ. ಅವರನ್ನು ಕುರಿತ ‘ಈ ಭೂಮಿ ಈ ಸಸ್ಯ’ ಮತ್ತು ‘ನೆಲದೊಡಲ ಚಿಗುರು’ ಕೃತಿಗಳ ಸಾಲಿಗೆ ಈ ಪುಸ್ತಕದ ಸೇರ್ಪಡೆ ಸಕಾಲಿಕವಾದುದು.