ರೈತ ಸಮುದಾಯದ, ಅದರಲ್ಲೂ ಮುಖ್ಯವಾಗಿ ಸಣ್ಣ ರೈತರು ಹಾಗೂ ಗ್ರಾಮೀಣ ಬಡವರ ಹಿತರಕ್ಷಣೆಗಾಗಿ ದುಡಿಯುತ್ತಿರುವ ಕೊಲ್ಕತ್ತಾದ ಅರ್ಧೇಂದು ಶೇಖರ್ ಚಟರ್ಜಿ ಅವರು ಪರ್ಮಾಕಲ್ಚರ್ ಕ್ಷೇತ್ರದಲ್ಲಿ ವಿಶೇಷ ಪರಿಣತಿ ಹೊಂದಿದವರು. ಈ ವಿಷಯದಲ್ಲಿ ದೇಶವಿದೇಶಗಳ ನಾನಾ ಕಡೆ ಅವರು ತರಬೇತಿ ನೀಡುತ್ತಿದ್ದಾರೆ. ಹಾಗೂ ಈ ತರಬೇತಿ ಕಾರ್ಯಕ್ರಮಗಳಿಗೆ ಪೂರಕವಾಗಿ ಬಂಗಾಳಿ ಮತ್ತು ಇಂಗ್ಲಿಷ್ನಲ್ಲಿ ಸಾಕಷ್ಟು ಪುಸ್ತಿಕೆಗಳನ್ನೂ ರಚಿಸಿದ್ದಾರೆ.
ಪರ್ಮಾಕಲ್ಚರ್ ಅಥವಾ ಶಾಶ್ವತ/ಸುಸ್ಥಿರ ಕೃಷಿ ಪದ್ಧತಿಯ ಮೂಲ ಸೂತ್ರಗಳು ಹಾಗೂ ಅವನ್ನು ಅಳವಡಿಸುವ ಕ್ರಮಗಳ ಕುರಿತು ಅವರು ಕರ್ನಾಟಕದಲ್ಲಿ ನೀಡಿರುವ ತರಬೇತಿಗಳನ್ನು ಆಧರಿಸಿ ಸಚಿತ್ರ ಪುಸ್ತಕ ಕನ್ನಡದಲ್ಲಿ ಹೊರಬಂದಿರುವುದು ಹೆಮ್ಮೆಯ ವಿಚಾರ. ಮೂರು ದಶಕಗಳ ಹಿಂದೆ 1988ರಲ್ಲಿ ಸಹಜ ಕೃಷಿ ಸಂತ ಜಪಾನಿನ ಮಸನೊಬು ಫುಕುವೊಕ ಅವರ ‘ಒನ್ ಸ್ಟ್ರಾ ರೆವೆಲ್ಯೂಶನ್’ ಪುಸ್ತಕವನ್ನು ಮೇಲುಕೋಟೆ ಜನಪದ ಸೇವಾ ಟ್ರಸ್ಟಿನ ಸಂತೋಷ್ ಕೌಲಗಿ ಅವರು ಸರಳವಾಗಿ ಕನ್ನಡಕ್ಕೆ ಅನುವಾದಿಸಿ ‘ಒಂದು ಹುಲ್ಲಿನ ಕ್ರಾಂತಿ’ ಪ್ರಕಟಿಸಿದಾಗ ರಾಜ್ಯದ ಕೃಷಿ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಯಾಯಿತು.
ಅಷ್ಟರಲ್ಲಾಗಲೆ ಮಿತಿಮೀರಿದ ರಾಸಾಯನಿಕಗಳ ಬಳಕೆ ಮಣ್ಣು-ಫಸಲು-ಪರಿಸರ-ಆದಾಯ-ಆರೋಗ್ಯ ಎಲ್ಲೆದರ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ರೈತರ ಅನುಭವಕ್ಕೆ ಬಂದಿತ್ತು. ಬೇಸಾಯದ ಹಾದಿ ವರ್ಷದಿಂದ ವರ್ಷಕ್ಕೆ ದುರ್ಗಮವಾಗುತ್ತ ಸಾಗತೊಡಗಿದಾಗ ಫುಕುವೊಕ ಅವರ ವಿಚಾರಗಳು ಹೊಸ ಭರವಸೆ ಮೂಡಿಸಿದವು.
‘ನಾನು ಹೇಳುತ್ತಿರುವುದನ್ನು ಯಥಾವತ್ತಾಗಿ ಅನುಸರಿಸಬೇಡಿ. ನನ್ನ ಸಿದ್ಧಾಂತಗಳ ಆಧಾರದಲ್ಲಿ ನಿಮ್ಮನಿಮ್ಮ ಭೂಮಿ-ಹವಾಮಾನ-ಬೆಳೆಗೆ ಸೂಕ್ತವಾದ ವಿನ್ಯಾಸ ರೂಪಿಸಿಕೊಳ್ಳಿ’ ಎಂಬ ಫುಕುವೊಕ ಅವರ ಕಿವಿಮಾತಿಗೆ ಅನುಗುಣವಾಗಿ ರಾಜ್ಯದ ವಿವಿಧೆಡೆ ಅನೇಕರು ತಮ್ಮದೇ ಆದ ರೀತಿಯಲ್ಲಿ ಪ್ರಯೋಗಕ್ಕಿಳಿದರು.
ಫುಕುವೊಕ ಅವರಂತೆ ವಿಷಮುಕ್ತ ಕೃಷಿಯಲ್ಲಿ ಸುದೀರ್ಘ ಅಧ್ಯಯನ ಮಾಡಿದ್ದ ಆಸ್ಟ್ರೇಲಿಯಾದ ಬಿಲ್ ಮಾಲಿಸನ್ ಅವರು 1975ರ ಮಧ್ಯಭಾಗದಲ್ಲಿ ಪರ್ಮಾಕಲ್ಚರ್ ಎಂಬ ಹೊಸ ಪರಿಕಲ್ಪನೆಯನ್ನು ಪ್ರತಿಪಾದಿಸಿದರು. ಡೇವಿಡ್ ಹೋಮ್ಗ್ರೆನ್ ಜತೆಗೆ ಅವರ ಮೊದಲ ಪುಸ್ತಕ ‘ಪರ್ಮಾಕಲ್ಚರ್ ಒನ್’ 1978ರಲ್ಲಿ ಪ್ರಕಟವಾಯಿತು. ಮುಂದೆ 1988ರಲ್ಲಿ ಮಾಲಿಸನ್ ಅವರು ‘ಪರ್ಮಾಕಲ್ಚರ್ – ಎ ಡಿಸೈನರ್ಸ್ ಮಾನ್ಯುವಲ್’ ಶೀರ್ಷಿಕೆಯ ಬೃಹತ್ ಗ್ರಂಥ ಪ್ರಕಟಿಸಿದರು. ತಾವು ಹೇಳುವ ಪ್ರತಿಯೊಂದು ವಿನ್ಯಾಸವೂ ಸುಲಭವಾಗಿ, ಸ್ಪಷ್ಟವಾಗಿ ಅರ್ಥವಾಗುವಂತೆ ಹಲವಾರು ರೇಖಾಚಿತ್ರಗಳನ್ನು ಇದರಲ್ಲಿ ಅಳವಡಿಸಿದ್ದರು.
ಒಂದರ್ಥದಲ್ಲಿ ಫುಕುವೊಕ ಅವರ ವಿಚಾರಗಳು ವಿಷಮುಕ್ತ ಕೃಷಿಗೆ ತಾತ್ವಿಕ ಅಡಿಪಾಯ ಹಾಕಿದರೆ, ಮಾಲಿಸನ್ ಅವರ ವಿನ್ಯಾಸಗಳು ರೈತರು ತಮ್ಮ ಹೊಲ, ಮನೆಯ ಮಟ್ಟದಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಸವಿವವರವಾಗಿ ಚಿತ್ರಿಸಿದವು ಎನ್ನಬಹುದು. ಸಹಜ ಕೃಷಿಯಂತೆ ಶಾಶ್ವತ ಕೃಷಿ ಕೂಡ ವಿಶ್ವದೆಲ್ಲೆಡೆ ಒಂದು ಆಂದೋಲನವಾಗಿ ಬೆಳೆಯಿತು. ನಾನಾ ಕಡೆ ಪರ್ಮಾಕಲ್ಚರ್ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು. ಹೈದರಾಬಾದಿನಲ್ಲಿ ಪರ್ಮಾಕಲ್ಚರ್ – ಇಂಡಿಯಾ ವೇದಿಕೆ ಸ್ಥಾಪನೆಯಾಯಿತು. ಪಾಂಡಿಚೇರಿಯ ಅರೋವಿಲ್ಲೆಯಲ್ಲಿ ಕೆಲವರು ಇದರಲ್ಲಿ ಗಂಭೀರವಾಗಿ ತೊಡಗಿಕೊಂಡರು.
ಮಾಲಿಸನ್ ಅವರು ಭಾರತಕ್ಕೂ ಆಗಮಿಸಿ ವಿವಿಧೆಡೆ ಪರ್ಮಾಕಲ್ಚರ್ ತರಬೇತಿ ನೀಡಿ ರೈತರು ಹಾಗೂ ಕೃಷಿ ಕಾರ್ಯಕರ್ತರೊಂದಿಗೆ ತಮ್ಮ ಅನುಭವ ಹಂಚಿಕೊಂಡರು. ಮಾತ್ರವಲ್ಲ ಯಾವುದೇ ರಾಯಧನ ಪಡೆಯದೆ ತಮ್ಮ ಗ್ರಂಥದ ಭಾರತೀಯ ಆವೃತ್ತಿಯನ್ನು ಪ್ರಕಟಿಸಲು ಅನುಮತಿಯನ್ನೂ ನೀಡಿದರು. ಈ ಹಿನ್ನೆಲೆಯಲ್ಲಿ ಹೈದರಾಬಾದಿನ ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿ ಹಾಗೂ ಪರ್ಮಾಕಲ್ಚರ್ – ಇಂಡಿಯಾ ಜತೆಗೂಡಿ 1990ರಲ್ಲಿ ಮಾಲಿಸನ್ ಅವರ ಗ್ರಂಥವನ್ನು ಮುದ್ರಿಸಿ ಸಾವಯವ ಕೃಷಿ ಸಂಬಂಧಿ ಸಂಘಸಂಸ್ಥೆಗಳಿಗೆ ಒದಗಿಸಿದರು. ಅದರ ಒಂದು ಪ್ರತಿ ಡಿ.ಡಿ. ಭರಮಗೌಡ್ರ ಅವರ ಮೂಲಕ ನನ್ನ ಕೈಸೇರಿರುವ ನೆನಪು ಈಗಲೂ ಹಸಿರಾಗಿದೆ.
ಇಂದು ಸಾವಯವ ಅಭಿಯಾನ ತುಂಬ ಆಳವಾಗಿ, ವ್ಯಾಪಕವಾಗಿ ಬೇರೂರಿದ್ದು ಸಶಕ್ತವಾಗಿ ಬೆಳೆದುನಿಂತಿದೆ. ಮಣ್ಣು-ಬೆಳೆಗೆ ವಿಷ ಸುರಿಯದೆ, ಜೀವವೈವಿಧ್ಯ ಪೊರೆಯುತ್ತ ಸಮೃದ್ಧ ಬೆಳೆ ಬೆಳೆಯುವ ಅನೇಕಾನೇಕ ಸಾಧ್ಯತೆಗಳು ಬೇರೆಬೇರೆ ನಾಮಾಂಕಿತದಲ್ಲಿ ನಮ್ಮ ಮುಂದಿವೆ. ಈ ಮಧ್ಯೆ ನಾಟಿ ಬೀಜ – ದೇಸಿ ತಳಿ ಸಂರಕ್ಷಣೆ, ನೆಲಜಲ ಸಂರಕ್ಷಣೆ, ಸ್ಲೋ ಫುಡ್ ಇವೇ ಮುಂತಾದ ಆಂದೋಲನಗಳೂ ಜತೆಗೂಡಿ ಸಾವಯವದ ಚೈತನ್ಯ ಇನ್ನಷ್ಟು ಹೆಚ್ಚಿದೆ. ಈ ಹಾದಿಗೆ ಹೊರಳಿರುವವರ ಪೈಕಿ ಹೆಚ್ಚಿನವರು ಒಂದೇ ವಿಧಾನದ ಬದಲು ವಿವಿಧ ವಿಧಾನಗಳಿಂದ ತಮಗೆ ಸೂಕ್ತವೆನಿಸಿದ ಅಂಶಗಳನ್ನು ಆಯ್ದುಕೊಂಡು ಮುಂದುವರಿಯುತ್ತಿದ್ದಾರೆ.
ನಿಸರ್ಗ ಮತ್ತು ಸಮುದಾಯ ಇವೆರಡರ ಜತೆಗೂ ಅನನ್ಯ ಸಾಮರಸ್ಯ ಸಾಧಿಸಿಕೊಂಡು ಬೇಸಾಯ ಮಾಡುವುದೇ ಶಾಶ್ವತ ಕೃಷಿಯ ಜೀವಾಳ. ಇತರ ಸಾವಯವ-ಸುಸ್ಥಿರ-ಸ್ವಾವಲಂಬಿ ಕೃಷಿ ಮತ್ತು ಆಲೋಚನಾ ಕ್ರಮಗಳ ಜತೆಗೂ ಶಾಶ್ವತ ಕೃಷಿಯ ತತ್ವಗಳು ಸಾಮರಸ್ಯ ಸಾಧಿಸಿದೆ ಎಂಬುದು ಇಲ್ಲಿನ ದೃಷ್ಟಾಂತಗಳಿಂದ ಸ್ಪಷ್ಟ.
ಪರ್ಮಾಕಲ್ಚರ್ ತತ್ವಗಳು ನಮಗೆ ಅರ್ಥವಾಗುವುದು ವಿವಿಧ ವಿನ್ಯಾಸಗಳ ಮೂಲಕ. ಇಡೀ ಪುಸ್ತಕ ಇಂತಹ ಹಲವಾರು ವಿನ್ಯಾಸಗಳನ್ನು ತೆರೆದಿಡುತ್ತದೆ. ಒಂದೊಂದು ವಿನ್ಯಾಸವೂ ಪರಸ್ಪರ ಸಂಬಂಧವಿರುವ ಹಲವಾರು ಅಂಶಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ ಬೇಲಿಯನ್ನೇ ಪರಿಗಣಿಸಿದರೆ, ಅದು ಕೇವಲ ನಮ್ಮ ಜಮೀನಿನ ಗಡಿಯನ್ನು ಗುರುತಿಸುವ ಕಲ್ಲು ಗೂಟಗಳಿಗೆ ಬಿಗಿದ ಮುಳ್ಳುತಂತಿಯ ಜಾಲಕ್ಕೆ ಸೀಮಿತವಾಗುವ ಬದಲು ನಾನಾ ಗಿಡ-ಮರ-ಬಳ್ಳಿ-ಮೂಲಿಕೆಗಳಿರುವ ಜೀವಂತ ಬೇಲಿಯಾದರೆ ಹೊಲಕ್ಕೆ ರಕ್ಷಣೆ ಮಾತ್ರವಲ್ಲ ಹತ್ತಾರು ಪ್ರಯೋಜನಗಳಿವೆ. ಇಂತಹ ಬೇಲಿ ಶಾಶ್ವತ ಮತ್ತು ಸುಭದ್ರ. ಅಗ್ರೋ ಫಾರೆಸ್ಟ್ರಿಯನ್ನೂ ಇದರೊಂದಿಗೆ ಸಂಯೋಜಿಸಿದರೆ ಇನ್ನಷ್ಟು ಬಲ; ಮತ್ತಷ್ಟು ಪ್ರಯೋಜನ ಎಂಬುದನ್ನು ಈ ವಿನ್ಯಾಸ ಮನಗಾಣಿಸುತ್ತದೆ. ಮನೆ ನಿರ್ಮಾಣದಿಂದ ಹಿಡಿದು ಕಂಪೋಸ್ಟ್ ತಯಾರಿ, ನೆಲಜಲ ಸಂರಕ್ಷಣೆ ವರೆಗೆ ಕೃಷಿ ಬದುಕಿನ ಎಲ್ಲ ಪ್ರಮುಖ ಸಂಗತಿಗಳಿಗೆ ಇಲ್ಲಿ ವಿನ್ಯಾಸಗಳಿವೆ. ಇವುಗಳ ಉದ್ದೇಶ ಮತ್ತು ಇವನ್ನು ಅನುಷ್ಠಾನಕ್ಕೆ ತರುವ ವಿಧಾನವನ್ನು ಅರ್ಥಮಾಡಿಕೊಂಡರೆ ಅಗತ್ಯವಿದ್ದಲ್ಲಿ ನಮ್ಮನಮ್ಮ ಪರಿಸರಕ್ಕೆ ತಕ್ಕಂತೆ ಸೂಕ್ತ ಮಾರ್ಪಾಟು ಮಾಡಿಕೊಳ್ಳಬಹುದು.
ಅರ್ಧೇಂದು ಚಟರ್ಜಿ ಅವರು ರಾಜ್ಯದ ರೈತರಿಗೆ ಶಾಶ್ವತ ಕೃಷಿಯ ಬಗ್ಗೆ ತರಬೇತಿ ನೀಡುವಾಗ ಮಾಲಿಸನ್ ಅವರ ವಿಚಾರಗಳನ್ನು ಯಥಾವತ್ತಾಗಿ ಹೇಳುವ ಬದಲು ತಮ್ಮ ಅನುಭವದ ಹಿನ್ನೆಲೆಯಲ್ಲಿ ಸ್ಥಳೀಯ ಸನ್ನಿವೇಶಕ್ಕೆ ತಕ್ಕುದಾದ ವಿನ್ಯಾಸಗಳನ್ನು ಮುಂದಿಟ್ಟರು. ಹೀಗಾಗಿ ಇಲ್ಲಿರುವ ವಿವರಣೆಗಳು ಸುಲಭವಾಗಿ ಅರ್ಥವಾಗುತ್ತವೆ. ಗೊಂದಲಗಳಿಗೆ ಅವಕಾಶವಿಲ್ಲದ ರೀತಿಯಲ್ಲಿ ವಿಷಯ ನಿರೂಪಣೆ ಮತ್ತು ಅದಕ್ಕೆ ಪೂರಕವಾದ ಚಿತ್ರಗಳೂ ಇರುವುದರಿಂದ ಪುಸ್ತಕ ಉದ್ದಕ್ಕೂ ಪ್ರೇರಣಾದಾಯಕವಾಗಿದೆ. ಒಂದರ್ಥದಲ್ಲಿ ಇದು ಕನ್ನಾಡಿನ ರೈತರ ನಡುವೆಯೇ ರೂಪುಗೊಂಡ ಕೃತಿ. ಇದರ ಶ್ರೇಯ ಇಕ್ರಾಗೆ ಸಲ್ಲುತ್ತದೆ. ವಿ. ಗಾಯತ್ರಿ ಅವರು ರೈತ ದೃಷ್ಟಿಕೋನದಿಂದಲೆ ವಿಷಯವನ್ನು ನೋಡುತ್ತ ಇದು ಕನ್ನಡದ್ದೇ ಕೃತಿ ಎಂದು ಭಾಸವಾಗುವಂತೆ ಸೊಗಸಾಗಿ ಅನುವಾದ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜ್ಯಾದಂತ ಸಾಕಷ್ಟು ರೈತರು ವಿಷಮುಕ್ತ ಕೃಷಿಯತ್ತ ಒಲವು ತೋರಿಸುತ್ತಿದ್ದು ಅನೇಕ ಹೊಸಬರೂ, ಮುಖ್ಯವಾಗಿ ನಗರಗಳಲ್ಲಿನ ಉದ್ಯೋಗಕ್ಕೆ ವಿದಾಯ ಹೇಳಬಯಸುವ ಗ್ರಾಮೀಣ ಯುವಜನತೆ ಕೃಷಿಗೆ ಮರಳುತ್ತಿದ್ದಾರೆ. ಅಂಥವರಿಗೆ ಮುಂದಡಿ ಇಡಲು ಈ ಪುಸ್ತಕ ತುಂಬ ಸಹಕಾರಿಯಾಗಿದೆ. ಇಲ್ಲಿರುವುದೆಲ್ಲ ಸರಳ ಸೂತ್ರಗಳು; ಸಿದ್ಧ ಮಾದರಿಗಳು. ಹೀಗಾಗಿ ಅನುಸರಣೆ ಸುಲಭ. ಹೆಚ್ಚಿನವರಿಗೆ ಇರುವ ಮೊದಲನೇ ಆತಂಕವೆಂದರೆ ಜೈವಿಕ ವಿಧಾನದಿಂದ ಕೀಟ-ರೋಗ ನಿಯಂತ್ರಣ ಸಾಧ್ಯವೇ ಎಂಬುದು. ಇದಕ್ಕೆ ಉತ್ತರವೆಂಬಂತೆ ಇಲ್ಲಿ ಅನೇಕ ಪರಿಸರಸ್ನೇಹಿ ಕ್ರಮಗಳ ಬಗ್ಗೆ ವಿವರಗಳಿವೆ. ಈಗಾಗಲೆ ರಾಸಾಯನಿಕರಹಿತ ಬೇಸಾಯ ಮಾಡುತ್ತಿರುವವರೂ ಈ ಕೃತಿಯಿಂದ ಅನೇಕ ಹೊಸ ವಿಚಾರಗಳನ್ನು ತಿಳಿದುಕೊಂಡು ತಮ್ಮ ಕೃಷಿ ಬದುಕನ್ನು ಇನ್ನಷ್ಟು ಉತ್ತಮಪಡಿಸಬಹುದಾಗಿದೆ.
ಪರಿಸರಕ್ಕೆ ಮಾರಕವಾಗಿರುವ ರಾಸಾಯನಿಕ ಕೃಷಿಯಿಂದ ವಿಮುಖರಾಗಿ ಪರಿಸರಸ್ನೇಹಿ ಕೃಷಿ ಮಾಡಬಯಸುವ ರೈತರಿಗೆ ಅವರ ಹೊಲದಮಟ್ಟದಲ್ಲೆ ಅಗತ್ಯ ಮಾಹಿತಿ-ಮಾರ್ಗದರ್ಶನ ನೀಡುವ ಕೆಲಸವನ್ನು ಇಕ್ರಾ ಸಂಸ್ಥೆ ಸತತವಾಗಿ ಮಾಡುತ್ತಲೇ ಇದೆ. ಸಂಸ್ಥೆಯ ಸಹಜ ಸಾಗುವಳಿ ಪತ್ರಿಕೆ ಹಾಗೂ ಹಲವಾರು ಪುಸ್ತಕಗಳು ರೈತಾಪಿ ಮಂದಿಯ ಮನಗೆದ್ದಿವೆ. ಈ ಹಾದಿಯಲ್ಲಿ ‘ಶಾಶ್ವತ ಕೃಷಿ’ ಇನ್ನೊಂದು ಮಹತ್ವದ ಸೇರ್ಪಡೆ.
(ಈ ಬರಹದಲ್ಲಿನ ಹೆಚ್ಚಿನ ಅಂಶಗಳು ಪುಸ್ತಕಕ್ಕೆ ಬರೆದಿರುವ ಮುನ್ನುಡಿಯಲ್ಲಿ ಪ್ರಸ್ತಾಪವಾಗಿವೆ.)
ಲೇ: ಅರ್ಧೇಂದು ಎಸ್. ಚಟರ್ಜಿ; ಅನು: ವಿ. ಗಾಯತ್ರಿ
ಪ್ರಕಾಶನ: ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ್ ಅಂಡ್ ಆಕ್ಷನ್ (ಇಕ್ರಾ), ಬೆಂಗಳೂರು
ಪುಸ್ತಕ ಆನ್ಲೈನ್ ಖರೀದಿಗೆ – ಇಲ್ಲಿ ಕ್ಲಿಕ್ ಮಾಡಿ