Geneticaly Modified (GM) ಬೀಜಗಳು ಎಂದರೇನು?
ಜೆನೆಟಿಕ್ ಎಂಜಿನಿಯರಿಂಗ್ ಎಂಬ ಪ್ರಕ್ರಿಯೆಯ ಮೂಲಕ ನಿರ್ದಿಷ್ಟ ಗುಣಲಕ್ಷಣಗಳನ್ನು ಹೊಂದಲು ಮಾರ್ಪಡಿಸಲಾದ ಬೀಜಗಳನ್ನು ಕುಲಾಂತರಿ (ಜಿಎಂ)ಬೀಜಗಳು ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸಸ್ಯ, ಪ್ರಾಣಿ ಅಥವಾ ಮಣ್ಣಿನ ಬ್ಯಾಕ್ಟೀರಿಯಾದಿಂದ ತೆಗೆಯಲಾದ DNA ಯನ್ನು ಸಸ್ಯದ ಜೀನೋಮ್‌ಗೆ ಸೇರಿಸುವುದನ್ನು ಒಳಗೊಂಡಿರುತ್ತದೆ. ಈ ಸಸ್ಯಗಳಿಂದ ಉತ್ಪತ್ತಿಯಾಗುವ ಬೀಜಗಳು ಹೊಸ ಡಿಎನ್‌ಎಯನ್ನು ಆನುವಂಶಿಕವಾಗಿ ಪಡೆಯುತ್ತವೆ ಮತ್ತು ವಿಭಿನ್ನ ಗುಣಲಕ್ಷಣಗಳನ್ನು ಹೊಂದಿರುತ್ತದೆ.
ಜಿಎಂ ಬೀಜ ಉತ್ಪಾದಕರು ಯಾರು?
ಪ್ರಸ್ತುತ 4 ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳು, ಬೇಯರ್ (ಮೊನ್ಸಾಂಟೊದೊಂದಿಗೆ ವಿಲೀನಗೊಂಡಿದೆ), ಕಾರ್ಟೆವಾ, ಕೆಮ್ಚಿನಾ ಮತ್ತು ಲಿಮಾಗ್ರೇನ್. ಈ 04 ಕಂಪನಿಗಳು ಜಿಎಂ ಬೀಜಗಳ ಅಭಿವೃದ್ಧಿ ಮತ್ತು ಪೇಟೆಂಟ್‌ನಲ್ಲಿ ತೊಡಗಿವೆ.
ಜಿಎಂ ತಳಿಯ ತಯಾರಕರು ನೀಡುವ ಸಮರ್ಥನೆ ಏನು?
ಬೆಳೆಗಳಲ್ಲಿ ಹೆಚ್ಚಿನ ಇಳುವರಿ, ಕೀಟ, ರೋಗ, ಕಳೆನಾಶಕ ಸಹಿಷ್ಣು, ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಗುಣ ಹೊಂದಿರುವುದರಿಂದ ಕೃಷಿ ವೆಚ್ಚ ಕಡಿಮೆಯಾಗುತ್ತದೆ, ರೈತರಿಗೆ ಅನುಕೂಲವೆಂದು ಪ್ರತಿಪಾದಿಸುತ್ತಿದೆ.
ಜಿಎಂ ಬೀಜ ತಯಾರಕರ ವಾದ ಸಮರ್ಥವಾಗಿದ್ದೀಯೇ?
ಇಲ್ಲ, ಜಿಎಂ ಬೆಳೆ ಬೆಳೆಯುವ ದೇಶಗಳಲ್ಲಿ ರಸಗೊಬ್ಬರ ಮತ್ತು ಕೀಟನಾಶಕ ಬಳಕೆ ಹೆಚ್ಚಾಗಿದೆ, ವಿಭಿನ್ನ ಹವಾಮಾನಗಳಲ್ಲಿ ಬೇರೆ ಬೇರೆ ಫಲಿತಾಂಶ ಕಂಡಿದೆ, ಇಳುವರಿಯಲ್ಲಿ ಹೆಚ್ಚಳ ಕಂಡಿಲ್ಲ. ಕೃಷಿ ಉತ್ಪಾದನಾ ವೆಚ್ಚ ದುಬಾರಿಯಾಗಿದೆ.
ಭಾರತದಲ್ಲಿ ಜಿಎಂ ಅನ್ನು ನಿಷೇಧಿಸಲಾಗಿದೆಯೇ?
ಭಾರತದಲ್ಲಿ ವಾಣಿಜ್ಯ ಕೃಷಿಯಲ್ಲಿರುವ ಏಕೈಕ ಜಿಎಂ ಬೆಳೆ ಬಿಟಿ ಹತ್ತಿ. ಈಗ ಸಾಸಿವೆಯನ್ನು ಭಾರತದಲ್ಲಿ ವಾಣಿಜ್ಯ ಕೃಷಿಗೆ ಮೊದಲ ಆಹಾರ ಬೆಳೆಯಾಗಿ ಅನುಮೋದಿಸಲಾಗಿದೆ. ಮುಂದೆ ಎಲ್ಲಾ ಧಾನ್ಯ ,ಬೇಳೆಕಾಳು, ಎಣ್ಣೆಕಾಳು, ತರಕಾರಿ, ಹಣ್ಣುಗಳು ಸೇರ್ಪಡೆಯಾಗುವ ಸಾಧ್ಯತೆಗಳು ಗೋಚರವಾಗುತ್ತಿದೆ.
ಜಿಎಂ ತಂತ್ರಜ್ಞಾನಕ್ಕೆ ಭಾರತದಲ್ಲಿ ಅನುಮೋದನೆ ನೀಡುವವರು ಯಾರು?
ಜೆನೆಟಿಕ್ ಎಂಜಿನಿಯರಿಂಗ್ ಮೌಲ್ಯಮಾಪನ ಸಮಿತಿ (GEAC) ಅನುಮೋದನೆ ನೀಡುವ ಅಧಿಕಾರ ಹೊಂದಿರುತ್ತದೆ, ಇದು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತದೆ.
ಜಿಎಂ ಹತ್ತಿ ಬೆಳೆಗಾರರ ಪ್ರಸ್ತುತ ಸ್ಥಿತಿ ಏನು?
- ಜಿಎಂ ಬಿಟಿ ಹತ್ತಿಗಿಂತ ದೇಶಿ ತಳಿಯ ಹತ್ತಿ ತಳಿ ಹೆಚ್ಚು ಇಳುವರಿ ನೀಡಿರುವ ಸಾಕಷ್ಟು ನಿರ್ದೇಶನಗಳು ಸಿಗುತ್ತದೆ.
- ಇಳುವರಿಯಲ್ಲಿ ಭಾರತಕ್ಕಿಂತ ಮುಂದಿರುವ 24 ದೇಶಗಳು GM ಹತ್ತಿಯನ್ನು ಬೆಳೆಯುವುದಿಲ್ಲ.
- ವಾಸ್ತವವಾಗಿ ಬಿಟಿ ಹತ್ತಿಯನ್ನು ಒಂದು ವಿಧದ ಹುಳುಗಳಿಂದ ರಕ್ಷಿಸಲು ಪರಿಚಯಿಸಲಾಯಿತು, ನಂತರ ಇತರೆ ಹುಳುಗಳು, ಬಿಳಿ ನೊಣ, ಮತ್ತು ಇನ್ನೂ ಅನೇಕ ಕೀಟಗಳ ಬಾಧೆ ಹೆಚ್ಚಾಗಿವೆ ಮತ್ತು ಕೀಟನಾಶಕ ಬಳಕೆ ಮಿತಿಮೀರಿದೆ. ಅದಕ್ಕಾಗಿಯೇ ರೈತರು ಹತ್ತಿಯಿಂದ ಭತ್ತದ ಕೃಷಿಗೆ ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದಲ್ಲಿ ಬದಲಾಗುತ್ತಿದ್ದಾರೆ.
ಜಿಎಂ ಬೆಳೆಗಳು ಜಾಗತಿಕವಾಗಿ ಅಳವಡಿಸಿಕೊಂಡ ತಂತ್ರಜ್ಞಾನವೇ?
- ಪರಿಚಯಿಸಿದ 28 ವರ್ಷಗಳ ನಂತರ ಕೇವಲ 31 ದೇಶಗಳು ಮಾತ್ರ ಕೆಲವೊಂದು ಬೆಳೆಗಳನ್ನು ಜಿಎಂ ತಂತ್ರಜ್ಞಾನದಲ್ಲಿ ಬೆಳೆಯುತ್ತಿದೆ.
- ವಾಣಿಜ್ಯ ಕೃಷಿಗಾಗಿ ಜಿಎಂ ಬೆಳೆಗಳನ್ನು ಅನುಮತಿಸಿದ ನಂತರ 13 ದೇಶಗಳು ಈಗ ಅವುಗಳನ್ನು ನಿಲ್ಲಿಸಿವೆ.
- ಕೆಲವು ದೇಶಗಳಲ್ಲಿ ಕುಲಾಂತರಿ ಬೆಳೆಗಳನ್ನು ನಿಷೇಧಿಸಲಾಗಿದೆ ಮತ್ತು ಇನ್ನೂ ಕೆಲವು ದೇಶಗಳಲ್ಲಿ ನಿಯಂತ್ರಿಸಲಾಗಿದೆ.
ಜಿಎಂ ಬೆಳೆಗಳಿಂದ ತಯಾರಾದ ಆಹಾರ ಸೇವನೆಯಿಂದ ಜನಗಳ ಆರೋಗ್ಯದ ಮೇಲೆ ಏನು ಪರಿಣಾಮವಾಗಬಹುದು?
ಜಿಎಂ ಬೀಜಗಳಿಂದ ಬೆಳೆದ ಆಹಾರವನ್ನು ಸೇವನೆ ಮಾಡುವುದರಿಂದ ಲಿವರ್, ಕಿಡ್ನಿ, ಥೈರಾಯಿಡ್ ಸಮಸ್ಯೆಗಳು, ಶಕ್ತಿಹೀನತೆ, ನರ ದೌರ್ಬಲ್ಯತೆ, ಪುರುಷರಲ್ಲಿ ದುರ್ಬಲತೆ, ಮಹಿಳೆಯರಲ್ಲಿ ಬಂಜೆತನ, ಬಹು ಅಂಗ ಹಾನಿ, ಜೀರ್ಣಾಂಗ ವ್ಯವಸ್ಥೆಯಲ್ಲಿ ಅಡಚಣೆಗಳು, ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗಬಹುದು. ಅಮೇರಿಕಾ ದೇಶದ ಆಹಾರದ ನೆರವನ್ನು ಪಡೆಯುತ್ತಿರುವ ಹಿಂದುಳಿದ ಕೆಲವು ದೇಶಗಳು ಉಪವಾಸ ಇದ್ರು ನಾವು ಆ ವಿಷ ತಿನ್ನಲ ಅಂತ ಜಿಎಂ ಆಹಾರವನ್ನು ತಿರಸ್ಕರಿಸಿವೆ.
ಜಿಎಂ ಬೆಳೆಗಳಿಂದ ಕೃಷಿ ಮತ್ತು ಪರಿಸರದ ಮೇಲೆ ಆಗುವ ಪರಿಣಾಮಗಳೇನು?
- ಜಿಎಂ ಬೆಳೆ ಅಳವಡಿಸಿಕೊಂಡ ನಂತರ ರಸಗೊಬ್ಬರ ಮತ್ತು ಕೀಟನಾಶಕ ಬಳಕೆ ಹೆಚ್ಚಾಗಿದೆ.
- ಜಿಎಂ ಬೀಜಗಳು ಮತ್ತು ಅದನ್ನು ಬೆಳೆಸಲು ಬೇಕಾದ ಒಳಸುರಿಗಳು ದುಬಾರಿಯಿರುವುದರಿಂದ ಕೃಷಿ ವೆಚ್ಚ ಹೆಚ್ಚಾಗುತ್ತದೆ.
- ಜಿಎಂ ತಂತ್ರಜ್ಞಾನದ ಮೂಲಕ ತಯಾರಾದ ತಳಿಗಳು ತನ್ನ ಬೇರು, ಕಾಂಡ, ಎಲೆ ಹೀಗೆ ಎಲ್ಲಾ ಭಾಗಗಳಲ್ಲಿ ವಿಷ ತಯಾರು ಮಾಡಿಕೊಳ್ಳುವುದರಿಂದ ಬೆಳೆ ಬೆಳೆಯಲು ಅನುಕೂಲಕರವಾದ ಮಣ್ಣಿನಲ್ಲಿರುವ ಸೊಕ್ಷ್ಮಜೀವಿಗಳು, ಮಿತ್ರ ಕೀಟಗಳು, ಪಕ್ಷಿಗಳು, ಜೇನು, ದುಂಬಿ, ಇತ್ಯಾದಿ ಕೃಷಿ ಉಪಯೋಗಿ ಜೀವಿಗಳು ನಾಶವಾಗಿ ಬೆಳೆಗಳಿಗೆ ರೋಗಗಳು ಹೆಚ್ಚಾಗುತ್ತದೆ.
- ಜಿಎಂ ತಳಿಗಳಿಂದ ಬೇರೆ ತಳಿಗಳಿಗೂ ಪರಾಗ ಮಾಲಿನ್ಯದಿಂದ ಸೋಂಕು ತಗಲುತ್ತೆ. ಒಬ್ಬ ರೈತ ಈ ಬೀಜ ಉಪಯೋಗಿಸಿದರೆ ಬೇರೊಬ್ಬ ರೈತನ ಜಮೀನಿನಲ್ಲಿ ಬೆಳೆದ ಬೆಳೆಗೂ ಪರಾಗ ಮಾಲಿನ್ಯದಿಂದ ಜಿಎಂ ಬೆಳೆಯ ಗುಣಗಳು ಬರುತ್ತದೆ. ಈ ಗುಣ ಹೊಂದಿರುವ ಬೀಜಗಳನ್ನು ರೈತರು ಪುನಃ ಉಪಯೋಗ ಮಾಡಿಕೊಳ್ಳುವ ಅವಕಾಶ ಇರಲ್ಲ,ಏಕೆಂದರೆ ಕಂಪನಿಗೆ ಪೇಟೆಂಟ್ ಆಗಿರೋ ಬೀಜ ಉಪಯೋಗಿಸಿದರೆ ರೈತನ ಮೇಲೆ ಕೇಸ್ ಹಾಕಿ, ದಂಡ ವಿಧಿಸಬಹುದು. ನಾವು ನಮ್ಮ ಸ್ವಂತ ಬೀಜಗಳನ್ನು ಉಪಯೋಗಿಸುವ ಅವಕಾಶದಿಂದ ವಂಚಿತರಾಗುತ್ತೇವೆ.
- ಜಿಎಂ ತಳಿಗಳಿಂದ ದೇಶಿ/ನಾಟಿ/ಸುಧಾರಿತ ತಳಿಗಳಿಗೂ ಪರಾಗ ಮಾಲಿನ್ಯ ಉಂಟಾಗಿ ದೇಶಿ ತಳಿಗಳು ನಶಿಸಿ ಹೋಗುತ್ತದೆ ಮತ್ತು ಸಾವಯವ, ನೈಸರ್ಗಿಕ ಕೃಷಿ ಮುಂದುವರೆಸಲು ದೊಡ್ಡ ಹೊಡೆತ ಬೀಳುತ್ತದೆ.
- ಕಳೆನಾಶಕ ಸಹಿಷ್ಣು ಜಿಎಂ ಬೆಳೆಗಳಿಂದ ಬರುವ ಪರಾಗಗಳು ಕಳೆಗಳ ಮೇಲೆ ಪ್ರಭಾವ ಬೀರಿ, ಕಳೆನಾಶಕ ಸಹಿಷ್ಣು ಗುಣಕ್ಕೆ ಹೊಂದಿಕೊಂಡು, ಕಳೆಗಳು ಮತ್ತಷ್ಟು ಪ್ರಬಲವಾಗಿ ಬೆಳೆಯುತ್ತವೆ ಮತ್ತು ಅವುಗಳನ್ನು ನಾಶ ಮಾಡಲು ಹೆಚ್ಚಿನ ಕಳೆ ನಾಶಕ ಸಿಂಪಡಣೆ ಮಾಡಬೇಕಾಗಿ ಬರುವುದರಿಂದ ಮಣ್ಣಿನ ಆರೋಗ್ಯ ಹದಗೆಡುತ್ತದೆ.
- ಬೀಜವು ಆಹಾರ ಸರಪಳಿಯ ಮೊದಲ ಕೊಂಡಿಯಾಗಿದೆ, ಆಹಾರ ಸಂಸ್ಕೃತಿ ನಾಶವಾದಾಗ, ಸಂಬಂಧಿತ ಬೆಳೆ ಸಂಸ್ಕೃತಿಯೂ ನಾಶವಾಗುತ್ತದೆ, ಕೃಷಿ ನಾಶವಾದಾಗ, ಜೀವವೈವಿಧ್ಯ ಸಂಪೂರ್ಣ ನಾಶವಾಗುತ್ತದೆ.
ಇಳುವರಿ ಹೆಚ್ಚಳ, ರೋಗ, ಕೀಟ, ಕಳೆಗಳ ನಿಯಂತ್ರಣಕ್ಕೆ ಇರುವ ಉಪಾಯಗಳೇನು?
- ಒಂದು ಸಮಸ್ಯೆಗೆ (ಇಳುವರಿ, ಕೀಟ,ರೋಗ, ಕಳೆ) ಪರಿಹಾರ ಹುಡುಕಲು ಒಂದೇ ಧೃಷ್ಟಿ ಕೋನದಿಂದ ನೋಡುವ ಅಭ್ಯಾಸವನ್ನು ಬಿಟ್ಟು ಸಮಗ್ರವಾಗಿ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು.
- ಹವಾಮಾನ ಬದಲಾವಣೆಗೆ ಹೊಂದಿಕೊಂಡು ಬೆಳೆಯುವ, ಹೆಚ್ಚಿನ ಇಳುವರಿ ನೀಡುವ,ಬರ ಮತ್ತು ರೋಗ ನಿರೋಧಕ ತಳಿಗಳು ಸ್ಥಳೀಯವಾಗಿ ಲಭ್ಯವಿದೆ.ಅವುಗಳನ್ನು ಅಭಿವೃದ್ಧಿ ಮಾಡುವ ಕೆಲಸಗಳನ್ನು ಮಾಡಬೇಕಿದೆ.
- ವಿಜ್ಞಾನ ಮತ್ತು ತಂತ್ರಜ್ಞಾನದ ಕ್ರಮಗಳನ್ನು ಅಳವಡಿಸಿಕೊಳ್ಳುವಾಗ ನಿಸರ್ಗದ ನಿಯಮಗಳ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯಿರಬೇಕು ಮತ್ತು ಅದಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪರಿಸರಕ್ಕೆ ಮಾರಕವಾಗದಂತೆ, ಪೂರಕವಾಗುವ ನಿಟ್ಟಿನಲ್ಲಿ ಕ್ರಮಗಳನ್ನು ಅನುಸರಿಸಬೇಕು.
- ಏಕಬೆಳೆ ಪದ್ದತಿಯಿಂದ ಕೀಟಗಳ ಹಾವಳಿ ಹೆಚ್ಚಾಗಿದೆ, ಬಹುಬೆಳೆ ಪದ್ಧತಿ ಮೂಲಕ ಕೀಟ ನಿಯಂತ್ರಣ ಮಾಡಬಹುದು.
- ಆಹಾರ ಸರಪಳಿಯಲ್ಲಿ ಜೀವಿಗಳು ಮತ್ತೊಂದು ಜೀವಿಗಳಿಗೆ ಆಹಾರದ ಮೂಲವಾಗಿದೆ,ಪರಿಸರ ವ್ಯವಸ್ಥೆಯಲ್ಲಿ ಕೀಟ, ಹುಳುಗಳನ್ನು ನಿಯಂತ್ರಣ ಮಾಡಲು ಮಿತ್ರ ಕೀಟಗಳು ಮತ್ತು ಪಕ್ಷಿಗಳು ಇವೆ.
- ಬೆಳೆಗಳ ನಡುವೆ ಪೋಷಕ ಬೆಳೆ ಅಳವಡಿಸಬೇಕು.ಬೆಳೆಗಳ ನಡುವೆ ಕೀಟಗಳಿಂದ ಪರಸ್ಪರ ರಕ್ಷಿಸುವ ಮತ್ತು ಪೌಷ್ಟಿಕಾಂಶದ ಲಭ್ಯತೆಗೆ ಸಹಾಯ ಮಾಡುವ ಸಸ್ಯಗಳನ್ನು ಪೋಷಕ ಸಸ್ಯಗಳು ಎಂದು ಕರೆಯಲಾಗುತ್ತದೆ.
- ಇಳುವರಿ ಹೆಚ್ಚಳಕ್ಕೆ ಮತ್ತು ರೋಗಭಾದೆ ನಿಯಂತ್ರಣಕ್ಕೆ ಮಣ್ಣಿನ ಫಲವತ್ತತೆ ಹೆಚ್ಚಿಸಬೇಕು.
- ಇಳುವರಿ ಹೆಚ್ಚಳ, ರೋಗ, ಕೀಟ, ಕಳೆ ನಿಯಂತ್ರಣವನ್ನು ಮಣ್ಣಿನ ಸುಧಾರಣೆ, ಬಹುಬೆಳೆ ಪದ್ದತಿ, ವೈವಿಧ್ಯತೆ ಮೂಲಕ ಸಾಧಿಸಬಹುದೇ ಹೊರತು ಜಿಎಂ ತಳಿಗಳಿಂದ ಆಗುವುದಿಲ್ಲ ಎಂದು ತಿಳಿಯಬೇಕು.
ಭಾರತಕ್ಕೆ ಜಿಎಂ ತಂತ್ರಜ್ಞಾನವನ್ನು ಪರಿಚಯಿಸಲು ಬಹುರಾಷ್ಟ್ರೀಯ ಕಂಪನಿಗಳು ಏಕೆ ಆತುರಪಡುತ್ತಿದ್ದಾರೆ?
- ಜಿಎಂ ಬೀಜ ತಯಾರಕರು ಕೃಷಿ ವಲಯದಲ್ಲಿ ಬಳಸುವ ರಾಸಾಯನಿಕಗಳು ಮತ್ತು ಆರೋಗ್ಯ ವಲಯದ ಔಷಧಿ ತಯಾರಕರು ಕೂಡ ಆಗಿದ್ದಾರೆ. ತಮ್ಮ ಉತ್ಪನ್ನಗಳ ಮಾರಾಟವನ್ನು ದ್ವಿಗುಣಗೊಳಿಸಿ ಗಣನಿಯವಾಗಿ ಹಣ ಮಾಡುವ ಉದ್ದೇಶ ಹೊಂದಿದ್ದಾರೆ, ಸಾರ್ವಜನಿಕ ಕಲ್ಯಾಣಕ್ಕಿಂತ ಲಾಭದ ಉದ್ದೇಶಗಳು ಮಾತ್ರ ಇವುಗಳ ಗುರಿಯಾಗಿದೆ.
- ಜಿಎಂ ತಂತ್ರಜ್ಞಾನದ ಮೇಲೆ ಅವರು ಪೇಟೆಂಟ್ ಹೊಂದಿರುವುದರಿದ ಬೀಜ ಮತ್ತು ಆಹಾರ ಪೂರೈಕೆ ವ್ಯವಸ್ಥೆಗಳಲ್ಲಿ ಪ್ರಾಬಲ್ಯ ಸಾಧಿಸಲು ಅನುವು ಮಾಡಿಕೊಡುವುದರಿಂದ ಆಹಾರ ಪೂರೈಕೆಯ ನಿಯಂತ್ರಣವನ್ನು ವಶಪಡಿಸಿಕೊಳ್ಳುವ ಮೂಲಕ, ಅವರು ಆರೋಗ್ಯ ವಲಯವನ್ನು ನುಸುಳುವ ಗುರಿ ಹೊಂದಿದ್ದಾರೆ.
- ಆಹಾರ, ಆರೋಗ್ಯ ಕ್ಷೇತ್ರಗಳ ಮೇಲೆ ನಿಯಂತ್ರಣವನ್ನು ಬಲಗೊಳಿಸುವ ಮೂಲಕ ನಮ್ಮ ದೇಶದ ಆರ್ಥಿಕ,ರಾಜಕೀಯ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸುವ ಹುನ್ನಾರವಾಗಿದೆ.
ಜಿಎಂ/ಕಾರ್ಪೊರೇಟ್ ಸುಳಿಯಿಂದ ತಪ್ಪಿಸಿಕೊಳ್ಳಲು ನಮ್ಮ ಮುಂದಿನ ನೆಡೆ ಹೇಗಿರಬೇಕು?
- ಜಿಎಂ ಬೆಳೆ ಮತ್ತು ಆಹಾರಗಳನ್ನು ರೈತರು ಮತ್ತು ಗ್ರಾಹಕರು ಬಹಿಷ್ಕಾರ ಮಾಡಬೇಕು.
- ಮಾನವ ನಿರ್ಮಿತ ಜಿಎಂ ಬೆಳೆಗಳಿಂದ ಉಂಟಾಗುವ ದುಷ್ಟ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು.
- ರಾಷ್ಟ್ರವ್ಯಾಪಿ ಸತ್ಯಾಗ್ರಹ ಚಳುವಳಿಯ ಮೂಲಕ ಸರ್ಕಾರದ ಗಮನ ಸೆಳೆದು, ಜಿಎಂ ತಂತ್ರಜ್ಞಾನಕ್ಕೆ ಅವಕಾಶ ನೀಡದಂತೆ ಒತ್ತಾಯ ಹಾಕಬೇಕು.
- ಪಂಚಾಯತ್ ಮಟ್ಟದಲ್ಲಿ ವೈಜ್ಞಾನಿಕವಾಗಿ ರಾಸಾಯನಿಕ ಮುಕ್ತ ಕೃಷಿ ಪದ್ಧತಿಗಳನ್ನು ಪ್ರತಿಪಾದಿಸುವುದು ಮತ್ತು ಅಳವಡಿಸುವ ಕೆಲಸ ನಿರಂತರವಾಗಿನೆಡೆಯಬೇಕು.
ಸಂಗ್ರಹ–ನಿರೂಪಣೆ: ಪ್ರಶಾಂತ್ ಜಯರಾಮ್, ಕೃಷಿಕರು, ಚಾಮರಾಜನಗರ, ಮೊಬೈಲ್ :9342434530
ಮಾಹಿತಿ ಮೂಲ: ಡಾ ಮಂಜುನಾಥ್, ಸಹಜ ಕೃಷಿ ವಿಜ್ಞಾನಿಗಳು, ಗಾಂಧೀ ಸಹಜ ಬೇಸಾಯ ಶಾಲೆ, ತುಮಕೂರು.
ಈ ಕುಲಾಂತರಿ ಆಹಾರಗಳ ವಿಜ್ಞಾನ ಮತ್ತು ನೀತಿಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಲಿಂಕ್ ನಲ್ಲಿ ಓದಬಹುದು
ಕುಲಾಂತರಿ ಸಾಸಿವೆಯ ವಿಜ್ಞಾನದ ಒಳನೋಟ ಏನು??
ಕುಲಾಂತರಿ ಕಳೆನಾಶಕ-ಸಹಿಷ್ಣು ಸಾಸಿವೆಯಿಂದ ಭಾರತದ ಕೃಷಿಗೆ ಮರಣಶಾಸನ
ಭಾರತೀಯ ಕೃಷಿಯು ಇನ್ನು ಮುಂದೆ ಬೇಯರ್ ಕೃಷಿಯಾಗಿ ಬದಲಾಗಲಿದೆ!
ಬೇಯರ್,ಅಮೆಜಾನ್ ಕಂಪನಿಗಳನ್ನು ನಮ್ಮ ಕೃಷಿ ಕ್ಷೇತ್ರದಿಂದ ಬಹಿಷ್ಕಾರಿಸಬೇಕಿದೆ
“ಕುಲಾಂತರಿ ಆಹಾರಗಳ ಅಪಾಯಗಳು” ಸಂಬಂಧದ ಮಾಹಿತಿಯನ್ನು ಪಿಡಿಎಫ್ ಮೂಲಕ ಕೆಳಗಿನ ಲಿಂಕ್ ನಲ್ಲಿ ಡೌನ್ಲೋಡ್ ಮಾಡಬಹುದು
https://booksloka.com/wp-content/uploads/2024/09/Note-on-GM-Seeds.pdf