ಎಸ್. ಆರ್. ನೀಲಕಂಠನ್ ಅವರ South V/S North: India’s Great Divide ಕೃತಿ ನಮ್ಮ ಕಾಲದಲ್ಲಿ ಕೆಕ್ಕರಿಸಿ ನೋಡುತ್ತಿರುವ ವಿಕೃತಿಯನ್ನು ನಮ್ಮ ಮುಂದಿಡುತ್ತದೆ.
ಕೃತಿಯ ಶೀರ್ಷಿಕೆ ಕೊಂಚ ಪ್ರಚೋದನಕಾರಿಯಾಗಿ ಕಂಡರೂ ಒಟ್ಟಾರೆ ಕೃತಿಯ ಹೂರಣದಲ್ಲಿ ಈ ಮಂದ ದೃಷ್ಟಿ ಇಲ್ಲ. ಸ್ವತಃ ಡೇಟಾ ವಿಜ್ಞಾನಿಯಾಗಿರುವ ಕಾರಣಕ್ಕೇ ನೀಲಕಂಠನ್ ಅವರು ಅಸ್ಖಲಿತ ಅಂಕಿ-ಅಂಶಗಳ ಮೂಲಕ ಊನವಿಲ್ಲದ ವಾದವೊಂದನ್ನು ಮುಂದಿಡುತ್ತಾರೆ. ಒಕ್ಕೂಟ ಎಂಬ ಹೆಸರಿದ್ದರೂ ಕೇಂದ್ರೀಕರಣದ ನಿರಂತರ ಪ್ರಕ್ರಿಯೆಯನ್ನು, ಅದು ತಂದೊಡ್ಡುತ್ತಿರುವ ಅಪಾಯಗಳನ್ನು ನೀಲಕಂಠನ್ ಅಭಿವೃದ್ಧಿಯ ಮಾನದಂಡಗಳ ಮೂಲಕ ಪ್ರಸ್ತುತಪಡಿಸುತ್ತಾರೆ.
ಚಾರಿತ್ರಿಕವಾಗಿ ವಸಾಹತುಶಾಹಿ ಆಡಳಿತ ಶುರುವಾದಾಗ ಮೂರೂ ಪ್ರೆಸಿಡೆನ್ಸಿಗಳೂ ತೆರಿಗೆ ವಿಧಿಸುವ ಸ್ವತಂತ್ರ ಅಧಿಕಾರ ಹೊಂದಿದ್ದವು. ಆದರೆ ಬ್ರಿಟಿಷ್ ಸರ್ಕಾರದ ಕಾನೂನಾತ್ಮಕ ಆಜ್ಞೆಯ ಮೂಲಕ ಈ ಸರ್ವೋಚ್ಚ ಅಧಿಕಾರವನ್ನು ಬೆಂಗಾಲ್ ಪ್ರೆಸಿಡೆನ್ಸಿಗೆ ನೀಡಿದಲ್ಲಿಂದ ಈ ಕೇಂದ್ರೀಕೃತ ಅಧಿಕಾರದ ಅಧ್ಯಾಯ ಆರಂಭವಾಗುತ್ತದೆ. ಈ ಬಗ್ಗೆ ಮದ್ರಾಸ್ ಪ್ರೆಸಿಡೆನ್ಸಿ ತಕರಾರು ತೆಗೆದಿದ್ದನ್ನೂ ನೀಲಕಂಠನ್ ದಾಖಲಿಸುತ್ತಾರೆ. ಅಂದಾಜು ಎರಡು ಶತಮಾನಗಳ ಬಳಿಕ ಮತ್ತೆ ತಮಿಳುನಾಡು ಈ ಆಕ್ಷೇಪದ ಮುಂಚೂಣಿಯಲ್ಲಿರುವುದು ಗಮನಾರ್ಹ.
ದೇಶ ಸ್ವಾತಂತ್ರ್ಯ ಪಡೆದಾಗ ಅತ್ಯಂತ ಪ್ರಭಾವಿಗಳಾಗಿದ್ದ ನೆಹರೂ ಮತ್ತು ಅಂಬೇಡ್ಕರ್ ಇಬ್ಬರೂ ಚಾರಿತ್ರಿಕ ಕಾರಣ ಮತ್ತು ತಮ್ಮದೇ ವಿಶ್ಲೇಷಣಾತ್ಮಕ ನಿಲುವಿನಿಂದ ಬಲಿಷ್ಠ ಕೇಂದ್ರವನ್ನು ಬಯಸಿದ್ದರು. ಅಭಿವೃದ್ಧಿಯ ಯೋಜನಾತ್ಮಕ ಏಕಸೂತ್ರತೆ ನೆಹರೂ ನಿಲುವನ್ನು ನಿರ್ದೇಶಿಸಿದರೆ, ಸಾಮಾಜಿಕ ಪಾಳೇಗಾರಿಕೆಯ ಅಪಾಯ ಅಂಬೇಡ್ಕರ್ ನಿಲುವನ್ನು ಪ್ರಭಾವಿಸಿತ್ತು. ಚಾರಿತ್ರಿಕವಾಗಿ ಇದು ಅನಿವಾರ್ಯವೂ ಆಗಿತ್ತು.
ನಂತರದ ದಶಕಗಳಲ್ಲಿ ರಾಜ್ಯ ಮತ್ತು ಕೇಂದ್ರದ ಸಂಬಂಧದ ತಕ್ಕಡಿ ಕೇಂದ್ರದೆಡೆಗೆ ವಾಲುತ್ತ, ಈಗ ಅದು ತಿದ್ದಲಾರದ ಮಟ್ಟಿಗೆ ಬಂದು ಕೂತಿದೆ. ನೆಹರೂ ಕಾಲದಲ್ಲಿ ರಾಜ್ಯಗಳ ಅಧಿಕಾರ ವ್ಯಾಪ್ತಿಯನ್ನು, ಸ್ವಾಯತ್ತತೆಯನ್ನು ಗೌರವಿಸುತ್ತಲೇ ಕೇಂದ್ರ ಅಭಿವೃದ್ಧಿ ಕಾಣ್ಕೆಯನ್ನು ಹೇರುವ ಮುತ್ಸದ್ದಿತನ ನೆಹರೂ ಅವರಿಗಿತ್ತು. ನೆಹರೂ ೧೫ ದಿನಗಳಿಗೊಮ್ಮೆ ಮುಖ್ಯಮಂತ್ರಿಗಳಿಗೆ ಪತ್ರ ಬರೆವ ಪರಿಪಾಠ ಇಟ್ಟುಕೊಂಡಿದ್ದರು! ಆದರೆ ಸಾಂವಿಧಾನಿಕವಾಗಿ ದತ್ತವಾಗಿದ್ದ ಮತ್ತು ಸಂಸತ್ತಿನ ಪಾರಮ್ಯದ ಮೂಲಕ (ದೇಶವ್ಯಾಪಿ ಕಾನೂನು ಹೇರುವ ಸಂಸತ್ತಿನ ಪರಮಾಧಿಕಾರ) ಈ ಕೇಂದ್ರೀಕರಣ ಹೆಚ್ಚುತ್ತಲೇ ಹೋಯಿತು.
ದೇಶದ ಅಭಿವೃದ್ಧಿಯ ಬುನಾದಿ ದೀರ್ಘಕಾಲೀನ ಯೋಜನೆಗಳ ಯಶಸ್ಸಿನಲ್ಲಿದೆ, ಇದು ಚುನಾವಣಾ ವೇಳಾಪಟ್ಟಿಯನ್ನು ಮೀರಿದ ಕಾಲಮಾನ ಹೊಂದಿರುತ್ತದೆ. ಈ ಯೋಜನೆಗಳ ಫಲಿತಾಂಶ ಗೋಚರಿಸಲು ಒಂದು ತಲೆಮಾರೇ ಬೇಕು ಎಂಬುದನ್ನು ನೀಲಕಂಠನ್ ಅಂಕಿ-ಅಂಶಗಳ ಪುರಾವೆ ಸಹಿತ ಮುಂದಿಡುತ್ತಾರೆ. ಹಾಗೆಯೇ, ಈ ಬುನಾದಿ ಸಾಧನೆ, ರಾಜ್ಯಗಳ ಸ್ಥಳೀಯ ಯೋಜನೆಗಳಿಂದಷ್ಟೇ ಸಾಧ್ಯ ಎಂಬುದನ್ನೂ ತೋರಿಸಿಕೊಡುತ್ತಾರೆ. ಈ ಸಾಧನೆಗೆ ಯೋಜನೆಯ ಸುಸಂಬದ್ಧತೆ, ರಾಜಕೀಯ ಇಚ್ಛಾಶಕ್ತಿ ಮತ್ತು ಅರ್ಪಣಾ ಮನೋಭಾವದ ಸಿಬ್ಬಂದಿ, ಸಮರ್ಥ ಸಾಂಸ್ಥಿಕ ರಚನೆಗಳು ಕಾರಣವಾಗುತ್ತವೆ.
ದಕ್ಷಿಣದ ರಾಜ್ಯಗಳು ತಮ್ಮ ವಿಶಿಷ್ಟ ಸಾಂಸ್ಕೃತಿಕ, ಸಾಮಾಜಿಕ ರಾಜಕೀಯ ಹಿನ್ನೆಲೆಯಿಂದ ಈ ಸಾಧನೆ ಮಾಡಿವೆ. ಆದರೆ ಕಳೆದೊಂದು ದಶಕದಲ್ಲಿ ರಾಜ್ಯಪಟ್ಟಿಯಲ್ಲಿರುವ ಶಿಕ್ಷಣ, ಆರೋಗ್ಯಗಳಂಥಾ ವಿಷಯಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ ಕೇಂದ್ರ ಏಕರೂಪಿ ಗುರಿ ಮತ್ತು ವಿಧಾನಗಳನ್ನು ರಾಜ್ಯಗಳ ಮೇಲೆ ಹೇರಿದೆ. ಉತ್ತರದ ರಾಜ್ಯಗಳು ಇನ್ನೂ ಶಿಕ್ಷಣ, ಆರೋಗ್ಯದಂಥಾ ಮೂಲಭೂತ ಕ್ಷೇತ್ರಗಳಲ್ಲಿ ಕುಂಟುತ್ತಿರುವ ಆತಂಕಕಾರಿ ಅಭಿವೃದ್ಧಿ ವೈರುಧ್ಯವನ್ನು ನೀಲಕಂಠನ್ ಮುಂದಿಡುತ್ತಾರೆ. ಅರ್ಥಾತ್ ದಕ್ಷಿಣ-ಉತ್ತರಗಳ ರಾಜ್ಯಗಳ ಸಾಧನೆಯಲ್ಲಿರುವ ಕಂದರವನ್ನು ಅನಾವರಣಗೊಳಿಸುತ್ತಾರೆ. ಉತ್ತರದ ರಾಜ್ಯಗಳಿಗೆ ಈ ಮೂಲಭೂತ ಕ್ಷೇತ್ರಗಳಅಭಿವೃದ್ಧಿಗೆ ಬೇಕಾದ ಹೂಡಿಕೆಗೆ ಅಗತ್ಯ ಇರುವ ಹಣಕಾಸು ತಮ್ಮದೇ ತೆರಿಗೆ ಮೂಲಗಳಿಂದ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ತೆರಿಗೆ ಸಂಗ್ರಹದ ಹೆಚ್ಚುವರಿ ಪಾಲನ್ನುಈ ರಾಜ್ಯಗಳಿಗೆ ನೀಡಲಾಗುತ್ತಿದೆ.
ಈ ತೆರಿಗೆ ಪಾಲನ್ನು ನಿರ್ಧರಿಸುವ ಹಣಕಾಸು ಆಯೋಗದ ಮಾನದಂಡಗಳಲ್ಲಿ ಕೇಂದ್ರದ ಇಚ್ಛೆಯ ನೆರಳು ದಟ್ಟವಾಗಿದೆ. ಸಾಂವಿಧಾನಿಕ ಸಂಸ್ಥೆಯಾಗಿರುವ ಹಣಕಾಸು ಆಯೋಗವೂ ತೆರಿಗೆ ಸಂಗ್ರಹದ ಹಂಚಿಕೆಯ ಶಿಫಾರಸ್ಸುಗಳಲ್ಲಿ ವೈರುಧ್ಯತೆ ತೋರುತ್ತಿದೆ. ಇದು ಅಂತಿಮವಾಗಿ ಅಭಿವೃದ್ಧಿ ಮಾನದಂಡಗಳಲ್ಲಿ ಅಭಿವೃದ್ಧಿ ತೋರಿ ತೆರಿಗೆ ಸಂಗ್ರಹದಲ್ಲೂ ಮುಂಚೂಣಿಯಲ್ಲಿರುವ ದಕ್ಷಿಣದ ರಾಜ್ಯಗಳಿಗೆ ಮಾರಕವಾಗಿ ಪರಿಣಮಿಸಿದೆ ಎಂದು ನೀಲಕಂಠನ್ ವಾದಿಸುತ್ತಾರೆ.
ಜನಸಂಖ್ಯಾ ನಿಯಂತ್ರಣ ದೇಶದ ಬಹು ಮುಖ್ಯನೀತಿಯಾಗಿ ಒಪ್ಪಿಕೊಂಡ ಬಳಿಕ ಅಂದರೆ ‘೭೦ರ ದಶಕದಿಂದ ಇಂದಿನವರೆಗೆ ದಕ್ಷಿಣದ ರಾಜ್ಯಗಳು ಜನಸಂಖ್ಯಾ ಬೆಳವಣಿಗೆಯನ್ನು ಬಹುತೇಕ ನಿಯಂತ್ರಿಸಿವೆ, ಇದೇ ಕಾರಣದಿಂದ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಅದ್ಭುತ ಪ್ರಗತಿ ತೋರಿವೆ, ಈ ಪ್ರಗತಿಯು ಉದ್ಯೋಗ, ಉದ್ಯಮಶೀಲತೆಗಳ ಪ್ರಗತಿಗೂ ಕಾರಣವಾಗಿವೆ.
ಇದೀಗ ಮುಂದಿನ ಹಂತದ ಅಭಿವೃದ್ಧಿ ಯೋಜನೆಗೆ ಬೇಕಾದ ಹಣಕಾಸು ಲಭ್ಯತೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಗಮನಾರ್ಹ ನಷ್ಟವಾಗುತ್ತಿರುವುದನ್ನು ನೀಲಕಂಠನ್ ವಿವರಿಸುತ್ತಾರೆ. ಇದರೊಂದಿಗೆ ಮೋದಿ ಸರಕಾರ ತನ್ನ ಇಷ್ಟಾನಿಷ್ಟಗಳಿಗೆ ತಕ್ಕಂತೆ ಆದಾಯಮೂಲಗಳನ್ನು ನಿಯಂತ್ರಿಸುತ್ತಿರುವ ವಿಕೃತಿಯ ಬಗ್ಗೆ ಎಚ್ಚರಿಸುತ್ತಾರೆ.
ಸೆಸ್, ಸರ್ಚಾರ್ಜುಗಳನ್ನು ಹೆಚ್ಚಿಸಿ ಅವುಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳದ ದುರ್ಬುದ್ಧಿ ಸಂವಿಧಾನದ ಆಶಯಗಳನ್ನೇ ಬುಡಮೇಲು ಮಾಡುವಷ್ಟು ಅಪಾಯಕಾರಿಯಾಗಲಿದೆ. ತೆರಿಗೆ ಹಂಚಿಕೆಯ ನಿಯಂತ್ರಣದ ಮೂಲಕ ಕೇಂದ್ರ ಸರಕಾರ ರಾಜ್ಯ ಸರಕಾರಗಳ ಮೇಲೆ ಅಸಹಜ, ಸಂವಿಧಾನ ವಿರೋಧಿ ನಿಯಂತ್ರಣಕ್ಕಾಗಿ ಹವಣಿಸುತ್ತಿರುವ ಕಾರ್ಯಶೈಲಿಯನ್ನು ನೀಲಕಂಠನ್ ವಿವರಿಸುತ್ತಾರೆ.
ಇವೆಲ್ಲವೂ ಈಗ ಕಾರ್ಯಾಂಗದ ತಂತ್ರಗಾರಿಕೆ ಮೂಲಕ ನಡೆಯುತ್ತಿದೆ. ಆದರೆ ೧೯೭೬ರಲ್ಲಿ ಸಂಸತ್ ಸ್ಥಾನಗಳ ಸಂಖ್ಯೆಯನ್ನು ೧೯೭೧ರ ಜನಗಣತಿ ಆಧಾರದ ಮೇಲೆ ಸ್ಥಗಿತಗೊಳಿಸುವ ನಿರ್ಣಯ ೨೦೨೬ರಲ್ಲಿ ಅಂತ್ಯವಾಗಲಿದ್ದು. ಆಗ ಜನಸಂಖ್ಯೆಗನುಗುಣವಾಗಿ ಸಂಸತ್ ಸ್ಥಾನಗಳು ಪುನರ್ನಿರ್ಧಾರವಾಗಲಿವೆ. ಇದು ಪ್ರಜಾಸತ್ತಾತ್ಮಕವಾಗಿ, ಸಾಂವಿಧಾನಿಕವಾಗಿ ಸರಿಯಾದ ಕ್ರಮ, ನಿಜ. ಆದರೆ ಇದು ಜನಸಂಖ್ಯಾ ನಿಯಂತ್ರಣವನ್ನು ಸಾಧಿಸಿದ ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯವನ್ನೇ ಗೌಣವಾಗಿಸುವ ಸಾಧ್ಯತೆ ಇದೆ. ಜನಸಂಖ್ಯಾ ನಿಯಂತ್ರಣದಲ್ಲೂ ಕಳಪೆ ಸಾಧನೆ ತೋರಿ, ಉಳಿದ ಅಭಿವೃದ್ಧಿ ಮಾನದಂಡಗಳಲ್ಲೂ ಕಳಪೆ ಸಾಧನೆ ತೋರಿರುವ ಉತ್ತರದ ರಾಜ್ಯಗಳು ಜನಸಂಖ್ಯಾ ಹೆಚ್ಚಳದ ಕಾರಣಕ್ಕೇ ಹೆಚ್ಚುವರಿ ರಾಜಕೀಯ ಪ್ರಾತಿನಿಧ್ಯ ಪಡೆಯಲಿವೆ.
ಈ ಹೆಚ್ಚಳ ಉತ್ತರದ ಯಜಮಾನಿಕೆಗೂ ಕಾರಣವಾಗಬಹುದು ಎಂಬ ಆತಂಕಕ್ಕೆ ವರ್ತಮಾನದ ರಾಜಕೀಯ ಚಲನೆಯೂ ಇಂಬುಕೊಡುವಂತಿದೆ. ಅರ್ಥಾತ್ ಏಕರೂಪೀ ಸಾಂಸ್ಕೃತಿಕ ಮೊಹರಿನ ಹಪಾಹಪಿ, ರಾಜಕೀಯ ನಿಯಂತ್ರಣದ ಹಪಾಹಪಿ ಹಾಗೂ ವಿತ್ತೀಯ ನೀತಿಗಳ ಏಕಸ್ವಾಮ್ಯ ಮೂರೂ ಹೆಣೆದುಕೊಂಡಿರುವ ಮೋದಿ ಆಡಳಿತದ ಹೆಜ್ಜೆಗತಿಗೆ ೨೦೨೬ರ ಬದಲಾವಣೆ ಸಂಸದೀಯ ಒಪ್ಪಿಗೆಯ ಮೊಹರೂ ಒತ್ತಬಹುದು.
ಈ ಅಪಾಯಕ್ಕೆ ಪರ್ಯಾಯವೇನು?
ನೀಲಕಂಠನ್ ಅವರು ಸೂಚಿಸುವ ಪರ್ಯಾಯಗಳೆಲ್ಲ, ವಾಸ್ತವ ದೂರ ತಾರ್ಕಿಕ ಸೂಚಿಗಳಷ್ಟೇ ಆಗಿವೆ.
- ಉತ್ತರ V/S ದಕ್ಷಿಣ ಎಂಬ ಬಿಂಬವೂ ಕೊಂಚ ಮಂದದೃಷ್ಟಿಯ ಗ್ರಹಿಕೆ. ಅಸಲಿಗೆ ಇದು ಕೇಂದ್ರೀಕರಣದ ಸೂತ್ರಧಾರಿಗಳ ಚಿತಾವಣೆಯಿಂದ ಹುಟ್ಟಿರುವ ಬಿಕ್ಕಟ್ಟು. ಈ ಬಿಕ್ಕಟ್ಟು ಮೋದಿ ಕಾಲದ ಏಕಾಏಕಿ ಸೃಷ್ಟಿಯಲ್ಲ. ಮೋದಿಗಿಂತ ಮೊದಲಿದ್ದ ಕಾಂಗ್ರೆಸ್ ಈ ಬಿಕ್ಕಟ್ಟಿನ ಬೀಜ ನೆಟ್ಟಿದ್ದು ಎಂಬುದನ್ನು ಮರೆಯಕೂಡದು.
- ದಕ್ಷಿಣದ ರಾಜ್ಯಗಳಷ್ಟೇ ಅಲ್ಲ ಅಭಿವೃದ್ಧಿ ಮತ್ತು ತೆರಿಗೆ ಸಂಗ್ರಹದ ಮುಂಚೂಣಿಯಲ್ಲಿರುವ ಮಹಾರಾಷ್ಟ, ಪಶ್ಚಿಮ ಬಂಗಾಳ ಕೂಡ ಪ್ರಾದೇಶಿಕ ಪಕ್ಷಗಳ ಅಸ್ತಿತ್ವದ ಭಾಗವಷ್ಟೇ. ಇವು ಈ ಅನಾರೋಗ್ಯಕರ ಕೇಂದ್ರ ನಿಯಂತ್ರಣದ ವಿರುದ್ಧ ವಾದಿಸಲೇ ಇಲ್ಲ.
- ಜಿ.ಎಸ್.ಟಿಇಂದ ಹಿಡಿದು ಕೇಂದ್ರದ ತೆರಿಗೆ ಹಂಚಿಕೆಯ ವಿನ್ಯಾಸದ ಬಗ್ಗೆ ಪ್ರತಿರೋಧ ಒಡ್ಡಿಯೇ ಇಲ್ಲ. ತೆರಿಗೆ ಸಂಗ್ರಹಕ್ಕೂ ತೆರಿಗೆ/ ಆದಾಯದ ಪಾಲಿಗೂ ಇರುವ ಕಂದರದ ಬಗ್ಗೆ ಕರ್ನಾಟಕವೂ ಪ್ರತಿಭಟಿಸುತ್ತಿದೆ.
- ಈ ಪ್ರತಿಭಟನೆಯ ಸಂದರ್ಭದಲ್ಲೇ ಇದೇ ರಾಜ್ಯಗಳ ಅನುದಾನ/ಅಧಿಕಾರಹಂಚಿಕೆ ವೈರುಧ್ಯ ಹಣಕಿಕ್ಕುತ್ತಿದೆ. ಕೇಂದ್ರದ ನಿಯಂತ್ರಣದ ಬಗ್ಗೆ ಧ್ವನಿ ಎತ್ತುವಾಗ ಸ್ವತಃ ತಾವೇ ವಿಕೇಂದ್ರಿಕರಣದ ಮೂರ್ತರೂಪಗಳಾದ ಗ್ರಾಮಪಂಚಾಯತುಗಳಿಗೆಷ್ಟು ಸ್ವಾಯತ್ತತೆ ಕೊಟ್ಟಿದ್ದೇವೆ ಎಂಬ ಆತ್ಮಾವಲೋಕನ ಕಾಣಿಸುತ್ತಿಲ್ಲ.
- ಒಕ್ಕೂಟದ ಸಂತುಲಿತ ಅಧಿಕಾರ ಸ್ವರೂಪ ಕೇಂದ್ರ-ರಾಜ್ಯಗಳಿಗಷ್ಟೇ ಸೀಮಿತ ಎಂಬಂತೆ ಮಾತಾಡಿದರೆ ಅದು ಆತ್ಮವಂಚನೆಯಾಗುತ್ತದೆ.
ನೀಲಕಂಠನ್ ಅವರ ಕೃತಿಯನ್ನು ಓದಿದವರು ಒಕ್ಕೂಟ ವ್ಯವಸ್ಥೆಯನ್ನು ಉಳಿಸಿ ಬೆಳೆಸುವ ಸಾಂವಿಧಾನಿಕ ಸಾಂಸ್ಥಿಕ, ಸಂರಚನೆಗಳನ್ನು ಮರುರೂಪಿಸುವ ಬಗ್ಗೆ, ಅವು ಕೇಂದ್ರದ, ಸಂಸತ್ತಿನ ಸಂವಿಧಾನೇತರ ಪ್ರಭಾವಕ್ಕೊಳಗಾಗದಷ್ಟು ಸ್ವಾಯತ್ತತೆ ಪಡೆಯುವುದು ಹೇಗೆ ಎಂಬಿತ್ಯಾದಿ ಬಗ್ಗೆ ಚರ್ಚಿಸುವ ಅಗತ್ಯವಿದೆ.
ಈ ಕೃತಿಯನ್ನು ನಾನು ಉತ್ಸಾಹದಿಂದ ಅನುವಾದಿಸಿದ್ದೇನೆ. ಎಂದಿನಂತೆ ಮೂಲಕ್ಕೆ ಚ್ಯುತಿ ಬಾರದಂತೆ ಅನುವಾದಿಸಲು ಯತ್ನಿಸಿದ್ದೇನೆ. ಈ ಕೃತಿಯ ಅನುವಾದಕ್ಕೆಅವಕಾಶ ನೀಡಿದ ಡಾ. ನಾಗೇಗೌಡ ಕೀಲಾರ ಮತ್ತು ನಂದೀಶ್ ದೇವ್ ಅವರಿಗೆ ಆಭಾರಿ. ಹಾಗೇ ಮೌಲಿಕ ಮುನ್ನುಡಿ ಬರೆದು ಈ ಕೃತಿಗೊಂದು ಬೌದ್ಧಿಕ ಮನ್ನಣೆ ನೀಡಿದ ಶ್ರೀ ಕೃಷ್ಣಭೈರೇಗೌಡ ಅವರಿಗೂ ಕೃತಜ್ಞತೆಗಳು. ಉಳಿದಂತೆ, ಈ ಕೃತಿ ಎತ್ತಿರುವ ಪ್ರಶ್ನೆಗಳ ಬಗ್ಗೆ ಕರ್ನಾಟಕದ ಚಿಂತಕರು, ರಾಜಕಾರಣಿಗಳಾದಿಯಾಗಿ ಎಲ್ಲರೂ ಚರ್ಚಿಸಿದರೆ ಈ ಅನುವಾದ ಸಾರ್ಥಕ.
– ಕೆ.ಪಿ. ಸುರೇಶ ಕಂಜರ್ಪಣೆ
ಕನ್ನಡ ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್ ಮಾಡಿ
For English book purchases click here
For review click here