ಕುವೆಂಪುನಗರದ ಸರ್ಕಲ್ ಬಳಿ ಹೋದಾಗ ಅಲ್ಲಿ ನೂರಾರು ಜನ ನಿಂತಿದ್ರು. ಅವರೆಲ್ಲ ಹಳ್ಳಿಗಳಿಂದ ಕೂಲಿಗಾಗಿ ಧಾವಿಸಿ ಬಂದವರು. ಅವ್ರು ಕಣ್ಣಲ್ಲಿ ಕಣ್ಣಿಟ್ಟು ನೋಡೋ ಧೈರ್ಯ ನನಗೆ ಬರ್ಲಿಲ್ಲ. ಈ ಮಾತನ್ನ ಯಾಕೆ ಹೇಳ್ತಾ ಇದ್ದೀನಿ ಅಂದ್ರೆ- ವೆಸ್ಟ್ ಇಂಡೀಸ್‌ನಲ್ಲಿ ಭಾರತೀಯರನ್ನು ಕೂಲಿಗಳು ಅಂತ ಕರೆಯುತ್ತಿದ್ದರು. ಇದು ಇಲ್ಲಿ ಇದೇ ರೀತಿ ಮುಂದುವರಿದರೆ ಹಳ್ಳಿಗರನ್ನು ಹಳ್ಳಿಗರೆಂದಲ್ಲ ‘ಕೂಲಿಗಳು’- ಎಂದು ಕರೆಯುವ ದಿನ ಬಹಳ ದೂರವಿಲ್ಲ. ಇದು ನನಗೆ ಬಹಳ ಯಾತನೆ ಆಗಿ ಕಾಣಿಸ್ತಾ ಇದೆ. ಇಂದು ಬದಲಾವಣೆಯ ವೇಗ ಜಾಸ್ತಿ ಆಗಿದೆ. ಹಿಂದೆ ಒಂದು ಬದಲಾವಣೆಗೆ ಹತ್ತು ವರ್ಷ ತಗೊಂಡ್ರೆ ಈಗ ಅದೇ ಬದಲಾವಣೆಗೆ ಒಂದು ವರ್ಷ ಮಾತ್ರ ಸಾಕು. ಇದು ನನ್ನ ಯಾತನೆಗೆ, ಆತಂಕಕ್ಕೆ ಕಾರಣ.
ಇಷ್ಟು ಹೊತ್ತಿಗಾಗೇನೆ ಹಳ್ಳಿಗಳು ದಿವಾಳಿಯೆದ್ದು ಹೋಗಬೇಕಾಗಿತ್ತು. ಆದ್ರೆ ಗ್ರಾಮೀಣ ಭಾರತದ ಮಹಿಳೆಯರು ಹಳ್ಳಿಗಳ ನೊಗ ಹೊತ್ತು ನಿಂತ ಪರಿಣಾಮ ಹಳ್ಳಿಗಳು ಉಳಿದುಕೊಂಡಿವೆ. ಮಹಿಳೆಯರು ಸಂಘ ಸಂಸ್ಥೆಗಳನ್ನು ಮಾಡ್ಕೊಂಡು, ಸಣ್ಣಪುಟ್ಟ ರಚನಾತ್ಮಕ ಕೆಲಸಗಳನ್ನು ಮಾಡ್ಕೊಂಡು, ಪರಸ್ಪರ ಆರ್ಥಿಕ ಸಹಕಾರ ಮಾಡ್ಕೊಂಡು ಹಳ್ಳಿಗಳ ಮಾನ ಉಳುಸುದ್ರು, ಹಳ್ಳಿಗಳ ಗಂಡಸರ ಮಾನ ಕೂಡ ಕಾಪಾಡಿದ್ರು. ಇಲ್ಲೆ ಹೋಗಿದ್ರ ಇಷ್ಟೊತ್ತಿಗೆ ಹಳ್ಳಿಗಳು ಪಾಪರ್ ಆಗುತ್ತಿದ್ದವೇನೊ. ಇವತ್ತು 70 ಭಾಗ ಭಾರತ, ಅಂದ್ರೆ ಗ್ರಾಮೀಣ ಭಾರತ, ಮಲಗಿದೆ. ಇದನ್ನು ಬಡಿದು ಎಬ್ಬಿಸಬೇಕಾಗಿದೆ. ಚಾವುಟಿ ಏಟು ಕೊಟ್ಟು ಎಬ್ಬಿಸಬೇಕಾಗಿದೆ. ಈ ಚಾವುಟ ಏಟು ಕೊಡುವಂಥ ಕೆಲಸವನ್ನು ಹಳ್ಳಿಗಳಲ್ಲಿ ರಚನಾತ್ಮಕ ಕೆಲಸ ಮಾಡ್ತಿರೂ ಮಹಿಳಾ ಸಂಘಸಂಸ್ಥೆಗಳೆ ಮಾಡಿ ಕಾಪಾಡಬೇಕಾಗಿದೆ. ಇಲ್ಲದಿದ್ದರೆ ದಾರಿ ಇಲ್ಲ.
ಇವತ್ತು ವ್ಯವಸಾಯ ತುಂಬಾ ನಷ್ಟದ ವ್ಯವಹಾರ ಆಗಿದೆ. ಇಂದು ಇಡೀ ಹಳ್ಳಿಗೆ ಹಳ್ಳಿನೆ ತನಗೆ ತಾನೇ ನೇಣು ಹಾಕಿಕೊಳ್ಳೋಕೆ ಯಾವ ಪರಿಸ್ಥಿತಿ ಇರಬೇಕೊ ಆ ಪರಿಸ್ಥಿತಿ ಇದೆ. ಆದರೆ ಪ್ರಕೃತಿ ಯಾವ ಯಾವ ರೂಪದಲ್ಲಿ ಕಾಪಾಡುತ್ತೊ ಹೇಳಕ್ಕಾಗಲ್ಲ. ಇದೀಗ ಆ ಕಾಪಾಡುವ ಪ್ರಕೃತಿ ಪಾಳೇಕರ ರೂಪದಲ್ಲಿ ಕಾಣಿಸಿಕೊಂಡಿದೆ.
ಪಾಳೇಕರರ ಈ ನೈಸರ್ಗಿಕ ಕೃಷಿಯನ್ನು ಯಾವ ರೀತಿಯಲ್ಲಿ, ಯಾವ ಮಾತುಗಳಲ್ಲಿ ಅರ್ಥೈಸಿ ಹೇಳಬೇಕೊ ತಿಳಿಯುತ್ತಿಲ್ಲ. ಇದನ್ನು ಪವಾಡ ಅನ್ನಬೇಕೊ ಅಥವಾ ವರ ಅನ್ನಬೇಕೊ ನನಗೆ ಅರ್ಥ ಆಗ್ತಾ ಇಲ್ಲ. ಯಾಕೆಂದರೆ ನಿನ್ನೆ ತಾನೆ ಬನ್ನೂರು ಕೃಷ್ಣಪ್ಪನವರ ತೋಟ ನೋಡಲು ಹೋಗಿದ್ದೆ. ಅಲ್ಲಿ ಬಾಳೆಯ ಎರಡನೆಯ ಕೂಳೆ ಬೆಳೆ ನೋಡ್ಡ. ರಾಸಾಯನಿಕ ಗೊಬ್ಬರ ಅಲ್ಲಿಗೆ ಸೋಕಿಸಿಲ್ಲ. ಎರೆಗೊಬ್ಬರ, ತಿಪ್ಪೆ ಗೊಬ್ಬರವನ್ನೂ . ಅಲ್ಲಿಗೆ ಹಾಕಿಲ್ಲ. ಕ್ರಿಮಿನಾಶಕ, ಕಳೆನಾಶಕ ಬಳಸಿಲ್ಲ. ಮಿಗಿಲಾಗಿ ನೀರಿನ ಬಳಕೆ- ನಾವು ಸಾಮಾನ್ಯವಾಗಿ ಬಾಳೆ ಬೆಳೆಯಲು ಬಳಸುತ್ತೀವಲ್ಲ; ಅದರ ಹತ್ತನೇ ಒಂದು ಭಾಗ ಮಾತ್ರ ಬಳಸಿರೋದು. ಆದರೆ ಫಸಲು ಎಷ್ಟಿತ್ತೆಂದರೆ ಸರಾಸರಿ ಕನಿಷ್ಠ ಹದಿನೈದು ಕೆಜಿ ಮತ್ತು ಅಪರೂಪದ ಗೊನೆಗಳು ಮೂವತ್ತು ಕೆಜಿ, ನಲವತ್ತು ಕೆಜಿಯ ಗೊನೆಗಳೆಲ್ಲ ಇದ್ದು. ಈ ಪವಾಡ ಹೇಗಾಯ್ತು?
ಈ ಪವಾಡ ಸಂಭವಿಸಲು ಕಾರಣಗಳೇನು ಅನ್ನುವುದರ ಕುರಿತು ಈ ಕೃತಿ ಹೇಳುತ್ತಾ ಹೋಗುತ್ತದೆ. ನಾನಿದರ ನಾಡಿ ಹಿಡಿದು ಹೇಳುವುದಿಷ್ಟೆ, ಸಗಣಿ ಬಿದ್ದಿರೊ ಜಾಗವನ್ನು ತಾವು ನೋಡಿರಬಹುದು. ಒಂದು ದಿನ ಬಿಟ್ಟು ಸಗಣಿಯನ್ನು ಪಕ್ಕಕ್ಕೆ ಸರಿಸಿ ನೋಡಿ. ಆ ಜಾಗದಲ್ಲಿ ಸಣ್ಣ ಸಣ್ಣ ತೂತುಗಳು ಕಾಣಿಸುತ್ತವೆ. ಅಂದ್ರೆ ಅಲ್ಲಿ ಭೂಮಿಯ ಅಂತರಂಗಕ್ಕೂ ಭೂಮಿಯ ಬಹಿರಂಗಕ್ಕೂ ನಡುವೆ ದಾರಿಗಳು ಉಂಟಾಗಿರ್ತವೆ. ಇಷ್ಟು ಮಾಡಿದ್ರೆ ಆ ದಾರಿಯಲ್ಲಿ ಗಿಡಕ್ಕೆ ಬೇಕಾದ ರಂಜಕ ಸಿಗುತ್ತೆ, ಪೊಟಾಷ್ ಸಿಗುತ್ತೆ, ಇನ್ನು ಏನೇನೊ ಎಲ್ಲವೂ ಸಹಜವಾಗಿ ಸಿಗುತ್ತವೆ.
ನಾವು ರಾಸಾಯನಿಕ ಬಳಸಿ, ಬಳಸಿ ಭೂಮಿ ಕಣ್ಣು ಮುಚ್ಚಿಕೊಂಡಿದೆ. ನಮ್ಮ ರೈತ ಕೂಡ ಕಣ್ಣು ಮುಚ್ಚಿಕೊಂಡಿದ್ದಾನೆ. ಅವನ ಕಣ್ಣು ತೆರೆಸುವ ಕೆಲಸ ಈ ಮೂಲಕ ಆಗಬೇಕು. ರೈತನ ಕಣ್ಣು ಮತ್ತು ಭೂಮಿಯ ಕಣ್ಣು ಎರಡನ್ನೂ ತೆರೆಸುವ ಕೆಲಸ ಆದರೆ ಈ ಪವಾಡ ಸಂಭವಿಸುತ್ತೆ. ಈ ಕೃಷಿ ವಿಧಾನದ ವರ ಯಾವುದಪ್ಪ ಅಂದರೆ…. ಅರ್ಧ ಎಕರೆಯಲ್ಲಿ, ಒಂದ್ ಎಕ್ರೆಯಲ್ಲಿ ಬೇಸಾಯ ಮಾಡಿದರೆ ಸಾಕು- ರೈತ ಅತ್ಯಂತ ಗೌರವಯುತವಾಗಿ, ಸ್ವಾವಲಂಬಿಯಾಗಿ ಬದುಕನ್ನು ನಿರ್ವಹಿಸಬಹುದು. ಇದು ಬೆಲೆ ಕಟ್ಟಲಾರದಂಥ ಸಂಗತಿ.
ಈ ಹಿನ್ನೆಲೆಯಲ್ಲೇ ನಾವು ಪಾಳೇಕರರ ಕೃಷಿಯನ್ನು ನಮ್ಮ ಮುಖ್ಯ ಕಾರ್ಯಕ್ರಮವನ್ನಾಗಿ ಸ್ವೀಕರಿಸಿದ್ದೇವೆ. ಈ ವಿಷಯವಾಗಿ ನನ್ನಲ್ಲಿ ಅಪಾರವಾದ ಧನ್ಯತಾಭಾವ ಇದೆ. ಇನ್ಮುಂದೆ ನಾನು ಈ ಕೃಷಿಯನ್ನು ಕೇವಲ ನೈಸರ್ಗಿಕ ಕೃಷಿ ಅನ್ನೋದಿಲ್ಲ. ಬದಲಾಗಿ ‘ಪಾಳೇಕರ್ ಪ್ರಕೃತಿ ಪವಾಡ ಬೇಸಾಯ’ ಅಂತ ಕರೆಯೋದಕ್ಕೆ ಇಷ್ಟಪಡ್ತೀನಿ. ಯಾಕಂದ್ರೆ ಪವಾಡಾನೆ ಆಗಿದೆ ಇದು. ದಯವಿಟ್ಟು ತಾವು ಈ ಕೃಷಿಯ ಬೆರಗನ್ನು ನೋಡಬೇಕು. ಮಾಧ್ಯಮದವರು ದಯವಿಟ್ಟು ಇದನ್ನು ಪ್ರಚಾರ ಮಾಡಬೇಕು. ಈ ಸಾರ್ಥಕವಾದ ಕೆಲಸದಲ್ಲಿ ತಾವೂ ಒಂದಾಗಬೇಕು. ನಾವೀಗ ಪ್ರತಿ ಗ್ರಾಮಪಂಚಾಯ್ತಿ ಮಟ್ಟದಲ್ಲಿ ಹತ್ತು ಜನರ ಸಮಿತಿ ಮಾಡಿ- ಈ ಕೃಷಿ ಬಗೆಗೆ ತಿಳಿಸಿ- ರಚನಾತ್ಮಕ ಕಾರ್ಯಗಳಲ್ಲಿ ತೊಡಗುವಂತೆ ಪ್ರೇರೇಪಿಸುತ್ತಿದ್ದೇವೆ. ಈ ಹಾದಿಯಲ್ಲಿ ತಾವೆಲ್ಲರೂ ಭಾಗಿಗಳಾಗಬೇಕೆಂದು ನಾನು ಕೋರುತ್ತೇನೆ.
ಎಲ್ಲರಿಗೂ ಗೊತ್ತು ಬೇಸಾಯದ ಕುರಿತು ಒಂದು ಗಾದೆ ಇದೆ. ಬೇಸಾಯ ಅಂದ್ರೆ ‘ನಾಸಾಯ, ನೀಸಾಯ, ಮನೆಮಂದಿಯೆಲ್ಲ ಸಾಯ’ ಅಂತ. ಈ ಗಾದೇನ ಈ ನೈಸರ್ಗಿಕ ಕೃಷಿ ಸುಳ್ಳು ಮಾಡುತ್ತೆ ಅನ್ನೋ ನಂಬಿಕೆ ನನಗಿದೆ. ನಾವಿದನ್ನ ವ್ಯಾಪಕಗೊಳಿಸಿದ್ರೆ ಸಾಯುವವನು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವವನು ರೈತ ಅಲ್ಲ. ಬದಲಿಗೆ ಇಲ್ಲಿ ರಸಗೊಬ್ಬರ ಆತ್ಮಹತ್ಯೆ ಮಾಡಿಕೊಳ್ಳುತ್ತೆ, ಕ್ರಿಮಿನಾಶಕಗಳು ಆತ್ಮಹತ್ಯೆ ಮಾಡಿಕೊಳ್ಳು ಇವೆ. ಸಾವಯವ ಗೊಬ್ಬರಗಳು, ಹೈಬ್ರಿಡ್ ಬೀಜಗಳು, ಸಾಲಗಳೂ ಆತ್ಮಹತ್ಯೆ ಮಾಡಿ ಕೊಳ್ಳುತ್ತವೆ.
ಸದ್ದಿಲ್ಲದ ಕ್ರಾಂತಿ ಇದು. ಈ ಕ್ರಾಂತಿಯಿಂದ ರಸಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕಗಳ ಬಹುರಾಷ್ಟ್ರೀಯ ಕಂಪನಿಗಳು ತಂತಾನೆ ನಾಶವಾಗುತ್ತವೆ. ಈ ಸ್ಥಳೀಯತೆ ಎಲ್ಲಕ್ಕೂ ಉತ್ತರ ಆಗುತ್ತೆ. ಇದಕ್ಕೆ ಕಾರಣರಾದ ಸುಭಾಷ್ ಪಾಳೇಕರರ ದಾರ್ಶನಿಕತೆಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುವೆ.
ಜೊತೆಗೆ ನನ್ನ ಕೃತಜ್ಞತೆಗಳು ಸ್ವಾಮಿಆನಂದ್‌ರವರಿಗೂ ಸಲ್ಲುತ್ತವೆ. ಒಂದು ದಿನ ಫೋನ್ ಮಾಡಿದ ಆನಂದ್ ‘ಅಯ್ಯೋಯ್ಯೋ ನಿಮ್ಮ ಸಮಸ್ಯೆಗಳೆಲ್ಲ ಬಗೆಹರಿಯಿತು ಸಾರ್’ ಅಂದರು. ನನಗೆ ಗಾಬರಿ ಆಯಿತು. ಏನು ಸಮಾಚಾರ ಎಂದು ಕೇಳಿದೆ. ಅವರಿಂದ ನೇರ ಉತ್ತರ ಬರಲಿಲ್ಲ. ಬದಲಾಗಿ ‘ನಿಮ್ಮ ಭೂಮಿಯಲ್ಲಿ ಈಗ ಚಿನ್ನ ಬೆಳೆಯಬಹುದು’ ಎಂದರು.
‘ಅಯ್ಯೋ ಭೂಮೀನ ನೀವೇ ತಕ್ಕೊಂಡು ಸ್ವಲ್ಪ ಚಿನ್ನ ಕೊಡಿ’ ಅಂದೆ.
ನನ್ನ ಮಾತನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಆನಂದ್ ಸಂಭ್ರಮದಿಂದ ಪಾಳೇಕರ್ರವರ ನೈಸರ್ಗಿಕ ಕೃಷಿ ವಿವರಿಸಿದರು. ಹಾಗೂ ಬನ್ನೂರು ಕೃಷ್ಣಪ್ಪನವರ ತೋಟವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದರು. ಆನಂದ್ ಎಷ್ಟೇ ಹೇಳಿದರೂ ಒಂದು ಅನುಮಾನ ನನಗೆ ಇದ್ದೇ ಇತ್ತು. ಆದರೆ ಯಾವಾಗ ಬನ್ನೂರು ಕೃಷ್ಣಪ್ಪನವರ ತೋಟ ನೋಡಿದೆನೊ ನನಗೂ ಆನಂದ್ ತರವೇ ಆಯಿತು.
ಆ ಗಳಿಗೆಯಿಂದಲೂ ಆನಂದ್‌ರವರನ್ನು ನೋಡುತ್ತಿದ್ದೇನೆ. ದೇವರನ್ನು ಪ್ರತ್ಯಕ್ಷ ಮಾಡಿಕೊಳ್ಳುವ ಸಾಧಕನ ತುರ್ತಿನಲ್ಲಿ ಆನಂದ್ ನೈಸರ್ಗಿಕ ಕೃಷಿಗೆ ತಹತಹಿಸಿದ್ದಾರೆ. ಅವರ ನಿದ್ರೆಯಲ್ಲೂ ಪಾಳೇಕರ್ ಕೃಷಿ ತುಂಬಿರುವಂತಿದ್ದಾರೆ. ಈ ತಮ್ಮ ಸ್ಥಿತಿಯನ್ನು ಈಗ ಕೃತಿಯ ಮೂಲಕ ಅಭಿವ್ಯಕ್ತಿಗೊಳಿಸಿದ್ದಾರೆ.
ಕೃತಿಯಲ್ಲಿ ನೈಸರ್ಗಿಕ ಕೃಷಿಯ ಪ್ರಾಮುಖ್ಯತ ಜೊತೆಗೆ ಅದರ ಡೈನಮಿಸಂ ಅನ್ನು ಮನದಟ್ಟು ಮಾಡಿಸಲು ಪ್ರಯತ್ನಿಸಿದ್ದಾರೆ. ಈ ಕೃತಿಯನ್ನು ನಾಡಿನ ಉದ್ದಗಲಕ್ಕೂ ತಲುಪುವಂತೆ ಮಾಡಿದರೆ ನಮ್ಮ ರೈತಾಪಿ ಬದುಕು ಉಸಿರಾಡುತ್ತದೆ. ಇದಕ್ಕೆ ಕಾರಣಕರ್ತರಾಗಿರುವ ಸ್ವಾಮಿಆನಂದ್‌ರವರಿಗೆ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸುವೆ.
- ದೇವನೂರ ಮಹಾದೇವ
ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್ ಮಾಡಿ