ಪಶ್ಚಿಮಘಟ್ಟ ಜೀವ ವೈವಿಧ್ಯತೆಗೆ ತವರೂರು. ಇದು ನಿಸರ್ಗ ನಮಗಿತ್ತ ವರ. ಇಲ್ಲಿ ನೂರಾರು ಜಾತಿಯ ಗಿಡ-ಮರಗಳು ಬೆಳೆಯುತ್ತವೆ. ಕಾಡಿನಿಂದ ನಮಗೆ ಅನೇಕ ರೀತಿಯ ಕಾಡು ಉತ್ಪನ್ನಗಳು ದೊರೆಯುತ್ತವೆ. ಇದರಲ್ಲಿ ಕಾಡು ಹಣ್ಣು ಕೂಡ ಒಂದು. ಇದನ್ನು ಹಳ್ಳಿಯ ಮಕ್ಕಳಿಂದ ಹಿಡಿದು ಹಿರಿಯರು ಕೂಡ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಕಾಡಿನ ಹಣ್ಣುಗಳು ಬರೀ ರುಚಿ ಆಸ್ವಾದಿಸಲು ಇರುವಂಥಹುದ್ದಲ್ಲ. ಬದಲಾಗಿ, ಇದರಲ್ಲಿ ಅನೇಕ ರೀತಿಯ ಪೋಷಕಾಂಶಗಳು, ಔಷಧೀಯ ಗುಣಗಳಿರುತ್ತವೆ.
ಆಯಾಯ ಪ್ರದೇಶದಲ್ಲಿ, ಋತುವಿಗನುಸಾರವಾಗಿ ದೊರೆಯುವ ಹಣ್ಣುಗಳು ಆರೋಗ್ಯ ಕಾಪಾಡುವಲ್ಲಿ ಮಹತ್ತರದ ಪಾತ್ರವಹಿಸುತ್ತವೆ. ಇದರಲ್ಲಿ ಅನೇಕ ಕಾಡು ಹಣ್ಣುಗಳು ರುಚಿಯೊಂದಿಗೆ ಆಯಾಸ ಪರಿಹರಿಸಲು ಸಹಕರಿಸುತ್ತವೆ.
ಪ್ರಕೃತಿಯಲ್ಲಿ ಸಹಜವಾಗಿ ಬೆಳೆಯುವ ಈ ಹಣ್ಣುಗಳು ರುಚಿಯಲ್ಲಿ, ಗುಣದಲ್ಲಿ ಅಂಗಡಿಯಲ್ಲಿ ಸಿಗುವ ಹಣ್ಣಿಗಿಂತ ಕಡಿಮೆಯೇನಲ್ಲ. ಕಾಡಿನಲ್ಲಿರುವ ಅನೇಕ ಅನೇಕ ಪ್ರಾಣಿ-ಪಕ್ಷಿಗಳು ಇದನ್ನೇ ಅವಲಂಬಿಸಿರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾಡು ನಾಶವಾಗಿ ಸಸ್ಯ ಸಂತತಿ ಕ್ಷೀಣಿಸುತ್ತಿದೆ. ಇದರಿಂದಾಗಿ ಕಾಡು ಪ್ರಾಣಿಗಳು ಊರಿನೆಡೆಗೆ ಲಗ್ಗೆ ಇಡುತ್ತಿವೆ. ಅರಣ್ಯ ನಾಶದಿಂದ ಅನೇಕ ಬಗೆಯ ಕಾಡು ಹಣ್ಣುಗಳ ಪರಿಚಯ ನಮಗೆ ಇಲ್ಲವಾಗಿದೆ ಮತ್ತು ಇದರ ಬಗ್ಗೆ ಗಮನ ಕೂಡ ಕಡಿಮೆಯಾಗುತ್ತಿದೆ.
ಕಾಡು ಹಣ್ಣುಗಳು ಎಂದಾಕ್ಷಣ ಕೆಲವರಿಗೆ ಅವರ ಬಾಲ್ಯದ ಸವಿ ನೆನಪುಗಳು ಕಣ್ಣಮುಂದೆ ಬರಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಈ ಕಾಡುಹಣ್ಣುಗಳ ಪರಿಚಯವೇ ಇಲ್ಲದಿರುವುದು ದುಃಖಕರ ಸಂಗತಿಯಾಗಿದೆ.
ಆದ್ದರಿಂದ ಈ ಎಲ್ಲಾ ಹಣ್ಣುಗಳ ಬಗ್ಗೆ ಸಾಧ್ಯವಾದಷ್ಟು ತಿಳಿದುಕೊಂಡು ಅವುಗಳನ್ನು ಉಳಿಸಿ ಬೆಳೆಸುವಲ್ಲಿ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ. ವಿನಾಶದಂಚಿನಲ್ಲಿರುವ ಕಾಡು ಹಣ್ಣುಗಳ ತಳಿಯನ್ನು ಉಳಿಸಿ. ಬೆಳೆಸಿ ಜೀವವೈವಿಧ್ಯತೆಯನ್ನು ಕಾಪಾಡಬೇಕು.
ಕಾಡು ಹಣ್ಣುಗಳನ್ನು ಹಸಿಯಾಗಿ, ಬೇಯಿಸಿ ಇನ್ನೂ ಹಲವು ರೀತಿಯಲ್ಲಿ ಸಂಸ್ಕರಿಸಿ ಬಳಸುತ್ತಾರೆ. ಈ ಪುಸ್ತಕದಲ್ಲಿ ಹಸಿಯಾಗಿ ಹಾಗೇ ಗಿಡದಿಂದ ಆಯ್ದು ತಿನ್ನುವ ಹಣ್ಣುಗಳ ಬಗ್ಗೆ ಬರೆಯಲಾಗಿದೆ.
- ಪುಸ್ತಕದ ಮುನ್ನುಡಿಯಿಂದ
ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್ ಮಾಡಿ