ನನ್ನ ಬಹು ವರ್ಷಗಳ ವಿಶ್ವಾಸಿಗರಾದ ಎ.ಪಿ. ಚಂದ್ರಶೇಖರ್‌ರವರು ದೂರವಾಣಿ ಕರೆ ಮಾಡಿ ನಾನು ಒಂದು ಪುಸ್ತಕ ಬರೆದಿದ್ದೇನೆ ಅದಕ್ಕೆ ತಾವೇ ಮುನ್ನುಡಿ ಬರೆಯಬೇಕೆಂದು ಕೇಳಿದಾಗ ನಿಜಕ್ಕೂ ನನಗೆ ಆಶ್ಚರ್ಯ ವಾಯಿತು. ಮೊದಲ ಅನುಭವ. ಅವರ ವಿಶ್ವಾಸಕ್ಕೆ ಮಣಿದು ಒಪ್ಪಿಕೊಂಡಾಯ್ತು. ಅವರ ತೋಟ ನೋಡಲು ಬಹಳ ವರ್ಷಗಳಿಂದ ಕಾಯುತ್ತಿದ್ದೆ. ನಿರೀಕ್ಷೆಯಂತೆ ಭೇಟಿಕೊಟ್ಟು ಅಲ್ಲಿನ ಸೊಬಗನ್ನು, ನೈಜ ಕೃಷಿಯನ್ನು ನೋಡಿ ಆನಂದವಾಯಿತು. ಅವರ ಕುಟುಂಬದ ಜೀವನ ಕೂಡ ನನಗೆ ಒಂದು ರೀತಿಯ ಸಂತೋಷವನ್ನುಂಟು ಮಾಡಿತು. ನನಗೆ ಎಷ್ಟೇ ಕಷ್ಟ ಆದರೂ, ಸಮಯದ ಕೊರತೆ ಇದ್ದರೂ, ಮುನ್ನುಡಿ ಬರೆಯಲು, ಪುಸ್ತಕ ಓದುವ ಸಾಹಸ ಮಾಡಿದೆ. ಆರಂಭದಲ್ಲಿ ದಿವಿಜ ಕುಜ ಎನ್ನುವ ಹೆಸರು ನನಗೆ ವಿಶೇಷವಾಗಿ ಕಂಡಿತು. ಆರಂಭದಲ್ಲಿ ಓದುವುದು ಅರ್ಥಮಾಡಿಕೊಳ್ಳುವುದು ಕಷ್ಟಕರವಾಯಿತು. ಹಳೆಗನ್ನಡ ಮಿಶ್ರಿತವಾದ ಈ ಕೃತಿ ಓದುವುದು ಹೇಗಪ್ಪ ಎಂದು ಯೋಚನೆಯಾಗಿ ನಿಧಾನವಾಗಿ ಓದುತ್ತಾ ಮುಂದೆ ಸಾಗಿದೆ. ಈಗ ತಿಳಿಯಿತು, ತಿಳಿಯಾಯಿತು. ದಿವಿಜ ಕುಜ ವೃತ್ತಾಂತ ಎಂದರೆ ತೆಂಗಿನ ಮರದ ವಿವರ ಎಂದು ಗೊತ್ತಾಯಿತು.

ಪ್ರಕೃತಿಯನ್ನು ಗೌರವಿಸಲು, ಮನೆಯನ್ನು ದೇವಸ್ಥಾನವೆಂದು ಬಿಂಬಿಸಲು ಪೂರ್ವಜರು ತೆಂಗಿನಕಾಯಿಯನ್ನು ಪೂಜೆಗೆ ಮತ್ತು ಅಡುಗೆಗೆ ಬಳಸುತ್ತಿದ್ದರು ಎಂದು ಬಗೆ ಬಗೆಯಾಗಿ ಶ್ರೀಯುತರು ಈ ಪುಸ್ತಕದಲ್ಲಿ ವಿವರಿಸಿದ್ದಾರೆ.
ಇಪ್ಪತ್ತನಾಲ್ಕನೆಯ ಪುಟದಿಂದ ಇವರ ಕೃಷಿ ಕಾಯಕದ ಅನುಭವ ಆರಂಭವಾಗಿ ನಿಜ ಬಣ್ಣ – ಬದುಕಿನ ಆರಂಭ ಬಯಲಾಗುತ್ತದೆ. ಪ್ರಕೃತಿಯಲ್ಲಿ ಈಗ ಎಲ್ಲಾ ಬದಲಾಗಿದೆ. ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ಅಕ್ಷರ ಕ್ರಾಂತಿ, ಕೈಗಾರಿಕಾ ಕ್ರಾಂತಿಗಳ ಮೂಲಕ 20ನೇ ಶತಮಾನದಲ್ಲಿ, ಕ್ರಾಂತಿಗಳ ಮೂಲಕ ಬದಲಾಗುತ್ತಾ ಸಾಗುತ್ತಾ ಮಾನವನ ಜೀವನ ಶೈಲಿ ಬದಲಾದಂತೆ ರೈತರ ಸಮಸ್ಯೆಗಳು ಏರಿಕೆಯಾಗಿದೆ. ರೈತರ ವಲಸೆ ಆತ್ಮಹತ್ಯೆಯಂಥ ಸಮಸ್ಯೆಗಳು ಹೆಚ್ಚುತ್ತಿದ್ದು ಇದು ಕೃಷಿ ವಿಜ್ಞಾನಕ್ಕೆ ಬಲಿಯಾದಂತಹ ಕಾರ್ಯವಾಗಿದೆ ಎಂಬುದನ್ನು ನಾನು ಒಪ್ಪುತ್ತೇನೆ.
ಅವಸರವಿಲ್ಲದೆ ಮಾಡುವುದೇ ಸಾವಯವ ಕೃಷಿ. ನಾವು ಸತ್ತರೆ ಮಣ್ಣಿಗೆ ಹೋಗುತ್ತೇವೆ. ಆದರೆ, ಮಣ್ಣೆ ಸತ್ತರೆ ನಾವು ಎಲ್ಲಿಗೆ ಹೋಗುತ್ತೇವೆ ಎಂಬ ಪರಿಜ್ಞಾನವಿಲ್ಲದೆ ಜನ ಜೀವನ ಇರುವ ಬಗೆಯನ್ನು ಅರ್ಥಗರ್ಭಿತವಾಗಿ ತಿಳಿಸಿದ್ದಾರೆ. ಆಹಾರ ಉತ್ಪಾದನೆ ಹೆಚ್ಚಿಸಲು ಹೈಬ್ರಿಡ್ ಬೀಜಗಳೆಂಬ ನಪುಂಸಕ ಬೀಜಗಳ ಬಳಕೆ ಎಷ್ಟು ಅನಾಹುತ ಎಂಬುದನ್ನೂ ತಿಳಿಸಿದ್ದಾರೆ.
ಆದರೂ, ದಿವಿಜ ಕುಜ ಎಂಬ ಹೆಸರು ನನಗೆ ಆರಂಭದಿಂದಲೂ ಗೊಂದಲ ಸೃಷ್ಟಿಸುತ್ತಿರಲು ಇದರ ವಿವರ ವಿಸ್ತಾರವಾಗಿ ವಿವರಣೆ ಸ್ವಲ್ಪ ಜಾಸ್ತಿಯಾಯಿತೆಂದು ನನಗೆ ಅನಿಸುತ್ತದೆ.
ಹೆಚ್ಚು ರಸಗೊಬ್ಬರ ಹಾಕಿ, ಹೆಚ್ಚು ಖರ್ಚು ಮಾಡಿ, ಫಸಲು ತೆಗೆಯುವ ಬದಲು ಕಡಿಮೆ ಖರ್ಚು ಮಾಡಿ ಹೆಚ್ಚು ಫಸಲು ತೆಗೆಯುವುದು ಸೂಕ್ತ ಎನ್ನುವುದು ಇವರ ಚಿಂತನೆ. ನಾವು ಕೃಷಿಗೆ ಬಳಸುವ ಕೀಟನಾಶಕಗಳು, ರಸಗೊಬ್ಬರಗಳು, ಕಳೆ ನಾಶಕಗಳ ಕೆಟ್ಟ ಪರಿಣಾಮಗಳ ಬಗ್ಗೆ ಚೆನ್ನಾಗಿ ವಿವರಿಸಿದ್ದಾರೆ. ಕೃಷಿಗೆ ಸಂಬಂಧಪಟ್ಟ ಸಂಶೋಧನೆಗಳು ರೈತನ ಹೊಲದಲ್ಲಿಯೇ ನಡೆಸಿದರೆ ಅದರ ಪರಿಣಾಮಗಳು ಹಾಗೂ ಉದ್ದೇಶಗಳು ಸಮರ್ಪಕವಾಗಿ ಈಡೇರುತ್ತವೆ ಎಂಬುದನ್ನು ತಿಳಿಸಿದ್ದಾರೆ. ಸಂಶೋಧಕರು ಕೃಷಿ ಭೂಮಿಯನ್ನೇ ಸಂಶೋಧನಾಲಯ (ಲ್ಯಾಬ್ ಈಸ್ ಲ್ಯಾಂಡ್) ಮಾಡಬೇಕೆಂದು ಇದರಿಂದ ಪರಿಣಾಮಕಾರಿ ಕೆಲಸ ಆಗುತ್ತದೆ ಎಂದು ವಿವರಿಸಿದ್ದಾರೆ.
ತೆಂಗಿನ ಮರದ ಬಗ್ಗೆ, ನಾವೆಲ್ಲ ಇದು ಕಲ್ಪವೃಕ್ಷ ಎಂದು ತಿಳಿದಿದ್ದೇವೆ. ಈ ಪುಸ್ತಕದಲ್ಲಿ ಖಂಡಿತವಾಗಿಯೂ ಕಲ್ಪವೃಕ್ಷ ಎಂಬ ನಾಣ್ಣುಡಿ ಏಕೆ ಬಂತು ಎಂಬುದನ್ನು ಸಾಬೀತು ಮಾಡಿದ್ದಾರೆ. ತೆಂಗಿನ ಮರದ ಪ್ರತಿಯೊಂದು ಉತ್ಪನ್ನಗಳು ಕೂಡ ನಮಗೆ ಬಳಕೆಯಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ. ತೆಂಗಿನ ಕಾಯಿ, ಕೊಬ್ಬರಿ ಎಣ್ಣೆಗಳಿಂದ ಹಲವಾರು ರೀತಿಯ ಸ್ವಾದಿಷ್ಟವಾದ ತಿಂಡಿಗಳನ್ನು ಮಾಡಬಹುದು. ಇದರಿಂದ ತೆಂಗಿನ ಉತ್ಪನ್ನಗಳು ಆರೋಗ್ಯಕ್ಕೆ ಎಷ್ಟು ಹಿತಕರ ಎಂಬುದನ್ನು ವಿವರಿಸಿದ್ದಾರೆ. ತೆಂಗಿನ ಮರಕ್ಕೆ ಬರುವ ರೋಗಗಳ ನಿಯಂತ್ರಣ ಹೇಗೆ ಮಾಡಬೇಕು? ತೆಂಗಿನಲ್ಲಿ ಕೋತಿ ಇಲಿಗಳ ಹಾವಳಿ ತಪ್ಪಿಸುವುದು ಹೇಗೆ? ಎಲ್ಲವನ್ನೂ ನಿಖರವಾಗಿ ತಿಳಿಸಿದ್ದಾರೆ. ತೆಂಗಿನ ಮರ ಹಾಗೂ ಉತ್ಪನ್ನಗಳಿಂದ ಮೌಲ್ಯವರ್ಧನೆ ಮಾಡುವುದು ಹೇಗೆ? ತೆಂಗಿನಕಾಯಿ, ಕೊಬ್ಬರಿಯಿಂದ ವಿವಿಧ ರೀತಿಯ ಆಹಾರಗಳನ್ನು ತಯಾರಿಸುವುದು, ಬಳಕೆ ಮಾಡುವುದು ಎಲ್ಲವನ್ನೂ ಪುಸ್ತಕದಲ್ಲಿ ವಿವರಿಸಿದ್ದಾರೆ.
ತೆಂಗಿನ ಬೀಜ ಆಯ್ಕೆ ಮಾಡುವುದು, ಮೊಳಕೆ ಮಾಡಿ ಸಸಿ ಬೆಳೆಸುವುದು ಹಾಗೂ ಅದನ್ನು ಪೋಷಣೆ ಮಾಡುವುದು, ಎಲ್ಲವನ್ನೂ ವಿವರವಾಗಿ ತಿಳಿಸಿದ್ದಾರೆ. ಇದು ರೈತರಿಗೆ ಉತ್ತಮ ಮಾಹಿತಿ. ತೆಂಗು ಹಲವು ರೋಗಗಳಿಗೆ ರಾಮ ಬಾಣದಂತೆ ಔಷಧಿ ಎಂಬುದನ್ನು ವಿವರಿಸಿದ್ದಾರೆ. ತೆಂಗಿನ ಗಿಡದಿಂದಲೇ ಬರುವ ತೆಂಗಿನ ಗರಿ ಕೃಷಿ ಭೂಮಿಗೆ – ಸಮರ್ಪಕ ಬಳಕೆ ಮಾಡಿಕೊಂಡರೆ ಸಾವಯವ ಗೊಬ್ಬರ ಮಾಡಿಕೊಳ್ಳುವ ಬಗೆ ಹೇಗೆ ಎಂಬುದನ್ನು ತಿಳಿಸಿದ್ದಾರೆ. ಹಾಗೂ ಒಂದು ಅದ್ಭುತ ವಿಚಾರ ಹೇಳಿದ್ದಾರೆ. ತೆಂಗಿನ ಮರವನ್ನೇ ಕಿತ್ತು ಬೇರೆ ಕಡೆ ನೆಟ್ಟು, ಬೆಳೆಸಿ ಫಲ ಬಾರದಿರುವುದರ ಬಗ್ಗೆ ವಿವರಿಸಿದ್ದಾರೆ. ಇದು ಸಂಶೋಧಕರಿಗೆ ಉತ್ತಮ ಮಾಹಿತಿಯಾಗಿದೆ, ತೆಂಗಿನ ಗರಿಯಿಂದ ಮನೆ ಅಂಗಳ ಸ್ವಚ್ಛ ಮಾಡುವ ಉಪಕರಣಗಳನ್ನು ತಯಾರಿಸುವ ಬಗ್ಗೆ ತಿಳಿಸಿದ್ದಾರೆ. ತೆಂಗಿಗೆ ಬರುವ ನುಸಿ ರೋಗದ ಕಾಯಿಗಳನ್ನು ಬಳಸಿಕೊಳ್ಳುವ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.
ತೆಂಗಿನಕಾಯಿಯನ್ನು ಹಣ್ಣು ಮಾಡುವುದು ಹೇಗೆ? ಅದು ಎಷ್ಟು ಅದ್ಭುತ ಆಹಾರ ಎಂದು ವಿವರಿಸಿದ್ದಾರೆ. ತೆಂಗಿನ ಗೆಡ್ಡೆಯಿಂದ ಪಾಯಸ ಮಾಡುವ ಬಗ್ಗೆ ತಿಳಿಸಿದ್ದಾರೆ. ಜೈವಿಕ ಹುಳುಗಳನ್ನು ಸಾಯಿಸುವುದು ಸರಿಯೇ ಎನ್ನುವ ಬಗ್ಗೆ ವಿವರಿಸಿದ್ದಾರೆ. ಸಂಶೋಧನೆಗಳಿಗಿಂತ – ಹೆಚ್ಚು ಅನುಭವದ ಅಭಿಪ್ರಾಯ ಹಂಚಿ ಕೊಂಡಿದ್ದಾರೆ. ಅದಕ್ಕಾಗಿಯೇ ಹೇಳುವುದು ರೈತನೇ ದೊಡ್ಡ ವಿಜ್ಞಾನಿ ಎನ್ನುವುದು. ಈ ವಿಚಾರವು ಎ.ಪಿ.ಚಂದ್ರಶೇಖರ್ ಅವರಿಂದ ಇಲ್ಲಿ ಸಾಬೀತಾಗಿದೆ. ಕೃಷಿಯಲ್ಲಿ ತ್ಯಾಗ ಬೇಕು, ಮನಸ್ಸು ಬೇಕು, ಸಾಧನೆ ಬೇಕು, ಆಗ ಸಿಗುವುದು ಸ್ವರ್ಗ ಸುಖ ಎಂದು ತಿಳಿಸಿದ್ದಾರೆ. ಅದನ್ನು ನಾವು ಒಪ್ಪಲೇಬೇಕು.
ನನಗೆ ಎಷ್ಟೇ ಕಾರ್ಯಭಾರವಿದ್ದರೂ, ಪುಸ್ತಕವನ್ನು ಓದುತ್ತಾ ಓದುತ್ತಾ ಈ ಕಾರ್ಯ ಬೇಗ ಮುಗಿಸಲೇಬೇಕು ಎಂಬ ಹಂಬಲದಿಂದ ನಾನು ಹಲವು ದಿನಗಳು ನಿದ್ರೆಯಿಂದ ಎದ್ದ ತಕ್ಷಣವೇ ಈ ಪುಸ್ತಕ ಓದುವ ಮೂಲಕ ಇದರ ಮುನ್ನುಡಿ ಬರೆದಿದ್ದೇನೆ. ದಿವಿಜ ಕುಜ ಎಂಬ ಹೆಸರಿನ ಈ ಪುಸ್ತಕದಲ್ಲಿ, ತೆಂಗಿನ ಹುಟ್ಟು ಸಾವಿನ ಸಂಪೂರ್ಣ ವರದಿಯನ್ನು ವಿವರವಾಗಿ ತಿಳಿಸಿದ್ದಾರೆ. ಇಂತಹ ಒಂದು ಸಾಧನೆ ಮಾಡಿದ ಎ.ಪಿ.ಚಂದ್ರಶೇಖರ್ ಅವರಿಗೆ ತೋಟಗಾರಿಕೆ ವಿಶ್ವವಿದ್ಯಾನಿಲಯದವರು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸುವುದು ಸೂಕ್ತವಾಗಿದೆ. ಇವರು ಮಾದರಿ ರೈತರಲ್ಲ, ಮಾದರಿ ಸಂಶೋಧಕರಾಗಿದ್ದಾರೆ ಎಂಬುದು ನನ್ನ ಅಭಿಪ್ರಾಯ. ಸಂಶೋಧಕರೇ ಇತ್ತ ಗಮನಿಸಿ ಇವರ ಜೊತೆ ಸುದೀರ್ಘವಾಗಿ ಚರ್ಚಿಸಿ ಇವರ ಅನುಭವಗಳನ್ನು ತೆಂಗು ಬೆಳೆಯುವ ರೈತರ ಸಮೂಹಕ್ಕೆ ಸಮರ್ಪಕವಾಗಿ ಮುಟ್ಟಿಸ ಬೇಕು. ಇದರಿಂದ ಲಕ್ಷಾಂತರ ರೈತರ ತೆಂಗಿನ ಕೃಷಿ ಬದಲಾಗುತ್ತದೆ. ವರಮಾನ ಹೆಚ್ಚುತ್ತದೆ. ಸಂಕಷ್ಟ ನಿವಾರಣೆಯಾಗುತ್ತದೆ ಎಂಬುದು ನನ್ನ ಅಭಿಪ್ರಾಯ.
ನನಗೆ ಈ ಅವಕಾಶ ಕಲ್ಪಿಸಿದ ಎ. ಪಿ. ಚಂದ್ರಶೇಖರ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು. ನಾನು ಪುಸ್ತಕ ಓದಿ ತಿಳಿದಂತೆ ಹೊಸ ಅನುಭವದಲ್ಲಿ ಮುನ್ನುಡಿ ಬರೆದಿದ್ದೇನೆ. ಏನಾದರೂ ತಪ್ಪಾಗಿದ್ದರೆ ಓದುವವರು ತಪ್ಪಾಗಿ ಭಾವಿಸಬಾರದು ಎಂದು ವಿನಂತಿಸುತ್ತೇನೆ.
ಕುರುಬೂರ್ ಶಾಂತಕುಮಾರ್
ರಾಜ್ಯಾಧ್ಯಕ್ಷರು,
ರಾಜ್ಯ ರೈತ ಸಂಘಟನೆಗಳ ಒಕ್ಕೂಟ,
ರಾಜ್ಯ ಕಬ್ಬು ಬೆಳೆಗಾರರ ಸಂಘ, ಕರ್ನಾಟಕ
***
ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್ ಮಾಡಿ
ಎ ಪಿ ಚಂದ್ರಶೇಖರ್ ಅವರ ಇತರೆ ಪುಸ್ತಕಗಳಿಗೆ ಇಲ್ಲಿ ಕ್ಲಿಕ್ ಮಾಡಿ

Leave a Reply

Close
Sign in
Close
Cart (0)

No products in the cart. No products in the cart.





0