Complex Image

ಪ್ರವೇಶ: ತರಗತಿಯಲ್ಲಿ ಕಲಿಯುವ ಮತ್ತು ಕಲಿಸುವ ವಿಧಾನಗಳು ವೈವಿಧ್ಯಮಯವಾದಷ್ಟು ಕಲಿಕೆ ಪರಿಣಾಮಕಾರಿಯಾಗುತ್ತದೆ. ಸಾಮಾನ್ಯವಾಗಿ ಗಮನಿಸಬಹುದಾದಂತೆ, ದಿನವೊಂದರಲ್ಲಿ ಮಕ್ಕಳು ತೊಡಗಿಕೊಳ್ಳುವ ಚಟುವಟಿಕೆ ಮತ್ತು ಮಾಡುವ ಕೆಲಸಗಳಿಗೆ ಕೊನೆಯಿಲ್ಲ. ಹಾಗೆ ಮಕ್ಕಳಿಗೆ ಕಲಿಸುವ ವಿಧಾನಗಳಿಗು ಕೊನೆ ಎಂಬುದಿಲ್ಲ. ಈ ಲೇಖನದಲ್ಲಿ, ಮಕ್ಕಳ ಅಂತ ಒಂದು ಚಟುವಟಿಕೆಯಾದ ಚಿತ್ರಗಳನ್ನು ಆಸಕ್ತಿಯಿಂದ ಅವಲೋಕಿಸುವ ಗುಣವನ್ನೆ ಭಾಷಾ ಬೋದನೆಗೆ ಹೇಗೆ ಬಳಸಬಹುದು ಎಂಬ ಕುರಿತು ವಿವರಣೆಯಿದೆ.

ಸರಳ ಚಿತ್ರಗಳು ಮತ್ತು ಸಂಕೀರ್ಣ ಚಿತ್ರಗಳು
ಪ್ರಾಥಮಿಕ ತರಗತಿಗಳಲ್ಲಿ ಚಿತ್ರಗಳು ಮತ್ತು ಕಥಾಚಿತ್ರಗಳು ಭಾಷೆ ಕಲಿಯುವುದಕ್ಕೆ ಉತ್ತಮವಾದ ಸಾಧನಗಳು. ದ್ವಿತೀಯ ಭಾಷೆಯ ಕಲಿಕೆ ಸಂದರ್ಭದಲ್ಲೂ, ಅದು ಯಾವುದೆ ತರಗತಿಯಿದ್ದರೂ, ಅಷ್ಟೇ ಪರಿಣಾಮಕಾರಿ. ಇಲ್ಲಿ ಚಿತ್ರಗಳೆಂದರೆ ಒಂದೇ ವಸ್ತುವಿರುವವು ಅಂದರೆ ಸರಳವಾಗಿರುವವು. ಉದಾಹರಣೆಗೆ, ಅಮ್ಮನ ಚಿತ್ರ, ಹೂವಿನ ಚಿತ್ರ, ಹಾವಿನ ಚಿತ್ರ, ಹೀಗೆ. ಕಥಾಚಿತ್ರಗಳು ಅಂದರೆ ಸಂಕೀರ್ಣವಾದವು. ವಸ್ತು ವಿಷಯಗಳು ದಟ್ಟವಾಗಿರುವ, ಮತ್ತು ವಿಷಯ ವಿಸ್ತರಿಸುವುದಕ್ಕು ಮತ್ತು ಕಥೆ ಕಟ್ಟುವುದಕ್ಕು ಬರುವಂತವು. ಕೆಳಗೆ ಕೊಟ್ಟ ಚಿತ್ರಗಳಲ್ಲಿ ಈ ವ್ಯತ್ಯಾಸವನ್ನು ಕಾಣಬಹುದು.

Simple Image
ಚಿತ್ರ 1

 

Complex Image
ಚಿತ್ರ 2

ಚಿತ್ರ ೧: ಸೇತುವೆ ಚಿತ್ರ (ಒಂದು ವಸ್ತು ಪ್ರಧಾನವಾಗಿರುವ ಚಿತ್ರ) ೨: ಒಂದು ಪಟ್ಟಣದ ಮುಂಜಾನೆಯ ಚಿತ್ರಪಟ (ಹಲವು ವಸ್ತು ವಿಷಯಗಳ ಒಂದು ಕಥಾಚಿತ್ರ. ಒಂದು ಮುಖ್ಯ ಥೀಮಿನ ಸುತ್ತ ಚಿತ್ರದ ವಿವರಗಳಿವೆ)

ಮಗುವಿನ ವಯಸ್ಸು, ತರಗತಿ ಮತ್ತು ಬೌದ್ಧಿಕತೆಗೆ ಅನುಗುಣವಾಗಿ ಈ ಎರಡೂ ಚಿತ್ರಗಳನ್ನು ಭಾಷಾ ಕಲಿಕೆಯಲ್ಲಿ ಬಳಸಬಹುದು. ಚಿತ್ರಗಳು ಮಕ್ಕಳಿಗೆ ಅವರ ವಯೋಮಾನಕ್ಕೆ ತಕ್ಕಂತೆ, ಅವರ ಭಾವನೆಗೆ ಮತ್ತು ಅನುಭವಕ್ಕೆ ತಕ್ಕಂತೆ ಕಾಣುತ್ತವೆ. ಅದೇನೆ ಇದ್ದರೂ ಚಿತ್ರಗಳು ಭಾಷೆ ಕಲಿಯುವ ಮಕ್ಕಳಿಗೆ ನೋಡುವುದಕ್ಕೆ, ಸ್ಪಂದಿಸುವುದಕ್ಕೆ, ಪ್ರತಿಕ್ರಿಯಿಸುವುದಕ್ಕೆ, ಮತ್ತು ಮಾತಾಡುವುದಕ್ಕೆ ಉತ್ತಮ ಸಾಧನಗಳು. ಅವು ಶಿಕ್ಷಕ ಶಿಕ್ಷಕಿಯರಿಗೂ ಅಷ್ಟೆ, ಮಕ್ಕಳೊಂದಿಗೆ ಸಂವಾದಿಸುತ್ತ ಭಾಷೆ ಕಲಿಸುವುದಕ್ಕೆ ಪರಿಣಾಮಕಾರಿ ಸಾಧನಗಳು.

ಭಾಷಾ ಕಲಿಕೆಯ ಹಂತಗಳು
ಭಾಷಾ ಕಲಿಕೆಯಲ್ಲಿ ಮೊದಲ ನಡೆ ಪದಗಳನ್ನು ಕಲಿಯುವುದು. ಕಲಿಯುವ ಪದಗಳು ಪ್ರಾರಂಭದಲ್ಲಿ ನಾಮಪದಗಳೇ ಆಗಿರುವುದು ಗಮನಿಸಬಹುದಾದ ಸಂಗತಿ. ಕಲಿಯುವ ಭಾಷೆ ಮೊದಲ ಭಾಷೆ ಇರಬಹುದು (ಪ್ರಥಮ ಭಾಷೆ, ತಾಯಿಭಾಷೆ, ನೆರೆಕರೆ ಭಾಷೆ) ಅಥವಾ ಎರಡನೇ ಭಾಷೆ ಇರಬಹುದು (ಇಂಗ್ಲೀಷು, ಹಿಂದಿ, ಮೊದಲಾಗಿ). ಯಾವುದಿದ್ದರೂ ಭಾಷಾ ಕಲಿಕೆಯ ಪಯಣ ನಾಮಪದಗಳಿಂದ ಮೊದಲಾಗುತ್ತದೆ. ಮುಂದೆ ಕ್ರಿಯಾಪದಗಳು, ಮತ್ತು ನಾಮ ಮತ್ತು ಕ್ರಿಯಾಪದಗಳು ಸೇರಿದ ವಾಕ್ಯ ಭಾಗಗಳು ಅಥವ ಸರಳ ವಾಕ್ಯಗಳು, ಅದಾಗಿ ಸುಸಂಬದ್ಧವಾದ ಅಥವ ಅಲ್ಲದ ಸಣ್ಣ ನಿರೂಪಣೆಗಳು ಮತ್ತು ಕೊನೆಗೆ ಸುಸಂಬದ್ಧ ಕಥನಗಳು. ಮಾತಾಡುವುದಕ್ಕೆ ಪ್ರಾರಂಭಿಸುವ, ಕ್ರಮೇಣ ಮಾತಿನ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಾ ಹೋಗುವ ಮನೆಯ ಮಗುವನ್ನು ಅಥವ ನೆರೆಹೊರೆಯ ಮಗುವನ್ನು ಗಮನಿಸಿದರೂ ಇದು ವೇದ್ಯವಾಗುತ್ತದೆ.

ಸರಳ ಚಿತ್ರದ ಬಳಕೆ
ಈಗ ಮೇಲಿನ ಎರಡು ಚಿತ್ರಗಳ ಕಡೆಗೆ ಗಮನಕೊಡುವ. ಮೊದಲ ಚಿತ್ರ, ‘ಸೇತುವೆ’ಯದ್ದು. ಶಿಕ್ಷಕಿ ಸೇತುವೆಯ ಚಿತ್ರವನ್ನು ತೋರಿಸುತ್ತಾರೆ. ಅದರ ಹೆಸರು ಹೇಳಿ ಅಂತ ವಿದ್ಯಾರ್ಥಿಗಳನ್ನು ಕೇಳುತ್ತಾರೆ. ಮಕ್ಕಳು ಚಿತ್ರವನ್ನು ನೋಡಿ ‘ಸೇತುವೆ’ ಎಂದು ಅದರ ಹೆಸರನ್ನು ಬಾಯಿಯಲ್ಲಿ ಹೇಳುತ್ತಾರೆ. ಜೊತೆಗೆ ಚಿತ್ರದ ಕೆಳಗೆ ಬರೆದ ಪದವನ್ನೂ ನೋಡುತ್ತಾರೆ. ಚಿತ್ರದ ಜೊತೆಗೆ ಪದವನ್ನು ಗುರುತಿಸಿ ಓದುವುದೂ ನಡೆಯುತ್ತದೆ. ಈ ಓದುವಿಕೆಗೆ ಅಕ್ಷರಾಭ್ಯಾಸ ಆಗಬೇಕಿಲ್ಲ. ಚಿತ್ರವನ್ನು ನೋಡಿ ಗುರುತಿಸುವಂತೆ ಪದವನ್ನೂ ನೋಡಿ ಗುರುತಿಸಲಾಗುತ್ತದೆ. ಇಲ್ಲಿ ಒಂದು ಸೂಕ್ಷö್ಮವಿದೆ. ಇಲ್ಲಿ ಸೇತುವೆ ಮಾತ್ರ ಒಂದು ಚಿತ್ರವಲ್ಲ. ಓದಿಕೊಳ್ಳುವ ಪದವೂ ಒಂದು ಚಿತ್ರ, ಅಂದರೆ, ಮಗುವಿನ ಸೇತುವೆಯ ನೆನಪಿನ ಚಿತ್ರವನ್ನು ಮುನ್ನಲೆಗೆ ತರುವ ಶಬ್ದ ಚಿತ್ರ. ಪದವನ್ನು ಕಟ್ಟಕೊಡುವ ಅಕ್ಷರಗಳು ಆ ಪದದಲ್ಲಿರುವ ಧ್ವನಿಗಳನ್ನು ಪ್ರತಿನಿಧಿಸುತ್ತವೆ. ಮಕ್ಕಳು ನಿರ್ದಿಷ್ಟ ಧ್ವನಿಗಳನ್ನು ಪ್ರತಿನಿಧಿಸುವ ಅಕ್ಷರಗಳನ್ನೂ ಹಿಡಿಯತೊಡಗುತ್ತಾರೆ.

ಸೇತುವೆಯ ಚಿತ್ರದಲ್ಲಿ ಸೇತುವೆಯ ಕಂಬ, ತಡೆಗೋಡೆ, ಇತ್ಯಾದಿಗಳು ಇರಬಹುದು. ಆರಂಭದಲ್ಲಿ, ‘ಸೇತುವೆ’ ಪದದಿಂದ ಪ್ರಾರಂಭಿಸಿ ಮುಂದೆ ಇತರೆ ಪದಗಳನ್ನು (ವಸ್ತುಗಳ ಹೆಸರುಗಳನ್ನು) ಮಗು ಹೇಳಬಹುದು. ಸೇತುವೆ ಕುರಿತು ಮಾತಾಡಿಸಿದರೆ, ಮಗು ತನ್ನ ನೆನಪಿನಿಂದ ಮತ್ತು ಅನುಭವದಿಂದ ವಿಷಯಗಳನ್ನು ಜೋಡಿಸಬಹುದು. ಆ ರೀತಿಯಾಗಿ ಚಿತ್ರದ ವಿವರಗಳನ್ನು ವಿಸ್ತರಿಸುವ ದಿಕ್ಕಿನಲ್ಲಿ ಮಗುವನ್ನು ಶಿಕ್ಷಕಿ ಮುನ್ನಡೆಸಬಹುದು. ಸೇತುವೆ ಎಲ್ಲಿ ನೋಡಿದ್ದಿಯಾ? ಅದು ದೊಡ್ಡ ಸೇತುವೆಯಾ, ಚಿಕ್ಕ ಸೇತುವೆಯಾ? ನದಿಗೆ ಕಟ್ಟಿದ ಸೇತುವೆಯಾ, ಇಲ್ಲ ಹಳ್ಳಕ್ಕೆ ಕಟ್ಟಿದ್ದಾ? ಇತ್ಯಾದಿ ಮುನ್ನಡೆಸುವ ಪ್ರಶ್ನೆಗಳನ್ನು ಕೇಳಬಹುದು. ದ್ವಿತೀಯ ಭಾಷೆ ಕಲಿಯುವ ಸಂದರ್ಭವಾದರೆ, ಮಕ್ಕಳು ೫-೬ನೇ ತರಗತಿಯವರಾದರೆ, ಮುನ್ನಡೆಸುವ ಪ್ರಶ್ನೆಗಳು ಅವರ ವಯಸ್ಸಿಗೆ ಅನುಗುಣವಾಗಿ ಸಂಕೀರ್ಣವಿದ್ದರಾಯಿತು.

ತರಗತಿಗಳಲ್ಲಿ ಪದಗಳನ್ನು ಕಲಿಯುವುದಕ್ಕೆ ಬಳಸುವ ಮಿಂಚುಪಟ್ಟಿಗಳು ಈ ರೀತಿಯವು. ಇವು ಚಿತ್ರಗಳನ್ನು ನೋಡಿ, ಚಿತ್ರಗಳನ್ನು ಪದದಲ್ಲಿ ಹೆಸರಿಸಿ, ಕ್ರಮೇಣ ಪದ ಮಾತ್ರವನ್ನು ಓದುವ ಕಡೆಗೆ ಮಗುವನ್ನು ಮುನ್ನಡೆಸುತ್ತವೆ. ಇಲ್ಲಿ ಮಗುವಿಗೆ ಅಕ್ಷರಾಭ್ಯಾಸ ಮಾಡಿಸಲಾಗಿದೆಯೇ ಎಂಬ ಪ್ರಶ್ನೆ ಅಪ್ರಸ್ತುತ. ಇಲ್ಲಿ ಅಕ್ಷರಾಭ್ಯಾಸ ಇಲ್ಲದೆಯೂ ಮಗು ಪದವನ್ನು ಓದುವ ಅರ್ಥವತ್ತಾದ ಪ್ರಕ್ರಿಯೆ ಇದೆ. ಚಿತ್ರವನ್ನು ಓದುವ ರೀತಿಯಲ್ಲೆ ಪದಗಳನ್ನೂ ಓದತೊಡಗುತ್ತದೆ ಮತ್ತು ಪದದ ಅರ್ಥವನ್ನೂ ಕಟ್ಟಿಕೊಳ್ಳುತ್ತದೆ. ಪದದ ಧ್ವನಿಗೆ ಬೇಕಾದ ಅಕ್ಷರ ಸಂಕೇತಗಳನ್ನು ಜೋಡಿಸಿಕೊಂಡು ಬರೆಯುವುದಕ್ಕೆ ಮುಂದಾಗುತ್ತದೆ. ತುಂಬ ಮಕ್ಕಳಿಗೆ ಅಕ್ಷರಾಭ್ಯಾಸ ಎಂಬುದು ಅರ್ಥಹೀನ ಮತ್ತು ನೀರಸ ಡ್ರಿಲ್ ಆಗಿದ್ದರೆ ಇಲ್ಲಿ ಬರೆಯುವುದು ಅರ್ಥಪೂರ್ಣ ಮತ್ತು ಆಸಕ್ತಿದಾಯಕ ಪ್ರಕ್ರಿಯೆಯಾಗಿದೆ.

ಮಗುವಿನ ಆರಂಭಿಕ ಓದು ಯಾವಾಗಲು ಚಿತ್ರಗಳಿಂದಲೇ ಎಂಬುದು ಗಮನಿಸತಕ್ಕ ವಿಷಯ. ಚಿತ್ರಗಳನ್ನು ಓದುವಾಗ ಅದರ ಕುರಿತು ಅದಕ್ಕೆ ಈಗಾಗಲೆ ತಿಳಿದಿರುವುದೆಲ್ಲವನ್ನು ಆ ಚಿತ್ರ ಪ್ರತಿನಿಧಿಸುತ್ತದೆ. ಆ ಚಿತ್ರದ ಕುರಿತ ಮಾತುಕತೆ ಅದಕ್ಕೆ ಗೊತ್ತಿರುವುದೆಲ್ಲವನ್ನೂ ಹೇಳುವಂತೆ ನಡೆಯುವುದು ಮುಖ್ಯ ಮತ್ತು ಅಂತ ಪ್ರಕ್ರಿಯೆ ಗೊತ್ತಿರುವುದನ್ನು ಸ್ವಲ್ಪ ವಿಸ್ತರಿಸುವಂತೆ ನಡೆಯುವುದೂ ಮುಖ್ಯ. ಇದು ಮಗುವಿನ ಭಾಷಾ ಸಾಮರ್ಥ್ಯದ ಬೆಳವಣಿಗೆಗೆ ಇಂಬಾಗುತ್ತದೆ.

ವಸ್ತುವಿಷಯಗಳ ಸಂಕೀರ್ಣ ಚಿತ್ರದ ಬಳಕೆ
ಎರಡನೆಯ ಚಿತ್ರ, ವಸ್ತು ಮತ್ತು ವಿಷಯಗಳಿಂದ ಸಮೃದ್ಧವಾಗಿದೆ. ಈ ಚಿತ್ರವನ್ನು ತೋರಿಸಿ, ನಿಧಾನಕ್ಕೆ ಗಮನಿಸಲು ಹೇಳಿ. ಮೊದಲಿಗೆ, ಏನೇನಿದೆ ಎಂದು ಕೇಳಿದರೆ, ವ್ಯಕ್ತಿ ಮತ್ತು ವಸ್ತುಗಳ ದೊಡ್ಡ ಪಟ್ಟಿ ಹೇಳಬಹುದು. ಉದಾಹರಣೆಗೆ, ನನ್ನ ಮಿತ್ರರೊಬ್ಬರ ಮಗ, ತೇಜಸ್ವಿ ಎಂಬ ಹೆಸರಿನವನು, ೧ನೇ ತರಗತಿಗೆ ಈ ಜೂನಲ್ಲಿ ಸೇರಿದ್ದಾನೆ. ಅವನು ಹೋಗುವ ಶಾಲೆಯಲ್ಲಿ ಆರಂಭದಲ್ಲೇ ಅಕ್ಷರಾಭ್ಯಾಸ ಮಾಡಿಸುವುದಿಲ್ಲ. ೧, ೨ನೇ ತರಗತಿಗಳಲ್ಲು ಬರೆಯುವುದಕ್ಕೆ ಒತ್ತುಕೊಡುವುದಿಲ್ಲ. ಅವನು ಎಲ್‌ಕೆಜಿ-ಯುಕೆಜಿಯಲ್ಲಿ ಇದ್ದಾಗಲು ಬರೆಯುವ ಅಥವ ಅಕ್ಷರಾಭ್ಯಾಸದ ಡ್ರಿಲ್‌ಗೆ ಬಿದ್ದವನಲ್ಲ. ಆ ಶಾಲೆಯಲ್ಲಿ ಮಕ್ಕಳನ್ನು ಮಾತಾಡಿಸುವುದು ಮತ್ತು ಅವರಿಗೆ ಮಾತಾಡುವುದಕ್ಕೆ ಅವಕಾಶ ಕೊಡುವುದು ಆದ್ಯತೆಯ ಸಂಗತಿ. ಅವನ ಶಾಲೆಯಲ್ಲಿ ಮತ್ತು ಅವನ ಮನೆಯಲ್ಲಿಯೂ ಅವನ ಕಣ್ಣೆದುರಿಗೆ ಚಿತ್ರ ಪುಸ್ತಕಗಳು ಮತ್ತು ವಿವಿಧ ಮಕ್ಕಳ ಪುಸ್ತಕಗಳು ದಂಡಿಯಾಗಿ ಬಿದ್ದಿವೆ. ಆ ಪುಸ್ತಕಗಳ ಚಿತ್ರಗಳನ್ನು ಓದುತ್ತಾ, ಪುಸ್ತಕಗಳ ಸರಳ ಪದ ಮತ್ತು ಕಥಾ ವಾಕ್ಯಗಳನ್ನು ಡಿಕೋಡ್ ಮಾಡುತ್ತಾ, ಓದು ಮತ್ತು ಬರಹ ಅವನಿಗೆ ಕೈಹತ್ತಿದೆ. ಅವನು ಮೇಲಿನ ಚಿತ್ರವನ್ನು ನೋಡುತ್ತ ೩೦ ನಾಮಪದಗಳ ದೊಡ್ಡ ಪಟ್ಟಿ ತಯಾರಿಸಿದ್ದಾನೆ:

ಇಲ್ಲಿ ಮಕ್ಕಳು ಚಿತ್ರ ನೋಡಿ ಪದಗಳ ಪಟ್ಟಿಮಾಡಿದ ಮೇಲೆ, ಅಂತ ಪದಗಳ ಮತ್ತು ಸರಳ ವಾಕ್ಯಗಳ ಮಿಂಚುಪಟ್ಟಿ ತಯಾರಿಸಿ ಮಕ್ಕಳಿಗೆ ಕೊಡುವ ಅವಕಾಶ ಶಿಕ್ಷಕರಿಗಿದೆ. ಇದನ್ನು ಸಮಗ್ರ ಓದಿನ (whole language approach) ಪರಿಕಲ್ಪನೆಹೊಂದಿದ ಶಿಕ್ಷಕಿಯರು ಅತ್ಯುತ್ತಮವಾಗಿ ನಿರ್ವಹಿಸಬಲ್ಲರು. ಆ ರೀತಿ ಮಾಡಿದಾಗ ಇಲ್ಲಿನ ಚಿತ್ರವಸ್ತುಗಳು ಗುರುತಿಸುವುದಕ್ಕೆ, ಹೆಸರಿಸುವುದಕ್ಕೆ ಮಾತ್ರವಲ್ಲದೆ ಬರೆಯುವ ಪ್ರಯತ್ನದಲ್ಲಿ ಮುಂದುವರೆಯುವುದಕ್ಕೂ ನೆರವಾಗುತ್ತವೆ. ಹಾಗಾದಾಗ ಅಕ್ಷರಾಭ್ಯಾಸವಿಲ್ಲದ ಮಕ್ಕಳು ಓದುಗರಾಗುತ್ತಾರೆ!

ನಂತರ, ಚಿತ್ರದಲ್ಲಿ ಏನು ನಡೆಯುತ್ತಿದೆ ಕೇಳಿದರೆ ಕ್ರಿಯೆಗಳನ್ನು ಹೆಸರಿಸುವ ಕ್ರಿಯಾಪದಗಳ ದೊಡ್ಡ ಪಟ್ಟಿ ಹೇಳಬಹುದು. ಉದಾಹರಣೆಗೆ, ಚಿತ್ರದಲ್ಲಿ ಗುರುತಿಸಬಹುದಾದ ಕ್ರಿಯೆಗಳು ಅಥವ ಕಾರ್ಯಗಳು ಮತ್ತು ಅವನ್ನು ವಿವರಿಸುವ ಕ್ರಿಯಾಪದಗಳು: (ಕೈ) ಹಿಡಿದು ಎಳೆ, (ಸ್ಕೂಟರ್) ಚಲಾಯಿಸು, (ವ್ಯಾನ್) ಬಿಡು, (ಕೈ) ತೋರಿಸು, (ಕೈ) ಹಿಡಿ, (ರಸ್ತೆಯಲ್ಲಿ) ನಡೆ, (ನಾಯಿ) ನಿಂತಿದೆ, (ವ್ಯಾನಿನಲ್ಲ್ಲಿ) ಕೂತಿರು, (ಸ್ಕೂಟರಿನಲ್ಲಿ) ನಿಂತಿರು, (ಸ್ಕೂಲ್ ಬ್ಯಾಗ್) ನೇತುಹಾಕಿಕೊಂಡಿರು, (ತಿಂಡಿ) ಮಾರು, (ನಾಯಿಯನ್ನು) ನೋಡು, ನಮಸ್ಕರಿಸು, ಇತ್ಯಾದಿ. ಇವುಗಳ ಮಿಂಚುಪಟ್ಟಿಯನ್ನೂ ತಯಾರಿಸಿದರೆ ಅವೂ ಉತ್ತಮವಾದ ಓದುವ ಕ್ರಿಯಾಪದಗಳಾಗುತ್ತವೆ. ಚಿತ್ರದ ಸಂದರ್ಭದಲ್ಲಿ ಅವುಗಳ ಅರ್ಥ ಮಗುವಿಗೆ ಆಗುತ್ತದೆ. ಅರ್ಥ ಹೇಳುವ ಅಥವ ಸಮಾನಾರ್ಥಕ ಪದಗಳನ್ನು ಕೊಡುವ ಅಗತ್ಯವಿಲ್ಲ!

ಮೇಲಿನ ಚಿತ್ರವನ್ನು ನೋಡುತ್ತ ಮಗು ನಾಮಪದ ಮತ್ತು ಕ್ರಿಯಾಪದಗಳನ್ನು ಜೋಡಿಸಿ ಹಲವಾರು ವಾಕ್ಯಭಾಗಗಳನ್ನು/ವಾಕ್ಯಗಳನ್ನು ಹೇಳಬಹುದು. ಉದಾಹರಣೆಗೆ ಕೆಳಗೆ ಕೆಲವನ್ನು ಕೊಟ್ಟಿದೆ: ಹುಡುಗ ಅಮ್ಮನ ಕೈಹಿಡಿದೆಳೆಯುತ್ತಾನೆ. ಅಮ್ಮ ಸ್ಕೂಟರ್ ಬಿಡುತ್ತಾಳೆ, ಅಂಕಲ್ ವ್ಯಾನ್ ಚಲಾಯಿಸುತ್ತಾನೆ, ಹುಡುಗ ನಾಯಿಯನ್ನು ತೋರಿಸುತ್ತಾನೆ, ಅಪ್ಪ ಹುಡುಗಿಯ ಕೈಹಿಡಿದಿದ್ದಾನೆ, ಇಬ್ಬರು ರಸ್ತೆಯ ಮೇಲೆ ನಡೆಯುತ್ತಿದ್ದಾರೆ, ವ್ಯಾನಿನ ಒಳಗೆ ಜನರು ಕೂತಿದ್ದಾರೆ, ಕಾರು ರಸ್ತೆಯ ಮೇಲೆ ಹೋಗುತ್ತಿದೆ, ನಾಯಿ ನೋಡುತ್ತಿದೆ, ಆಂಟಿ ಅಂಗಡಿಯಲ್ಲಿದ್ದಾರೆ, ಆಂಟಿ ತಿನಿಸು ಮಾರುತ್ತಾರೆ, ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ, ಇತ್ಯಾದಿ. ಈ ವಾಕ್ಯಗಳಿಗೂ ಮಿಂಚುಪಟ್ಟಿ ತಯಾರಿಸಿದರೆ, ಅವೂ ಉತ್ತಮವಾದ ಓದುವ ಪಠ್ಯವಾಗುತ್ತವೆ. ಇವನ್ನು ಓದುವುದಕ್ಕು ಮಕ್ಕಳು ಅಕ್ಷರಾಭ್ಯಾಸ ಮಾಡಬೇಕಿಲ್ಲ!

ನಂತರ ಸುಸಂಬದ್ಧವಾದ ಅಥವ ಅಲ್ಲದ ವಾಕ್ಯಗಳ ಜೋಡಣೆಮಾಡಿ ಮಾತಾಡಬಹುದು. ಉದಾಹರಣೆಗೆ, ಸುಸಂಬದ್ಧವಲ್ಲದ ವಾಕ್ಯಗಳ ಜೋಡಣೆ: ಚಿತ್ರದಲ್ಲಿ ಒಂದು ನಾಯಿಯಿದೆ. ಅಪ್ಪ ಮಗುವಿನ ಕೈಹಿಡಿದು ಶಾಲೆಗೆ ಕರಕೊಂಡುಹೋಗುತ್ತಿದ್ದಾರೆ. ವ್ಯಾನಿನ ಒಳಗೆ ಜನರಿದ್ದಾರೆ, ಇತ್ಯಾದಿ. ಮಕ್ಕಳು ಗುಂಪಲ್ಲಿ ಖುಷಿಯಿಂದ ನಾನು-ತಾನು ಎಂದು ಹುಮ್ಮಸ್ಸಿಂದ ಈ ರೀತಿಯ ವಾಕ್ಯಗಳನ್ನು ಮಾಡಬಲ್ಲರು.

ಪದದಿಂದ ಕಥನಕ್ಕೆ
ಮಗು, ಕೊನೆಗೆ, ಸುಸಂಬದ್ಧವಾದ ಕಥನಗಳನ್ನು ಕಟ್ಟಿಕೊಳ್ಳಬಹುದು. ಶಿಕ್ಷಕಿ, ‘ನೋಡಿ ಮಕ್ಕಳೆ, ಇಲ್ಲಿ ಈಗ ಶಾಲೆ ಪ್ರಾರಂಭವಾಗಿದೆ. ಇಂದು ಮೊದಲ ದಿನ. ಈ ಚಿತ್ರದಲ್ಲಿ ಏನಾಗ್ತಿದೆ? ಹೇಳಿ.” ಅಂತ ಕೇಳಬಹುದು. ಉದಾಹರಣೆಗೆ, ಮಕ್ಕಳು ಹೀಗೆ ಒಂದು ಒಳ್ಳೆಯ ನಿರೂಪಣೆಯನ್ನು ಅಥವ ಕಥೆಯನ್ನು ಕಟ್ಟಬಹುದು: ‘ಇಂದು ಶಾಲೆಯ ಪ್ರಾರಂಭ. ದೂರದಲ್ಲಿ ಶಾಲೆ ಕಾಣ್ತಿದೆ. ಅಪ್ಪ ಮಗಳ ಕೈಹಿಡಿದುಕೊಂಡು ಶಾಲೆಗೆ ಹೋಗುತ್ತಿದ್ದಾರೆ. ಅಮ್ಮನ ಕೈಹಿಡಿದ ಹುಡುಗ ಶಾಲೆಗೆ ಬೇಗ ಹೋಗಬೇಕೆಂದು ಎಳೆಯುತ್ತಿದ್ದಾನೆ. ಅವನ ಕಣ್ಣು ದಾರಿಯಲ್ಲಿ ನಿಂತ ನಾಯಿಯ ಮೇಲಿದೆ. “ಅಮ್ಮ ಅದೂ ಶಾಲೆಗೆ ಬರುತ್ತಾ?” ಎಂದು ಅವನು ಕೇಳುತ್ತಿರಬಹುದು. ಶಾಲೆಯ ಸುತ್ತ ಮರಗಳಿವೆ, ಮೈದಾನವೂ ಇದೆ. ಅಲ್ಲಿ ಆಟ ಆಡಬಹುದಲ್ಲ?’ ಶಿಕ್ಷಕಿಯರು ಚಿತ್ರದ ಮೇಲೆ ಚಿಕ್ಕಚಿಕ್ಕ ಓದುವ ಪಠ್ಯಗಳನ್ನು ತಯಾರಿಸಬಹುದು. ಅವು ಮಕ್ಕಳಿಗೆ ಆಕರ್ಷಣೀಯವಾಗಿ ಕಂಡು ಅವರು ಸಹಜವಾಗಿ ಓದಿನ ಕಡೆ ಮುಖಮಾಡಬಹುದು.

ಇಲ್ಲಿ ಕಥಾಚಿತ್ರ ಮಗುವಿಗೆ ಪದಗಳನ್ನು, ವಾಕ್ಯಭಾಗಗಳನ್ನು ಮತ್ತು ಕ್ರಮೇಣ ನಿರೂಪಣೆ ಅಥವ ಕಥನಗಳನ್ನು ಕಟ್ಟಿ ಮಾತಾಡುವುದಕ್ಕೆ ಬೇಕಾದ ಪ್ರೇರಣೆ ಮತ್ತು ವಸ್ತು ವಿಷಯಗಳನ್ನು ಒದಗಿಸುವ ದೊಡ್ಡ ಸಂಪನ್ಮೂಲವಾಗಿದೆ. ಇಲ್ಲಿ ಚಿತ್ರದ ಓದಿನ ಹಂತಗಳನ್ನು ಕಾಲಕ್ರಮೇಣ ನಡೆಯುವ ಪ್ರಯಾಣ ಎಂಬುದಾಗಿ ನೋಡಬೇಕು. ಮೇಲಿನ ಎಲ್ಲವೂ ಒಂದೇ ಸಲಕ್ಕೆ ಆಗದು. ಈ ಚಿತ್ರದ ಓದಿನ, ಚಿತ್ರದ ಅರ್ಥೈಸುವಿಕೆಯ ಮತ್ತು ಚಿತ್ರವನ್ನು ತನ್ನ ಸ್ವಂತದ ಅನುಭವದ ಜೊತೆ ಜೋಡಿಸಿಕೊಳ್ಳುವ ಪ್ರಯಾಣ ಕಾಲಕ್ರಮೇಣ ವಿಸ್ತರಿಸುತ್ತಾ ಹೋಗುವ ಬೌದ್ಧಿಕತೆಯನ್ನು ಬೆಳೆಸುವ ಪ್ರಕ್ರಿಯೆ ಎಂದು ತಿಳಿದುಕೊಳ್ಳಬೇಕು.
ಇದು ಅಷ್ಟಕ್ಕೆ ನಿಲ್ಲಬೇಕಿಲ್ಲ. ಮುಂದೆ, ಕಾಲಾನುಕಾಲಕ್ಕೆ, ಈ ಚಿತ್ರದ ಓದುವಿಕೆ ಮತ್ತು ನಿರೂಪಣೆಯನ್ನು ಮುಂದುವರೆಸುತ್ತಾ, ಮಗುವನ್ನು ತನ್ನ ಸ್ವಂತದ ಅನುಭವಗಳನ್ನು ನಿರೂಪಿಸುವ ಕಡೆಗೆ ಮುನ್ನಡೆಸಬಹುದು. ಆಗ ಮಗುವಿನ ಸೃಜನಶೀಲತೆಯು ಹಿಗ್ಗತೊಡಗುತ್ತದೆ. ಆಗ ಮಗು ನೆನಪಿಸಿಕೊಳ್ಳುವುದಕ್ಕೆ, ಊಹಿಸುವುದಕ್ಕೆ, ವಸ್ತು ವಿಷಯಗಳ ಮಧ್ಯ ಸಂಬAಧ ಕಲ್ಪಿಸುವುದಕ್ಕೆ, ಸ್ವಂತವಾಗಿ ಪರಿಕಲ್ಪನೆಗಳನ್ನು ಕಟ್ಟಿಕೊಳ್ಳುವುದಕ್ಕೆ, ಮುಂದಾಗುತ್ತದೆ. ಭಾಷಾ ಸಾಮರ್ಥ್ಯದ ಬೆಳವಣಿಗೆಯಲ್ಲಿ ಇವೆಲ್ಲ ಬಹುಮುಖ್ಯ ಮೈಲುಗಲ್ಲುಗಳು. ಮಗುವಿನ ಒಟ್ಟಾರೆ ಸೃಜನಶೀಲತೆಯನ್ನು ಭಾಷಾ ಕಲಿಕೆಯ ದಾರಿಯಲ್ಲಿ ಮುನ್ನಡೆಸುವ ನಡೆಗಳು.

ಕಲಿಕೆಯ ನಾನ್-ಸ್ಟಾಪ್ ಹಾದಿ
ಮುಂದೇನು ಮಾಡಬಹುದು? ಮಗುವನ್ನು ಸ್ವಕಲಿಕೆಯ ನಾನ್-ಸ್ಟಾಪ್ ಹಾದಿಯಲ್ಲಿ ನಡೆಸುವುದಕ್ಕೆ, ಈ ರೀತಿ ಮಾಡಬಹುದಾ? ಉದಾಹರಣೆಗೆ, ಇಲ್ಲಿಯ ಸನ್ನಿವೇಶಕ್ಕೆ ಸಂಭಾಷಣೆಗಳನ್ನು ಕಟ್ಟಬಹುದಾ? ಇಲ್ಲಿಯ ಸನ್ನಿವೇಶವನ್ನು ಅಭಿನಯಿಸಬಹುದಾ? ಮುಂದುವರೆದು, ಉದಾಹರಣೆಗೆ, ಒಂದು ದಿನ ಒಂದು ಜಾತ್ರೆ, ಅಥವ ಹಬ್ಬ, ಅಥವ ಸಮಾರಂಭ, ಅಥವ ಬಸ್ ಸ್ಟಾಂಡ್, ಅಥವ ಮಾರುಕಟ್ಟೆ, ಇತ್ಯಾದಿ ಒಂದು ಕಡೆ ನಿಂತು, ‘ಏನೇನು ಕಾಣ್ತಾ ಇದೆ, ಏನೇನು ಕೇಳ್ತಾ ಇದೆ, ಏನೇನು ವಾಸನೆಗಳು ಬರ್ತಾ ಇವೆ’ ಎಂದು ಕೇಳಬಹುದಾ? ಜಾತ್ರೆ, ಹಬ್ಬ ಮುಂತಾದವು ವಸ್ತು ವಿಷಯಗಳು ಸಮೃದ್ಧವಾಗಿರುವ ತಾಣಗಳು. ಹಲವು ವಿಭಿನ್ನ ವಸ್ತುಗಳನ್ನು ಇಟ್ಟು ಮುಟ್ಟಿ ನೋಡಿ ವಿವರಿಸು; ಹಲವು ಹಣ್ಣು, ತರಕಾರಿ, ತಿಂಡಿ, ಸಿಹಿ, ಇತ್ಯಾದಿಗಳನ್ನು ತಿಂದು ರುಚಿ ವಿವರಿಸು ಅಂತೆಲ್ಲ ಕೇಳಬಹುದಾ? ಮಗು ಅನುಭವಿಸುವಂತೆ ಮಾಡುವುದೇ ಶಿಕ್ಷಣ ಮತ್ತು ಅನುಭವಿಸಿದ್ದನ್ನು ಮಾತುಗಳಲ್ಲಿ ಹೇಳಿಕೊಳ್ಳುವಂತೆ ಮಾಡುವುದೆ ಅದರ ಬೌದ್ಧಿಕ ವಿಕಾಸದ ಶಿಕ್ಷಣ ಆಗುತ್ತದೆ.

ಮುಖ್ಯ ವಿಷಯವೇನೆಂದರೆ, ಸಾಂದರ್ಭಿಕವಾಗಿ ಮತ್ತು ಅನುಭವಿಸಿ ಕಲಿತರೆ ಮಾತ್ರ ಭಾಷೆ, ಅಂದರೆ ವಿಷಯ, ಮಿದುಳಿಗೆ ಹತ್ತುವುದು ಮತ್ತು ಅದು ಮಿದುಳಿಂದ ಉತ್ಪನ್ನವಾಗಿ ಹೊರಬರುವುದು! ಚಿತ್ರಗಳು ಕಣ್ಣಿಗೆ ಕಾಣುವುದನ್ನು ನೋಡುತ್ತ ಅನುಭವಿಸುತ್ತ ಮಾತು ಕಟ್ಟಿಕೊಳ್ಳುವುದಕ್ಕೆ ಉತ್ತಮ ಸಾಧನವಾಗಿದೆ.

ಮಗುವನ್ನು ಗೆಲ್ಲಿಸಬೇಕಾ? ಸೋಲಿಸಬೇಕಾ? ಓದು ಮಗುವಿಗೆ ಅರ್ಥಪೂರ್ಣವಾಗಿದ್ದರೆ ಮಾತ್ರ ಅದರ ಕಲಿಕೆ ಮುಂದುವರೆಯುತ್ತದೆ. ಅದು ಚಿತ್ರದ ಓದು ಇರಬಹುದು, ಇಲ್ಲ ಬರಹದ ಓದು ಇರಹುದು. ಮಗು ಕಲಿಕೆಯಲ್ಲಿ ಹಿಂದೆ ಬೀಳುವುದಕ್ಕೆ ಅದಕ್ಕೆ ಓದು ಅಥವ ಬರವಣಿಗೆ ಅರ್ಥಹೀನವಾಗುವುದೇ ಕಾರಣ. ಮಗುವಿಕೆ ಆಸಕ್ತಿದಾಯಕವಾದ ಕಲಿಕಾ ಪ್ರಕ್ರಿಯೆಗಳಿಲ್ಲದೆ ನೀರಸವಾಗುವುದೆ ಕಾರಣ.

ಮಗುವನ್ನು ಸೋಲಿಸಬೇಕಿದ್ದರೆ, ಅದಕ್ಕೆ ಮಾಡಿದ್ದನ್ನೇ ಮಾಡುವುದಕ್ಕೆ ಹೇಳಿದರೆ ಆಯಿತು! ಅ, ಆ ಬರಿ – ೧೦ ಸಲ ಬರಿ, ಬಸವ ಬರಿ – ೨೦ ಸಲ ಬರಿ! ಇಂದಿನ ಶಿಕ್ಷಣದ ತರಗತಿ ಪ್ರಕ್ರಿಯೆ, ಬಹುಪಾಲು, ಗೊತ್ತಿಲ್ಲದೆ, ಅದೇ ಆಗಿದೆ. ಬರೆದದ್ದನ್ನೆ ಬರೆ, ಓದಿದ್ದನ್ನೆ ಓದು, ಕೇಳಿದ್ದನ್ನೇ ಕೇಳು, ಮತ್ತು ಹೇಳಿದ್ದನ್ನೇ ಹೇಳು! ಮಾಡಿದ್ದನ್ನೆ ಮಾಡುವುದು ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗು ದುರವಸ್ಥೆಯೇ!

  • ರಾಮಕೃಷ್ಣ ಭಟ್

ಈ ಲೇಖನವು ದೀನಬಂಧು ಸಂಸ್ಥೆಯ ಅನುಭವ : ಗಣಿತ-ವಿಜ್ಞಾನಗಳ ಒಳನೋಟ ಸಂಪುಟ 12; ಸಂಚಿಕೆ 01 ರಲ್ಲಿ ಪ್ರಕಟವಾಗಿದೆ. ಪೂರ್ಣ ಪತ್ರಿಕೆಯನ್ನು ಓದಲು/ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Leave a Reply

Close
Sign in
Close
Cart (0)

No products in the cart. No products in the cart.