ವಿಶ್ವಸಂಸ್ಥೆಯ ಸರ್ವೋನ್ನತ ಪರಿಸರ ಪ್ರಶಸ್ತಿಯನ್ನು ಪಡೆದ ಪ್ರೊ. ಮಾಧವ ಗಾಡ್ಗೀಳ್ ಜೊತೆಗಿನ ಕೆಲವು ನೆನಪುಗಳು
ಮೂರು ವಾರಗಳ ಹಿಂದೆ ಡಾ. ಗಾಡ್ಗೀಳರು ಫೋನ್ ಮಾಡಿ ಕನ್ನಡದ ವಿವಿಧ ಮಾಧ್ಯಮಗಳ ಇಮೇಲ್ ವಿಳಾಸದ ಪಟ್ಟಿಯನ್ನು ತರಿಸಿಕೊಂಡರು. ‘ಏಕೆ ಸಾರ್?ʼ ಕೇಳಿದೆ. ʻಅದ್ಯಾವುದೊ ಅಂತಾರಾಷ್ಟ್ರೀಯ ಸಂಸ್ಥೆಗೆ ಈ ವಿಳಾಸದ ಪಟ್ಟಿ ಬೇಕಂತೆ. ಅದು ನನಗೇನೊ ಪ್ರಶಸ್ತಿ ಕೊಡಲಿದೆಯಂತೆ, ಯಾರಿಗೂ ಈ ವಿಷಯವನ್ನು ಈಗಲೇ ಹೇಳಬೇಡಿʼ ಎಂದಿದ್ದರು.
ನಿನ್ನೆ ಆ ಪ್ರಶಸ್ತಿಯ ಘೋಷಣೆಯಾಗಿದೆ. ‘ಚಾಂಪಿಯನ್ ಆಫ್ ದಿ ಅರ್ಥ್‘ -ಇದು ಭಾರತೀಯ ವ್ಯಕ್ತಿಯೊಬ್ಬರಿಗೆ ಲಭಿಸಿದ ಮೊದಲ ಪ್ರಶಸ್ತಿ.
ಗಾಡ್ಗೀಳರು ನಿವೃತ್ತರಾಗಿ 20 ವರ್ಷಗಳಾಗಿವೆ. ಪುಣೆಯಲ್ಲಿ ಪತ್ನಿ ಡಾ. ಸುಲೋಚನಾ ಗಾಡ್ಗೀಳ್ ಜೊತೆ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ. ಈಗಲೂ ಮತ್ತೆ ಮತ್ತೆ ನಮಗೆಲ್ಲ ಅವರು ಪ್ರಸ್ತುತರಾಗಿಯೇ ಕಾಣುತ್ತಾರೆ.
ವಯನಾಡಿನ ಭೂಕುಸಿತದ ಸಂದರ್ಭದಲ್ಲಿ ಅವರ ಹೇಳಿಕೆಗಳಿಗೆ ತುಂಬ ಬೇಡಿಕೆ ಬಂದಿತ್ತು. ʻಪ್ರಜಾವಾಣಿʼಯ ಈ ವರ್ಷದ ದೀಪಾವಳಿ ಸಂಚಿಕೆಯಲ್ಲಿ ಭೂಕುಸಿದ ಸುತ್ತಲಿನ ವಿದ್ಯಮಾನ ಮತ್ತು ಏರುತ್ತಿರುವ ತಾಪಮಾನ ಕುರಿತೇ ಐದು ವಿಶೇಷ ಲೇಖನಗಳನ್ನು ಪ್ರಕಟಿಸಿದೆ. ಅದರಲ್ಲಿ ಅವರ ‘ಗಾಡ್ಗೀಳ್ ವರದಿʼ ಕುರಿತೂ ವಿವರಗಳಿವೆ.
ಪ್ರೊ. ಗಾಡ್ಗೀಳರ ಆತ್ಮಕಥೆ A Walk Up the Hill ಅನೇಕ ಭಾಷೆಗಳಿಗೆ ಅನುವಾದಗೊಳ್ಳುತ್ತಿದೆ. ಕಳೆದ ಆರು ತಿಂಗಳಿಂದ ನಾನು ಮತ್ತು ನನ್ನ ತಂಗಿ ಶಾರದಾ ಗೋಪಾಲ ಇಬ್ಬರೂ ಸೇರಿ ಕನ್ನಡಕ್ಕೆ ತರ್ಜುಮೆ ಮಾಡಿ ಈಚೆಗಷ್ಟೇ ಮುಗಿಸಿದ್ದೇವೆ. ಮಂಗಳೂರಿನ ಆಕೃತಿ ಪ್ರಕಾಶನ ಅದನ್ನು ʻಏರುಘಟ್ಟದ ಹಾದಿಯಲ್ಲಿʼ ಎಂಬ ಹೆಸರಿನಲ್ಲಿ ಪ್ರಕಟಿಸುತ್ತಿದೆ.
ಕನ್ನಡದ ನೆಲದಲ್ಲೇ ಡಾ. ಗಾಡ್ಗೀಳ್ ಅವರ ವ್ಯಕ್ತಿತ್ವ ವಿಕಸನ ಆಗಿದ್ದಂತೂ ಹೌದು. ಅವರ ಜೊತೆ ಜೊತೆಗೇ ಮತ್ತು ಅವರ ಮೂಲಕ ಈ ನಾಡಿನಲ್ಲಿ ಪರಿಸರ ಪ್ರಜ್ಞೆಯೂ ವಿಕಸನಗೊಂಡಿದೆ.
ಅವರು ಹಾರ್ವರ್ಡ್‌ನಿಂದ ಮತ್ತು ನಾನು ನೈನಿತಾಲ್ ಬಿಟ್ಟು ಬೆಂಗಳೂರಿಗೆ ಬಂದ ಸಂದರ್ಭವೇ ವಿಶಿಷ್ಟವಾಗಿತ್ತು. ಅದೇ ಅವಧಿಯಲ್ಲಿ ಶಿಕ್ಯಾಗೊದಿಂದ ಡಾ. ಎಸ್‌ಆರ್ ಹಿರೇಮಠ, ಪ್ರಿನ್ಸ್‌ಟನ್‌ನಿಂದ ಶಕ್ತಿತಜ್ಞ ಎಕೆಎನ್ ರೆಡ್ಡಿ, ಮುಂಬೈಯಿಂದ ವೈದ್ಯೆ ಡಾ. ಕುಸುಮಾ ಸೊರಬ, ದಿಲ್ಲಿಯಿಂದ ಪಾಂಡುರಂಗ ಹೆಗಡೆ, ಕೆನಡಾದಿಂದ ನ್ಯೂಕ್ಲಿಯರ್ ಭೌತವಿಜ್ಞಾನಿ ವಂದನಾ ಶಿವ ಎಲ್ಲ ಕರ್ನಾಟಕಕ್ಕೆ ಹಿಂದಿರುಗಿದರು. ಇಲ್ಲಿನವರೇ ಆದ ಡಾ. ಎಚ್ ಸುದರ್ಶನ್, ಬಾಲಸುಬ್ರಹ್ಮಣ್ಯ, ಜೆರ್ರಿ ಪಯಾಸ್, ಹುಣಸೂರು ಶ್ರೀಕಾಂತ್ ಇವರೆಲ್ಲ ತಮ್ಮ ವೃತ್ತಿಯನ್ನು ಬದಿಗೊತ್ತಿ ಗ್ರಾಮೀಣ ಅಭಿವೃದ್ಧಿಯ ಹುಚ್ಚು ಹತ್ತಿಸಿಕೊಂಡು ಕಾಡಿನ ಕಡೆ ಮುಖ ಮಾಡಿದ್ದರು.
ಅದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆರಂಭವಾಯಿತು. ಪರಿಸರ ಚಳವಳಿಗಳು ಕುಡಿಯೊಡೆಯತೊಡಗಿದ್ದವು. ಬೇಡ್ತಿ ಚಳವಳಿ ಅದೇ ತಾನೆ ಆರಂಭವಾಗಿತ್ತು.
ಗಾಡ್ಗೀಳರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪರಿಸರ ವಿಜ್ಞಾನ ಕೇಂದ್ರವನ್ನು ಆರಂಭಿಸಿ, ಪಶ್ಚಿಮಘಟ್ಟಗಳ ಕುರಿತ ಅಧ್ಯಯನಕ್ಕೆ ವಿಶೇಷ ಒತ್ತು ಕೊಡಲೆಂದು ಉತ್ತರ ಕನ್ನಡ ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ಸುತ್ತಾಡಿದರು. ದೊಡ್ಡ ಅಣೆಕಟ್ಟುಗಳಿಂದಾಗುವ ಲಾಭ ಮತ್ತು ನಷ್ಟಗಳ ತುಲನೆ ಮಾಡಲೆಂದು ಶಿರಸಿಯಲ್ಲಿ ರಾಷ್ಟ್ರದ ಮೊದಲ (ಮತ್ತು ಕೊನೆಯ) ಸಮ್ಮೇಳನಕ್ಕೆ ಗಾಡ್ಗೀಳರೇ ಮುಖ್ಯ ರೂವಾರಿ ಆಗಿದ್ದರು. ಐದು ದಿನಗಳ ಆ ಸಮ್ಮೇಳನಕ್ಕೆ ಡಾ. ಶಿವರಾಮ ಕಾರಂತರು ಅಧ್ಯಕ್ಷರಾಗಿದ್ದರು.
ಡಾ. ಶಿವರಾಮ ಕಾರಂತರ ಅಳಿಯ ಶಾಮಸುಂದರ್ ರಾಜ್ಯದ ಪ್ರಧಾನ ಅರಣ್ಯ ಸಂರಕ್ಷಕರಾಗಿದ್ದರು. ಅಭಿವೃದ್ಧಿ ಯೋಜನೆಗಳಿಗೆ ಮತ್ತು ನೀಲಗಿರಿ ವೃಕ್ಷಗಳಿಗಾಗಿ ಪಶ್ಚಿಮ ಘಟ್ಟಗಳನ್ನು ಬಲಿ ಹಾಕುತ್ತಿರುವ ಅರಣ್ಯ ಇಲಾಖೆಯ ಮೇಲೆ ಎಲ್ಲರ ಕೋಪವಿತ್ತು. ಸಮಾವೇಶದಲ್ಲಿ ನಡೆದ ಚರ್ಚೆಗಳನ್ನು ಪ್ರಜಾವಾಣಿಗೆ ವರದಿ ಮಾಡಲು ನಾನೇ ನಿಯುಕ್ತನಾಗಿದ್ದೆ.
ಅಂದಿನಿಂದ ಡಾ. ಗಾಡ್ಗೀಳರ ಜೊತೆಗೆ ನನ್ನ ಒಡನಾಟ ಸಾಕಷ್ಟು ಗಾಢವಾಗಿಯೇ ಇತ್ತು. ಅವರು ಉತ್ತರ ಕನ್ನಡ ಜಿಲ್ಲೆಯ ಹಳ್ಳಿಗಳಲ್ಲಿ ಮತ್ತು ಪಶ್ಚಿಮ ಘಟ್ಟಗಳ ಇತರ ಕನ್ನಡ ತಾಲ್ಲೂಕುಗಳಲ್ಲಿ ಸಾಕಷ್ಟು ಸುತ್ತಾಡಿದ್ದಾರೆ. ಕನ್ನಡದ ಇತರ ಯಾವ ವಿಜ್ಞಾನಿಯೂ ಸುತ್ತಿರಲಿಕ್ಕಿಲ್ಲ ಎನ್ನುವಷ್ಟು. ಕರ್ನಾಟಕದ ಜೀವಿ ವೈವಿಧ್ಯ ಕುರಿತು ಅವರು ಬರೆದ ಅನೇಕ ಸರಣಿ ಲೇಖನಗಳನ್ನು ಪ್ರಜಾವಾಣಿಗಾಗಿ ನಾನು ಅನುವಾದಿಸಿದ್ದೇನೆ.
ಅವರಷ್ಟು ಸಮಚಿತ್ತದ ವಿಜ್ಞಾನಿಗಳು ತೀರ ಅಪರೂಪ. ಅವರ ಆತ್ಮಕಥೆಯ ಉದ್ದಕ್ಕೂ ನಮಗೆ ಕಾಣಸಿಗುವ ದರ್ಶನ ಏನೆಂದರೆ ಕಾಡಿನ, ನೀರಿನ ಜೀವಿಗಳ ಬದುಕಿಗೆ ಇರುವಷ್ಟೇ ಅಧಿಕಾರ ಮತ್ತು ಸವಲತ್ತು ಕಾಡನ್ನು ನೀರನ್ನು ಅವಲಂಬಿಸಿದ ತಳಮಟ್ಟದ ನಿವಾಸಿಗಳಿಗೂ ಇದೆ ಅನ್ನೋದು. ಇಂದಿನ ಜೀವ- ಜನಾಂಗಕ್ಕೆ ಇರುವಷ್ಟೇ ಅಧಿಕಾರ, ಸೌಲಭ್ಯಗಳು ಮುಂದಿನ ಜನಾಂಗಕ್ಕೂ ಇರಬೇಕೆನ್ನುವುದು.
ಕನ್ನಡ ಭಾಷೆಯನ್ನು ಕಲಿತು, ಕನ್ನಡದ ಜೀವಲೋಕದ ಅಧ್ಯಯನ ಮಾಡಿ, ಕನ್ನಡಿಗರೇ ಎಂಬಂತೆ ಬದುಕಿದ ಈ ಸರಳ ವಿಜ್ಞಾನಿ ಕನ್ನಡದ ಜನಮಾನಸದಲ್ಲಿ ಮಾತ್ರ ತೀರ ಅಸಂಗತ ಎನ್ನಿಸುವಂಥ ಕಾರಣದಿಂದಾಗಿ ಪರಿಚಿತರಾಗಿದ್ದಾರೆ.
ಪಶ್ಚಿಮ ಘಟ್ಟಗಳ ಅಪೂರ್ವ ಸಂಪತ್ತನ್ನು ಇನ್ನೂ ಅನೇಕ ಶತಮಾನಗಳವರೆಗೆ ಜೋಪಾನವಾಗಿ ಕಾಯ್ದಿರಿಸಕೊಳ್ಳಬೇಕೆಂಬ ಆಶಯದೊಂದಿಗೆ ಪ್ರೊ. ಮಾಧವ ಗಾಡ್ಗೀಳ್ ಅವರ ಅಧ್ಯಕ್ಷತೆಯಲ್ಲಿ ಪ್ರಕಟವಾದ ʻಗಾಡ್ಗೀಳ್ ಸಮಿತಿʼಯ ಶಿಫಾರಸುಗಳು ನಮ್ಮ ನಾಡಿನಲ್ಲೇ ತೀವ್ರ ಟೀಕೆಗೆ, ಆಕ್ಷೇಪಣೆಗೆ ಕಾರಣವಾಗಿದೆ. ಹಳ್ಳಿ ಹಳ್ಳಿಗಳಲ್ಲೂ ಗಾಡ್ಗೀಳರ ಹೆಸರು ಅನಪೇಕ್ಷಿತ ಕಾರಣಗಳಿಂದಾಗಿ ಪರಿಚಿತವಾಗಿದೆ.
ತಪ್ಪು ಗ್ರಹಿಕೆ, ಸ್ವಾರ್ಥಾಧರಿತ ಅಪಪ್ರಚಾರ ಹಾಗೂ ರಾಜಕೀಯದ ವ್ಯೂಹಗಳು ಆ ವರದಿಯ ಪ್ರಾಮಾಣಿಕತೆ ಮತ್ತು ಅದರಲ್ಲಿನ ದೂರದರ್ಶಿತ್ವವನ್ನೇ ಹೊಸಕಿ ಹಾಕುವಷ್ಟರಮಟ್ಟಿಗೆ ಹೋಗಿದ್ದು ಕನ್ನಡದ ಅಸ್ಮಿತೆಗೆ ಹೆಮ್ಮೆ ತರುವಂಥದ್ದೇನಲ್ಲ. ಮುಂದಿನ ಐದು ವರ್ಷಗಳನ್ನಷ್ಟೇ ನೋಡುವ ರಾಜಕಾರಣಿಗಳೆಲ್ಲಿ? ಇಂದಿನ ನೈಸರ್ಗಿಕ ಸಿರಿಸಂಪದಗಳು ಮುಂದೆ ಐದುನೂರು ವರ್ಷಗಳ ನಂತರವೂ ಹೇಗಿದ್ದಾವೆಂದು ಮುಂಗಾಣಬಲ್ಲ, ಅವುಗಳ ಸಂರಕ್ಷಣೆಯ ಸೂತ್ರಗಳನ್ನು ನಿರೂಪಿಸಬಲ್ಲ ವೈಜ್ಞಾನಿಕ ಚಿಂತಕರೆಲ್ಲಿ?
ಗಾಡ್ಗೀಳ್ ವರದಿ ಜನವಿರೋಧಿಯಾಗಿದೆ ಎಂಬ ತಪ್ಪು ಅಭಿಪ್ರಾಯಗಳೇ ಈಗ ಕರ್ನಾಟಕದಲ್ಲಿ ಜನಜನಿತವಾಗಿದೆ.
ತಾವು ಅದೆಷ್ಟೇ ಜನಪರ, ಜೀವಪರ ನಿಲುವು ತಾಳಿದ್ದರೂ ಈ ನಾಡಿನಲ್ಲಿ ವ್ಯಕ್ತವಾದ ಅವಹೇಳನಗಳನ್ನು, ಅವಮಾನಗಳನ್ನು ತಾವೊಬ್ಬರೇ ಅನುಭವಿಸಿದ್ದ ಪ್ರೊ. ಗಾಡ್ಗೀಳರು ತಮ್ಮ ಆತ್ಮಕಥೆಯಲ್ಲಿ ಅಪ್ಪಿತಪ್ಪಿ ಕೂಡ ಕನ್ನಡ ನಾಡಿನ ಜನರ ಬಗ್ಗೆ ಕಹಿ ಭಾವನೆಯನ್ನು ವ್ಯಕ್ತಪಡಿಸಲಿಲ್ಲ. ಅದು ನಮ್ಮ ಸಾಂಸ್ಕೃತಿಕ ಲೋಕಕ್ಕೂ ಮಾದರಿ ಎನ್ನಬೇಕು.
ತೀರ ಸರಳ ಉಡುಗೆ ತೊಡುಗೆ, ತೀರ ಸರಳ ಬದುಕು ನಡೆಸುತ್ತಿರುವ ಅವರಲ್ಲಿನ ಜ್ಞಾನ, ವಿಜ್ಞಾನ ಮತ್ತು ವಿದ್ವತ್ತು ಅಷ್ಟೇ ಅಲ್ಲ, ಸಾಮಾಜಿಕ ನ್ಯಾಯದ ದೃಷಿಯೂ ನಮಗೆಲ್ಲ ಮಾದರಿಯದು.