ಬದನಾಜೆ ಶಂಕರ್ ಭಟ್ ಕರಾವಳಿ ಮಲೆನಾಡಿನ ಅಡಿಕೆ ಕೃಷಿಕರಲ್ಲಿ ಯಾರಿಗೆ ಗೊತ್ತಿಲ್ಲ ಕೇಳಿ? ಅಡಿಕೆಯನ್ನೇ ಮೂಲ ದ್ರವ್ಯವನ್ನಾಗಿಸಿ ಅಂಟು, ಸಾಬೂನು, ವೈನ್, ಲಘು ಪಾನೀಯ, ಲಿಪ್ಪಿಕ್, ಚೊಗರಿನ ಸಾರ, ವಾರ್ನಿಸ್…. ಹೀಗೆ ತಿಂದು ಉಗುಳುವ ಅಡಿಕೆಯ ಬಹುರೂಪಿ ಬೆಳವಣಿಗೆಗೆ ಬುನಾದಿ ಹಾಕಿದವರು. ಈ ದೇಶದ ಕೃಷಿ ವಿಶ್ವವಿದ್ಯಾನಿಲಯ, ಸಂಶೋಧಕರು, ವಿಜ್ಞಾನಿಗಳು, ಕೃಷಿ ತಜ್ಞರು ಬೆರಗಾಗುವಷ್ಟು ಅಡಿಕೆಯ ಒಳಸುಳಿಗಳನ್ನು ತೆರೆದಿಟ್ಟವರು.
ನಾಗರಿಕ ಜಗತ್ತಿನಿಂದ ಬಹುದೂರದ ಹಳ್ಳಿಮನೆಯ ಪಡಸಾಲೆಯಲ್ಲಿ ಕೂತ ಈ ನೆಲ ವಿಜ್ಞಾನಿ ಇಡೀ ದೇಶವೇ ಅಂಗೀಕಾರ ಮಾಡಬಹುದಾದಷ್ಟು ಅಡಿಕೆ ಬಹುಸಾಧ್ಯತೆಯನ್ನು ವಿಸ್ತರಿಸಿದವರು. ಬರೀ ಅಡಿಕೆಯ ಮೌಲ್ಯವರ್ಧನೆಯಷ್ಟೇ ಅಲ್ಲ, ಅಡಿಕೆಗೆ ಬರುವ ಕೊಳೆ- ಮಹಾಳಿ ರೋಗಕ್ಕೂ ‘ಫಲನಿ’ ಅನ್ನುವ ಔಷಧಿಯನ್ನು ಕಂಡುಹಿಡಿದವರು. ಈವರೆಗೆ ಸಾವಿರಾರು ಲೀಟರ್ ಫಲನಿಯನ್ನು ರೈತರ ಮೂಲಕ ಪ್ರಯೋಗ ಮಾಡಿಸಿ ಫಲ ಪಡೆದವರು.
ಅಡಿಕೆಗೆ ಜೀರ್ಣವೃದ್ಧಿಯ ಶಕ್ತಿ ಇರುವುದರಿಂದ ಮತ್ತು ಅದು ಶತಶತಮಾನಗಳಿಂದ ಸಾಬೀತಾಗಿರುವುದರಿಂದ, ಕಾವ್ಯ ಶಾಸ್ತ್ರ ಸಂಪ್ರದಾಯಾದಿಗಳಲ್ಲಿ ಪಾಲು ಪಡೆದುದರಿಂದ ನೇರ ತಿನ್ನುವ ಬದಲು ದ್ರವ ರೂಪದಲ್ಲೂ ಅದನ್ನು ಬಳಸುವ ಪ್ರಯೋಗಿಸುವ ಪ್ರಯತ್ನದಲ್ಲಿ ಭಟ್ಟರು ಭಾಗಶಃ ಯಶಸ್ವಿಯಾಗಿದ್ದಾರೆ. ಅವರು ಶೋಧಿಸಿದ ಅಡಿಕೆಯ ಸಿರಪ್- ಜ್ಯೂಸ್ ಈಗಾಗಲೇ ಯಶಸ್ವಿಯಾಗಿದೆ. ಇಂಥ ಅಡಿಕೆಮೂಲ ಎನರ್ಜಿ ಡ್ರಿಂಕ್ಗಳು ಚೀನಾ ವಿಯೆಟಾo ಮುಂತಾದ ದೇಶಗಳಲ್ಲಿ ತುಂಬಾ ಜನಪ್ರಿಯವಾಗಿದೆ. ಅಲ್ಲಿ ದೊಡ್ಡ ದೊಡ್ಡ ಕಂಪನಿಗಳು ಇಂಥ ಪಾನೀಯಗಳನ್ನು ಉತ್ಪಾದಿಸಿ ಮಾರುತ್ತವೆ. ಪುತ್ತೂರಿನ ವಿನ್ನರ್ ಕೋಲ್ಡ್ ಡ್ರಿಂಕ್ಸ್ ತಯಾರಿಕರು ಈಗಾಗಲೇ ಸುಮಾರು 10 ಸಾವಿರ ಬಾಟಲಿಗಳಷ್ಟು ಅಡಿಕೆಯ ಕೋಲ್ಡ್ ಡ್ರಿಂಕ್ಸ್ ನ್ನು ಮಾಡಿ ಕೃಷಿಮೇಳ, ಪ್ರದರ್ಶನದಂಗಳದಲ್ಲಿ ಕಡೆ ಹಂಚಿದ್ದಾರೆ.
ಸಾಮಾನ್ಯವಾಗಿ ಅಡಿಕೆಯನ್ನು ಶತಶತಮಾನಗಳಿಂದ ವೀಳ್ಯದೆಲೆ ಸುಣ್ಣ ಕಲ್ಲು ಸಕ್ಕರೆಯೊಂದಿಗೆ ಊಟ ಆದಮೇಲೆ ಸೇವಿಸುವ ಕ್ರಮವಿದೆ . ಜೀರ್ಣಶಕ್ತಿಗೆ ಇದು ಒಳ್ಳೆಯದೆಂಬ ನಂಬಿಕೆ. ಬದನಾಜೆ ಪ್ರಕಾರ ಅವರು ಉತ್ಪಾದಿಸಿದ ಲಘುಪೇಯವನ್ನು ಊಟದ ಮೊದಲು ಅಥವಾ ಯಾವುದೇ ಸಂದರ್ಭದಲ್ಲಿ ಸೇವಿಸಿ ತಿಂದ ಆಹಾರ ಸುಲಭದಲ್ಲಿ ಪಚನಗೊಳ್ಳುವಂತೆ ಮಾಡಬಹುದು.
ಅಡಿಕೆಯ ಚೊಗರುಮೂಲ ಪೂಗಸ್ವಾದವನ್ನು ಜ್ಯೂಸು ಐಸ್ಕ್ರೀಮು ಚಾಕಲೇಟ್ ಹಲ್ವಾ ಮುಂತಾದುಗಳಲ್ಲೂ ಬಳಸಬಹುದಾಗಿದೆ. ಸ್ಥಳೀಯವಾಗಿ ಐಸ್ ಕ್ರೀಮ್ ತಯಾರಿಸುವ ಮೂರು ಘಟಕಗಳು ಇದೇ ಸಾರದಿಂದ ಅಡಿಕೆ ಐಸ್ ಕ್ರೀಮ್ ಗಳನ್ನು ತಯಾರಿಸುತ್ತವೆ . ಇದು ಕರಾವಳಿಯ ಮದುವೆ ಉಪನಯನ ಮುಂತಾದ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಜನಪ್ರಿಯಗೊಳ್ಳುತ್ತಿವೆ.
ಅಡಿಕೆಯಿಂದ ವೈನ್ ಬದನಾಜೆಯವರ ಬಹುದಿನದ ಕನಸು. ಅದಕ್ಕಾಗಿ ಅವರು ರಾಜ್ಯ ದೇಶವಷ್ಟೇ ಅಲ್ಲ, ವಿದೇಶಿ ವೈನ್ ಉತ್ಪಾದಕ ಘಟಕಗಳಿಗೂ ಕೂಡ ಭೇಟಿ ಕೊಟ್ಟಿದ್ದಾರೆ. ಒಂದಷ್ಟು ಸಂಶೋಧನ ಗ್ರಂಥಗಳನ್ನು ಅಧ್ಯಯನ ಮಾಡಿದ್ದಾರೆ. ಅವರ ಪ್ರಕಾರ ಅಡಿಕೆ ವೈನಿನಲ್ಲಿ ಟ್ಯಾನಿನ್ ಪ್ರಮಾಣ ಗರಿಷ್ಠ ಮತ್ತು ರುಚಿ ತುಂಬಾ ಚೆನ್ನಾಗಿದೆ. ಈ ಕಾರಣಕ್ಕಾಗಿ ವೈನ್ ದೀರ್ಘ ಬಾಳಿಕೆ ಮತ್ತು ಬಣ್ಣ ಬದಲಾಗದೆ ಪರಿಮಳ ಸ್ವಾದ ಸಮೇತವಾಗಿ ದೀರ್ಘಕಾಲ ಉಳಿಯಬಹುದು.
ಎಳೆಯ ಅಡಿಕೆ ಮತ್ತು ವೀಳ್ಯದೆಲೆ ಸೇರಿಸಿ ಭಟ್ಟರು ತಾಂಬೂಲಸವ ಎಂಬ ಆಯುರ್ವೇದ ಔಷಧವನ್ನು ಬಹಳ ಹಿಂದೆಯೇ ಸಂಶೋಧಿಸಿದ್ದರು. ಇದೊಂದು ರೀತಿ ಪರಿಣಾಮಕಾರಿ ಔಷದ. ಈ ಅಸವ ಜೀರ್ಣಕ್ರಿಯೆ ಸಂತಾನಶಕ್ತಿ ಮುಂತಾದವುಗಳಿಗೆ ರಾಮಬಾಣ. ಕಾರಣಾಂತರದಿಂದ ತುಂಬಾ ಬೇಡಿಕೆಯಿದ್ದ ತಾಂಬೂಲ ಸವದ ಉತ್ಪಾದನೆಯನ್ನು ಭಟ್ಟರು ಇತ್ತೀಚಿಗೆ ನಿಲ್ಲಿಸಿದ್ದಾರೆ.
ಶಂಕರ ಭಟ್ಟರು ಆಯುರ್ವೇದ ಹಿನ್ನೆಲೆಯಿಂದ ಬಂದವರು. ಇವರ ತಂದೆ ತಾಯಿ ಇಬ್ಬರು ಈ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ ಪರಿಣತರು. ಈ ಹಿನ್ನಲೆಯಲ್ಲಿ ಇವರು ಆಯುರ್ವೇದ ಔಷಧಿಗಳಲ್ಲಿ ಅಡಿಕೆಯನ್ನು ಯಥೆಚ್ಛವಾಗಿ ಒಳಸುರಿಯಾಗಿ ಬಳಸುತ್ತಾ ಬಂದಿದ್ದಾರೆ. ಶಿವಮೊಗ್ಗ ಉಡುಪಿ ವಿಟ್ಲ ಮುಂತಾದ ಕಡೆ ಉತ್ಪನ್ನಗೊಳ್ಳುವ ಡಯಾರೆಕ ಡಯಾಶಮನ್ ಪೂಗಸಿರಪ್ ಮುಂತಾದ ಔಷಧಿಗಳ ನಿರ್ಮಿತಿಯಲ್ಲಿ ಶಂಕರ ಭಟ್ಟರ ಮಾರ್ಗದರ್ಶನ ಇದ್ದೇ ಇದೆ.
ಪುಸ್ತಕ ಖರೀದಿಗೆ ಇಲ್ಲಿ ಮಾಡಿ