ಇನ್ನೂಬಾಳೆಯ ಲೋಕ ದೊಡ್ಡದು. ಹುಟ್ಟಿನಿಂದ ಸಾವಿನವರೆಗೆ ಜೊತೆಯಾಗಿರುವ ಬಾಳೆಯಲ್ಲಿ ನೂರಾರು ತಳಿಗಳಿವೆ. ಪ್ರತಿ ತಳಿಯೂ ರುಚಿ, ಬಣ್ಣ, ಗಾತ್ರ, ಮತ್ತು ಎತ್ತರದಲ್ಲಿ ವಿಭಿನ್ನ.
ಪ್ರಪಂಚದಲ್ಲಿ 1000ಕ್ಕೂ ಹೆಚ್ಚು ಬಾಳೆಯ ತಳಿಗಳಿವೆ. ಆಫ್ರಿಕಾದ ಜಾಂಜೀಬಾರಿನ ಮೊಳಕೈ ಉದ್ದದ ಬಾಳೆ, ಇಂಡೋನೇಷಿಯಾದ ಜಾವಾ ನೀಲಿ ಬಾಳೆ, ಹವಾಯಿಯ ಬಿಳಿ ಪಟ್ಟೆ ಬಾಳೆ, ದಕ್ಷಿಣ ಏಷ್ಯಾದ ಕೆಂಪು ಬಾಳೆ ವಿಷೇಷ ತಳಿಗಳು.
ಭಾರತವು ಬಾಳೆಹಣ್ಣಿನ ಜನ್ಮಭೂಮಿಯಾಗಿರುವ ಕಾರಣ, ನೂರಾರು ಬಗೆಯ ಬಾಳೆ ತಳಿಗಳನ್ನು ನಾವಿಲ್ಲಿ ಕಾಣಬಹುದು. ಈಶಾನ್ಯ ರಾಜ್ಯಗಳ ಕಾಡುಗಳಲ್ಲಿ ಕಾಡು ಬಾಳೆಯದೇ ಸಾಮ್ರಾಜ್ಯ. ಅಲ್ಲಿನ ‘ಭೀಮ್ ಕೇಲ್ ‘ ಮನೆ ಎತ್ತರ ಬೆಳೆಯುತ್ತದೆ; ಕಾಂಡ ಕಂಬದ ರೀತಿ ಇರುತ್ತದೆ.ಕೇರಳದ ಸಹಸ್ರ ಬಾಳೆಯ ಗೊನೆ ಆಳೆತ್ತರ ಇರುತ್ತದೆ. ಉಂಡೆ ಗಾತ್ರದ ಬಾಳೆ ತಳಿಯೂ ಅಲ್ಲುಂಟು.
ಬಾಳೆ ವೈವಿಧ್ಯಕ್ಕೆ ಕರ್ನಾಟಕ ಹೆಸರು ವಾಸಿ. ಕಮಲಾಪುರ ಕೆಂಪು ಬಾಳೆ, ಏಲಕ್ಕಿ ಬಾಳೆ, ನಂಜನಗೂಡು ರಸಬಾಳೆ, ಕಲ್ಲು ಬಾಳೆ,ನಾಟಿ ಬಾಳೆ, ಬೂದು ಬಾಳೆ , ಹಂಪಿಯ ಸುಗಂಧಿ ಮತ್ತು ಸಕ್ಕರೆ ಬಾಳೆ, ಹುಳಿ ಬಾಳೆ ,ಚುಕ್ಕೆ ಬಾಳೆ ಮೊದಲಾದ ತಳಿಗಳ ಭಂಡಾರವೇ ಇಲ್ಲಿದೆ. ವಾಣಿಜ್ಯ ಉದ್ದೇಶದ ರೊಬಾಸ್ಟ್ ಮತ್ತು ಕ್ಯಾವೆಂಡೀಷ್ ತಳಿಗಳ ಆಗಮನದಿಂದ ನಾಟಿ ಬಾಳೆಗಳು ನಾಶದ ಜಾಡು ಹಿಡಿದಿವೆ.
ವಿಷಮುಕ್ತ ಬಾಳೆ ಕೃಷಿ
ಇತ್ತೀಚಿನ ದಿನಗಳಲ್ಲಿ ಸಾವಯವದಲ್ಲಿ ಬೆಳೆದ ಬಾಳೆಗೆ ಹೆಚ್ಚಿನ ಬೇಡಿಕೆ ಇದೆ. ವಿಷಮುಕ್ತ ಬಾಳೆ ಕೃಷಿ ಮಾಡುವುದರಿಂದ ನೆಲ ಬರಡಾಗುವುದು ತಪ್ಪುತ್ತದೆ; ರಾಸಾಯನಿಕಗಳಿಗೆ ಸುರಿಯುವ ಹಣ ಉಳಿತಾಯವಾಗುತ್ತದೆ.
ಹೊಸದಾಗಿ ಬಾಳೆ ಬೆಳೆಯುವವರು ಇಡೀ ಭೂಮಿಯನ್ನು ಹದವಾಗಿ ಉತ್ತಿ, ಸಾಕಷ್ಟು ಕೊಟ್ಟಿಗೆ ಗೊಬ್ಬರ ಹಾಕಿ ಭೂಮಿಯನ್ನು ಸಿದ್ಧಗೊಳಿಸಬೇಕು. 8 ಅಡಿ ಅಂತರದಲ್ಲಿ 2.5 X 2.5 ಅಡಿ ಅಳತೆಯ ಗುಂಡಿಗಳನ್ನು ತೋಡಬೇಕು. ಗುಂಡಿಗೆ ಕುರಿ ಗೊಬ್ಬರ 1.5 ಮಂಕರಿ,ಕೊಟ್ಟಿಗೆ ಗೊಬ್ಬರ 2 ಮಂಕರಿ,ಎರೆಗೊಬ್ಬರ – 5 ರಿಂದ 6 ಕೆಜಿ,ಬೇವಿನ ಹಿಂಡಿ 1.5 ಕೆಜಿ ಹೊಂಗೆ ಹಿಂಡಿ ಅರ್ಧ ಕೆಜಿ,ಯುನಿಗ್ರೋ ( ಹ್ಯೂಮಿಕ್ ಆಸಿಡ್) 50 ಗ್ರಾಂ,ಮೂಳೆ ಗೊಬ್ಬರ 1 ಕೆಜಿ, PSB. – 50 ಗ್ರಾಂ,ಟ್ರೈಕೋಡರ್ಮ 50 ಗ್ರಾಂ, ಸೂಡೋಮಾನಸ್ 50 ಗ್ರಾಂ ನ್ನು ಹಾಕಿ ಚೆನ್ನಾಗಿ ಮಿಶ್ರಮಾಡಿ, ಗುಂಡಿಗೆ ತುಂಬಿ ನಂತರ ಬಾಳೆ ಕಂದು ನೆಡಿ. ಈ ರೀತಿ ಮಾಡಿದರೆ ಮುಂದಿನ ನಾಲ್ಕು ವರ್ಷ ಗೊಬ್ಬರ ಕೊಡುವ ರಗಳೆ ಇರದು. ನೈಸರ್ಗಿಕವಾಗಿ ಬೆಳೆದ ಬಾಳೆ ಸಧೃಡವಾಗಿ ನಿಲ್ಲುವುದರಿಂದ ಮಳೆ ಗಾಳಿಗೆ ನೆಲಕ್ಕೆ ಬೀಳುವ ಭಯ ಇರುವುದಿಲ್ಲ.
ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಬಾಳೆಯ ಕಂದುಗಳನ್ನು ತರಬೇಕು. ಸೊರಗು ರೋಗ ( ಪನಾಮ ವಿಲ್ಟ) ಒಮ್ಮೆ ತೋಟಕ್ಕೆ ಬಂದರೆ ನಿಯಂತ್ರಣ ಅಸಾಧ್ಯ ಹಾಗಾಗಿ. ಸೊರಗು ರೋಗವಿಲ್ಲದ ತೋಟಗಳಿಂದ ಮಾತ್ರ ಬಾಳೆ ಕಂದುಗಳನ್ನು ತರಬೇಕು.
ಎಲಕ್ಕಿ ಮತ್ತು ನೇಂದ್ರ ಬಾಳೆ ಸಾವಯವ ಕೃಷಿಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ ಮತ್ತು ಮಾರುಕಟ್ಟೆ ಬೇಡಿಕೆಯೂ ಉತ್ತಮವಾಗಿದೆ. ಕಾಡು ಜಾತಿಯ ಬಾಳೆಗಳು ಯಾವುದೇ ಒಳಸುರಿ ಕೇಳುವುದಿಲ್ಲ. ಇವನ್ನು ಸುಲಭನಾಗಿ ಬೆಳೆದುಕೊಳ್ಳಬಹುದು.
ಬಾಳೆ ಸಾಲುಗಳ ನಡುವೆ ಮೂಲಂಗಿ, ಸೊಪ್ಪು, ಸೋರೆ,ಕುಂಬಳ ,ಬೀನ್ಸ ತರದ ತರಕಾರಿ ಮತ್ತು ಹರಿಷಿಣ,ಅರಾರೂಟ್,ಸಿಹಿ ಗೆಣಸು ತರದ ಗೆಡ್ಡೆ ಗೆಣಸು ಬೆಳೆಗಳನ್ನು ಬೆಳೆದು ಕೊಳ್ಳಬಹುದು. ಬಾಳೆಯ ಸಾಲುಗಳ ನಡುವಿನ ಅಂತರ ಹೆಚ್ಚು ಮಾಡಿದಷ್ಟೂ, ಸಾಲು ಬೆಳೆಗಳು ಸಮೃದ್ಧವಾಗಿ ಬೆಳೆಯುತ್ತವೆ.
ಬಾಳೆ ತರುವ ಹಣದ ಹೊಳೆ
ಬಾಳೆ ಕೃಷಿ ಎಂದರೆ ಬಾಳೆ ಗೊನೆ ಮಾರುವುದು ಎಂದೇ ರೈತರು ತಿಳಿದಿದ್ದಾರೆ. ಬಾಳೆಯ ಉಪ ಉತ್ಪನ್ನಗಳಾದ ಬಾಳೆ ಹೂ, ಬಾಳೆ ಕಾಯಿ, ಬಾಳೆ ದಿಂಡು, ಬಾಳೆ ಕಂದು, ಬಾಳೆ ಎಲೆ ಕೂಡ ಸಾಕಷ್ಟು ಆದಾಯ ತರಬಲ್ಲವು. ನೆರೆಹೊರೆಯ ಹತ್ತಾರು ರೈತರು ಜೊತೆಗೂಡಿ ಬಾಳೆ ನಾರಿನ ಘಟಕ ಸ್ಥಾಪಿಸಿದರೆ, ಊರಿನ ಮಹಿಳಾ ಸಂಘಗಳಿಗೆ ಬಾಳೆನಾರಿನ ಉತ್ಪನ್ನಗಳ ಮಾಡುವ ಕಲೆ ಕಲಿಸಿದರೆ ಆದಾಯದ ಹೊಸ ಮೂಲ ತೆರೆದುಕೊಳ್ಳುತ್ತದೆ.
ಬಾಳೆಯ ಕಾಯಿಂದ ಮಾಡುವ ಬಾಳೆಕಾಯಿ ಹುಡಿ(ಬಾಕಾಹು) ಜನಪ್ರಿಯವಾಗುತ್ತಿದೆ. ಬಾಳೆ ಬೆಲೆ ಕುಸಿದಾಗ, ಮಳೆ ಗಾಳಿಗೆ ನೆಲಕಚ್ಚುವ ಬಾಳೆ ಕಾಯಿಗಳನ್ನು ಸಿಪ್ಪೆ ತೆಗೆದು ಚಿಫ್ಸ್ ರೂಪದಲ್ಲಿ ಹಚ್ಚಿ ಬಿಸಿಲಲ್ಲಿ ಅಥವಾ ಡ್ರೈಯರ್‌ನಲ್ಲಿ ಒಣಗಿಸಬೇಕು. ಒಣಗಿದ ನಂತರ ಇದನ್ನು ಪುಡಿ ಮಾಡಿ ಖಾದ್ಯಗಳಿಗೆ ಬಳಸಬಹುದು. ಬಾಕಾಹುನಿಂದ ರೊಟ್ಟಿ, ಚಪಾತಿ, ಗುಳಿಯಪ್ಪ, ತಾಳಿಪಿಟ್ಟು, ಉಪ್ಪಿಟ್ಟು, ದೋಸೆ, ಬರ್ಫಿ, ಕೋಡುಬಳೆ ಹೀಗೆ ಹತ್ತು ಹಲವು ಖಾದ್ಯಗಳನ್ನು ಮಾಡಬಹುದು. ಮೈದಾಗೆ ಪರ್ಯಾಯವಾಗಿ ಬಾಕಾಹು ಬಳಸಬಹುದು. ಹುಣಸೂರಿನ ರತ್ನಗಿರಿಯ ನವೀನ್ ಕುಮಾರ್ ‘ಬಾಕಾಹು ಅಡ್ಡ’ ಎಂಬ ಬ್ರಾಂಡ್ ಹುಟ್ಟಿಹಾಕಿ ಬಾಳೆಯ ಮೌಲ್ಯವರ್ಧಿತ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದಾರೆ.
ಬಿತ್ತನೆಗೆ ಬಳಸುವ ಗುಣಮಟ್ಟದ ಬಾಳೆ ಕಂದುಗಳಿಗೆ ಸದಾ ಬೇಡಿಕೆ. ಅದರಲ್ಲೂ ಏಲಕ್ಕಿ ಬಾಳೆಯನ್ನು ಕಂದುಗಳ ರೂಪದಲ್ಲಿ ನೆಡಲು ರೈತರು ಇಚ್ಛಿಸುತ್ತಾರೆ. ಬಾಳೆ ಕಂದು ಸರಬರಾಜು ಮಾಡುವ ಮೂಲಕ ಆದಾಯದ ಹೊಸ ಮೂಲ ತೆರೆಯಬಹುದು.
ಬಾಳೆ ಎಲೆಗೆ ಯಾವತ್ತೂ ಬೇಡಿಕೆ ಇರುತ್ತದೆ. ಬಾಳೆ ಎಲೆ ತಳಿಗಳು ತಮಿಳುನಾಡಿನಲ್ಲಿ ಸಾಕಷ್ಟಿವೆ.ಅಂಥ ತಳಿಗಳನ್ನು ಗುರುತಿಸಿ ಬೆಳೆಸಬಹುದು.
ಬಾಳೆ ಸುಲಭದ ಬೆಳೆ. ವಾರಂತ್ಯದ ರೈತರಿಗಂತೂ ಇದು ಹೇಳಿ ಮಾಡಿಸಿದ್ದು. ಏಕ ಬೆಳೆಯಾಗಿ ಬಾಳೆ ಬೆಳೆಯುವ ಬದಲು, ತೋಟದ ವೈವಿಧ್ಯದ ಭಾಗವಾಗಿ ಬಾಳೆಯನ್ನು ಬೆಳೆದರೆ ಖರ್ಚು ಕಡಿಮೆ; ಲಾಭವೂ ಹೆಚ್ಚು.
ಮೈಸೂರಿನಲ್ಲಿ ಬಾಳೆ ಮೇಳ
ದೇಸಿ ಬಾಳೆಯ ವೈವಿಧ್ಯ, ಕೃಷಿ ಮತ್ತು ಆಹಾರ ಸಂಸ್ಕೃತಿಯನ್ನು ಜನಪ್ರಿಯಗೊಳಿಸಲು ಸಹಜ ಸಮೃದ್ಧ ಮತ್ತು ಅಕ್ಷಯ ಕಲ್ಪ ಆರ್ಗಾನಿಕ್ಸ ಜೊತೆಗೂಡಿ ನವೆಂಬರ್ 22 ರಿಂದ 24 ರವರೆಗೆ ನಂಜರಾಜ ಬಹದ್ದೂರ್ ಛತ್ರದಲ್ಲಿ’ ಬಾಳೆ ಮೇಳ’ ಏರ್ಪಡಿಸಿವೆ.
ಬಾಳೆಯ ವೈವಿಧ್ಯಮಯ ತಳಿಗಳು, ಮೌಲ್ಯವರ್ಧಿತ ಉತ್ಪನ್ನಗಳು, ಬಾಳೆನಾರಿನ ಪದಾರ್ಥಗಳು ಮತ್ತು ಬಾಳೆಯ ಅಡುಗೆಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಬರಲಿವೆ.
550 ಬಾಳೆ ತಳಿಗಳನ್ನು ಸಂರಕ್ಷಿಸಿರುವ ಕೇರಳದ ವಿನೋದ್ ನಾಯರ್ 75 ಬಗೆಯ ಬಾಳೆ ತಳಿಗಳನ್ನು ಪ್ರದರ್ಶನಕ್ಕೆ ತರಲಿದ್ದಾರೆ. 80 ಬಾಳೆ ತಳಿಗಳನ್ನು ಸಂರಕ್ಷಿಸಿರುವ ಶಿರಸಿಯ ಪ್ರಸಾದ್ ಹೆಗಡೆ ಅಪರೂಪದ ಬಾಳೆ ಮತ್ತು ಕಂದುಗಳನ್ನು ಮೇಳಕ್ಕೆ ತರುತ್ತಿದ್ದಾರೆ. 6 ಅಡಿ ಉದ್ದದ ಸಹಸ್ರ ಬಾಳೆ ಪ್ರದರ್ಶನಕ್ಕೆ ಬರುತ್ತಿದೆ. ಇದು ಪ್ರಪಂಚದ ಅತ್ಯಂತ ಉದ್ದನಾದ ಬಾಳೆ ತಳಿ!
22 ನವೆಂಬರ್ ,ಶುಕ್ರವಾರ ಬೆಳಿಗ್ಗೆ 11 ಘಂಟೆಗೆ ಬಾಳೆಯ ಮೌಲ್ಯವರ್ಧನೆಯ ಅವಕಾಶಗಳ ಬಗ್ಗೆ ತರಬೇತಿ ಏರ್ಪಡಿಸಲಾಗಿದ್ದು, ಬಾಳೆಯ ಮೌಲ್ಯವರ್ಧನೆ ಮಾಡಿ ಯಶಸ್ಸು ಪಡೆದಿರುವ ಹುಣಸೂರಿನ ರತ್ನಗಿರಿಯ ನವೀನ್ ಅನುಭವ ಹಂಚಿಕೊಳ್ಳಲಿದ್ದಾರೆ. 23 ನವೆಂಬರ್ ,ಶನಿವಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವನಾಪುರ ರಮೇಶ್ ಸಾವಯವದಲ್ಲಿ ಬಾಳೆ ಬೆಳೆಯುವ ಮಾಹಿತಿ ನೀಡಲಿದ್ದಾರೆ.
ಸುತ್ತೂರಿನ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ 23 ನವೆಂಬರ್ ,ಭಾನುವಾರ ಬೆಳಿಗ್ಗೆ 10.30 ಕ್ಕೆ
ಮಕ್ಕಳ ಚಿತ್ರಕಲಾ ಸ್ಪರ್ಧೆ ಮತ್ತು ಬಾಳೆ ಅಡುಗೆ ಸ್ಪರ್ಧೆ ಏರ್ಪಾಡಾಗಿದೆ. ಆಸಕ್ತರು ಹೆಸರು ನೊಂದಾಯಿಸಬಹುದು. ವಿವರಗಳಿಗೆ 94821 15495 ಸಂಪರ್ಕಿಸಿ.
ಲೇಖಕರು: ಜಿ ಕೃಷ್ಣಪ್ರಸಾದ್, ಸಹಜ ಸಮೃದ್ಧ
ಈ ಲೇಖನವು ಮೈಸೂರು ಆಂದೋಲನ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.