ಇಸ್ರೇಲಿ ಕೃಷಿ ಎಂದರೆ ಆಧುನಿಕ ತಂತ್ರಜ್ಞಾನದ ‘ಪವಾಡ’ ಎಂತಲೇ ಎಲ್ಲರೂ ಪರಿಗಣಿಸುತ್ತಾರೆ. ಪವಾಡವೆಂದು ಹೇಳಿದರೆ ಸಾಲದು, ಅಂಥ ತಂತ್ರಜ್ಞಾನದ ಹಿಂದಿರುವ ಯಹೂದ್ಯರ ಛಲ, ಪರಿಶ್ರಮ, ಸಂಘಟನಾಶಕ್ತಿ ಎಲ್ಲವೂ ನಮಗೆ ಮಾದರಿಯೇ ಆಗುವಂತಿವೆ. ಆ ಮೂರೂ ಒಂದಾಗಿದ್ದರಿಂದಲೇ ಇಸ್ರೇಲಿನ ಬರಡು ಭೂಮಿಯನ್ನು, ಅಷ್ಟು ಕಡಿಮೆ ಜನರು ಫಲವತ್ತಾಗಿ ಮಾಡಲು ಸಾಧ್ಯವಾಗಿದೆ. ಇಡೀ ಇಸ್ರೇಲಿನ ಒಟ್ಟೂ ಜನಸಂಖ್ಯೆಯ ಕೇವಲ ಶೇಕಡಾ 2ರಷ್ಟು ಜನರು ಕೃಷಿಯಲ್ಲಿ ತೊಡಗಿಕೊಂಡು ತಮ್ಮ ದೇಶದ ಎಲ್ಲರಿಗೂ ಬೇಕಾದ ಶೇ. 95ರಷ್ಟು ಆಹಾರವಸ್ತುಗಳನ್ನು ಉತ್ಪಾದಿಸುತ್ತಾರೆ. ಕೃಷಿ ಎಂದರೆ ಅವರಿಗೆ ಆಹಾರವನ್ನಷ್ಟೇ ಕೊಡುತ್ತಿಲ್ಲ, ವಿದೇಶೀ ವಿನಿಮಯವನ್ನೂ ಗಳಿಸಿಕೊಡುತ್ತಿದೆ. ಪ್ರವಾಸೋದ್ಯಮವನ್ನೂ ಅದು ಬೆಳೆಸಿದೆ. ಇಂದು ಜಗತ್ತಿನ ನಾನಾ ದೇಶಗಳಿಂದ ಪ್ರತಿವರ್ಷ ಪ್ರವಾಸಿಗರು ಅಲ್ಲಿನ ವ್ಯವಸಾಯ ಪದ್ಧತಿಯನ್ನು ನೋಡಲೆಂದೇ ಬರುತ್ತಿದ್ದಾರೆ. ‘ಕೃಷಿ ಪ್ರವಾಸೋದ್ಯಮ’ ಎಂಬ ಹೊಸರಂಗವೇ ಅಲ್ಲಿ ಮೈದಳೆದಿದೆ. ಕೃಷಿಯಲ್ಲಿ ಆಸಕ್ತಿ ಇರುವ ಎಲ್ಲರನ್ನೂ ಕೈಬೀಸಿ ಕರೆಯುತ್ತ ತನ್ನ ಸಾಧನೆಯನ್ನು ತಾನೇ ತೋರಿಸಿಕೊಳ್ಳುವ ದೇಶ ಅದು. ಭಾರತೀಯರಿಗೆ ಸಹಜವಾಗಿಯೇ ಅಲ್ಲಿನ ಕೃಷಿ ತಂತ್ರಜ್ಞಾನ ಆಕರ್ಷಣೀಯವೆನಿಸುತ್ತದೆ. ನಮ್ಮ ದೇಶದಲ್ಲೂ ಅಂಥ ಬೇಸಾಯ ಪರಿಸರ ನಿರ್ಮಾಣವಾಗಬಾರದೆ ಎಂದು ಹಂಬಲಿಸುವಂತಾಗುತ್ತದೆ.
ಆ ಹಂಬಲಕ್ಕೆ ಕಾರಣ ನಮಗೆಲ್ಲ ಗೊತ್ತೇ ಇದೆ: ಭಾರತದಲ್ಲಿ ಕೃಷಿರಂಗ ಇಂದು ఎల్ల ಬಗೆಯ ವೈರುಧ್ಯಗಳ ತವರೂರಾಗಿದೆ. ಆಹಾರ ಉತ್ಪಾದನೆ ತೃಪ್ತಿಕರವಾಗಿದೆಯಾದರೂ ಕೃಷಿಕರು ತೀರ ಶೋಚನೀಯ ಸ್ಥಿತಿಯಲ್ಲಿದ್ದಾರೆ. ಒಳಸುರಿಗಳ ಬಳಕೆ ಸಾಕಷ್ಟಿದೆಯಾದರೂ ಕೃಷಿಭೂಮಿ ಸೋತು ಸೊರಗುತ್ತಿದೆ. ಕೃಷಿ ಸಲಕರಣೆಗಳ ಉತ್ಪಾದಕರು ಸುಸ್ಥಿತಿಯಲ್ಲಿದ್ದಾರೆ. ಕೃಷಿಕರು ಮಾತ್ರ ಸುಸ್ತಿದಾರರಾಗಿದ್ದಾರೆ. ತೀರ ಆಧುನಿಕ ತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿಕೊಂಡ ಊರುಗಳಲ್ಲಿ ನಾನಾ ಕಾಯಿಲೆಗಳು ಅಮರಿಕೊಂಡಿವೆ; ಅವರನ್ನು ಆಸ್ಪತ್ರೆಗೆ ಸಾಗಿಸುವ ರೈಲುಗಾಡಿಗೆ ‘ಕ್ಯಾನ್ಸರ್ ಟ್ರೇನ್’ ಎಂದೇ ಹೆಸರು ಬಂದಿದೆ. ಇನ್ನು ತೀರ ಸಾಂಪ್ರದಾಯಿಕ ವಿಧಾನದಲ್ಲಿ ಬೇಸಾಯ ಮಾಡಿಕೊಂಡವರು ಕೂಲಿಕಾರರ ಅಭಾವದಿಂದಾಗಿ ಹೈರಾಣಾಗಿದ್ದಾರೆ. ಹಿಂದೆಂದೂ ಕಾಣದಷ್ಟು ದೊಡ್ಡ ಪ್ರಮಾಣದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ; ಹಿಂದೆಂದೂ ಕಂಡುಕೇಳರಿಯದಷ್ಟು ದೊಡ್ಡ ಪ್ರಮಾಣದಲ್ಲಿ ಕೃಷಿಕರು ಒಕ್ಕಲುತನಕ್ಕೆ ವಿದಾಯ ಹೇಳಿ ನಗರಗಳಿಗೆ ವಲಸೆ ಹೊರಟಿದ್ದಾರೆ. ಸ್ವಂತ ಹೊರಡಲು ಸಾಧ್ಯವಿಲ್ಲದವರು, ‘ಈ ಒದ್ದಾಟಗಳೆಲ್ಲ ನನ್ನ ತಲೆಮಾರಿಗೆ ಸಾಕು: ನಮ್ಮ ವಂಶದ ಮುಂದಿನ ಕುಡಿಯಾದರೂ ಚೆನ್ನಾಗಿ ಓದಿ ನಗರದಲ್ಲಿ ಕೆಲಸ ಪಡೆದು ಬದುಕು ಸಾಗಿಸಲಿ’ ಎಂದು ಹಂಬಲಿಸುತ್ತಿದ್ದಾರೆ. ಈ ನಿರಂತರ ವಲಸೆಯನ್ನು ತಡೆಯುವುದು. ಹೇಗೆ: ಯುವಜನತೆ ಹಳ್ಳಿಗಳಲ್ಲೇ ಉಳಿಯುವಂತೆ ಮಾಡುವ ಉಪಾಯಗಳನ್ನು ಶೋಧಿಸುವುದು ಹೇಗೆಂದು ಚಿಂತಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ.
ಇವೆಲ್ಲಕ್ಕಿಂತ ಮುಖ್ಯವಾದ ಇನ್ನೊಂದು ಅಂಶವಿದೆ: ಹಳ್ಳಿಯ ಬದುಕು ದೈಹಿಕ ಶ್ರಮವನ್ನು ಬೇಡುತ್ತದೆ. ಓಡಾಡಬೇಕು; ಹೊರೆ ಎತ್ತಬೇಕು; ಮರ ಏರಬೇಕು. ಆಕಳು- ಎಮ್ಮೆಗಳ ಮೈ ತೊಳೆಸಬೇಕು. ಈ ಯಾವುದೂ ಬಟನ್ ಒತ್ತಿದರೆ ಆಗುವ ಕೆಲಸಗಳಲ್ಲ. ಯಂತ್ರಯುಗಕ್ಕೆ ಕಾಲಿಟ್ಟ ಮೇಲೆ ಇಡೀ ನಾಗರಿಕತೆಯೇ ಶ್ರಮವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಾಗುತ್ತಿರುವಾಗ, ಸಹಜವಾಗಿ ಸುಲಭದ ಜೀವನಕ್ಕೆ ಎಲ್ಲರೂ ಆಸೆ ಪಡುತ್ತಾರೆ. ದೈಹಿಕ ಶ್ರಮ ಕಡಿಮೆಯಾದಷ್ಟೂ ಬದುಕಿನ ಗುಣಮಟ್ಟ ಹೆಚ್ಚುತ್ತದೆ ಎಂಬ ಕಲ್ಪನೆ ನಮ್ಮದಾಗಿದೆ. ಹಾಗೆ ಬಟನ್ ಒತ್ತುವಂಥ ತಂತ್ರಜ್ಞಾನವಾದರೂ ಲಭ್ಯವಿದೆಯೆ, ಅದೂ ಇಲ್ಲ. ಅಲ್ಲೊಂದು ಇಲ್ಲೊಂದು ಇದ್ದರೂ ಅದಕ್ಕೆ ವಿದ್ಯುತ್ ಅಭಾವ; ಯಂತ್ರ ಕೆಟ್ಟು ಕೂತರೆ ರಿಪೇರಿ ಮಾಡಬಲ್ಲವರ ಅಭಾವ, ಅವನ್ನೆಲ್ಲ ನಿಭಾಯಿಸಿಕೊಂಡು ತಕ್ಕಮಟ್ಟಿನ ಫಸಲು ಬೆಳೆದರೆ ಅದಕ್ಕೆ ಯೋಗ್ಯ ಬೆಲೆ ಕೊಟ್ಟು ಕೊಳ್ಳುವವರ ಅಭಾವ ಸರಕಾರಗಳ ನೀತಿಯೂ ವಿಲಕ್ಷಣವಾಗಿದೆ: ಒಂದೆಡೆ ನರೇಗಾದಂಥ ಯೋಜನೆಗಳ ಮೂಲಕ ಗ್ರಾಮೀಣ ಕೃಷಿಕಾರ್ಮಿಕರಿಗೆ ನಿರುದ್ಯೋಗ ಭತ್ಯೆ ನೀಡುತ್ತಿದೆ. ಇನ್ನೊಂದೆಡೆ ಕೃಷಿಕಾರ್ಮಿಕರಿಗೆ ಒಂದು ರೂಪಾಯಿಗೆ ಕಿಲೊ ಅಕ್ಕಿ ಕೊಡುವ ಮೂಲಕ ಅವರನ್ನು ಉದ್ಯೋಗದಿಂದ ವಿಮುಖರನ್ನಾಗಿ ಮಾಡುತ್ತಿದೆ.
ಇಂಥ ವಿಷಮ ಪರಿಸ್ಥಿತಿಯಲ್ಲಿ ಎಲ್ಲ ಕೃಷಿಕರೂ ನೋಡಲೇಬೇಕಾದ ಸಾಹಸ ಇಸ್ರೇಲಿನದು ಹೌದು. ಹಾಗೆಂದು ಎಲ್ಲ ಭಾರತೀಯರೂ ಅದನ್ನು ನೋಡಲು ಸಾಧ್ಯವಿಲ್ಲ. ಪ್ರತಿವರ್ಷವೂ ಇಂತಿಷ್ಟು ಭಾರತೀಯರನ್ನು ಅಲ್ಲಿಗೆ ಕಳುಹಿಸುವ ವ್ಯವಸ್ಥೆ ಇದೆಯಾದರೂ, ಅಲ್ಲಿ ಹೋಗಿ ಬಂದು ತಾವು ಕಂಡಿದ್ದನ್ನು ಸಮರ್ಪಕವಾಗಿ ಇತರರಿಗೆ ತಿಳಿಸುವವರೂ ಕಡಿಮೆ. ತಾವು ನೋಡಿ ಬಂದಿದ್ದನ್ನು ಇಲ್ಲಿ ಅನ್ವಯಿಸಿ ನೋಡಿದವರಂತೂ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಯುವ ಮಿತ್ರ ಆನಂದತೀರ್ಥ ಪ್ಯಾಟಿಯವರು ಅಲ್ಲಿಗೆ ಹೋಗಿ ಪತ್ರಕರ್ತನ ಚಿಕಿತ್ಸಕ ದೃಷ್ಟಿಯಿಂದ ಕೃಷಿ ಚಟುವಟಿಕೆಗಳನ್ನು ನೋಡಿದ್ದೂ ಅಲ್ಲದೆ, ಮರಳಿ ಬಂದಮೇಲೆ ಅದರ ಕುರಿತು ಅನೇಕ ಕಂತುಗಳಲ್ಲಿ ‘ಪ್ರಜಾವಾಣಿ’ಯಲ್ಲಿ ಬರೆದಿದ್ದಾರೆ. ಆ ಲೇಖನಗಳು ಇನ್ನೂ ದೀರ್ಘಕಾಲ ಕೃಷಿಕರಿಗೆ ಪ್ರೇರಣೆ ನೀಡುತ್ತಿರಲಿ ಎಂಬ ಆಶಯದಿಂದ ‘ಭೂಮಿ ಬುಕ್ಸ್’ ಪ್ರಕಾಶನ ಈ ಲೇಖನಗಳನ್ನು ಸಂಗ್ರಹಿಸಿ ಪ್ರಕಟಿಸುತ್ತಿದೆ.
ಓದುಗರು ತುಸು ಎಚ್ಚರಿಕೆಯಿಂದ ಇಲ್ಲಿನ ಮಾಹಿತಿಗಳನ್ನು ಸ್ವೀಕರಿಸಬೇಕು. ಇಸ್ರೇಲಿ ವಿಧಾನ ಇಸ್ರೇಲಿನ ಮಟ್ಟಿಗೆ ಶ್ರೇಷ್ಠ ಹೌದು. ನಮ್ಮ ದೇಶದಲ್ಲೂ ಅದರ ಯಥಾನಕಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಪರಿಶೀಲಿಸಬೇಕಿದೆ. ಚಂದ್ರಬಾಬು ನಾಯ್ಡು ಅವರ ಆಡಳಿತಕಾಲದಲ್ಲಿ ಆಂಧ್ರ ಪ್ರದೇಶದ ಕುಪ್ಪಂ ಎಂಬ ಬರಪೀಡಿತ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಇಸ್ರೇಲೀ ವಿಧಾನ ಬಳಕೆಯಾಗುತ್ತಿದೆ. ಎಕರೆಗೆ ಐದು ಲಕ್ಷ ರೂಪಾಯಿಗಳಷ್ಟು ದೊಡ್ಡ ಮೊತ್ತವನ್ನು ವಿನಿಯೋಗಿಸಿ, ಖಾಸಗಿ ಕಂಪನಿಯೊಂದರ ನಿರ್ದೇಶನದಂತೆ ಅಲ್ಲಿ ಕೃಷಿ ಪ್ರಯೋಗ ನಡೆದಿದ್ದು ನಿಜ. ಅಷ್ಟು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿ ಕಾರ್ಪೊರೇಟ್ ಫಾರ್ಮಿಂಗ್ ವಿಧಾನವನ್ನು ಅಳವಡಿಸಿಕೊಂಡರೆ ನಮ್ಮಲ್ಲೂ ಅಷ್ಟು ಉತ್ಪಾದನೆ ಪಡೆಯಲು ಸಾಧ್ಯವಿದ್ದೀತು. ಆದರೆ ಕಂಪನಿಯವರು ನಡೆಸುವ ಕೃಷಿ ಮಾದರಿಯೇ ನಮ್ಮ ಉದ್ದೇಶವಾಗಬಾರದು ತಾನೆ? ನಮ್ಮದು ರೈತಕೇಂದ್ರಿತ ಒಕ್ಕಲುತನವಾಗಬೇಕು; ರೈತರನ್ನು ಕೃಷಿರಂಗದಲ್ಲೇ ಉಳಿಸಬೇಕು. ಆತನನ್ನು ಸಾಲದಲ್ಲಿ ಸಿಲುಕಿಸಬಾರದು. ಅವನ ಫಸಲಿಗೆ ಯೋಗ್ಯ ಬೆಲೆ ಸಿಗಬೇಕು. ಖಾತ್ರಿ ಮಾರುಕಟ್ಟೆ ಇರಬೇಕು- ಇವೆಲ್ಲ ಆದರ್ಶಗಳು, ಸವಾಲುಗಳು ನಮ್ಮೆದುರು ಇವೆ. ಇಷ್ಟು ಸಾಲದೆಂಬಂತೆ ನಮ್ಮಲ್ಲಿ ಒಗ್ಗಟ್ಟಿನ ಅಭಾವ, ಕಾಲೆಳೆಯುವ ಪ್ರವೃತ್ತಿ, ಭ್ರಷ್ಟಾಚಾರ, ಜಾತಿವೈಷಮ್ಯ ಮುಂತಾದ ಸಮಸ್ಯೆಗಳು ಬೆಟ್ಟದಷ್ಟಿವೆ. ಈ ಯಾವವೂ ಇಸ್ರೇಲಿನಲ್ಲಿ ಇಲ್ಲ. ಹಾಗೆಂದು ನಮಗೆ ಅಲ್ಲಿನ ಮಾದರಿಯನ್ನು ಅಳವಡಿಸಲು ಸಾಧ್ಯವೇ ಇಲ್ಲವೆಂದು ಕೈಚೆಲ್ಲುವುದೂ ಸರಿಯಲ್ಲ. ನಮ್ಮೆದುರು ಆದರ್ಶಗಳಿರಬೇಕು. ಅಸಾಧ್ಯವನ್ನು ಸಾಧ್ಯವಾಗಿಸುವ ಕನಸುಗಳಿರಬೇಕು.
ಅಂಥ ಕನಸೊಂದನ್ನು ಬಿಡಿಸಿ ತೋರಿಸುವುದು ಈ ಪುಸ್ತಕದ ಉದ್ದೇಶವಾಗಿದೆ. ಕೃಷಿಕರಿಗಷ್ಟೇ ಅಲ್ಲ, ಕೃಷಿ ವಿದ್ಯಾರ್ಥಿಗಳಿಗೆ, ಸಹಕಾರಿ ಕ್ಷೇತ್ರದ ಉತ್ಸಾಹಿಗಳಿಗೆ, ಹಣಕಾಸು ತಜ್ಞರಿಗೆ, ಕೊಲ್ಲೋತ್ತರ ಸಂಸ್ಕರಣಾ ತಂತ್ರಜ್ಞರಿಗೆ, ಡೇರಿ ಪರಿಣತರಿಗೆ, ಮಾರುಕಟ್ಟೆ ವಿಶಾರದರಿಗೆ ಎಲ್ಲರಿಗೂ ಇಸ್ರೇಲೀ ಮಾದರಿ ಒಂದು ಕೈಗಂಬವಾಗುವಂತಿದೆ. ಈ ಕೃತಿಯನ್ನು ಓದಿದ ಕೆಲವರಿಗಾದರೂ ಹೊಸ ಮಾದರಿಯ ಕೃಷಿವಿಧಾನವನ್ನು ರೂಪಿಸಲು ಪ್ರೇರಣೆ ಸಿಕ್ಕರೆ ನಮ್ಮಲ್ಲೂ ಅಂಥ ಆದರ್ಶ ಮಾದರಿಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಇಸ್ರೇಲಿಗಿಂತ ಸಮರ್ಪಕ, ಸುಸ್ಥಿರ ಕೃಷಿ ವಿಧಾನವೊಂದು ನಮ್ಮ ನೆಲದಲ್ಲಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಅಂಥ ಸಾರ್ಥಕತೆಯ ನಿರೀಕ್ಷೆಯೊಂದಿಗೆ ‘ಭೂಮಿ ಬುಕ್ಸ್’ ಈ ಕೃತಿಯನ್ನು ನಿಮ್ಮ ಕೈಗಿಡುತ್ತಿದೆ.
- ನಾಗೇಶ ಹೆಗಡೆ
ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್ ಮಾಡಿ