ಮಾನ ಉಳಿಸುವ ಮೌಲ್ಯವರ್ಧನೆ!
ಹೊಸಪೇಟೆಯಿಂದ ಹಂಪಿಯ ಹಾದಿಯಲ್ಲಿ ಸಾಗಿದಷ್ಟೂ ಕಬ್ಬಿನ ಗದ್ದೆಗಳು ಕಣ್ಣಿಗೆ ಬೀಳುತ್ತವೆ. ಸಾಕುಬೇಕಷ್ಟು ರಾಸಾಯನಿಕ ಸುರಿದು ಯಥೇಚ್ಛ ಕಬ್ಬು ಬೆಳೆವ ಇಲ್ಲಿನ ರೈತರು ಕಟಾವಿನ ಕಾಲಕ್ಕೆ ಮಾತ್ರ ಕಂಗಾಲಾಗುತ್ತಾರೆ. ಸುತ್ತಮುತ್ತ ಇದ್ದ ಸಕ್ಕರೆ ಕಾರ್ಖಾನೆಗಳೆಲ್ಲಾ ಬಂದಾಗಿವೆ. ದೂರದ ದಾವಣಗೆರೆ ಸಕ್ಕರೆ ಕಾರ್ಖಾನೆಗೆ ಕಬ್ಬು ಒಯ್ಯಬೇಕು. ಇಲ್ಲವೆ ಸಮೀಪದ ಆಲೆಮನೆಯವರಿಗೆ ಕೇಳಿದಷ್ಟಕ್ಕೆ ಕಬ್ಬು ಕೊಟ್ಟು ಕೈತೊಳೆದುಕೊಳ್ಳಬೇಕು.
ಇಲ್ಲಿಗೆ ನೂರು ಕಿಮೀ ಆಚೆಗಿನ ಕಾರಟಗಿ ಸಮೀಪದ ಕಕ್ಕರಗೊಳ್ಳದ ಪ್ರಮೋದರದು ನೈಸರ್ಗಿಕ ತೋಟ. ಅಷ್ಟೇನೂ ಫಲವತ್ತಲ್ಲದ ಜಮೀನಿನಲ್ಲಿ ಸಾವಯವ ವಿಧಾನದಲ್ಲಿ ಕಬ್ಬು ಬೆಳೆದುಕೊಳ್ಳುತ್ತಾರೆ. ಕಬ್ಬಿನ ಇಳುವರಿಗಿಂತ ತಾವೇ ಗಾಣ ಹಾಕಿ ವಿವಿಧ ಬಗೆಯ ಬೆಲ್ಲ ಮಾಡುವುದರಲ್ಲೇ ಪ್ರಮೋದರಿಗೆ ಆಸಕ್ತಿ. ಗ್ರಾಹಕರನ್ನು ನೇರ ಮುಟ್ಟುವುದರಿಂದ ಉತ್ತಮ ಬೆಲೆಯೂ ಸಿಗುತ್ತದೆ.
ಸೋಲುತ್ತಿರುವ ಕೃಷಿ ಕ್ಷೇತ್ರಕ್ಕೆ ಜೀವತುಂಬಲು ಮೌಲ್ಯವರ್ಧನೆ ಬಿಟ್ಟರೆ ಬೇರೆ ದಾರಿ ಇಲ್ಲ. ಶ್ರೀ ಪಡ್ರೆಯವರ ಈ ಪುಸ್ತಕ ಮೌಲ್ಯವರ್ಧನೆಯಸಾಹಸಗಾಥೆಗಳ ಚಿತ್ರಣ. ಬೆಲೆ ಇಲ್ಲದೆ ಮಣ್ಣು ಪಾಲಾಗುತ್ತಿದ್ದ ತರಕಾರಿ, ಹಣ್ಣು ಹಂಪಲಿಗೆ ‘ಮೌಲ್ಯ’ ತಂದುಕೊಟ್ಟ ಮಾದರಿಗಳು ಇಲ್ಲಿ ಅನಾವರಣಗೊಂಡಿವೆ.
ಬೆಲೆ ಸಿಗದೆ ರಸ್ತೆಗೆ ಸುರಿವ ಟೊಮೆಟೊ, ಮೆಣಸಿನಕಾಯಿ, ಬೆಂಡೆಯನ್ನು ನಿರ್ಜಲೀಕರಣಗೊಳಿಸಿ ದುಪ್ಪಟ್ಟು ಬೆಲೆಗೆ ಮಾರುವ ದಾರಿಯನ್ನು ನಾಸಿಕ್ ರೈತ ಉತ್ಪಾದಕ ಸಂಸ್ಥೆ ಶ್ರೀ ಸಂತ್ ಸೇವಾ ಶೇತ್ಕರಿ ಗಟ್ ತೋರಿಸಿಕೊಟ್ಟಿದೆ. ಅವರು ಹಚ್ಚಿದ ತರಕಾರಿಗಳನ್ನು ಸೋಲಾರ್ ಡ್ರೈಯರ್‌ಗಳಲ್ಲಿ ಒಣಗಿಸಿ ಮಾರುಕಟ್ಟೆಗೆ ತಂದಿದ್ದಾರೆ. ‘ಒಮ್ಮೆ ತರಕಾರಿ ಕೊಂಡುಕೊಳ್ಳಿ. ಆರು ತಿಂಗಳವರೆಗೆ ತಿನ್ನುತ್ತಿರಿ’ ಎಂಬ ಘೋಷವಾಕ್ಯ ಅವರದು. ಕೋಲಾರದ ರೈತರಿಗೆ ಸ್ಪೂರ್ತಿ ತುಂಬಲು ಇನ್ನೇನು ಬೇಕು? ಮಹಾರಾಷ್ಟ್ರ ಮೌಲ್ಯವರ್ಧನೆಯ ಸಾಕಷ್ಟು ಮಾದರಿಗಳನ್ನು ಹುಟ್ಟುಹಾಕಿದೆ. ನೆಲಕಚ್ಚುವ ಸಪೋಟದಿಂದ ಎರಡು ಡಜನಿಗೂ ಹೆಚ್ಚು ಉತ್ಪನ್ನಗಳನ್ನು ಮಾಡಬಹುದು ಎಂಬುದನ್ನು ಮಹೇಷ್ ಚುರಿ ಕುಟುಂಬ ತೋರಿಸಿಕೊಟ್ಟಿದೆ. ನೆಲ್ಲಿಯ ‘ಆಮ್ಲಾಮೃತ್’ ಮಾರುಕಟ್ಟೆಗೆ ತಂದ ದೀಪಕ್ ಭಂಡಾರ್‌ವಾರ್ ಪ್ರಯತ್ನ ಪ್ರಶಂಸನೀಯ.
ಮಾರುಕಟ್ಟೆ ಜಾಣೆ
ಶ್ರೀ ಪಡ್ರೆಯವರ ಲೇಖನಿಗೆ ಸಿಕ್ಕ ಸಾಧಕರೆಲ್ಲ ಸೋತು ಗೆದ್ದವರೇ. ನಮಗೆ ಸಿದ್ಧ ಮಾದರಿಗಳೇ ಬೇಕು. ಅದರಲ್ಲೂ ಗೆದ್ದವರ ಬಾಲ ಹಿಡಿಯುವ ಬುದ್ದಿ. ಮಾರುಕಟ್ಟೆ ಸದಾ ಹೊಸದನ್ನು ಬಯಸುತ್ತದೆ ಎಂಬ ಸೂಕ್ಷ್ಮ ಬಲ್ಲವರು ಕಡಿಮೆ. ‘ನಾಯಿ ಮನುಷ್ಯನನ್ನು ಕಚ್ಚಿದರೆ ಸುದ್ದಿಯಾಗದು. ಮನುಷ್ಯ ನಾಯಿಯನ್ನು ಕಚ್ಚಿದರೆ ಅದು ಸುದ್ದಿ.’ ಮಾರುಕಟ್ಟೆ ಗೆಲ್ಲಲು ಹೊರಟವರು ತಿಳಿಯಬೇಕಾದ ಜಾಣೆ ಇದು.
ನಮ್ಮಲ್ಲೂ ಹೀಗೆಯೇ ಆಯಿತು. ಹತ್ತು ವರ್ಷಗಳ ಹಿಂದೆ ಸಹಜ ಆರ್ಗಾನಿಕ್ಸ್ ಕಟ್ಟಿದಾಗ ಸಾಂಪ್ರದಾಯಿಕ ಮಾರುಕಟ್ಟೆ ಕೇಳುತ್ತಿದ್ದ ಸೋನಾ ಮಸೂರಿ, ಬಾಸುಮತಿಯಂಥ ನೀಳ ಕಾಳಿನ ಅಕ್ಕಿ ಬೆಳೆದರಷ್ಟೇ ಮಾರುಕಟ್ಟೆ ಎಂಬ ಸ್ಥಿತಿ ಇತ್ತು. ಕಷ್ಟಪಟ್ಟು ದೇಸಿ ಭತ್ತವನ್ನೋ, ಇಲ್ಲ ಕೆಂಪಕ್ಕಿಯನ್ನೋ ಬೆಳೆದರೆ ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲ. ಇಂಥ ಪಡಿಪಾಟಲಿನ ನಡುವೆ ಹಸಿರೆಲೆ ಗೊಬ್ಬರ ಬಳಸಿ ಯಶಸ್ವಿಯಾಗಿ ಭತ್ತ ಬೆಳೆಯುತ್ತಿದ್ದ ಶಿಕಾರಿಪುರ ತಾಲೂಕು ಚುರ್ಚಿಗುಂಡಿಯ ಯುವ ಕೃಷಿಕ ಬಿ.ಎನ್. ನಂದೀಶ್, ನವರ ಬೆಳೆದರು. ಆದರೆ ಅವರು ಬೆಳೆದಿದ್ದ ಹತ್ತು ಕ್ವಿಂಟಾಲ್ ನವರ ಭತ್ತ ಕೇಳುವವರೇ ಇರಲಿಲ್ಲ. ನವರದ ಹೆಸರು ನಾನು ಕೂಡ ಕೇಳಿರಲಿಲ್ಲ. ಗೂಗಲ್ ಮಾಮನ ಜೊತೆ ಸುತ್ತಾಡಿದಾಗ ‘ನವರ ಔಷಧೀಯ ಭತ್ತ. ಇದರ ನಿರಂತರ ಬಳಕೆಯಿಂದ ನರ ದೌರ್ಬಲ್ಯ ನಿವಾರಣೆಯಾಗುತ್ತದೆ. ಪುರುಷತ್ವ ವೃದ್ಧಿಸುತ್ತದೆ’ ಎಂಬ ಮಾಹಿತಿ ಸಿಕ್ಕಿತು.
ನವರಕ್ಕೆ ‘ಇಂಡಿಯನ್ ವಯಾಗ್ರ’ ಎಂಬ ಹೆಸರಿಟ್ಟು ಮಾರುಕಟ್ಟೆಗೆ ಬಿಡುಗಡೆ ಮಾಡಿದೆವು. ಪತ್ರಿಕಾ ಲೇಖನಗಳ ಮೂಲಕ ಪ್ರಚಾರ ಕೊಟ್ಟೆವು. ಒಂದು ವಾರದಲ್ಲೇ ಆರು ಕ್ವಿಂಟಾಲ್ ಅಕ್ಕಿ ಖಾಲಿ! ಅದೂ ನಾವು ಹೇಳಿದ ಬೆಲೆಗೆ!
ಕೆಂಪಕ್ಕಿಗೂ ಬೆಲೆ ಇರಲಿಲ್ಲ. ತಿಂಗಳಿಗೆ ಹತ್ತು ಕೆಜಿ ಮಾರಿದರೆ ಹೆಚ್ಚು ಎಂಬಂಥ ಪರಿಸ್ಥಿತಿ. ‘ಡಯಾನ’ – Annam for the diabetic ಎಂದು ಮಾರುಕಟ್ಟೆಗೆ ತಂದೆವು. ಸಕ್ಕರೆ ಕಾಯಿಲೆ ಇರುವವರು ಕೆಂಪಕ್ಕಿ ಹುಡುಕಿ ಬಂದರು. ಬೇಡಿಕೆ ತಿಂಗಳಿಂದ ತಿಂಗಳಿಗೆ ಹೆಚ್ಚುತ್ತಾ ಹೋಯಿತು. ಇವತ್ತು ಬೆಂಗಳೂರು ನಗರ ಒಂದರಲ್ಲೇ 50 ಟನ್ ಬಿಕರಿಯಾಗುತ್ತದೆ.
ಕೆಂಪಕ್ಕಿ ಮೇಳ, ದೇಸಿ ಅಕ್ಕಿ ಮೇಳ, ಗಡ್ಡೆಗೆಣಸು ಮೇಳ, ಸಾವಯವ ಮೇಳಗಳ ಮೂಲಕ ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿದವು. ಸೋರೆ ಕಲೆಯ ‘ಕೃಷಿಕಲಾ’ ಹುಟ್ಟಿದ್ದು ಕೂಡ ಹೀಗೆಯೇ.
ಪ್ರಯತ್ನ ಸಾಲದು
ಹೆದ್ದಾರಿ ಮಾರುಕಟ್ಟೆಗಳನ್ನು ರೂಪಿಸುವಲ್ಲಿ ನಾವು ಏನೇನೂ ಪ್ರಯತ್ನಪಟ್ಟಿಲ್ಲ. ಹೆದ್ದಾರಿ ಪಕ್ಕ, ಮರದ ನೆರಳಲ್ಲಿ ಒಂದಷ್ಟು ಹಣ್ಣು, ತರಕಾರಿಗಳನ್ನು ಗುಡ್ಡೆಹಾಕಿಕೊಂಡು ಮಾರುವುದಷ್ಟೇ ನಮಗೆ ಗೊತ್ತು. ‘ಚಿಕ್ಕು ಒಂದು, ರುಚಿ ಇಪ್ಪತ್ತೊಂದು’, ‘ನಾನಾ ಸ್ವಾದದ ನೆಲ್ಲಿಗೆ ನಾಲ್ವೆಸೆಯ ಬೇಡಿಕೆ’ ಲೇಖನಗಳು ಹೆದ್ದಾರಿ ಮಾರುಕಟ್ಟೆಯ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿವೆ. ಮಹಾರಾಷ್ಟ್ರದ ಹೆದ್ದಾರಿ ಪಕ್ಕ ತಲೆ ಎತ್ತಿದ ‘ಚಿಕ್ಕು ಪಾರ್ಲರ್’ ನೆಲಕಚ್ಚುವ ಸಪೋಟಕ್ಕೆ ಮಾನ ತಂದುಕೊಟ್ಟರೆ, ಆಮ್ಲಾಮೃತ್ ಮಳಿಗೆ ನೆಲ್ಲಿಗೆ ಯೋಗ್ಯ ಬೆಲೆ ತಂದುಕೊಟ್ಟಿದೆ.
ನಮ್ಮಲ್ಲೂ ಹೇರಳವಾಗಿ ಬೆಳೆಯುವ ತೆಂಗು, ಮಾವು, ಸೀಬೆ, ಸೀತಾಫಲ, ನೇರಳೆ, ಅನಾನಸ್ ಮುಂತಾದ ಉತ್ಪನ್ನಗಳು ಪಾರ್ಲರ್ ರೂಪದಲ್ಲಿ ಮಾರುಕಟ್ಟೆಗೆ ಬರಬೇಕಾಗಿದೆ.
ಥಾಯ್ಲೆಂಡ್‌ನಂಥ ಪುಟ್ಟ ದೇಶದಿಂದ ನಾವು ಕಲಿಯುವುದು ಸಾಕಷ್ಟಿದೆ. ಅಲ್ಲಿ ‘ಫಾರ್ಮಸ್್ರ ಮಾರ್ಕೆಟ್’ಗಳು ಬಹು ಜನಪ್ರಿಯ. ಹೆದ್ದಾರಿ, ಆಸ್ಪತ್ರೆ, ಮಾಲ್‌ಗಳಲ್ಲಿ ರೈತ ಮಾರುಕಟ್ಟೆಗಳನ್ನು ಕಾಣಬಹುದು. ಸೊಪ್ಪಿನಿಂದ ಮಾಂಸದವರೆಗೆ, ಅಕ್ಕಿಯಿಂದ ಶರಬತ್ತಿನವರೆಗೆ ತರಹೇವಾರಿ ತಾಜಾ ಕೃಷಿ ಉತ್ಪನ್ನಗಳು ಅಲ್ಲಿ ಲಭ್ಯ. ತೆಂಗಿನ ತಾಜಾ ಹಾಲು, ಕೊಕೊನಟ್ ಜೆಲ್ಲಿ, ಐಸ್ ಎಳನೀರಿಗೆ ತುಂಬ ಬೇಡಿಕೆ. ಮೌಲ್ಯವರ್ಧನೆಯ ನಾನಾ ರೂಪಗಳನ್ನು ನೋಡಬೇಕೆನ್ನುವವರು ಆ ದೇಶಕ್ಕೊಮ್ಮೆ ಹೋಗಿಬರಬೇಕು.
ಮರಗಿಡ ಬಳ್ಳಿ ಮಾರುವ ವಾರದ ಮಾರುಕಟ್ಟೆಗಳು, ನೀರ ಮೇಲೆ ತೇಲುವ (ಫ್ಲೋಟಿಂಗ್) ಮಾರ್ಕೆಟ್, ರಸ್ತೆ ಬದಿಯ ಫುಡ್ ಮಾರ್ಕೆಟ್ – ಹೀಗೆ ಹತ್ತಾರು ಬಗೆಯ ಮಾರುಕಟ್ಟೆಗಳನ್ನು ಅಲ್ಲಿ ಕಾಣಬಹುದು.
ಮೌಲ್ಯವರ್ಧನೆಯ ಪಾಠ ಹೇಳಿಕೊಡುವ ನಮ್ಮ ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಗುಂಗಿನಿಂದ ಹೊರಬಂದೇ ಇಲ್ಲ. ಥಾಯ್ ರೈತರು ಭತ್ತವೊಂದರಿಂದಲೇ 70ಕ್ಕೂ ಹೆಚ್ಚಿನ ಮೌಲ್ಯವರ್ಧಿತ ಪದಾರ್ಥಗಳನ್ನು ಮಾಡುತ್ತಾರೆ. ಭತ್ತದ ಹಾಲಿನ ಸೋಪು, ಬಣ್ಣದ ಅಕ್ಕಿ, ತೌಡಿನ ಮಾತ್ರೆ, ಮೊಳಕೆಕಟ್ಟಿದ ಅಕ್ಕಿಯಂಥ ಹೊಸ ಪದಾರ್ಥಗಳು ಅಲ್ಲಿ ಲಭ್ಯ ಭೌಗೋಳಿಕ ಸೂಚಿ (ಜಿಐ) ಮಾನ್ಯತೆ ಪಡೆದ ನಂಜನಗೂಡು ರಸಬಾಳೆ, ಕಮಲಾಪುರ ಕೆಂಪು ಬಾಳೆ, ದೇವನಹಳ್ಳಿ ಚಕ್ಕೋತ, ಬ್ಯಾಡಗಿ ಮೆಣಸಿನಕಾಯಿ, ಬೆಂಗಳೂರು ಕಪ್ಪು ದ್ರಾಕ್ಷಿ ಇವೆಲ್ಲ ಸರ್ಟಿಫಿಕೇಟ್ ಪಡೆದು ಸುದ್ದಿ ಮಾಡಿದ್ದು ಬಿಟ್ಟರೆ, ಅವನ್ನು ಜನಪ್ರಿಯಗೊಳಿಸುವ ಪ್ರಯತ್ನಗಳೇ ಆಗಿಲ್ಲ.
ಮಹಾರಾಷ್ಟ್ರದ ಫೋಲ್ವಾಡ್ ಚಿಕ್ಕು, ಪಶ್ಚಿಮ ಬಂಗಾಳದ ಗೋವಿಂದ್ ಭೋಗ್, ಒಡಿಶಾದ ಕಾಲಾಜೀರ, ಉತ್ತರ ಪ್ರದೇಶದ ಕಾಲಾನಮಕ್ ಮಾರುಕಟ್ಟೆಯನ್ನು ಗೆದ್ದಿವೆ; ಬೆಳೆಗಾರನಿಗೆ ಹೆಚ್ಚಿನ ಬೆಲೆ ದೊರಕಿಸಿಕೊಟ್ಟಿವೆ.
ಯಶಸ್ವಿ ಮಾದರಿಗಳು
ನೆಲಕ್ಕಿಳಿದು ಕೃಷಿಕರ ಜೊತೆ ವಿಜ್ಞಾನಿಗಳು ಕೆಲಸ ಮಾಡಿದರೆ ಎಂಥ ಅದ್ಭುತ ಮಾಡಬಹುದು ಎಂಬುದನ್ನು ತುಮಕೂರು ಜಿಲ್ಲೆ ಹಿರೇಹಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಯೋಗ ಕೇಂದ್ರದ ಮುಖ್ಯಸ್ಥ ಡಾ. ಜಿ. ಕರುಣಾಕರನ್ ತೋರಿಸಿಕೊಟ್ಟಿದ್ದಾರೆ. ಇವರ ಒತ್ತಾಸೆಯಿಂದ ಕೆಂಪು ಹಲಸು ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿದೆ. ಹಲಸು ಮೇಳಗಳು ಸಾಮಾನ್ಯವಾಗುತ್ತಿವೆ. ನಾವು ಆಯೋಜಿಸಿದ್ದ ಮೈಸೂರಿನ ಹಲಸು ಮೇಳದಲ್ಲಿ ಲಕ್ಷಾಂತರ ರೂಪಾಯಿ ಬೆಲೆಯ ಹಲಸಿನ ಗಿಡ ಮತ್ತು ಹಣ್ಣು ಮಾರಾಟವಾದವು.
ಹಲಸಿನ ಹಣ್ಣಿನ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ವಿಸ್ತರಿಸಿದ ಕೇರಳಿಗರು ನಮಗೆಲ್ಲಾ ಮಾದರಿ. ಹಲಸಿನ ಐಸ್‌ಕ್ರೀಂ-ಮಿಲ್ಕ್ಶೇಕ್-ಜ್ಯೂಸ್ ಅಲ್ಲಿನ ಕೂಲ್ ಬಾರ್‌ಗಳಲ್ಲಿ ಸುಲಭವಾಗಿ ಸಿಗುತ್ತದೆ. ಮೊನ್ನೆಮೊನ್ನೆಯ ವರೆಗೂ ಗ್ರಾಹಕರಿಗೆ ಅಷ್ಟಾಗಿ ಪರಿಚಯವಿಲ್ಲದ ಪ್ಯಾಶನ್‌ಫ್ರುಟ್ ಜ್ಯೂಸ್ ಈಗ ಅಲ್ಲಿ ಬಹು ಜನಪ್ರಿಯ. ಆದರೆ ಕರ್ನಾಟಕ ಮಾತ್ರ ಇನ್ನೂ ಮಾವು ಮಿಲ್ಕ್ಶೇಕ್, ಮೊಸಂಬಿ-ಕಿತ್ತಳೆ ಜ್ಯೂಸ್ ಕುಡಿಯುತ್ತಾ ಹಾಯಾಗಿದೆ!
ಪಡ್ರೆಯವರು ಗುರುತಿಸಿದ ಬಹುಪಾಲು ರೈತರು ಗೆಲ್ಲಲು ಆನ್‌ಲೈನ್ ಮಾರುಕಟ್ಟೆ ಮಹತ್ವದ ಪಾತ್ರ ವಹಿಸಿದೆ. ಇಂದು ಫೇಸ್‌ಬುಕ್, ವಾಟ್ಸಪ್ ಮೂಲಕ ನೇರ ಗ್ರಾಹಕರನ್ನು ಮುಟ್ಟಬಹುದು. ಇದಕ್ಕೆ ಅಗತ್ಯವಿರುವ ತಂತ್ರ(ಜ್ಞಾನ)ವನ್ನು ಕಲಿಸಿಕೊಡುವವರು ಬೇಕಿದೆ.
ಹಲಸಿನ ರಾಯಭಾರಿ ಶ್ರೀ ಪಡ್ರೆ ಮೌಲ್ಯವರ್ಧನೆ, ನೇರ ಮಾರುಕಟ್ಟೆಯ ಸಾಹಸಗಾಥೆಗಳನ್ನು ದಣಿವರಿಯದೆ ದಾಖಲಿಸಿದ್ದಾರೆ. ಅವುಗಳಿಗೆ ಅಡಿಕೆ ಪತ್ರಿಕೆಯಲ್ಲಿ ಬೆಳಕು ಕಾಣಿಸಿದ್ದಾರೆ. ನೆರೆಯ ಮಹಾರಾಷ್ಟ್ರದಿಂದ ದೂರದ ಥಾಯ್ಲೆಂಡ್ ವರೆಗಿನ ಮೌಲ್ಯವರ್ಧನೆ ಪ್ರಯತ್ನಗಳೆಲ್ಲಾ ಅವರ ಹದ್ದಿನ ಕಣ್ಣಿಗೆ ಬಿದ್ದಿವೆ.
ಪಡೆಯವರು ಹಳ್ಳಿ ಪರಿಸರದಲ್ಲಿದ್ದು ಬರೆಯುತ್ತಿರುವವರು. ಹಳ್ಳಿಗರ ಕಷ್ಟ ಕಾರ್ಪಣ್ಯಗಳನ್ನು ಹತ್ತಿರದಿಂದ ಕಂಡವರು; ಅವುಗಳಿಗೆ ಪರಿಹಾರಗಳನ್ನು ಹುಡುಕುವವರು. ಇಲ್ಲಿರುವ ಬರಹಗಳು ಈ ಕಾರಣಕ್ಕೆ ಮುಖ್ಯವಾಗುತ್ತವೆ. ಬೆಲೆ ಸಿಗದೆ ನೆಲಕಚ್ಚುವ ಹಣ್ಣು-ತರಕಾರಿಗಳಿಗೆ ಮಾನ ತಂದುಕೊಡುವ ಮೌಲ್ಯವರ್ಧನೆಯ ಯಶೋಗಾಥೆಗಳು ಕೇವಲ ಬರಹಗಳಷ್ಟೇ ಅಲ್ಲ, ಓದುಗರನ್ನು ಈ ನಿಟ್ಟಿನಲ್ಲಿ ಹೊಸಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳಲು ಪ್ರೇರೇಪಿಸುವ ಟಾನಿಕ್ ಕೂಡ.
ಕೃಷಿ ಕ್ಷೇತ್ರ ಖಾಸಗಿ ಕಂಪನಿಗಳ ಪಾಲಾಗುತ್ತಿರುವ ಇಂದಿನ ಸಂಕಷ್ಟದ ಕಾಲದಲ್ಲಿ ಪಡೆಯವರ ಪುಸ್ತಕ ಪ್ರಯೋಗಶೀಲ ಕೃಷಿಕರಿಗೆ ಹೊಸ ದಿಕ್ಕು ತೋರಬಲ್ಲದಾಗಿದೆ. ಮಾರುಕಟ್ಟೆಯನ್ನು ಹುಡುಕುವುದಲ್ಲ, ಹುಟ್ಟುಹಾಕುವುದು ಎಂಬ ಸತ್ಯ ಕೃಷಿಕರಿಗೆ ಅರ್ಥವಾಗಬೇಕಿದೆ. ಅಂಥ ಬದಲಾವಣೆಗೆ ಈ ಪುಸ್ತಕ ದಾರಿ ದೀಪವಾಗಲಿ.
ಜಿ. ಕೃಷ್ಣಪ್ರಸಾದ್
ನಿರ್ದೇಶಕ, ಸಹಜ ಸಮೃದ್ಧ
(ಮೌಲ್ಯವರ್ಧನೆ ಪುಸ್ತಕದ ಮುನ್ನುಡಿಯಿಂದ)
ರೈತರ ಆದಾಯವರ್ಧನೆಗೆ ಮೌಲ್ಯವರ್ಧನೆ
ಲೇಖಕರು: ಶ್ರೀ ಪಡ್ರೆ;
ಪ್ರಕಾಶನ : ಕೃಷಿ ಮಾಧ್ಯಮ ಕೇಂದ್ರ ಮತ್ತು ಫಾರ್ಮರ್ ಫಸ್ಟ್ ಟ್ರಸ್ಟ್;
ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್ ಮಾಡಿ