ತನ್ನ ಜಮೀನಿನಲ್ಲಿ ಬೆಳೆದ ಯಾವುದೇ ಹೂ ಹಣ್ಣುಗಳನ್ನವರು ಹಾಳಾಗಿ ಹೋಗಲು ಬಿಡುವುದಿಲ್ಲ. ಅವರ ಉತ್ಪನ್ನಗಳ ವೈಶಿಷ್ಟ್ಯ ಎಂದರೆ ಅದು ಅವುಗಳ ಗುಣಮಟ್ಟ ಮತ್ತು ನಾವೀನ್ಯ

ಕೋಟ್ಟಯಂನ ಗೃಹಿಣಿ ಬೀನಾ ಟೋಮ್ ಅವರಿಗೀಗ ಮಧ್ಯವಯಸ್ಸು. 58. ಆದರೆ ಚಟುವಟಿಕೆ ಯುವತಿಯರನ್ನೂ ನಾಚಿಸುವಂಥದ್ದು. ಇರುವುದು ಎರಡೆಕ್ರೆ ತೋಟ. ವಿವಿಧ ಹಣ್ಣಿನ ಗಿಡಗಳು, ಅಡಿಕೆ, ತೆಂಗು, ಜಾಯಿಕಾಯಿ ಮತ್ತು ಜೇನು ಕೃಷಿ. ಇಷ್ಟರ ಬೆಳೆಗಳಿಂದಲೇ ವರ್ಷಪೂರ್ತಿ ಉತ್ಪನ್ನ ನಿರ್ಮಾಣ. ಲೆಕ್ಕ ಹಾಕಿದರೆ ಮೌಲ್ಯವರ್ಧಿತ ತಯಾರಿಗಳು ನೂರನಲುವತ್ತರಷ್ಟು!

ತನ್ನ ಜಮೀನಿನಲ್ಲಿ ಬೆಳೆದ ಯಾವುದೇ ಹೂ ಹಣ್ಣುಗಳನ್ನವರು ಹಾಳಾಗಿ ಹೋಗಲು ಬಿಡುವುದಿಲ್ಲ. ಬೀನಮ್ಮನ ವಿಶೇಷಗಳು ಇಷ್ಟಕ್ಕೇ ಮುಗಿಯುವುದಿಲ್ಲ. ಯಾವ ತಯಾರಿಗೂ ಅವರು ರಾಸಾಯನಿಕ ಸಂರಕ್ಷಕ ಬಳಸುವುದಿಲ್ಲ. ಕೃತಕ ಬಣ್ಣಗಳೂ ದೂರವೇ.

ಮನೆಯಿಂದಲೇ ಮಾರುಕಟ್ಟೆ

ಮಾಡಿದ ಉತ್ಪನ್ನ ಮಾರಲು ಅಂಗಡಿ, ಮೇಳಗಳ ಆಶ್ರಯ ಬೇಡ. ಅದಕ್ಕಾಗಿ ಅವರು ಮನೆಯ ಗೇಟು ತೆರೆದು ಹೊರಹೋಗುವುದಿಲ್ಲ. ಮಾತ್ರವಲ್ಲ. ಮುಂಚಿತವಾಗಿಯೇ ಉತ್ಪನ್ನ ತಯಾರಿಸಿ ಇಡುವುದೂ ಇಲ್ಲ. ಲೇಬಲ್, ಬ್ರಾಂಡಿಂಗ್, ಜಾಹೀರಾತು ಮೊದಲಾದ ಮಾರ್ಕೆಟಿಂಗಿನ ಅನಿವಾರ್ಯತೆಗಳೂ ಅವರಿಗಿಲ್ಲ. ಫೋನ್, ವಾಟ್ಸಪ್ ಮೂಲಕ ಅವರಿಗೆ ಆದೇಶ ಬರುತ್ತಲೇ ಇರುತ್ತದೆ. “ಇಂಥ ವಸ್ತು ಇದೆಯೇ ಅಂತ ಮಾತ್ರ ಕೇಳುವ ಗ್ರಾಹಕರೇ ಎಲ್ಲರೂ. ಬೆಲೆ ಎಷ್ಟು ಎಂಬ ಪ್ರಶ್ನೆ ಕೇಳುವುದಿಲ್ಲ” ಎನ್ನುತ್ತಾರೆ.

ತಾವು ಬೆಳೆದ ಬೆಳೆಗಳ ಮೌಲ್ಯವರ್ಧನೆಯಲ್ಲಿ ಬೀನಾ ಟೋಮ್ ಅವರಿಗೆ ಸಾಟಿ ಅವರೊಬ್ಬರೇ! ಅವರೊಬ್ಬರು ಅಸಾಮಾನ್ಯ ‘ಮೇಡಮ್ ಮೌಲ್ಯವರ್ಧಿನಿ’! ಕೋಟ್ಟಯಂನಲ್ಲಿ ಇವರ ಮನೆ ಹೆಸರು ಚೆಂಪಕಮಟ್ಟಂ. ಪತಿ ಟೋಮ್ ಸಿ. ಆಂಟೊನಿ ಡೈರಿ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಸ್ವಯಂನಿವೃತ್ತಿ ಪಡೆದವರು.

ಇವರಿಗೆ ಇಬ್ಬರು ಮಕ್ಕಳು. ಮಕ್ಕಳಿಬ್ಬರೂ ವಿದೇಶದಲ್ಲಿದ್ದಾರೆ. ಏಳು ವರ್ಷ ಹಿಂದೆ ಒಂದು ಚಿಕ್ಕ ಘಟನೆ ನಡೆಯಿತು. ಇವರ ಕೃಷ್ಯುತ್ಪನ್ನ ಕೊಳ್ಳಲು ಬಂದ ಯಾರೋ ಒಬ್ಬರು “ನಮಗೆ ಇದರಿಂದ ಇಂಥ ವಸ್ತು ಮಾಡಿಕೊಡಲು ಸಾಧ್ಯವೇ?” ಎಂದು ವಿಚಾರಿಸಿದರು. ಬೀನಾ ಅವರಿಗೆ ಬಿಡುವಿತ್ತು. ಏಕೆ ಮಾಡಿಕೊಡಬಾರದು ಅನಿಸಿತು. ಮಾಡಿ ಕೊಟ್ಟು ರೊಕ್ಕ ಪಡೆದರು. ಹಾಗೆ ಗ್ರಾಹಕರೊಬ್ಬರ ಬೇಡಿಕೆಯಿಂದ ಆರಂಭವಾದ ಮೌಲ್ಯವರ್ಧನೆ ನಂತರ ನಿಲ್ಲಲೇ ಇಲ್ಲ.

ಅಮ್ಮನ ಪಾಠವೇ ಬಂಡವಾಳ

ಬೀನಾ ಅವರ ಅಮ್ಮ  ಅಚ್ಚಮ್ಮ  ನೋಬ್‍ಲ್ ಅವರಿಗೀಗ 83 ವಯಸ್ಸು. ಚಿಕ್ಕವರಾಗಿದ್ದಾಗ ಅವರು ತಯಾರು ಮಾಡುತ್ತಿದ್ದ ಹಲಸಿನ ಹಣ್ಣಿನ ಮಾಂಬಳ, ‘ಚಕ್ಕ ಉಂಡೆ’ಯಂತಹ ಹಲವು ಉತ್ಪನ್ನಗಳು ಇವರ ಮನದಲ್ಲಿದ್ದುವು. ಅವರಿಂದ ಕಲಿತ ವಿದ್ಯೆ ಸ್ಥೂಲವಾಗಿ ಮನದಲ್ಲಿತ್ತು. ಒಂದೆರಡು ಬಾರಿ ಮಾಡಿದಾಗ ಅವೆಲ್ಲವೂ ಸರಿಯಾದುವು. ನಂತರ ಒಂದೊಂದು ಉತ್ಪನ್ನ ಮಾಡುತ್ತಲೇ ಹೋದರು. ಸಾಮಾಜಿಕ ಮಾಧ್ಯಮದ ಮೂಲಕ ಮಾರಾಟ.

ಇವರ ಕೃಷಿ ಪೂರ್ತಿ ಸಾವಯವ. ಬೀನಾ ಟೋಮ್ ತಮ್ಮ ತೋಟದ ಬೆಳೆಗಳಿಗೇ ಗಮನ ಕೊಡುತ್ತಾ ಬಂದಿದ್ದಾರೆ. ಅವುಗಳಿಂದಲೇ ಅದೆಷ್ಟೋ ಥರದ ತಯಾರಿ ಮಾಡುತ್ತಾರೆ. ಹೊರಗಿನಿಂದ ಖರೀದಿಸುವುದು ಹಲಸು ಮತ್ತು ಪ್ಯಾಶನ್‍ಫ್ರುಟ್ ಮಾತ್ರ.

ಇವರ ಪ್ರಥಮ ಹವ್ಯಾಸ ಜೇನು ಸಾಕಣೆ. ವರ್ಷಕ್ಕೆ ಅಂದಾಜು ನಾಲ್ಕೈದು ಕ್ವಿಂಟಾಲ್ ಜೇನು ಸಿಗುತ್ತದೆ. ಮುಜಂಟಿ ಜೇನಿನ ಕುಟುಂಬಗಳೂ ಇವೆ. ಜೇನು ನೇರವಾಗಿ  ಮಾರುವುದಲ್ಲದೆ ಜೇನು   ಮತ್ತು ಜೇನುಮಯಣ ಬಳಸಿ ಹತ್ತಾರು ಉತ್ಪನ್ನ ತಯಾರಿಸುತ್ತಾರೆ.  ಒಂದು ಕಿಲೋ ತೊಡುವೆ ಜೇನಿಗೆ 400 ರೂ. ಮುಜಂಟಿ ಜೇನಿಗೆ ಕಿಲೋಗೆ 3,000 ರೂ. ಬೆಲೆ.

ಬೀನಾ ಅವರು ಮೌಲ್ಯವರ್ಧನೆಗೆ ಕೈ ಹಾಕಿದ ಆ ದಿನಗಳಲ್ಲಿ ಅವರು ಕೇಳಿಕೊಂಡ ಕೆಲವರು ಮಾಡುವ ವಿಧಾನ ತಿಳಿಸಲು ಮನಸ್ಸು ಮಾಡಲಿಲ್ಲ ವಂತೆ. “ಈ ಕಾರಣದಿಂದ ನನ್ನೊಳಗೇನೇ ಒಂದು ಛಲ ಬೆಳೆಯಿತು. ಒಂದಷ್ಟನ್ನು ಮಾಡುತ್ತಾ ಮಾಡುತ್ತಾ ಕಲಿತೆ” ಎನ್ನುತ್ತಾರೆ.

ಚಕ್ಕ ವರಟ್ಟಿ ಹಲಸಿನಿಂದ ತಯಾರಿಸುವ ಕೇರಳದ ಸಿಹಿ ತಿನಸು. ಇದು ಹಲ್ವ ಅಲ್ಲ. ಆದರೆ ನೇರ ತಿನ್ನಲೂಬಹುದು. ಅದರಿಂದಲೇ ಪಾಯಸ ಮಾಡಬಹುದು. ಇಂದು ಕೇರಳದಾದ್ಯಂತ ಹತ್ತು ಹಲವು ಗೃಹ ಉದ್ದಿಮೆಗಳು, ತಿಂಡಿ ಅಂಗಡಿಗಳು ಮತ್ತು ಕಂಪೆನಿಗಳು ಚಕ್ಕ ವರಟ್ಟಿ ತಯಾರಿಸುತ್ತವೆ.

ಬಾಳೆ ಬೆರಟ್ಟಿ, ಜಾಯಿಕಾಯಿಮಾಂಬಳ

ಚಕ್ಕ ವರಟ್ಟಿಯಂತೆ – ಇದನ್ನು  ದ.ಕದ ಕಡೆ ಹಲಸಿನ ಹಣ್ಣಿನ ಬೆರಟ್ಟಿ ಎನ್ನುತ್ತಾರೆ – ಜನಪ್ರಿಯವಾಗದ ಇನ್ನೊಂದು ಸಿಹಿ ತಿನಸು ಬಾಳೆ ವರಟ್ಟಿ. ನೇಂದ್ರ ಮತ್ತಿತರ ಬಾಳೆಹಣ್ಣು ಬಳಸಿ, ಇದನ್ನು ಚಕ್ಕ ವರಟ್ಟಿ ತಯಾರಿಸುವ ರೀತಿಯಲ್ಲಿ ಮಾಡುತ್ತಾರೆ. ಬೀನಾ ಅವರ ‘ವಾಳ ವರಟ್ಟಿ’ಗೆ ಒಳ್ಳೆ ಬೇಡಿಕೆಯಿದೆ. ಇದಲ್ಲದೆ ಬನಾನಾ ಫಿಗ್ (ಸುಕೇಳಿ), ಬಾಳೆಕಾಯಿ ಹುಡಿಗಳೂ ಇವರ ಉತ್ಪನ್ನಗಳಲ್ಲಿ ಸೇರಿವೆ.

ಪದರ ಪದರವಾಗಿ ಮಾವಿನ ಹಣ್ಣಿನ ರಸ ಚಾಪೆಯ ಮೇಲೆ ಸುರಿದು ಒಣಗಿಸಿ ಮಾಡುವ ಮಾಂಬಳ ಗೊತ್ತಲ್ಲಾ. ಮ್ಯಾಂಗೋ ಲೆದರ್ ಎಂಬ ಹೆಸರೂ ಇದೆ. ಇದೇ ಥರ ಹಲಸಿನ ಹಣ್ಣಿನಿಂದ ಮಾಡುವ ಮಾಂಬಳ (ಹಂಬಳ?) ಬೀನಾ ಅವರ ಸ್ಪೆಶಾಲಿಟಿ. “ದಶಕಗಳ ಹಿಂದೆ ಮನೆಗಳಲ್ಲಿ ಮಾಡಿಡುತ್ತಿದ್ದ  ‘ಚಕ್ಕ ತೆರ, ಮಾಂಗ ತೆರ’ ಈಗ ಮಾಡುವವರೇ ಇಲ್ಲ. ಎಷ್ಟು ಪ್ರಮಾಣದಲ್ಲಿ ಉತ್ಪಾದಿಸಿದರೂ ಸಾಕಾಗುವುದಿಲ್ಲ” ಎನ್ನುತ್ತಾರೆ ಬೀನಾ.

ಮಾವು ಮತ್ತು ಹಲಸಿನ ಹಣ್ಣಿನ (ಹಹ) ‘ಮಾಂಬಳ’ (ತೆರ) ಬಹು ಮಂದಿಗೆ ಕೇಳಿಯಾದರೂ ಗೊತ್ತು. ಬೀನಾ ಅವರ ವಿಶೇಷ ‘ತೆರ’ಗಳೆಂದರೆ ಜಾಯಿಕಾಯಿ, ಕುಂಬಳಕಾಯಿಗಳದು!

“ಮಾಂಬಳ ಮತ್ತು ಹಲಸಿನ ಹಣ್ಣಿನ ಮಾಂಬಳ ಕೇರಳಿಗರಿಗೆ ಬಾಲ್ಯಕಾಲವನ್ನು ನೆನಪಿಸಿಕೊಡುತ್ತದೆ. ಇವನ್ನು ಮಾಡಲು ಇರುವ ಶ್ರಮದಿಂದಾಗಿ ಮಾಡುವವರು ತೀರಾ ಕಮ್ಮಿ. ಬೇಕೆನ್ನುವವರು ಭಾರೀ ಮಂದಿ. ಈ ಥರದ ನೊಸ್ಟಾಲ್ಜಿಕ್ ಉತ್ಪನ್ನಗಳನ್ನು ಗುಣಮಟ್ಟದೊಂದಿಗೆ ತಯಾರಿಸಿದರೆ ಬೇಡಿಕೆ ಇದ್ದೇ ಇದೆ” ಎನ್ನುತ್ತಾರೆ.

ಈ ವರ್ಷ ಹಲಸಿನ ಬೆಳೆಯೂ ಕಮ್ಮಿ. ಇವರ ಹಿತ್ತಿಲಿನದು ಸಾಕೇ ಆಗಲಿಲ್ಲ. ಅಂದಾಜು 7 ಕ್ವಿಂಟಾಲ್ ಖರೀದಿಸಿದ್ದಾರೆ. ಇಡಿ ಹಣ್ಣು ಕಿಲೋಗೆ 20 ರೂ.ಯಂತೆ ಪಾವತಿಸಬೇಕು. ಇದನ್ನು ಪಲ್ಪ್ ಮಾಡಿ ಇಟ್ಟುಕೊಳ್ಳುತ್ತಾರೆ. ಬೇಕಾದಾಗ ಹೊರತೆಗೆದು ‘ತೆರ’ ಮತ್ತು ಇತರ ಉತ್ಪನ್ನ ತಯಾರಿಸುತ್ತಾರೆ.

ಬೆಳೆ ಕೊಳೆಯಬಿಡದ ಬೀನಮ್ಮ

ಬೀಂಬ್ಳಿಯನ್ನು ಮಲೆಯಾಳದಲ್ಲಿ ‘ಇರುಂಬನ್ ಪುಳಿ’ ಎಂದು ಕರೆಯುತ್ತಾರೆ. ಹೆಚ್ಚಿನ ಮನೆಗಳಲ್ಲೂ ಇದು ಹಾಳಾಗಿ ಹೋಗುತ್ತದೆ. ಬೀನಾ  ಇದರಿಂದ ಉಪ್ಪಿನಕಾಯಿ ತಯಾರಿಸುತ್ತಾರೆ. ದಾರೆ ಹುಳಿ (ಕರಂಬೋಲ, ಸ್ಟಾರ್‍ಫ್ರುಟ್) ಯಿಂದ ಸ್ಕ್ವಾಷ್. ಹಾಗೆಯೇ ಈಚೆಗಿನ ವರ್ಷಗಳಲ್ಲಿ ಕೇರಳದಲ್ಲಿ ಜಯಭೇರಿ ಬಾರಿಸಿದ ನೆಲ್ಲಿಕಾಯಿ – ಗಾಂಧಾರಿ (ಸೂಜಿಮೆಣಸು) ಸ್ಕ್ವಾಷಿಗೆ ಇವರೂ ಪ್ರಸಿದ್ಧರು. ಪ್ಯಾಶನ್‍ಫ್ರುಟ್ ಜ್ಯೂಸ್ ಕೂಡಾ ಕೇರಳದಲ್ಲಿ ಜನಪ್ರಿಯ. ಬೀನಾ ತಮಗೆ ಜ್ಯೂಸಿಗೆ ಬೇಕಾದಷ್ಟು ಪ್ಯಾಶನ್‍ಫ್ರುಟ್ಟನ್ನು ವಯನಾಡಿನಿಂದ ತರಿಸಿ ಕೊಳ್ಳುತ್ತಾರೆ.

ಹಲಸಿನ ಬೀಜದಿಂದ ಉಳಿದವರು ತಯಾರಿಸುವ ಮಾಮೂಲಿಯ ಹುಡಿ ಮಾತ್ರ ಅಲ್ಲದೆ ಬ್ರೆಡ್ ಜತೆ ಸ್ಪ್ರೆಡ್ ಆಗಿ ಬಳಸಬಹುದಾದ ನ್ಯೂಟ್ರೆಲ್ಲಾ ಮಾದರಿಯ ಸ್ಪ್ರೆಡ್ ತಯಾರು ಮಾಡುತ್ತಾರೆ. ಕುಂಬಳಕಾಯಿ, ಚೀನಿಕಾಯಿ, ಬಾಳೆಕಾಯಿ, ಹಲಸಿನ ಹಣ್ಣುಗಳಿಂದ ಹಲ್ವ ಇವರಿಗೆ ಕಚ್ಚಾವಸ್ತು ಸಿಗುವುದಕ್ಕೆ ಅನುಸಾರವಾಗಿ ಮಾಡುತ್ತಾರೆ.

ಮಾವಿನಿಂದ ಮಾಂಬಳ, ಮಾವಿನ ಹಣ್ಣಿನ ಜ್ಯಾಮ್,  ಒಣಗಿಸಿದ ಮಾವಿನ ಹಣ್ಣು – ಸ್ಕ್ವಾಶ್. ಹಲಸಿನಿಂದ ಒಣ ಕಾಯಿಸೊಳೆ, ಜ್ಯಾಮ್, ಸ್ಕ್ವಾಶ್, ಹಣ್ಣಿನ ಬಾಲ್ಸ್, ನ್ಯೂಟ್ರೆಲ್ಲಾ ಮಾದರಿಯ ಸ್ಪ್ರೆಡ್, ಜ್ಯಾಕ್ ಲೆದರ್ (ತೆರ).

ಪ್ರಿಸರ್ವೇಟಿವ್ ಬಳಸದೆ ಬೀನಾ ಹೇಗೆ ನಿಭಾಯಿಸುತ್ತಾರೆ? “ನನ್ನ ಹೆಚ್ಚಿನ ಗ್ರಾಹಕರೂ ಈಗ ಹಿಂದಿನಿಂದ ಪರಿಚಯ ಅಥವಾ ರೆಫರೆನ್ಸ್ ಇರುವವರು. ಉತ್ಪನ್ನ ಕೊಡುವಾಗ ಅವರ ಬಳಿ ಪ್ರತ್ಯೇಕವಾಗಿ ಹೇಳುತ್ತೇನೆ. ಪ್ರಿಸರ್ವೇಟಿವ್ ಹಾಕಿಲ್ಲ. ಫ್ರಿಜ್ಜಿನಲ್ಲಿಟ್ಟೇ ಬಳಕೆ ಮಾಡಿ ಅಂತ. ಅವರೆಲ್ಲಾ ಈ ಥರದ ಉತ್ಪನ್ನ ಇಷ್ಟಪಡುವವರೇ.”

ನಡುವೆ ಒಮ್ಮೊಮ್ಮೆ ಬೀನಾ ಟೋಮ್ ಮೌಲ್ಯವರ್ಧನೆಯ ತರಬೇತಿ ಕೊಡಲು ಹೋಗುವುದಿದೆ. “ಆದರೆ ಅಲ್ಲಿ ನಾನು ಅತಿಯಾಗದಂತೆ ಪ್ರಿಸರ್ವೇಟಿವ್ ಬಳಸಲು ಸಲಹೆ ಮಾಡುತ್ತೇನೆ. ಏಕೆ ಗೊತ್ತೇ? ಅವರು ಹೊಸಬರು. ನನಗಿರುವಂತೆ ಸಂರಕ್ಷಕರಹಿತ ಉತ್ಪನ್ನ ಗ್ರಾಹಕರು ಆರಂಭದಲ್ಲೇ ಸಿಗುವುದು ಕಷ್ಟ. ತರಬೇತಿ ಪಡೆಯುವ ಯುವತಿಯರು ಪಾಪ, ಉತ್ಪನ್ನ ಮಾರಾಟ ಮಾಡಿ ಬದುಕು ನಡೆಸಬೇಕಲ್ಲಾ?”

ಹೊಸತು ಕಲಿಯುವ ಹುಮ್ಮಸ್ಸು

ಬಿಡುವಿಲ್ಲದ ಕೆಲಸದ ನಡುವೆಯೂ ಹೊಸತೇನಾದರೂ ಮೌಲ್ಯವರ್ಧನೆಯ ವಿಚಾರ ಕೇಳಿದರೆ ಬೀನಾ ಮತ್ತೆ ವಿದ್ಯಾರ್ಥಿಯಾಗುತ್ತಾರೆ. ಬಲ್ಲವರನ್ನು ಸಂಪರ್ಕಿಸಿ ಹೊಸಹೊಸತನ್ನು ಕಲಿತು ಮಾಡಿದ ಮೇಲೆಯೇ ಉಳಿದ ವಿಚಾರ.

ಎಲ್ಲ ಕೃಷಿಕರ ಮನೆಗಳಲ್ಲೂ ಆಗುವಂತೆ ಇವರಲ್ಲೂ ಪ್ರತಿ ವರ್ಷ ಒಂದಷ್ಟು ಕೊಯ್ದಿಟ್ಟ ತೆಂಗಿನಕಾಯಿ ಮೊಳಕೆ ಬರುವುದಿದೆ. ಮಲೆಯಾಳದಲ್ಲಿ ಇದಕ್ಕೆ ‘ತೇಂಗ  ಪೊಂಗ್’ ಎಂದು ಹೆಸರು. ಯೋಚಿಸಿ ಯೋಚಿಸಿ ಬೀನಾ ಈಗ ಇವನ್ನು ಒಣಗಿಸಿ ಹುಡಿ ಮಾಡುತ್ತಾರೆ. “ಸಾಕಷ್ಟು ಪೋಷಕ ಸಮೃದ್ಧ ಈ ಉತ್ಪನ್ನವನ್ನು ದೋಸೆ, ಇಡ್ಲಿ, ಪುಟ್ಟುಗಳ ಜತೆ ಬಳಸಬಹುದು. ವಿವರ ತಿಳಿಸಿ ಮಾರುಕಟ್ಟೆಯೂ ಮಾಡಬಹುದು” ಎನ್ನುತ್ತಾರೆ.

ಬೀನಾ ಅವರ ಈ ಗೃಹ ಉದ್ದಿಮೆಗೆ ಇಬ್ಬರು ಖಾಯಂ ಸಹಾಯಿಗಳಿದ್ದಾರೆ. ಮೇರಿ (47) ಮತ್ತು ಬಾಬು (52) ಇವರ ಸೂಚನೆ, ಮೇಲ್ನೋಟ ಆಧರಿಸಿ ಎಲ್ಲಾ ಉತ್ಪನ್ನಗಳ ತಯಾರಿ ಕಲಿತುಕೊಂಡಿದ್ದಾರೆ. ಸ್ವತಹ ಬೀನಾ ದಿನಕ್ಕೆ ಆರರಿಂದ ಎಂಟು ಗಂಟೆ ಈ ಕೆಲಸಕ್ಕೆ ಮೀಸಲಿಡುತ್ತಾರೆ.

ನೇರ ಬಂದು ಕೊಳ್ಳುವವರಲ್ಲದೆ ಕೊರಿಯರ್ ಮೂಲಕವೂ ಉತ್ಪನ್ನ ಕಳಿಸುವುದಿದೆ. “ಆದರೆ ಡೆಲಿವರಿಗೆ ಮೂರಕ್ಕಿಂತ ಹೆಚ್ಚು ದಿನ ತೆಗೆದುಕೊಳ್ಳುವ ಊರುಗಳಿಗೆ ಕೊರಿಯರ್ ಕಳಿಸಲು ಒಪ್ಪುವುದಿಲ್ಲ. ಚಿಪ್ಸಿನಂತಹ ಸ್ವಲ್ಪ ಹೆಚ್ಚು ಕಾಲ ಉಳಿಯಬಲ್ಲ ವಸ್ತುಗಳನ್ನು ದೂರಕ್ಕೂ ಕಳಿಸುವುದಿದೆ.”

ಕೇರಳ ಜಾಯಿಕಾಯಿಯ ಊರು. ಜಾಯಿಕಾಯಿಯ ಸಿಪ್ಪೆ ಹಾಳಾಗಿ ಹೋಗುವುದೇ ಹೆಚ್ಚು. ಈಗ ಬೀನಾ ಇದರಿಂದಲೂ ಹಲವು ಉತ್ಪನ್ನ ತಯಾರಿಸಲು ಕಲಿತಿದ್ದಾರೆ. ಅವರಿಗೆ ಇದನ್ನು ಕಲಿಸಿಕೊಟ್ಟವರು ಕೋಟ್ಟಯಂ ಕೇವೀಕೆಯ ವಿಷಯ ತಜ್ಞೆ ಜಿಶಾ. ಜಾಯಿಕಾಯಿ ಸಿಪ್ಪೆಯ ಕ್ಯಾಂಡಿ, ಬಾರ್, ಉಪ್ಪಿನಕಾಯಿ, ಜೆಲ್ಲಿ ಇತ್ಯಾದಿಗಳಿಗೆ ಒಳ್ಳೆ ಬೇಡಿಕೆ ಇದೆಯಂತೆ.

ಪ್ರಸಿದ್ಧಿಗೆ ಕಾರಣ

ಜಿಶಾ ಅವರ ಮಾತು ಕೇಳೋಣ. “ಬೀನಾ ಟೋಮ್ ಅವರ ಉತ್ಪನ್ನಗಳ ವೈಶಿಷ್ಟ್ಯ ಎಂದರೆ ಅದು ಅವುಗಳ ಗುಣಮಟ್ಟ. ಅದು ಬೇಕಾಗುವ ಒಳಸುರಿಗಳ   ಆಯ್ಕೆಯಿಂದ  ಆರಂಭವಾಗುತ್ತದೆ. ಸಂಸ್ಕರಣೆ, ಪ್ಯಾಕಿಂಗಿನಲ್ಲೂ ಅವರು ಉತ್ತಮ ರೀತಿ ಕಾಯ್ದುಕೊಳ್ಳುವ ಕಾರಣದಿಂದಲೇ ಅವರ ಉತ್ಪನ್ನಗಳಿಗೆ ಹೀಗೆ ವ್ಯಾಪಕ ಸ್ವೀಕೃತಿ ಬರುತ್ತಿದೆ. ಪ್ರಚಾರ ಸಿಗುತ್ತಿದೆ. ಅವರ ಸಂಶೋಧನಾ ಪ್ರಜ್ಞೆ ಪ್ರಶಂಸನೀಯ. ಏನಾದರೂ ಚಿಕ್ಕ ಸಂಶಯ ಬಂದರೂ ಅವರು ನಮ್ಮ ಕೇವೀಕೆಯೂ ಸೇರಿದಂತೆ ಅನುಭವಿಗಳನ್ನು ಸಂಪರ್ಕಿಸಿ ಸಂಶಯ ನಿವಾರಣೆ ಮಾಡಿಕೊಳ್ಳುತ್ತಾರೆ. ಗೊತ್ತಿರುವ ಅನುಭವವನ್ನು ಇತರರಿಗೆ ಹೇಳಿ ಕೊಡಲು ಅವರಿಗೆ ತುಂಬಾ ಖುಷಿ. ಹಾಗಾಗಿ ಅವರೀಗ ಜನಪ್ರಿಯ ತರಬೇತಿಗಾರ್ತಿಯೂ ಹೌದು.”

“ಅಮ್ಮನಿಂದ ಬಳುವಳಿಯಾಗಿ ಬಂದ ಕೈಗುಣ, ಅಡುಗೆಯ ಬಗ್ಗೆ ಇರುವ ಉತ್ಸಾಹ, ಹೊಸಹೊಸ ಉತ್ಪನ್ನ ಮಾಡುವ ಹುಮ್ಮಸ್ಸು ಮತ್ತು ಸಂಶೋಧನಾ ಪ್ರವೃತ್ತಿ ಅವರನ್ನು ಯಶಸ್ವಿ ಉದ್ಯಮಿಯಾಗಿಸಿದೆ” ಎಂದು ಜಿಶಾ ಶ್ಲಾಘಿಸುತ್ತಾರೆ.

‘ಇನ್ಫ್ಯೂಶ್ಡ್ ಹನಿ’ ಎಂದು ಇವರು ಕರೆಯುವ ಉತ್ಪನ್ನಗಳ ಒಂದು ಶ್ರೇಣಿಯೇ ಇದೆ. ಹಲಸಿನ ಹಣ್ಣು, ಮಾವಿನ ಹಣ್ಣು, ನೇರಳೆ, ಶಂಖಪುಷ್ಪ, ಶುಂಠಿ, ಗಾಂಧಾರಿ, ಬೆಳ್ಳುಳ್ಳಿ ಮೊದಲಾದ ಉತ್ಪನ್ನಗಳು ಇವರಲ್ಲಿರುತ್ತವೆ. ಇದಕ್ಕೆ ಇವರೇ ಉತ್ಪಾದಿಸಿದ ಜೇನು ಬಳಸುತ್ತಾರೆ. ಸಾಕಾಗದೆ ಬಂದರೆ ತೀರಾ ಪರಿಚಿತರ ಒಳ್ಳೆ ಗುಣಮಟ್ಟದ ಜೇನು ಕೊಂಡುಕೊಳ್ಳುತ್ತಾರೆ.

“ನಾನು ಕೊಳ್ಳಲು ಸಿಗುವ ಅತ್ಯುತ್ತಮ ಒಳಸುರಿಗಳನ್ನೇ ಬಳಸುತ್ತೇನೆ. ಉದಾಹರಣೆಗೆ 300 ರೂಪಾಯಿಯಿಂದಾರಂಭಿಸಿ 800 ರೂ. ವರೆಗಿನ ಮೆಣಸಿನ ಹುಡಿ ಇದೆ ಅಂದುಕೊಳ್ಳಿ. ನಾನು ಅವುಗಳ ಬಗ್ಗೆ ವಿಮರ್ಶೆ ಮಾಡಿ 800ರದನ್ನೇ ಕೊಳ್ಳುತ್ತೇನೆ. ನನ್ನ ಗ್ರಾಹಕರೂ ಇದನ್ನು ಗುರುತಿಸಿದ್ದಾರೆ. ಬೆಲೆ ಬಗ್ಗೆ ಎರಡು ಮಾತು ಹೇಳುವುದಿಲ್ಲ”, ಬೀನಾ ಬೊಟ್ಟು ಮಾಡುತ್ತಾರೆ.

ಪನ್ನೀರು ಹೂವಿನ (ಗುಲಾಬಿ) ಜ್ಯಾಮ್ ಇವರು ಹಿಂದಿನಿಂದಲೇ ಮಾಡುತ್ತಾ ಬಂದಿದ್ದಾರೆ. ಶಂಖಪುಷ್ಪದ ಬಹುಬಳಕೆ ಈಚೆಯದು. ಶಂಖಪುಷ್ಪ ಸ್ಕ್ವಾಶ್, ಜ್ಯೂಸ್, ಇನ್‍ಫ್ಯೂಸ್‍ಡ್ ಹನಿ, ಸಾಬೂನು, ಫೇಸ್ ಪ್ಯಾಕ್, ಬ್ಲೂ (ಹರ್ಬಲ್ ಟೀ) ಮತ್ತು ಒಣ ಶಂಖಪುಷ್ಪ ಹೂ ಇವರಲ್ಲಿ ತಯಾರಾಗುತ್ತದೆ. ಒಣ ಶಂಖಪುಷ್ಪ ಹೂ ಖರೀದಿಸಿ ಚಾ ಹುಡಿಯೊಂದಿಗೆ ಬೆರೆಸಿ ಹರ್ಬಲ್ ಟೀ ಮಾಡಿಕೊಳ್ಳಬಹುದು.

“ಬಾಯಿಯಿಂದ ಬಾಯಿಗೆ ಹಬ್ಬುವ ಪ್ರಚಾರವೇ ನನಗೆ ಇಷ್ಟೊಂದು ದೊಡ್ಡ ಗ್ರಾಹಕ ವರ್ಗ ತಂದುಕೊಟ್ಟಿದೆ. ನಾನು ಮಾಡುವ ಈ ಕೆಲಸದ ಬಗ್ಗೆ ಅತೀವ ಖುಷಿಯಿದೆ” ಎನ್ನುತ್ತಿರುತ್ತಾರೆ  ಈ ಮೇಡಂ ಮೌಲ್ಯವರ್ಧಿನಿ. ಬೆಂಬಲವಾಗಿ ನಿಂತ ಕೋಟ್ಟಯಂ, ಕುಮರಕಂ ಕೇವೀಕೆಗಳು, ಸ್ಟೇಟ್ ಹಾರ್ಟಿಕಲ್ಚರ್ ಮಿಶನ್ ಮತ್ತು ಜೀವನ ಸಂಗಾತಿ ಟೋಮ್ ಸಿ. ಆಂಟೊನಿ ಯವರನ್ನು ನೆನೆಯುತ್ತಾರೆ.

ಬೀನಾ ಟೋಮ್ (ಮಲೆಯಾಳಂ) ಅವರ ಸಂಪರ್ಕ : 94973 26496 (ವಾಟ್ಸಪ್ ಮಾತ್ರ)

ಲೇಖಕರು : ಎಸ್ಪಿ

ಈ ಲೇಖನವು ಕೃಷಿಕರೇ ರೂಪಿಸುವ ಕೃಷಿಕಪರ ಮಾಧ್ಯಮ – ಅಡಿಕೆ ಪತ್ರಿಕೆಯ ಅಕ್ಟೋಬರ್ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಅಡಿಕೆ ಪತ್ರಿಕೆಯ ಕುರಿತು ಹೆಚ್ಚಿನ ಮಾಹಿತಿ ಮತ್ತು ಚಂದ ವಿವಿರಗಳಿಗೆ ಕೆಳಗಿನ ನಂಬರ್ ಸಂಪರ್ಕಿಸಿ ಅಥವಾ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ವಿಳಾಸ :
ಅಡಿಕೆ ಪತ್ರಿಕೆ, ಅಂಚೆ ಪೆಟ್ಟಿಗೆ ನಂ. 29, ಭಟ್ ಬಿಲ್ಡಿಂಗ್, ಏಳ್ಮುಡಿ, ಪುತ್ತೂರು-574201
ಫೋನ್ : (08251) 231240,
ಕರೆ : 8073140917
ವಾಟ್ಸಾಪ್ 9483365791,
Email : adikepatrike@gmail.com
Web: www.adikepatrike.com

Leave a Reply

Your email address will not be published. Required fields are marked *

Close
Sign in
Close
Cart (0)

No products in the cart. No products in the cart.





0