ನಮ್ಮ ಜನಪದರು ರಾಗಿಯಷ್ಟು ಒಡನಾಡಿದ ಧಾನ್ಯ ಬೇರೊಂದಿಲ್ಲ! ಕಥೆ, ಹಾಡು, ಹಸೆ, ಒಗಟು, ಗಾದೆಮಾತುಗಳಲ್ಲಿ ರಾಗಿ ಹಾಸುಹೊಕ್ಕಾಗಿದೆ. ಹೀಗಾಗಿ, ರಾಗಿ ಅಂದರೆ ಅದು ಬರೀ ಧಾನ್ಯವಷ್ಟೇ ಅಲ್ಲ; ಕೃಷಿ ಸಂಸ್ಕೃತಿಯ ಭಾಗವೂ ಹೌದು.
ರಾಗಿಯನ್ನು ಕೇಂದ್ರವಾಗಿಟ್ಟುಕೊಂಡ ಅಕ್ಕಡಿ ಪದ್ಧತಿಯು ಅತ್ಯಂತ ವೈಜ್ಞಾನಿಕ ಹಾಗೂ ಜನರ ಸಾಂಪ್ರದಾಯಿಕ ಜ್ಞಾನಕ್ಕೆ ನಿದರ್ಶನವಾಗಿದೆ. ರಾಗಿ ಜತೆಗೆ ಇತರ ಧಾನ್ಯಗಳನ್ನೂ ಒದಗಿಸುವ ಈ ಪದ್ಧತಿಯು ಇಡೀ ಕುಟುಂಬಕ್ಕೆ ಆಹಾರ ಭದ್ರತೆ ಕೊಡಬಲ್ಲದು. ಈಗಲೂ ಕೋಟಿಗಟ್ಟಲೇ ಜನರ ಅನ್ನದ ತಟ್ಟೆ ತುಂಬುವ ಈ ಸಿರಿಧಾನ್ಯ, ರೈತರನ್ನು ಯಾವತ್ತೂ ಕಷ್ಟಕ್ಕೆ ಗುರಿ ಮಾಡಿಲ್ಲ. ರೈತರು ಅದರ ಮೇಲೆ ಇಟ್ಟಿರುವ ಪ್ರೀತಿ- ಭರವಸೆಯ ಪ್ರತೀಕವೆಂಬಂತೆ, ಹಳ್ಳಿಗಳಲ್ಲಿ ಹಗೇವು ತೆರೆದಾಗ ನೂರಾರು ವರ್ಷಗಳ ಕಾಲದಿಂದ ಅಲ್ಲೇ ಉಳಿದಿದ್ದ ರಾಗಿ ಕಂಡುಬರುತ್ತದೆ. ಅಷ್ಟೊಂದು ಶ್ರೇಷ್ಠ ಹಾಗೂ ಗಟ್ಟಿ ಧಾನ್ಯ ಅದು!
ಇಂಥ ಧಾನ್ಯದ ದೇಸಿ ತಳಿಗಳ ಭಂಡಾರವು ಅಧಿಕ ಇಳುವರಿ ತಳಿಗಳ ಅಬ್ಬರದಲ್ಲಿ ಮೂಲೆಗುಂಪಾಗಿದ್ದು ನೋವಿನ ಸಂಗತಿ. ನಮ್ಮ ಅಪರೂಪದ ಬೀಜ ಭಂಡಾರ ಕಣ್ಮರೆಯಾಗುವ ಮೊದಲೇ ಅದನ್ನು ರಕ್ಷಿಸುವ ಕೈಂಕರ್ಯವನ್ನು ನಾಡಿನ ಅನೇಕ ಬೀಜ ಸಂರಕ್ಷಕರು ಮಾಡಿದ್ದಾರೆ. ಇದಕ್ಕೆ ನೆರವು ನೀಡುತ್ತ ಒಂದೂವರೆ ದಶಕದಿಂದ ‘ಸಹಜ ಸಮೃದ್ಧ’ ಬಳಗವು ದೇಸಿ ತಳಿಗಳ ಅಭಿವೃದ್ಧಿ, ಸಂರಕ್ಷಣೆ, ಮೌಲ್ಯವರ್ಧನೆ ಮಾಡುತ್ತ ರಾಗಿ ಸಂಸ್ಕೃತಿಯನ್ನು ಜೀವಂತವಾಗಿಟ್ಟಿದೆ.
ಸರ್ಕಾರಗಳು ಸಿರಿಧಾನ್ಯಗಳ ಬಗ್ಗೆ ವಿಶೇಷ ಒಲವು ತೋರುತ್ತ, ರಾಗಿಗೆ ಉತ್ತೇಜನ ಕೊಡುತ್ತಿವೆ. ಅಧಿಕ ಇಳುವರಿಯ ತಳಿಗಳು ಸರ್ಕಾರಿ ಸವಲತ್ತುಗಳ ಮೂಲಕ ರೈತರ ಹೊಲಕ್ಕೆ ಧಾಂಗುಡಿಯಿಡುವಾಗ ಅದು ರೈತರನ್ನು ಸಂಕಷ್ಟಕ್ಕೆ ದೂಡುವ ಅಪಾಯವೂ ಇದೆ. ಈ ಎಚ್ಚರದೊಂದಿಗೆ ದೇಸಿ ತಳಿಗಳನ್ನು ನಮ್ಮ ಹೊಲಕ್ಕೆ ತರುವ ಸಂಸ್ಕೃತಿಯನ್ನು ಅನುಸರಿಸಬೇಕಿದೆ.
ನಮ್ಮಲ್ಲಿರುವ ಕೃಷಿ ವೈವಿಧ್ಯ, ತಳಿ ಸಂಪತ್ತು ಎಷ್ಟು ಅಗಾಧ ಎಂಬುದನ್ನು ಕನ್ನಡ ನಾಡಿಗೆ ತೋರಿಸುವ ಹಾಗೂ ಅದನ್ನು ಪರಿಚಯಸುವ ಯತ್ನ ನಮ್ಮದು. ಕೃಷಿ, ಪರಿಸರ ಹಾಗೂ ಆರೋಗ್ಯದ ದೃಷ್ಟಿಯಿಂದ ಸಿರಿಧಾನ್ಯಗಳ ಸಂಸ್ಕೃತಿಯನ್ನು ಗಟ್ಟಿಗೊಳ್ಳಿಸುವ ಆಶಯ ಈ ಪುಸ್ತಕದ ಹಿಂದಿದೆ. ನಮ್ಮ ಪ್ರಯತ್ನವನ್ನು ನೀವು ಒಪ್ಪಿಕೊಳ್ಳುವಿರಿ ಎಂಬ ಆಶಾವಾದವೂ ಇದೆ.

ರಾಗಿ ತಿಂದವರು ನಿರೋಗಿ ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

Close
Sign in
Close
Cart (0)

No products in the cart. No products in the cart.





0