ಸಹಜ ಬೇಸಾಯ ಹೆಜ್ಜೆ ಗುರುತುಗಳು | Sahaja Besaya Hejje gurutugalu
Written by Basavaraju B Santeshivara
Narrated by V.Gayatri
Published by Institute for Cultural Research and Action
**
ನಾನು ಬಸವರಾಜು ಅವರನ್ನು ಮೊದಲು ಭೆಟ್ಟಿಯಾದದ್ದು ಭರಮಗೌಡ್ರರ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಇರಬೇಕು. ಆಗ ಅವರ ಪರಿಚಯ ಅಷ್ಟಾಗಿ ಇರಲಿಲ್ಲ. ನಂತರ ಕೆಲ ವೇದಿಕೆಗಳಲ್ಲಿ ಅವರ ಮಾತುಗಳನ್ನು ಕೇಳುವ ಅವಕಾಶವಾಗಿತ್ತು. ಇವರ ಮಾತಿನಲ್ಲಿ ಒಂದು ಬಗೆಯ ವಿಶೇಷ ಸೆಳೆತ ಇರುತ್ತಿತ್ತು. ಕೃಷಿಯ ಬಗ್ಗೆ ಹೇಳುತ್ತಲೇ ಪ್ರಕೃತಿಯ ಸೂಕ್ಷ್ಮ ವಿದ್ಯಮಾನಗಳನ್ನು ತುಂಬಾ ಸರಳವಾಗಿ ಅಷ್ಟೇ ಮುಗ್ಧವಾಗಿ ವಿವರಿಸುತ್ತಿದ್ದ ಇವರ ವೈಖರಿ ಕಂಡು ಮತ್ತಷ್ಟು ಕುತೂಹಲ ಕೆರಳಿತು. ಅದೇ ಕುತೂಹಲದಲ್ಲಿ ಒಂದು ದಿನ ಸಂತೇಶಿವರದ ಇವರ ತೋಟಕ್ಕೆ ಹೋಗಿ ಇಡೀ ತೋಟದಲ್ಲಿ ಓಡಾಡಿದೆ. ಅಲ್ಲಿ ಕಂಡದ್ದೇನು? ಕನಿಷ್ಠ ನಿರ್ವಹಣೆಯಿದ್ದ ತೋಟದಲ್ಲಿ ಅಗಾಧ ಜೀವರಾಶಿಗಳ ರಕ್ಷಣೆಯಾಗಿತ್ತು. ಜೀವಿಗಳ ನಡುವಿನ ಸಂಬಂಧ ಸಹಜವಾಗಿ ಏರ್ಪಟ್ಟಿತ್ತು. ಐನ್‌ಸ್ಟೈನ್ ಹೇಳುವ ‘ಯೂನಿಫಿಕೇಶನ್ ಆಫ್ ಲೈಫ್’, ಜೀವಚಕ್ರಗಳು ಪೂರ್ಣಗೊಳ್ಳುತ್ತಿರುವುದು ಎದ್ದುಕಾಣುತ್ತಿತ್ತು. ಸಹಜ ಕೃಷಿ ತೋಟದಲ್ಲಿ ಪ್ರತಿ ವರ್ಷ ಫಲವತ್ತತೆ ಏಕೆ ಹೆಚ್ಚಾಗುತ್ತದೆ, ಹೇಗೆ ಆಗುತ್ತದೆ ಅನ್ನುವುದು ಇಲ್ಲಿ ಅರ್ಥವಾಗುತ್ತಿತ್ತು. ತೋಟದ ತುಂಬಾ ಪಾದರಸದಂತೆ ಓಡಾಡುತ್ತಾ ಬಸವರಾಜು ಆಡುತ್ತಿದ್ದ ಒಂದೊಂದು ಮಾತೂ ನನಗೆ ಬೇರೆಯೇ ಆಗಿ ಕೇಳಿಸುತ್ತಿತ್ತು. ಏಕೆಂದರೆ, ಇವರಾಡುತ್ತಿದ್ದದ್ದು ಭೂಮಿಯೊಟ್ಟಿಗಿನ ಸಾಂಗತ್ಯದಲ್ಲಿರುವ ಜೀವಿ ಜೀವಿಗಳ ಭಾಷೆ ಇವರು ಓಡಾಡುವಾಗ ಆ ಜೀವಿಗಳಿಗೆ ಈ ಮನುಷ್ಯ ನಮ್ಮನ್ನು ಕೊಲ್ಲುವುದಿಲ್ಲ, ಕಾಪಾಡುತ್ತಾನೆ ಎಂದು ತಿಳಿಯುತ್ತದೆ. ಇದರಿಂದ ಅಲ್ಲಿ ಒಂದು ಪಾಸಿಟಿವ್ ಎನರ್ಜಿ ಉಂಟಾಗುತ್ತದೆ. ಆ ತೋಟದಲ್ಲಿ ಪೂರಾ ಆವರಿಸಿಕೊಂಡಿದ್ದು ಇದೇ ಪಾಸಿಟಿವ್ ಎನರ್ಜಿ.
ಆಗ ಫೆಬ್ರವರಿ-ಮಾರ್ಚ್ ಇರಬಹುದು. ನಿಂಬೆ-ಮೂಸಂಬಿ-ಕಿತ್ತಳೆ ಗಿಡಗಳೆಲ್ಲಾ ಹೂಬಿಟ್ಟು ಘಮಘಮ ವಾಸನೆ ಸೂಸುತ್ತಿದ್ದವು. ‘ನೋಡಿ ಸಾರ್, ಇವು ಸುವಾಸನೆ ಕೊಡುತ್ತಾ ಹೇಗೆ ದುಂಬಿಗಳನ್ನು ಆಕರ್ಷಣೆ ಮಾಡುತ್ತಿದ್ದಾವೆ’ ಎಂದು ಬಸವರಾಜು ಪುಳಕಿತರಾದರು. ಹೌದು, ಅವು ಪರಸ್ಪರ ಕೊಡುಕೊಳ್ಳುವಿಕೆಯಲ್ಲಿ ತೊಡಗಿದ್ದವು, ‘ನೀನು ನನಗೆ ಪರಾಗಸ್ಪರ್ಶ ಮಾಡಿಕೊಡು, ನಾನು ನಿನಗೆ ಮಕರಂದ ಕೊಡ್ತೀನಿ.’
ಭೂಮಿಯ ಒಳಗೆ, ಭೂಮಿಯ ಮೇಲೆ ಲೆಕ್ಕವಿಲ್ಲದಷ್ಟು ಅಗೋಚರ ಕ್ರಿಯೆಗಳು ನಡೆಯುತ್ತಿರುತ್ತದೆ. ಅಲ್ಲಿ ನಮಗೆ ಗೊತ್ತಿಲ್ಲದಿರುವುದು ಅಗಾಧವಾಗಿದೆ. ಸಹಜ ಕೃಷಿ ತೋಟದಲ್ಲಿ ಹೆಜ್ಜೆ ಹೆಜ್ಜೆಗೂ ಇದನ್ನು ಅನುಭವಿಸುತ್ತಾ, ಧನ್ಯತೆಯಿಂದ ಸೃಷ್ಟಿಗೆ ವಂದಿಸುತ್ತಾ ಇರುವ ರೈತ ಅಧಾತ್ಮ ಸಾಧನೆ ಇಲ್ಲದೆಯೇ ಸಂತನಾಗುತ್ತಾನೆ ಎನ್ನುವುದನ್ನು ಬಸವರಾಜುವಿನಲ್ಲಿ ಕಂಡೆ. ಪ್ರಕೃತಿಗೆ ನೀನು ಏನೂ ಮಾಡಬೇಡ. ಅದನ್ನು ಬೇಷರತ್ ಆಗಿ ಪ್ರೀತಿಸು. ನಿನ್ನ ಗರ್ಭದಿಂದ ಎಲ್ಲಾ ದಕ್ಕಿದೆ ಎನ್ನುವ ಪೂರ್ಣ ಶರಣಾಗತಿ ಭಾವ ಶೇ. 10ರಷ್ಟು ಇದ್ದರೂ ಸಾಕು, ಗರಿಷ್ಟ ಲಾಭ ಸಿಕ್ಕುಬಿಡುತ್ತದೆ. ಬಸವರಾಜು ಹೇಳಿದ್ದೂ ಇದನ್ನೇ, ‘ಭೂಮಾಯಿ ನಾನು ಅಪೇಕ್ಷೆ ಪಟ್ಟಿದ್ದಕ್ಕಿಂತ ನೂರು ಪಟ್ಟು ಹೆಚ್ಚಿಗೆ ಕೊಟ್ಟಿದ್ದಾಳೆ.’ ಕೊಡು, ಕೊಡು ಎಂದು ಕೇಳುವುದು ಪ್ರಕೃತಿಗೆ ಇಷ್ಟವಾಗದು. ಏನು ಕೊಡಬೇಕು ಎನ್ನುವುದು ಪ್ರಕೃತಿಗೆ ಗೊತ್ತಿರುತ್ತದೆ. ಅದನ್ನು ಕೊಟ್ಟೇ ಕೊಡುತ್ತದೆ ಎನ್ನುವುದಕ್ಕೆ ಇದಕ್ಕಿಂತ ಬೇಕೇ. ಇವರ ತೋಟದ ತುಂಬಾ ಓಡಾಡುವಾಗ ನನಗಾದ ಆನಂದವೇ ಈ ಪುಸ್ತಕ ಓದುವ ಎಲ್ಲರಿಗೂ ಆದರೆ ಆಶ್ಚರ್ಯವಿಲ್ಲ. ‘ಇಕ್ರಾ’ ಈ ಪುಸ್ತಕ ಹೊರತರುತ್ತಿರುವುದು ನನಗಂತೂ ಹಿಡಿಸಲಾರಷ್ಟು ಸಂತೋಷ ತಂದಿದೆ.
ಅ. ನಾ. ಯಲ್ಲಪ್ಪರೆಡ್ಡಿ
Reviews
There are no reviews yet.