ಚಾಮರಾಜನಗರದ ದೀನಬಂಧು ಸಂಸ್ಥೆಯ ಹಿರಿಯ ಬಾ ಮಿತ್ರರಾದ ಜಿ.ಎಸ್. ಜಯದೇವ ಅವರು 1978 ರಿಂದ ಹಿಡಿದು ಈವರೆಗೆ ತಾವು ಒಡನಾಡಿಕೊಂಡು ಬಂದ ಬಿಳಿಗಿರಿರಂಗನ ಬೆಟ್ಟದ ಸೋಲಿಗರೊಂದಿಗಿನ ನೆನಪುಗಳನ್ನು ಈ ಕೃತಿಯಲ್ಲಿ ಓದುಗರೊಡನೆ ಹಂಚಿಕೊಂಡಿದ್ದಾರೆ. ಜಯದೇವ ಇದನ್ನು ನೆನಪುಗಳು ಎಂದು ಹೇಳಿಕೊಂಡಿದ್ದರೂ, ಎಲ್ಲ ಪ್ರಬಂಧಗಳು ಸೋಲಿಗರದೇ ಅಲ್ಲದೆ ಅರಣ್ಯದ ಹಸಿರು, ಪರಿಸರ ನಾಶವಲ್ಲದೆ ಆ ಸುತ್ತಿನವರೆಲ್ಲರ ಸಮಕಾಲೀನ ಸಮಸ್ಯೆಗಳನ್ನು ಓದುಗರ ಮುಂದಿರಿಸಿರುತ್ತಾರೆ.
….ನಾಲ್ಕು ದಶಕಗಳ ಕಾಲಮಾನದಲ್ಲಿ ಸೋಲಿಗರ ಜೀವನ ಸಂಸ್ಕೃತಿ, ರೀತಿನೀತಿಗಳು ಬದಲಾದ ಬಗೆಯನ್ನು ತಟಸ್ಥನಾಗಿ ನೋಡಲು ಸಾಧ್ಯವೇ ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಂಡಿದ್ದೇನೆ. ನಿಜ ಹೇಳಬೇಕೆಂದರೆ ಇಲ್ಲ ಎನ್ನುವುದೊಂದೇ ಸರಿಯಾದ ಉತ್ತರ. ಸೋಲಿಗರ ಸಂಸ್ಕೃತಿಯನ್ನು ಅಲ್ಲಿ ಆಗುತ್ತಿರುವ ಅನೇಕ ಬದಲಾವಣೆಗಳನ್ನು ಆತಂಕದಿಂದ ವಿಷಾದದಿಂದ ವೀಕ್ಷಿಸಿದ್ದೇನೆ…’ ಎಂದಿದ್ದಾರೆ. ಈ ಮಾತು ಮತ್ತು ಇದಕ್ಕೆ ಸಂಬಂಧಿಸಿದ ವಿವರಗಳೇ ಕೃತಿಯನ್ನು ತುಂಬಿಕೊಂಡಿರುವುದರಿಂದ ಆ ನೆಲೆಯಲ್ಲಿ ಇದನ್ನು ಓದುವುದಾದರೆ ಇದು ಕೇವಲ ನೆನಪುಗಳ ರಮ್ಯತೆ, ಭಾವುಕತೆಯ ಬರಹ ಎಂದೆನಿಸುವುದಿಲ್ಲ. ಆ ಕಾರಣಕ್ಕೆ ಕೃತಿ ನೀಡುವ ವಿವರಗಳು ಈಗ ಬರುತ್ತಿರುವ ಸೃಜನಶೀಲ, ಇನ್ನಿತರ ವೈಚಾರಿಕ ಇಲ್ಲವೇ ವಿಮರ್ಶೆಯ ಚರ್ಚೆಗಳಿಗಿಂತ ಬೇರೆಯಾದ ಮಾಹಿತಿಯ ಕೃತಿ ಎಂದೆನಿಸುತ್ತದೆ.
ಇತಿಹಾಸದ ಕಾಲದಿಂದ ಆದಿವಾಸಿ ಅಥವಾ ಬುಡಕಟ್ಟು ಸಮೂಹಗಳನ್ನು ಮನುಷ್ಯರು ಎಂದು ಭಾವಿಸಿದ್ದೇ ಇಲ್ಲ. ಇವರನ್ನು ಯಾವ ನಾಗರಿಕತೆಯ ಸೋಂಕೂ ಇಲ್ಲದ ಅನಕ್ಷರಸ್ಥರು ಎಂದು ನಾಡಿನ ನಾಗರಿಕರು ಭಾವಿಸಿದ್ದುಂಟು. ಇವರನ್ನು ಕುರಿತಾದ ಮಾನವಶಾಸ್ತ್ರೀಯ ಅಧ್ಯಯನಗಳೂ ಕೂಡ ಯಥಾವಿಧಿಯಾಗಿ ಕಳೆದ ಶತಮಾನಗಳಲ್ಲಿ ಪಾಶ್ಚಾತ್ಯರಿಂದಲೇ ಆಗಿ ಅವರ ಬದುಕಿನ ಸರಳತೆ, ಆದರ್ಶಗಳು, ಅರಣ್ಯದ ನಡುವಣ ಕಷ್ಟಕಾರ್ಪಣ್ಯಗಳು ಇವೆಲ್ಲ ನಮ್ಮ ಅರಿವಿಗೆ ಬಂದರೂ, ಅವರ ಬದುಕು ಈ ಹೊತ್ತಿಗೂ ಸುಧಾರಿಸಿರುವುದಿಲ್ಲ. ಸರ್ಕಾರ ಕೆಲವು ಸುಧಾರಣೆಯ ಕ್ರಮಗಳನ್ನು ತೆಗೆದುಕೊಂಡರೂ ಅವು ಅವರ ಅಂತರಂಗ ಬಹಿರಂಗ ಸುಧಾರಣೆಯನ್ನು ತೀವ್ರಗತಿಯಲ್ಲಿ ಮಾಡಲಾಗಿಲ್ಲ. ಅದರ ಬದಲಾಗಿ ಇನ್ನಿತರೇ ಕೆಲವು ಅನಗತ್ಯ ವ್ಯಸನಗಳು ಅವರ ಜೀವನವನ್ನು ಪ್ರವೇಶಿಸಿರುತ್ತವೆ. ಹಾಗೆ ನೋಡಿಕೊಂಡರೆ ಜನಪದರನ್ನಾಗಲಿ, ಆದಿವಾಸಿಗಳನ್ನಾಗಲಿ ಯಾವುದೇ ಜಾತಿಪದ್ಧತಿ, ಧರ್ಮದೈವದ ವಿಚಾರಗಳು ಹೆಚ್ಚು ಕಾಡಿರುವುದಿಲ್ಲ. ಗ್ರಾಮಗಳಲ್ಲಿ ನಮ್ಮ ನಾಡಿನ ಮುಖ್ಯ ಧರ್ಮಗಳಾದ ಜೈನ, ವೈಷ್ಣವ, ಶೈವ ಧರ್ಮಗಳು ನಿಜವಾಗಿಯೂ ಆಚರಣೆಯಲ್ಲಿದೆಯೇ ಎಂದು ನೋಡಿದರೆ ಅವು ಗ್ರಾಮೀಣ ಇಲ್ಲವೆ ಆದಿವಾಸಿಗಳ ನಡುವೆ ತಮ್ಮ ನಿಜ ಸ್ವರೂಪದಲ್ಲಿ ಸುಳಿದಿಲ್ಲವೆಂದು ಹೇಳಬಹುದು. ಇನ್ನು ರಾಜಮಹಾರಾಜರು ಒಂದು ವೇಳೆ ಅರಣ್ಯಕ್ಕೆ ಹೋಗಿದ್ದರೆ ಅಲ್ಲಿ ಆದಿವಾಸಿಗಳನ್ನು ತಮ್ಮ ಬೇಟೆಯ ಅನುಕೂಲಕ್ಕೆ ಬಳಸಿಕೊಂಡಿರುತ್ತಾರಷ್ಟೆ.
ಇದೀಗ ಆದಿವಾಸಿಗಳನ್ನು ಉದ್ಧಾರ ಮಾಡುವ ಕೆಲಸ ಎಂದರೆ ಇವರನ್ನೆಲ್ಲ ಸಾಮೂಹಿಕವಾಗಿ ಅರಣ್ಯದಿಂದ ಒಕ್ಕಲೆಬ್ಬಿಸಿ ನಾಡಿನಂಚಿಗೆ ತಂದುಬಿಡುವ ಮಾದರಿಯ ಯೋಜನೆಗಳು ಜಾರಿಯಲ್ಲಿವೆ ಅಥವಾ ಇವರಿಂದ ಅರಣ್ಯ ಸಮೃದ್ಧಿ ಹಾಳಾಗುತ್ತಿದೆಯೆಂಬ ಅಪನಂಬಿಕೆಯಲ್ಲಿ ಇವರನ್ನು ಇರುವ ಜಾಗದಿಂದ ಅರಣ್ಯ ಪ್ರವೇಶ ಮಾಡದಂತೆ ಕಾಯ್ದೆ ತರಲಾಗುತ್ತಿದೆ. ಈ ಕುರಿತು ಆದಿವಾಸಿಗಳು ಕೇಳುವ, ಕೇಳುತ್ತಿರುವ ಮುಖ್ಯಪ್ರಶ್ನೆಯೆಂದರೆ ‘ನಾವು ಅರಣ್ಯನಾಶ ಮಾಡಿ ಅದೆಷ್ಟು ಮನೆಗಳನ್ನು ಕಟ್ಟಿಕೊಂಡಿದ್ದೇವೆ. ಶ್ರೀಮಂತರಾಗಿದ್ದೇವೆ ಎಂದು ನಾಡಜನರೇ ಹೇಳಬೇಕು’ ಎನ್ನುವುದು. ಈ ಕ್ರಮದಲ್ಲಿ ಬಿಳಿಗಿರಿರಂಗನ ಬೆಟ್ಟದ ಸೋಲಿಗರು ಮತ್ತೆಲ್ಲ ಆದಿವಾಸಿಗಳು ಮಾತನಾಡುವುದನ್ನು ಇತ್ತೀಚೆಗಷ್ಟೇ ಕಲಿತಿದ್ದಾರೆ.
ಅರಣ್ಯನಾಶಗಳ ಬಗ್ಗೆ ಉಪನ್ಯಾಸ ನೀಡುವ, ಮಾತನಾಡುವ, ಅರಣ್ಯಹಾನಿಗೆ ಆದಿವಾಸಿಗಳನ್ನೇ ದೂಷಿಸುವ ಒಂದು ಸಮೂಹ ನಗರಗಳಲ್ಲಿ ಸಿಗುತ್ತದೆ.ಆದರೆ ಕಾರಣ ಕೇತೇಗೌಡ ಅರಣ್ಯ ಸಂರಕ್ಷಣೆಯನ್ನು ಕುರಿತು ಆಡುವ ಮಾತುಗಳು ನಗರವಾಸಿ ಪ್ರಕೃತಿಸಂರಕ್ಷಕರ ಆಯಾ ಹೊತ್ತಿನ ಮಾತಿಗಿಂತ ನಿತ್ಯಸತ್ಯ ಎನ್ನುವಂತಿದೆ. ಇದನ್ನು ಜಯದೇವ ಅವರು ಕಾರನಕೇತೇಗೌಡನ ಪ್ರಬಂಧದಲ್ಲಿ ಆದಿವಾಸಿ ವ್ಯಕ್ತಿ ಇಡೀ ಅರಣ್ಯವನ್ನೇ ಕಣ್ಣೂಳಗೂ, ಅಂತರಂಗದಲ್ಲೂ ತುಂಬಿಕೊಂಡು ಮಾತನಾಡುವ ಹಾಗೆಯೇ ಇತ್ತೀಚೆಗೆ ಅರಣ್ಯಕ್ಕೆ ಎದುರಾಗಿರುವ ವಿನಾಶಕರ ಸಂಗತಿಗಳನ್ನು ಅಷ್ಟೇ ವ್ಯಥೆಯಿಂದ ವಿವರಿಸಿರುವ ಮಾತುಗಳನ್ನು ಸರ್ಕಾರ ಮತ್ತು ಸಮಾಜ ಚಿತ್ತವಿಟ್ಟು ಕೇಳಬೇಕಾಗಿದೆ.
ಕಳೆದ ದಶಕಗಳಲ್ಲಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದ ನಾಗರಿಕರನ್ನು ಕಂಡರೆ ಇವರನ್ನು ನೋಡುವುದೇ, ಮಾತನಾಡುವುದೇ ಸೋಲಿಗರಿಗೆ ಭಯದ ಸಂಗತಿಯಾಗಿಬಿಟ್ಟಿತ್ತು. ಅರಣ್ಯದಲ್ಲಿ ಸೋಲಿಗರದು ಆ ಪರಿಸರಕ್ಕೆ ಹೊಂದಿಕೊಂಡ ಬದುಕಾಗಿ, ‘ನಾಡಿಗೆ ಹೋದರೆ ಅಲ್ಲಿ ಜನಾ ಇರುವರು, ಭಯ’ ಎಂತಲೇ ಹೇಳುತ್ತಿದ್ದುದನ್ನು ಕೇಳಿದ್ದೇವೆ. ಇದೇನೇ ಇರಲಿ 1978ರಲ್ಲಿ ಜಿ.ಎಸ್.ಜಯದೇವ ಅವರು ಡಾ.ಸುದರ್ಶನ್ ಅವರೊಂದಿಗೆ ಬಿಳಿಗಿರಿರಂಗನ ಬೆಟ್ಟದಲ್ಲಿ ಸೋಲಿಗರ ಜೀವನ ಸುಧಾರಣೆಗಾಗಿ ಕೆಲಸ ಮಾಡಿದ್ದರ ಪರಿಯನ್ನು ಆ ನಲವತ್ತು ವರ್ಷಗಳಲ್ಲಿ ಅವರಿಗಾದ ಅನುಭವಗಳನ್ನು ಸದರಿಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಪ್ರಕೃತಿಯ ನಡುವೆ ಸೋಲಿಗರೋ, ಜೇನುಕುರುಬರೋ, ಮುಳ್ಳುಕುರುಬರೋ, ಎರವರೋ, ಫಣಿಯರೋ ಗೆಡ್ಡೆಗೆಣಸು ತಿಂದುಕೊಂಡು ಹೆಚ್ಚಿನದೇನನ್ನೂ ಬಯಸದೆ, ಧರ್ಮದೈವಗಳ ಗೊಡವೆ ಇಲ್ಲದೆ ನಿರುಮ್ಮಳ ಜೀವನವನ್ನು ನಡೆಸುತ್ತಿದ್ದಾರೆಂದು ನಾವು ತಿಳಿಯಲಾಗದು.ಇದೊಂದು ಸಾರಾಸಗಟಾದ ಅಭಿಪ್ರಾಯ. ಜಯದೇವ ಅವರೇ ಹೇಳುವಂತೆ ಆದಿವಾಸಿಗಳನ್ನು ಎಲ್ಲಕ್ಕಿಂತ ಮೊದಲು ಕಾಡುವುದು ಹಸಿವು ಮತ್ತು ರೋಗರುಜಿನಗಳು, 1950-60ರ ಸುಮಾರಿಗೆ ಗ್ರಾಮಭಾಗಗಳಲ್ಲಿ ಮಕ್ಕಳನ್ನು ತುರುಗಜ್ಜಿ ಎಂಬ ಕೈಬೆರಳು ಸಂದಿನ ರೋಗ ಕಾಡಿದರೆ ಅದಕ್ಕಿಂತ ತೀವ್ರ ಪ್ರಮಾಣದಲ್ಲಿ ಕಾಡಿನ ಜನರನ್ನು ಹೆಗ್ಗಜ್ಜಿ ಎಂಬ ಕೀವು-ಗುಳ್ಳೆಯ ಕಷ್ಟ ಕಾಡುತ್ತಿತ್ತು.
ಅನಾದಿಕಾಲದಿಂದಲೂ ಬುಡಕಟ್ಟು ಸಮೂಹಗಳು ತಂತಮ್ಮ ಗುಂಪುಗಳ ನಡುವೆಯೇ ವಿವಾಹ ಸಂಬಂಧ ಮಾಡಿಕೊಂಡು ಬಂದಿರುವುದರಿಂದ ಅವರನ್ನು ಕಾಡುವ ವಿಚಿತ್ರರೋಗ ಸಿಕಲ್ ಸೆಲ್ ಎಂಬುದನ್ನು ಜಯದೇವ ಅವರೇ ಹೇಳುತ್ತಾರೆ. ಇದರೊಂದಿಗೆ ಸೋಲಿಗರನ್ನು ಎಲ್ಲ ಕಾಲದಲ್ಲಿಯೂ ಬರಿದಾಗಿ ಇಟ್ಟಿದ್ದೆಂದರೆ ಆಹಾರ ಮತ್ತು ವಸ್ತ್ರ ಸಮಸ್ಯೆ. ಸೋಲಿಗರ ಜಲ್ಲೆ ಸಿದ್ದಮ್ಮ ತನಗೆ ಉಡಲು ಬಟ್ಟೆ ಇಲ್ಲದೆ ಬಾಳೆಎಲೆಯಲ್ಲಿ ಮೈ ಮುಚ್ಚಿಕೊಂಡಿರುತ್ತಿದ್ದುದನ್ನೂ, ಮೇಲಿಂದ ಮೇಲೆ ಮಕ್ಕಳನ್ನು ಹೆತ್ತು ಸಾಕಲಾಗದೆ ತಾನೇ ಕೈಯ್ಯಾರೆ ಕೊಂದದ್ದನ್ನು ಬೇರೊಂದು ಕಡೆ ತನ್ನ ಜೀವನಚರಿತ್ರೆಯಲ್ಲಿ ಹೇಳಿಕೊಂಡಿದ್ದಾಳೆ. ಈ ಹೊತ್ತಿಗೂ ಅವರ ಜೀವನಕ್ರಮ ಕಠಿಣ ಮಾರ್ಗದ್ದೇ ಆಗಿರುತ್ತದೆ. ಆನೆ ಎದುರಾದರೆ ಮರಏರಿ ಕೂತುಬಿಡುವೆ ಎನ್ನುತ್ತಾಳೆ ಇದೀಗ ಅಂಗನವಾಡಿಯಲ್ಲಿ ಕೆಲಸ ಮಾಡುವ ಕೇತಮ್ಮ ಪ್ರತಿ ಘಳಿಗೆಯಲ್ಲೂ ಪ್ರಕೃತಿಯ ಅವಘಡಗಳನ್ನು ಎದುರಿಸಿಯೇ ಬದುಕಬೇಕಾದ ಸವಾಲು ಆದಿವಾಸಿಗಳದು.
ಬುಡಕಟ್ಟು ಸಮೂಹದ ಒಂದು ಅನುಕೂಲಕರ ಜೀವನಕ್ರಮವೆಂದರೆ ಅವರ ಸಾಂಘಿಕತೆ, ಸಾಮೂಹಿಕ ಜೀವನತತ್ವವೇ ಅವರ ಬದುಕನ್ನು ಹೇಗಾದರೂ ಮುನ್ನಡೆಸಿರುತ್ತದೆ. ಈ ಹಿನ್ನಲೆಯಲ್ಲೇ ಸಮಾಜಶಾಸ್ತ್ರಜ್ಞರು ಬುಡಕಟ್ಟುಜೀವನದಲ್ಲಿ ಭಿಕ್ಷಾವೃತ್ತಿ ಮತ್ತು ಕಳ್ಳತನವಿಲ್ಲ ಎಂದಿದ್ದಾರೆ. ಕಳ್ಳತನಕ್ಕೆ ಅವರಲ್ಲಿ ಆಸ್ತಿ, ಐಶ್ವರದ ಪರಿಕಲ್ಪನೆಯೇ ಇಲ್ಲವಲ್ಲ!
ಇತ್ತೀಚೆಗೆ ಸರ್ಕಾರವು ಬುಡಕಟ್ಟು ಸಮೂಹಗಳಿಗೆ ಆಹಾರ ಭದ್ರತೆಯನ್ನು ತಕ್ಕಮಟ್ಟಿಗೆ ಒದಗಿಸಿಕೊಟ್ಟಿದೆ. ಬಿಳಿಗಿರಿರಂಗನ ಬೆಟ್ಟದ ಹಲವು ಸೋಲಿಗ ಸಮೂಹಕ್ಕೆ ಅಲ್ಪಸ್ವಲ್ಪ ಭೂಮಿಯ ಅನುಕೂಲವನ್ನು ಒದಗಿಸಿಕೊಟ್ಟಿದ್ದು, ಅದರಲ್ಲಿ ಸೋಲಿಗರು ಕಾಫಿ ಬೆಳೆಯುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸವೂ ತಕ್ಕಮಟ್ಟಿಗೆ ಪ್ರಗತಿಯಲ್ಲಿದೆ. ಅದಕ್ಕೆ ಡಾ.ಸುದರ್ಶನ್ ಮತ್ತು ಜಿ.ಎಸ್. ಜಯದೇವ ಅವರು ಸ್ಥಾಪಿಸಿದ ವಿವೇಕಾನಂದ ಗಿರಿಜನ ಕೇಂದ್ರದ ಆಶ್ರಮಶಾಲೆಯೇ ಕಾರಣ.
ಪಾಶ್ಚಾತ್ಯ ಮಿಷನರಿಗಳು ಮತ್ತು ಅಧಿಕಾರಿಗಳಿಂದ ಆರಂಭಗೊಂಡ ಬುಡಕಟ್ಟು ಅಧ್ಯಯನ ಮತ್ತು ಸೇವಾಯೋಜನೆಗಳು ಈ ಶತಮಾನದ ಆರಂಭಕ್ಕೆ ಭಾರತೀಯರಿಂದಲೂ ಆರಂಭವಾಯಿತು. ಅನೇಕ ವೈದ್ಯರು, ತಜ್ಞರು, ಬುಡಕಟ್ಟು, ಸಮೂಹ ಇರುವಲ್ಲಿಗೇ ಹೋದರು. ಇದೆಂಥ ಕ್ಲಿಷ್ಟ ಪರಿಸ್ಥಿತಿ ಎಂದರೆ ನಾಡಿನಿಂದ ಹೋದ ವೈದ್ಯರೂ ಕೂಡ ಆದಿವಾಸಿಗಳು ಎದುರಿಸುತ್ತಿದ್ದ ಸಮಸ್ಯೆಗಳನ್ನೇ ಎದುರುಗೊಳ್ಳಬೇಕಾಯಿತು. ಬಿಳಿಗಿರಿರಂಗನ ಬೆಟ್ಟಗುಡ್ಡದವರ ಸಮಸ್ಯೆಗಳನ್ನು ಕುರಿತಾಗಿ ಈ ಪ್ರಬಂಧಗಳಲ್ಲಿ ಜಯದೇವ ಏನನ್ನು ವಿವರಿಸುತ್ತಾರೋ ಮಹಾರಾಷ್ಟ್ರದ ಗಡಚಿರೋಲಿಯ ಹೇಮಲ ಕಸಾದಲ್ಲಿ ಗೋಂಡ್ ಮತ್ತು ಮರಿಯಾ ಬುಡಕಟ್ಟು ಜನಗಳ ನಡುವೆ ವೈದ್ಯರಾಗಿ ಈಗಲೂ ಸೇವೆ ಸಲ್ಲಿಸುತ್ತಿರುವ ಬಾಬಾ ಆಮೈಯವರ ಪುತ್ರ ಪ್ರಕಾಶ್ ಆಮೈ ದಂಪತಿಗಳೂ ಕೂಡ ಅದನ್ನೇ ಹೇಳುತ್ತಾರೆ. ಮಾನವೀಯ ಚಿಂತನೆಗಳು ಅಂತರಂಗವನ್ನು ತುಂಬಿಕೊಂಡಿರುವಲ್ಲಿ ಬಹಿರಂಗ ಸಮಸ್ಯೆಗಳು ದೊಡ್ಡದಾಗಿ ಕಾಣಿಸುವುದಿಲ್ಲವೆಂಬುದನ್ನು ಸಮಾಜಸೇವಕರೆಲ್ಲ ಅರಿತೇ ಇರುತ್ತಾರೆ.ಈ ನಿಟ್ಟಿನಲ್ಲಿ ಜಯದೇವ ಅವರು ನಲವತ್ತು ವರ್ಷಗಳನ್ನು ಬಿಳಿಗಿರಿರಂಗನ ಬೆಟ್ಟದ ಸೋಲಿಗರೊಡನೆ ಮತ್ತು ಚಾಮರಾಜನಗರದ ಅನಾಥ ಮಕ್ಕಳ ದೀನಬಂಧು ಸಂಸ್ಥೆಯೊಡನೆ. ಇಷ್ಟಲ್ಲದೆ ಮೈಸೂರಿನ ಶಕ್ತಿಧಾಮದೊಡನೆ ಕಳೆದಿದ್ದಾರೆ. ಅವರೆಲ್ಲರ ಸಮಸ್ಯೆ, ಸಂಕಷ್ಟ, ಸಂಪ್ರದಾಯಾಚರಣೆ, ಸಂತೋಷದ ಗಳಿಗೆಗಳು ಎಲ್ಲಕ್ಕಿಂತ ಹೆಚ್ಚಾಗಿ ಅವರ ಸರಳತೆ, ಮುಗ್ಧತೆಯ ವಿವರಗಳೆಲ್ಲ ಈ ಪುಸ್ತಕದಲ್ಲಿ ದಾಖಲಾಗಿರುತ್ತವೆ.
ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಮೊದಲ ಅಕ್ಷರವಂತ, ವಿದ್ಯಾವಂತ ಅದೇ ಸೋಲಿಗರ ಸಮೂಹದಿಂದ ಬಂದ ಡಾ.ಮಾದೇಗೌಡ. 1980-81ರಲ್ಲಿ ಆತನ ವಿದ್ಯಾಭ್ಯಾಸ ನಡೆದದ್ದು ಆಗತಾನೇ ತಲೆಎತ್ತಿದ್ದ ವಿವೇಕಾನಂದ ಗಿರಿಜನ ಕೇಂದ್ರದ ಒಂದು ಹುಲ್ಲಿನ ಮನೆಯ ಶಾಲೆಯಲ್ಲಿ. ಅಲ್ಲಿ ಅಕ್ಷರಭ್ಯಾಸ ಮಾಡಿದ ತನ್ನ ಸಹಪಾಠಿಗಳಿಗೆ ಅಡುಗೆ ಮಾಡುತ್ತಿದ್ದ ಮಾದೇಗೌಡ, ತದನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ಸೋಲಿಗರ ಜೀವನ ಪದ್ಧತಿ ಕುರಿತು ಪಿಎಚ್.ಡಿ ಮಾಡಿದರು. ನ್ಯೂಯಾರ್ಕ್ ಮತ್ತು ಫ್ಲಾರಿಡಾದಲ್ಲಿ ಬುಡಕಟ್ಟು ಜೀವನಕ್ರಮವನ್ನು ಕುರಿತು ನಡೆದ ವಿಚಾರಸಂಕಿರಣದಲ್ಲಿ ಪ್ರಬಂಧ ಮಂಡಿಸಿರುತ್ತಾರೆ. ಸೋಲಿಗರ ಪಾರಂಪರಿಕ ಜ್ಞಾನ, ಕಾಡಿನ ಬೆಂಕಿ ಕುರಿತಾಗಿ ಏಕಾನಮಿಕ್ ಅಂಡ್ ಪೊಲಿಟಿಕಲ್ ವೀಕ್‌ಲಿಯಲ್ಲಿ ಪ್ರಕಟವಾಗಿರುವುದು ವಿಶೇಷ, ಮಾದೇಗೌಡರು ಸೋಲಿಗರನ್ನು ಕುರಿತಾಗಿ ವಿಚಾರಸಂಕಿರಣಗಳಲ್ಲಿ ವಿಚಾರ ಮಂಡಿಸಿದರೆ, ಅದು ಓದುಗರಿಗೆ ಸಂಶೋಧನೆಯಾಗುತ್ತದೆ. ಆದರೆ ಮಾದೇಗೌಡರಿಗೆ ಅದೇ ಜೀವನಕ್ರಮ ಎನ್ನುತ್ತಾರೆ ಜಯದೇವ. ಡಾ.ಮಾದೇಗೌಡರು ಅಷ್ಟೆಲ್ಲಾ ವಿದ್ಯಾಭ್ಯಾಸ ಮಾಡಿ ಇದೀಗ ಹೊರಜಗತ್ತಿಗೆ ಬಂದಿದ್ದರೂ ತಾವು ಹುಟ್ಟಿ ಬೆಳೆದ ಬಿಳಿಗಿರಿರಂಗನಬೆಟ್ಟದ ಮೂಲಸ್ಥಳವನ್ನು ಬಿಟ್ಟಿಲ್ಲ. ಅದರ ಸಂಬಂಧವನ್ನು ನಿರಂತರವಾಗಿರಿಸಿಕೊಂಡು ಅಲ್ಲಿಯ ಬಂಧುಗಳ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದಾರೆ. ಇದು ಗ್ರಾಮ ಮತ್ತು ಗಿರಿಜನಸಮೂಹದಿಂದ ಬಂದವರೆಲ್ಲರೂ ಪಾಲಿಸಬೇಕಾದ ದೊಡ್ಡ ಆದರ್ಶ.
‘ಮದುವೆ, ಬ್ರಹ್ಮಚರ್ಯ ಮತ್ತು ಸೋಲಿಗರು’ ಅಧ್ಯಾಯದಲ್ಲಿ ಜಯದೇವ ಹೇಳುತ್ತಾರೆ: ‘ಸೋಲಿಗರಲ್ಲಿ ಮದುವೆಯಾಗದೆ ಹಾಗೇ ಉಳಿದ ಯಾರನ್ನೂ ನಾನು ನೋಡಿಲ್ಲ. ತ್ಯಾಗ ಮಾಡಲು ಇವರ ಬಳಿ ಇರುವುದಾದರೂ ಏನು? ಸ್ವಾರ್ಥಕ್ಕೆ ಕಾರಣವೇ ಇಲ್ಲ. ಸೋಲಿಗರಲ್ಲಿ ಕಾವಿ ಧರಿಸಿ ಸನ್ಯಾಸಿಯಾದ ಯಾರೊಬ್ಬರನ್ನೂ ಈವರೆಗೆ ನಾನು ನೋಡಿಲ್ಲ. ಅವರಿಗೆ ಸನ್ಯಾಸಿಗಳನ್ನು ಕಂಡರೆ ಅಂಥ ಆರಾಧನಾಭಾವವೇನೂ ಇಲ್ಲ…’ ಇದು ನಿಜ. ಮೌನ ಮತ್ತು ಆಧ್ಯಾತ್ಮವೆ ಆವರಿಸಿರುವ ದಟ್ಟ ಅರಣ್ಯದ ನಡುವೆ ಇರುವ ಆದಿವಾಸಿಗಳಿಗೆ ನಾಡನ್ನು ಆಳಿದ, ಈಗಲೂ ಆಳುತ್ತಿರುವ ಹುಸಿ ಧರ್ಮ, ದೈವ, ಅಧ್ಯಾತ್ಮ. ಇದನ್ನೇ ಅನುಸರಿಸಿಕೊಂಡಿರುವ ರಾಜಕಾರಣ, ಅದರಿಂದ ಶತಮಾನಗಳ ಉದ್ದಕ್ಕೂ ಉಂಟಾದ ಯುದ್ಧ, ಹಿಂಸೆ, ಕವಿದ ಸಂಕಟ,ಇದೇನೂ ಆರಣ್ಯದಲ್ಲಿ ಕಾಣುವುದಿಲ್ಲವಲ್ಲ. ಹೀಗಾಗಿ ಅಧ್ಯಾತ್ಮ ಮತ್ತು ಸನ್ಯಾಸದ ಹೆಸರು ಹೇಳಿಕೊಂಡು ಹೋದರೆ ಏನಾಗಬಹುದೆಂಬುದಕ್ಕೆ ಲೇಖಕರು ಇದೇ ಪುಸ್ತಕದಲ್ಲಿ ಕಾಣಿಸಿರುವ ‘ರಕ್ತಚಂದನ ತಪಸ್ವಿ’ ಪ್ರಬಂಧವೇ ಸಾಕ್ಷಿ. ಆದರೆ ಅದರ ವಿರುದ್ಧ ದಿಕ್ಕಿನಲ್ಲಿ, ‘ಈ ಜಗತ್ತಿನ ಯುದ್ಧ ಹಿಂಸೆಗಳಿಗೆ ನಾನು ಸಾಕ್ಷಿಯಾಗಿದ್ದೇನೆ, ನಾನು ಅವುಗಳಿಂದ ಹೊರಗೆ ನಿಂತಿದ್ದೇನೆ’ ಎಂಬ ಹೇಳಿಕೆಯೊಂದಿಗೆ ಆಶ್ರಮ ಮಾಡಿಕೊಂಡು ಅರಣ್ಯಮೌನ ಮತ್ತು ಅಧ್ಯಾತ್ಮಕ್ಕೆ ಶರಣಾಗಿದ್ದ ಸ್ವಾಮಿ ನಿರ್ಮಲಾನಂದರನ್ನು ಕುರಿತ ಪ್ರಬಂಧವೂ ಇದೇ ಕೃತಿಯಲ್ಲಿದೆ.
ಈ ಪುಸ್ತಕದಲ್ಲಿ ನನಗೆ ಪ್ರಿಯವೆನಿಸಿದ್ದು ಕಾರನಕೇತೇಗೌಡನ, ‘ಅಲ್ಲ ಸ್ವಾಮಿ, ಸಿಲವಾರದ ಮರಗಳನ್ನ (ಸಿಲ್ವರ್ ಓಕ್) ತಂದುನೆಟ್ಟು ಕಾಡು ಚೆನ್ನಾಗಿದೆ ಅಂತಾರಲ್ಲ, ಈ ಪರದೇಸಿ ಮರಗಳು ಹಕ್ಕಿಗೆ ಹಣ್ಣು ಕೊಟ್ಟಾವ? ಮಿಕಗಳಿಗೆ ಸೊಪ್ಪು ಕೊಟ್ಟಾವ? ಒಂದು ಅಳಿಲು ಮೂಸಾದಿಲ್ಲ ಇವನ್ನ…’ ಎಂಬ ಮಾತು. ಇದಕ್ಕೆ ಆನುಷಂಗಿಕವಾಗಿ ಜಯದೇವ ಆಡುವ ಮಾತುಗಳೆಂದರೆ, ‘ಎಲ್ಲವನ್ನೂ ನಿರ್ಮಾಣ ಮಾಡುವ ಗೀಳಿನಿಂದ ಬಳಲುವ ಆಧುನಿಕ ಮಾನವನಿಗೆ ತಾನು ಕಾಡನ್ನೂ ನಿರ್ಮಾಣ ಮಾಡಬಲ್ಲೆ ಎಂಬ ಹುಂಬತನವಿದೆ’ ಎನ್ನುವುದು. ನಿಜ, ಮನುಷ್ಯ ಈವರೆಗೆ ಅಭಿವೃದ್ಧಿಯ ಹಠದಲ್ಲಿ ನಿರ್ಮಾಣ ಮಾಡಿಕೊಂಡು ಬಂದಿರುವುದು ಕಾಂಕ್ರೀಟ್ ಕಾಡುಗಳನ್ನು ಮಾತ್ರ ಭಾರತವು ತನ್ನ ಅರಣ್ಯ ಸಮೃದ್ಧಿಯನ್ನು ಕಾಪಾಡಿಕೊಂಡು ಬಂದಿಲ್ಲ.
ಈ ನೆನಪಿನ ಸಂಗತಿಗಳ ಬರೆಹ ಈ ಹೊತ್ತಿನ ಇತರೇ ಲಘು ಪ್ರಬಂಧಸಂಕಲನಗಳಂತಿರದೆ, ತೀರ ಅಲಕ್ಷಿತ ಜನಸಮೂಹವೆನಿಸುವ ಆದಿವಾಸಿ ಸಮಸ್ಯೆಗಳತ್ತ ಗಮನ ಹರಿಸುವುದಕ್ಕೆ ಅವಕಾಶ ಮಾಡಿಕೊಡುವಂತಿದೆ. ಜಯದೇವ ಅವರು 1973ರ ಸುಮಾರಿನಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಜೀವಶಾಸ್ತ್ರ ವಿಷಯಸಂಬಂಧ ಎಂ.ಎಸ್ಸಿ. ಸ್ನಾತಕೋತ್ತರ ಪದವಿ ಪಡೆದು, ತದನಂತರ ಚಾಮರಾಜನಗರದ ಜೆ.ಎಸ್.ಎಸ್. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು. ಆಮೇಲೆ ಅದಕ್ಕೆ ರಾಜೀನಾಮೆ ಕೊಟ್ಟು ಅದೇ ಚಾಮರಾಜನಗರದಲ್ಲಿ ನಲವತ್ತು ವರ್ಷಗಳಿಂದಲೂ ಶಾಲಾ ಮಕ್ಕಳಿಗೆ ಕನ್ನಡ ಕಲಿಸುತ್ತ, ಅವರಿಗೆ ವಿಜ್ಞಾನ ವಿಷಯದಲ್ಲಿ ಆಸಕ್ತಿ ಬೆಳೆಸುತ್ತ, ಅನಾಥ ಮಕ್ಕಳ ಪುನರ್ವಸತಿಯತ್ತ ಕೆಲಸ ಮಾಡುತ್ತಲೇ ಬಿಳಿಗಿರಿರಂಗನಬೆಟ್ಟದಲ್ಲಿ ಬುಡಕಟ್ಟು ಸಮೂಹಗಳೊಂದಿಗೆ ಈ ಹೊತ್ತಿಗೂ ಒಡನಾಟವಿರಿಸಿಕೊಂಡಿದ್ದಾರೆ. ಈ ಬಗೆಯ ಸಾಹಚರ್ಯದ ನೆನಪುಗಳ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದೇನೆಂದು ನಾನು ಅಂದುಕೊಂಡಿಲ್ಲ. ಆ ಶಕ್ತಿ ನನಗಿಲ್ಲವೆಂದು ತಿಳಿದಿದ್ದೇನೆ. ಜಯದೇವ ಅವರ ಸ್ನೇಹವಲಯದಲ್ಲಿ ನಾನೂ ಇದ್ದೇನೆಂಬ ಕಾರಣದಿಂದ ಪುಸ್ತಕ ಕುರಿತು ಇದಿಷ್ಟು ಮಾತುಗಳನ್ನು ಬರೆದಿದ್ದೇನೆ. ಜಯದೇವ ಅವರಿಗೆ ಮತ್ತು ಅವರ ಸಮಾಜಸೇವೆಯ ಕೈಂಕರ್ಯದಲ್ಲಿ ಭಾಗವಹಿಸಿರುವ ದೀನಬಂಧು ಸಂಸ್ಥೆಯ ಎಲ್ಲರಿಗೂ ನನ್ನ ನಮಸ್ಕಾರಗಳು. ಈ ಕೃತಿಯನ್ನು ಎಲ್ಲರೂ ಆಸಕ್ತಿಯಿಂದ ಓದುವಂತಾಗಲಿ ಎಂದು ಬಯಸುತ್ತೇನೆ.
- ಕೃಷ್ಣಮೂರ್ತಿ ಹನೂರು
ಸೋಲಿಗ ಚಿತ್ರಗಳು ಪುಸ್ತಕದ ಖರೀದಿಗೆ ಇಲ್ಲಿ ಕ್ಲಿಕ್ ಮಾಡಿ