ಆನೆಗಳು ಜೀವ ವಿಕಾಸದಲ್ಲಿ ವಿಕಾಸಗೊಂಡು, ಎರಡುವರೆ ಲಕ್ಷ ವರ್ಷ ಹಿಂದಿನಿಂದಲೂ ಭಾರತದ ಉಪಖಂಡದಲ್ಲಿ ಬದುಕುತ್ತಿವೆ. ಈ ಬೃಹತ್ ಜೀವಿಗಳು ಬದಲಾಗುತ್ತಿರುವ ಪರಿಸರಕ್ಕೆ, ಸನ್ನಿವೇಶಕ್ಕೆ, ವಾತಾವರಣಕ್ಕೆ ತಕ್ಕಂತೆ ತಮ್ಮ ಜೀವನವನ್ನು ಹೊಂದಾಣಿಕೆ ಮಾಡಿಕೊಂಡು ಬದುಕುವಂತಹ ಸೂಕ್ಷ್ಮ ಬುದ್ಧಿಯುಳ್ಳ ಜೀವಿಗಳಾಗಿವೆ. ಅನಾದಿ ಕಾಲದಿಂದಲೂ ಭಾರತದಲ್ಲಿ ಕಾಡಾನೆಗಳನ್ನು ಹಿಡಿದು ಪಳಗಿಸುತ್ತಿದ್ದರು.‌ ರಾಜಮಹಾರಾಜರ ಸೈನ್ಯದಲ್ಲಿ ಇರುತ್ತಿದ್ದ ಸಾಕಾನೆಗಳ ಗುಂಪು, ಅನೇಕ ಯುದ್ದಗಳಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಇತಿಹಾಸದಲ್ಲಿ ನಾವು ತಿಳಿದಿದ್ದೇವೆ. 

ನಮ್ಮ ನಾಡಿನ ಹಲವು ಪ್ರಸಿದ್ದ ಪುರಾತನ ದೇವಾಲಯದ ಗೋಡೆಗಳ ಮೇಲೆ ಸಾಲು ಸಾಲು ಆನೆಗಳ ಕೆತ್ತನೆಗಳನ್ನು ಕಾಣಬಹುದು. ಜಗತ್‌ ಪ್ರಸಿದ್ಧ  ಮೈಸೂರು ದಸರದ  ಆನೆ ಅಂಬಾರಿ ನಮ್ಮ ಸಾಂಸ್ಕೃತಿಕ ಸಂಕೇತ. ನಾಡಿನ ಹಲವು ದೇವಾಲಯಗಳಲ್ಲಿ ಇರುವ ಸಾಕಾನೆಗಳು ಕೂಡ ಅಲ್ಲಿನ  ಆಕರ್ಷಣೆಯಾಗಿದೆ. 

ಆನೆಗಳ ಸಂರಕ್ಷಣೆಗಾಗಿಯೇ 1992 ರಲ್ಲಿ ಭಾರತ ಸರ್ಕಾರವು  ಆನೆ ಯೋಜನೆ ಯನ್ನು ಪ್ರಾರಂಭಿಸಿತು. ಆನೆ ಯೋಜನೆಯಿಂದ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ಇಂದು ದೇಶದಲ್ಲಿ ಆನೆಗಳು ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಅತಿ ಹೆಚ್ಚು ಆನೆಗಳು ಇರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಇತ್ತೀಚಿನ ಆನೆ ಗಣತಿಯ ಪ್ರಕಾರ ಕರ್ನಾಟಕದಲ್ಲಿ 6395 ಆನೆಗಳಿವೆ ಎಂದು ತಿಳಿದು ಬಂದಿದೆ.

ಬಂಡಿಪುರ, ನಾಗರಹೊಳೆ ಅಭಯಾರಣ್ಯ, ಮಲೆನಾಡು ಪ್ರದೇಶ, ಚಿಕ್ಕಮಗಳೂರು ಹಾಗೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ , ಕಬಿನಿ ಹಿನ್ನೀರು, ಮಲೆ ಮಾದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟದ ಕಾಡುಗಳಲ್ಲಿ ಕಾಡಾನೆಗಳು ಗುಂಪು ಗುಂಪಾಗಿ ಕಾಣಸಿಗುತ್ತವೆ. 

ಕಾಡಿನಲ್ಲಿ ಸಿಗುವ ಹುಲ್ಲು, ಹಲವು ವಿವಿಧ ಮರದ ಎಲೆಗಳು, ಬಿದಿರು, ತರಾವರಿ ಮರಗಳ ತೊಗಟೆಗಳೇ ಆನೆಗಳ ಮುಖ್ಯ ಆಹಾರ. ಒಂದು ಆನೆಗೆ  ದಿನಕ್ಕೆ 200 ರಿಂದ 300 ಕೇಜಿ ಆಹಾರ ಬೇಕಾಗುತ್ತದೆ. ಕಾಡಿನ ಒಳಗೇ ಈ ಪ್ರಮಾಣದಲ್ಲಿ ಮೇವು  ನೀರು ಯಥೇಚ್ಛವಾಗಿ ಸದಾ ಸಿಕ್ಕರೆ, ಆನೆಗಳು  ನಾಡಿನ ಕಡೆ ಬರುವುದು ತೀರಾ ಕಡಿಮೆ. ಆದರೆ ಬೇಸಿಗೆಯಲ್ಲಿ ಉಂಟಾಗುವ ಆಹಾರದ ಅಭಾವ ಮತ್ತು ನೀರಿನ ಕೊರತೆಯಿಂದ ಎಲ್ಲಿ ಆಹಾರ ಸಿಗುತ್ತದೋ? ಎಲ್ಲಿ ನೀರು ಸಿಗುತ್ತದೋ? ಅಲ್ಲಲ್ಲಿಗೆ ಆಹಾರ ವನ್ನು ಹುಡುಕುತ್ತಾ, ಕಾಡಾನೆಗಳು ವಲಸೆ ಹೋಗುತ್ತವೆ.  

ಹೀಗೆ ಅನಾದಿ ಕಾಲದಿಂದ ಕಾಡಾನೆಗಳು  ವಲಸೆ ಹೋಗುವ ಬಳಸುತ್ತಿದ್ದ ದಾರಿಗಳೇ ʼಆನೆ ಪಥಗಳುʼ.  ಸಾಮಾನ್ಯವಾಗಿ ಕಾಡಾನೆಗಳು ಒಂದು ಕಡೆ ಹೆಚ್ಚು ದಿನ ಉಳಿಯದೇ,  ಸದಾ  ಈ ಆನೆ ಪಥಗಳಲ್ಲಿ ಸಂಚರಿಸುತ್ತಾ, ಆಹಾರಕ್ಕಾಗಿ ನಮ್ಮ ನೆರೆ ರಾಜ್ಯಗಳಾದ ತಮಿಳುನಾಡು, ಕೇರಳಕ್ಕೂ ವಲಸೆ ಹೋಗುತ್ತವೆ.

ಆದರೆ ಈಗ ಹೆಚ್ಚುತ್ತಿರುವ ಜನವಸತಿ ಪ್ರದೇಶ, ಅತಿಯಾಗಿ ಬೆಳೆಯುತ್ತಿರುವ ಜನಸಂಖ್ಯೆ ಪರಿಣಾಮದಿಂದ ಭೂಮಿಯ ಬಳಕೆಯಲ್ಲಿನ ಬದಲಾವಣೆ, ಆವಾಸ ನಷ್ಟ,  ಉಂಟಾಗುತ್ತಿವೆ. ಇವೆಲ್ಲವೂ ಕಾಡಾನೆಗಳ ಸರಾಗ ಓಡಾಟಕ್ಕೆ ಎಂದೆಂದೂ ಇಲ್ಲದ ಒತ್ತಡಗಳನ್ನು ಉಂಟುಮಾಡುತ್ತಿವೆ.

ಕಾಡಿನಿಂದ ಹೊರಬಂದ ಆನೆಗಳು ಆನೆ ಪಥ ಗಳಲ್ಲಿ ಸಂಚರಿಸುವಾಗ ಸಹಜವಾಗಿಯೇ ಜನವಸತಿ ಪ್ರದೇಶಗಳಲ್ಲಿನ ಹೊಲಗಳಲ್ಲಿ ರೈತರು ಬೆಳೆದಿ ಬೆಳೆಗಳನ್ನು ತಿಂದು, ತುಳಿದು, ನಾಶ ಮಾಡಿ ಸಂಚರಿಸುತ್ತವೆ. ಆರು ತಿಂಗಳು ಕಷ್ಟಪಟ್ಟು ದುಡಿದು ಬೆಳೆದ ರೈತರ ಬೆಳೆಗಳನ್ನು ಒಂದೇ ದಿನ ನಾಶ ಮಾಡುವ ಆನೆಗಳ ಮೇಲೆ ರೈತರು ಸಹಜವಾಗಿಯೇ ಕೋಪಗೊಳ್ಳುತ್ತಾರೆ.  ಆನೆ ಮಾನವ ಸಂಘರ್ಷ ಶುರುವಾಗುತ್ತದೆ.  ಅದರಲ್ಲೂ ಕೆಲವು ಆನೆಗಳು , ರೈತರ ಹೊಲಗಳಲ್ಲಿ ಒಂದೇ ಕಡೆ ಸಿಗುವ ಪೌಷ್ಟಿಕ ಆಹಾರವನ್ನು ಇಷ್ಟಪಟ್ಟು ಪದೇಪದೇ ರೈತರ ಹೊಲಗಳಿಗೆ ದಾಳಿ ಮಾಡುತ್ತವೆ. ಭಾರತದಲ್ಲಿ ಮಾತ್ರವಲ್ಲದೇ ಆಫ್ರಿಕಾ ಮೊದಲಾದ ಇತರೆ ಪ್ರದೇಶಗಳಲ್ಲಿಯೂ ಆನೆ-ಮಾನವರ ಸಂಘರ್ಷ ಕಾಣಸಿಗುತ್ತದೆ.

Elephants are normally very shy and when tourists go inside the forests in jeeps, they get really upset and sometimes charge at the vehicles

ತುಂಡು ತುಂಡಾದ ಆನೆಗಳ ಆವಾಸಗಳಲ್ಲಿ, ಮೇವು ನೀರು ಇಲ್ಲದೆ ಹಸಿದು ಜನವಸತಿಗೆ ಬರುವ ಆನೆಗಳ ದಾಳಿಗೆ ತುತ್ತಾಗಿ ,ಕರ್ನಾಟಕ ಒಂದರಲ್ಲೇ ಪ್ರತಿ ವರ್ಷ ಸರಾಸರಿ 25 ರಿಂದ 30 ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. 

 ಹಾಗೆಯೇ ಕರ್ನಾಟಕದಲ್ಲಿ ವಿವಿಧ ಕಾರಣಗಳಿಂದ 2021 ರಿಂದ 2023ರ ವರೆಗೆ 31 ಆನೆಗಳು ಸತ್ತಿವೆ.  2024 ರಲ್ಲಿಯೇ ಒಟ್ಟು 19 ಆನೆಗಳು ಸತ್ತಿವೆ. ಈ  ಆನೆಗಳು ಬಹುತೇಕ, ರೈತರ ಹೊಲಗಳಲ್ಲಿ ಹಾಕಿರುವ ತಂತಿಬೇಲಿಯ ಕರೆಂಟಿಗೆ ಸಿಲುಕಿ,  ರಸ್ತೆ ಅಪಘಾತ, ರೈಲು ಅಪಘಾತ, ಅಥವಾ ಕಳ್ಳ ಬೇಟೆಗಾರರ ಉರುಳುಗಳಿಗೆ ಸಿಕ್ಕಿ ಸತ್ತಂಥವು.  ಕೆಲವು ಆನೆಗಳು ಗುಂಡೇಟು ತಿಂದು ಜೀವಬಿಟ್ಟಿವೆ.  ಬೇಸಿಗೆ ಕಾಲದಲ್ಲಿ ತಿನ್ನಲು ಮೇವಿಲ್ಲದೆ, ಕುಡಿಯಲು ನೀರಿಲ್ಲದೆ, ಇತರೆ  ನೈಸರ್ಗಿಕ ಕಾರಣದಿಂದ ಆನೆಗಳು ಸಾಯುವುದು ಬೇರೆ. 

ಕರ್ನಾಟಕ ಸರ್ಕಾರ ಆನೆ ಮತ್ತು ಮಾನವರ ನಡುವಿನ ತಿಕ್ಕಾಟವನ್ನು ಕಡಿಮೆ ಮಾಡಲು ಆನೆ ಕಾರ್ಯಪಡೆ ರಚಿಸಿದೆ. ಇದು ಆನೆಗಳ ಚಲನವಲನಗಳನ್ನು ವೈಜ್ಞಾನಿಕವಾಗಿ ದಾಖಲಿಸುತ್ತದೆ. ಕಾಡಂಚಿನ ಗ್ರಾಮಗಳಲ್ಲಿ ಆನೆಗಳು ಕಾಣಿಸಿಕೊಂಡಾಗ  ರೈತರು ಆನೆ ಕಾರ್ಯ ಪಡೆ ಯ ಸಹಾಯವಾಣಿಗೆ ಕರೆ ಮಾಡಿದರೆ ಸಾಕು, ಜೀಪಿನಲ್ಲಿ ಬಹುಬೇಗ ಸ್ಥಳಕ್ಕೆ ಧಾವಿಸುವ ವಾಚರ್ ಗಳು ಪಟಾಕಿ ಹಾಕಿ ಬೆದರಿಸಿ ಆನೆಗಳನ್ನು ಮತ್ತೆ ಕಾಡಿಗೆ ಓಡಿಸುವರು. 

ಆನೆ ಕಾರ್ಯಪಡೆಯ ಸಿಬ್ಬಂದಿ ರೈತರೊಂದಿಗೆ ವಾಟ್ಸಪ್ ಗ್ರೂಪ್ ರಚಿಸಿಕೊಂಡು, ನಿರಂತರ ಸಂಪರ್ಕ ಸಾಧಿಸಿ, ಆನೆಗಳ ಚಲನ ವಲನಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ರೈತರಿಗೆ ಆನೆಗಳನ್ನು ಓಡಿಸಲು ಪಟಾಕಿಗಳನ್ನು ವಿತರಿಸುತ್ತಾರೆ. ರಾತ್ರಿ ವೇಳೆಯಲ್ಲಿ ನಡೆಯುವ ಈ ಕಾರ್ಯಾಚರಣೆಯು ಕೆಲವೊಮ್ಮೆ ವಿಫಲವಾಗುವುದೂ ಉಂಟು. ಆನೆಗಳು ಒಂದು ಊರಿನಲ್ಲಿದ್ದರೆ, ಕಾರ್ಯ ಪಡೆ ವಾಹನ ಇನ್ನೆಲ್ಲೋ ದೂರದ ಊರಿನಲ್ಲಿ ಇರುತ್ತದೆ. ಅಲ್ಲಿಂದ, ದೂರು ಬಂದ ಸ್ಥಳಕ್ಕೆ ಬರುವ ವೇಳೆಗೆ ಆನೆಗಳು ಇನ್ನೆಲ್ಲೋ ಹೋಗಿರುತ್ತವೆ . ಕತ್ತಲೆಯಲ್ಲಿ ಆನೆಗಳನ್ನು ಹುಡುಕುವುದು ಕಷ್ಟ. ಕೆಲವು ಆನೆಗಳು ಪಟಾಕಿಗಳ ಸದ್ದಿಗೆ ಪಳಗಿಕೊಳ್ಳುವುದೂ ಉಂಟು. ಅಂತಹ  ಆನೆಗಳ ಗುಂಪು, ಪಟಾಕಿಗಳಿಗೆ ಕ್ಯಾರೆ ಮಾಡುವುದಿಲ್ಲ. 

ಆನೆಗಳು ರೈತರ ಹೊಲಗಳಿಗೆ ಬಾರದಂತೆ ತಡೆಯಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಅವುಗಳಲ್ಲಿ ಆನೆಗಳು ಕಾಡಿನಿಂದ ಹೊರಬಾರದಂತೆ ತಡೆಯಲು ಸೋಲಾರ ವಿದ್ಯುತ್‌ ಬೇಲಿಯನ್ನು ಅಳವಡಿಸುವುದು. ಮೂರು ಮೀಟರ್‌ ಅಗಲ ಎರಡು ಮೀಟರ್‌ ಆಳಕ್ಕೆ ಭೂಮಿಯನ್ನು ಬಗೆದು ಮಾಡಿದ ಟ್ರೆಂಚು,  ರೈಲು ಕಂಬಿಗಳಿಂದ ರಚಿಸಿದ ತಡೆಗೋಡೆ, ಕಾಡುಗಲ್ಲು ತಡೆಗೋಡೆಗಳು ಮುಂತಾದುವು  ಪ್ರಮುಖವಾದುವು . 

ಸರ್ಕಾರ ಇಷ್ಟೆಲ್ಲಾ ಮಾಡಿದರೂ ಸಹ, ಆನೆಗಳು ಕಾಡಿನಿಂದ ನಾಡಿಗೆ ಬರುವಲ್ಲಿ ಕೆಲವು ಭಾರಿ ಸಫಲವಾಗುತ್ತವೆ. ಗಾಳಿ ಮಳೆಗೆ , ಯಾವುದಾದರು ಮರ  ಸೋಲಾರ್‌ ಬೇಲಿಯ ಮೇಲೆ ಬಿದ್ದರೆ ಅದು ಕಾರ್ಯ ಮಾಡುವುದಿಲ್ಲ.  ಕಿಲೋಮೀಟರ್‌ ಗಟ್ಟಲೇ ಇರುವ ಸೋಲಾರ್‌ ಬೇಲಿಯ ನಿರ್ವಹಣೆ ಯೇ  ಒಂದು ದೊಡ್ಡ ತಲೆನೋವಿನ ಕೆಲಸ. ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಮಣ್ಣಿನ ಟ್ರಂಚುಗಳು ಕುಸಿದು ಉಪಯೋಗಕ್ಕೆ ಬಾರದಂತೆ ಆಗುತ್ತವೆ.

ಅತಿಯಾಗಿ ತೊಂದರೆ ಉಂಟುಮಾಡುವ ಆನೆಗಳ ಉಪಟಳವನ್ನು ತಡೆಗಟ್ಟಲು ಇರುವ ಉಪಾಯಗಳಲ್ಲಿ,  ಆನೆಗಳನ್ನು ಸ್ಥಳಾಂತರಿಸುವುದು ಕೂಡ ಒಂದು ವಿಧಾನ.  ಒಂದು ಪ್ರದೇಶದಲ್ಲಿ ಆನೆಗಳನ್ನು ಹಿಡಿದು, ಮತ್ತೊಂದು ಕಾಡಿಗೆ ಬಿಡುವುದು. ಆದರೆ ಸ್ಥಳಾಂತರ ಮಾಡಿದ ಕೆಲವೇ ದಿನಗಳಲ್ಲಿ ಆನೆಗಳು ಮತ್ತೆ ಮೂಲ ಜಾಗಕ್ಕೆ ವಾಪಸ್ಸು ಬಂದಿರುವ ಉದಾಹರಣೆಗಳೂ ಇವೆ! ಕೇರಳದಲ್ಲಿ ರೇಶನ್‌ ಅಂಗಡಿಗಳಿಗೆ ದಾಳಿಯಿಟ್ಟು ಅಕ್ಕಿಯನ್ನು ಕಬಳಿಸುತ್ತಿದ್ದ ಆನೆಯೊಂದನ್ನು ಹಿಡಿದು ದೂರದ ತಮಿಳುನಾಡಿಗೆ ಸಾಗಿಸಲಾಗಿತ್ತು. ಅದು ಅಲ್ಲಿಯೂ ತನ್ನ ಅದೇ ಚಾಳಿಯನ್ನು ಮುಂದುವರೆಸಿತ್ತು. ಅಷ್ಟೇ ಅಲ್ಲ. ಕೆಲವೇ ತಿಂಗಳುಗಳೊಳಗೆ ಮರಳಿ ಕೇರಳದ ಗಡಿಯೊಳಗೆ ಬಂದಿತ್ತು. 

ಆನೆಗಳ ಸಂಖ್ಯೆಯ ಮೇಲೆ ಕಣ್ಗಾವಲಿಟ್ಟರೆ ಈ ಸಮಸ್ಯೆಯನ್ನು ಆರಂಭದಲ್ಲಿಯೇ ನಿಗ್ರಹಿಸಬಹುದು ಎನ್ನುವ ತರ್ಕವೂ ಇದೆ. ಆದರೆ ಯಾವ ಕಾಡಿನಲ್ಲಿ ಎಷ್ಟು ಆನೆಗಳಿವೆ, ಆನೆ ತಂಡಗಳಿವೆ. ಅವುಗಳು ಎಲ್ಲೆಲ್ಲಿ ಹೋಗುತ್ತವೆ ಎನ್ನುವ ಮಾಹಿತಿ ಒಟ್ಟಾಗಬೇಕು. ಇದಕ್ಕೆಂದು ಸರ್ಕಾರವೂ ಸಹ ನಿಯಮಿತವಾಗಿ ಆನೆ ಗಣತಿಯನ್ನು ನಡೆಸುತ್ತದೆ.  ಆದರೂ ಆನೆ ಗಣತಿ ನಿಖರವಾಗಿ ಆಗುವುದಿಲ್ಲ. ಕೆಲವು ಬಾರಿ ಗಣತಿ ನಡೆಯುವ ಸಂದರ್ಭದಲ್ಲಿ ಕಾಡಿನಲ್ಲಿ ಆನೆಗಳೇ ಇರುವುದಿಲ್ಲ. ಬೇರೆಡೆ ವಲಸೆ ಹೋಗಿರುತ್ತವೆ.  ಆಗ ಆ ಪ್ರದೇಶದಲ್ಲಿ ದೊರೆಯುವ ಆನೆಗಳ ಲದ್ದಿಯ ಗಳನ್ನು ಲೆಕ್ಕ ಹಾಕಿ ಆ ಪ್ರದೇಶದಲ್ಲಿ ಎಷ್ಟು ಆನೆಗಳು ಇರಬಹುದು ಎಂದು ವಿಜ್ಞಾನಿಗಳು ಅಂದಾಜಿಸುತ್ತಾರೆ. 

ಆನೆಗಳಿಂದ ಏನಾದರೂ ಬೆಳೆ ನಾಶವಾದರೆ,  ಸಾಕಿರುವ ಜಾನುವಾರುಗಳು ಸತ್ತರೆ ಅಥವಾ ಆನೆ ದಾಳಿಗೆ ಸಿಲುಕಿ ಜನರು ಸತ್ತರೆ,  ಕೈ ಕಾಲು ಮುರಿದರೆ ಸರ್ಕಾರ ಪರಿಹಾರ ಕೊಡುತ್ತದೆ. ಕಳೆದ ತಿಂಗಳಷ್ಟೇ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡನ್ನು ಸಂರಕ್ಷಿಸುವ ವಾಚರ್‌  ಒಬ್ಬರು ಕಾಡಾನೆ ದಾಳಿಗೆ ತುತ್ತಾಗಿ ಪ್ರಾಣ ಬಿಟ್ಟಿದ್ದರು. ಅವರಿಗೆ ಸರ್ಕಾರ 25 ಲಕ್ಷ ರೂ ಪರಿಹಾರ ಕೊಟ್ಟಿತು.

ಇದಕ್ಕೆ ಕೊನೆಯುಂಟೆ? ಆನೆಗಳು ತಮ್ಮ ಆವಾಸವನ್ನು ಕಳೆದುಕೊಂಡು ಉಳಿವಿಗಾಗಿ ಹೋರಾಟ ಮಾಡುತ್ತಿವೆ. ನಾಡಿನ ಯುವ ಜನಾಂಗ, ವಿದ್ಯಾರ್ಥಿಗಳು ಆನೆಗಳ ಜೀವನದ ಬಗ್ಗೆ ಹೆಚ್ಚು ತಿಳಿದು ಇತರರಿಗು ತಿಳಿಸಬೇಕು.  ಆನೆಗಳು ಊರಿಗೆ ಬಂದಾಗ ತಕ್ಷಣವೇ  ಆನೆ ಕಾರ್ಯಪಡೆಗೆ ತಿಳಿಸಬೇಕು. ಆನೆಗಳ ಸಂರಕ್ಷಣೆಯಲ್ಲಿ  ಭಾಗವಹಿಸಿ ಮತ್ತು ಪರಿಸರಕ್ಕೆ ಹೊರೆಯಾಗದ ರೀತಿಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು.  ಲ್ಲರೂ ಗಿಡಮರಗಳನ್ನು ನೆಟ್ಟು ಪೋಷಿಸಿ, ಪರಿಸರವನ್ನು ಕಾಪಾಡಿದರೆ ಬಹುಶಃ  ಇದು ಸಾಧ್ಯ.  

ನಾಡಿಗೆ ಬರುವ ಆನೆಗಳನ್ನು ಪುಂಡಾನೆ, ರೌಡಿ ಆನೆ ಎಂದೆಲ್ಲಾ ನಾಮಕರಣ ಮಾಡದೆ. ಆನೆಗಳಿಗೆ ಯಾವುದೇ ತೊಂದರೆ ಕೊಡದೆ , ನಮ್ಮ ಹಿರಿಯರು ಬದುಕಿದಂತೆ ಆನೆಗಳೋಂದಿಗೆ ಸಹಬಾಳ್ವೆಯಿಂದ ಬದುಕಲು ಕಲಿಯೋಣ. ಈ ಸುಂದರ ಜೀವಿಗಳನ್ನು ಸಂರಕ್ಷಿಸಲು ಪಣ ತೊಡೊಣ.  ಆನೆಗಳನ್ನು ಈ ಭೂಮಿಯ ಮೇಲೆ ಬದುಕಲು  ಬಿಡೋಣ.

ಲೇಖಕರು : ಕೆ. ಪಿ. ಶಂಕರಪ್ಪ ತೆಲಗರಹಳ್ಳಿ

ಕೆ. ಪಿ. ಶಂಕರಪ್ಪ ತೆಲಗರಹಳ್ಳಿ ಬೆಂಗಳೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಪಿಯು ಕಾಲೇಜಿನಲ್ಲಿ ಫಿಸಿಕ್ಸ್‌ ಅಧ್ಯಾಪಕರು. ಶಿಕ್ಷಣದ ಜೊತೆಗೆ ವಿಜ್ಞಾನ ಸಂವಹನವನ್ನೂ ಹವ್ಯಾಸವಾಗಿಟ್ಟುಕೊಂಡಿದ್ದಾರೆ.

ಲೇಖನ ಕೃಪೆ: ನ್ಯಾಶನಲ್‌ ಕಂಸರ್ವೇಶನ್‌ ಫೌಂಡೇಶನ್‌

_ _ _ _

ಈ ಲೇಖನವು ಸೆಪ್ಟೆಂಬರ್ ತಿಂಗಳ ಕುತೂಹಲಿ ಕನ್ನಡ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪೂರ್ಣ ಸಂಚಿಕೆಯನ್ನು ಕೆಳಗಿನ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ಓದಬಹುದು.

ಸೆಪ್ಟೆಂಬರ್ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
ಕೊಳ್ಳೇಗಾಲ ಶರ್ಮ (ಎ.ಎಸ್.ಕೆ.ವಿ.ಎಸ್.ಶರ್ಮ)
ಪ್ರಕಾಶಕರು ಹಾಗೂ ಸಂಪಾದಕರು
ಮೊಬೈಲ್: +91-9886640328 | ಸ್ಥಿರ ದೂರವಾಣಿ: 91-0821-2971171

Leave a Reply

Your email address will not be published. Required fields are marked *

Close
Sign in
Close
Cart (0)

No products in the cart. No products in the cart.





0