ಭಾರತದ ಅತಿ ಹಳೆಯ ವಿಜ್ಞಾನ ಪತ್ರಿಕೆಗೆ ಅರವತ್ತು ವಯಸ್ಸು. ಸಾಮಾನ್ಯವಾಗಿ ಸರ್ಕಾರಿ ಸಂಸ್ಥೆಗಳ ಸಿಬ್ಬಂದಿಗೆ ನಿವೃತ್ತಿಯ ವಯಸ್ಸು ಇದು. ಆದರೆ ಸರ್ಕಾರಿ ಸಂಸ್ಥೆಯದ್ದೇ ಪ್ರಕಟಣೆಯಾದ ಸೈನ್ಸ್ ರಿಪೋರ್ಟರ್ ಪತ್ರಿಕೆ ಅರವತ್ತನ್ನು ದಾಟಿ ಮುನ್ನಡೆಯಲು ಸಜ್ಜಾಗಿದೆ. ಭಾರತದಲ್ಲಿ ಇದಕ್ಕಿಂತಲೂ ಹಳೆಯ ಪತ್ರಿಕೆಗಳಿವೆ. ಕನ್ನಡದಲ್ಲಿಯೂ ಇವೆ. ಆದರೆ ಸರ್ಕಾರಿ, ಖಾಸಗಿ ಹಾಗೂ ಇನ್ಯಾವುದೇ ವಿಜ್ಞಾನ ಪ್ರಕಟಣೆಯೂ ಇಷ್ಟು ದೀರ್ಘಕಾಲ ಎಡೆಬಿಡದೆ ಪ್ರಕಟವಾಗಿರುವುದಕ್ಕೆ ಪುರಾವೆಗಳಿಲ್ಲ. ಆ ಸಾಧನೆಗಾಗಿ ಸೈನ್ಸ್ ರಿಪೋರ್ಟರನ್ನು ಶ್ಲಾಘಿಸೋಣ. ಅಭಿನಂದಿಸೋಣ.
ಅದೇ ಉಸಿರಿನಲ್ಲಿ ಇದರ ಸಾಧನೆಯ ಹಿಂದೆ ನಮ್ಮ ಸೋಲೂ ಇದೆ ಎನ್ನುವುದನ್ನು ಮರೆಯಬಾರದು. ಕನ್ನಡದಲ್ಲಿ ವಿಜ್ಞಾನ ಪತ್ರಿಕೆಗಳು ಆರಂಭವಾಗಿ ನೂರು ವರ್ಷಗಳಾದುವು. ಬೆಳ್ಳಾವೆ ವೆಂಕಟನಾರಣಪ್ಪನವರು ಆರಂಭಿಸಿದ ವಿಜ್ಞಾನ ಪತ್ರಿಕೆ 1918-1920ರವರೆಗಷ್ಟೆ ಉಸಿರಾಡಿತ್ತು. ಓದುಗರಿಲ್ಲದೆ ಅದನ್ನು ನಿಲ್ಲಿಸಲಾಯಿತು.
ಅನಂತರದ ದಿನಗಳಲ್ಲಿ ಕನ್ನಡ ವಿಜ್ಞಾನ ಸಂವಹನ ಕ್ಷೇತ್ರದಲ್ಲಿ ಹಲವು ಆದ್ಯಪ್ರವರ್ತಕ ಎನ್ನುವಂತಹ ಸಾಧನೆಗಳನ್ನು ಮಾಡಿದೆ. ಅಂತಹ ಸಾಧನೆಗಳಿಗೆ ನೆಲೆಯಾಗಿದೆ. ಹಾಗಿದ್ದೂ ಕನ್ನಡದಲ್ಲಿ ಜನ ಮೆಚ್ಚಿ, ಕೊಂಡು, ಓದುವಂತಹ ವಿಜ್ಞಾನ ಪತ್ರಿಕೆಗಳಿಗೆ ಇನ್ನೂ ಕೊರತೆ ಇದೆ.
ವಿಜ್ಞಾನ ಪತ್ರಿಕೆಗಳಲ್ಲಿ ಜನಪ್ರಿಯ ಎನ್ನುವ ಪತ್ರಿಕೆಗಳು ಹಾಗೂ ವಿಶಿಷ್ಟ ಪತ್ರಿಕೆಗಳು ಇವೆ. ವಿಜ್ಞಾನ ಜನಪ್ರಿಯ ವಿಜ್ಞಾನ ಪತ್ರಿಕೆ. ಸೈನ್ಸ್ರಿಪೋರ್ಟರೂ ಕೂಡ ಇದೇ ವರ್ಗದ್ದೇ. ಆದರೆ ವಿಶಿಷ್ಟ ಎನ್ನುವ, ಕೇವಲ ಒಂದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಜನಪ್ರಿಯ ಲೇಖನಗಳನ್ನು ಪ್ರಕಟಿಸುವ ವಿಶಿಷ್ಟ ವಿಜ್ಞಾನದ ಜನಪ್ರಿಯ ಪತ್ರಿಕೆ ಮೊದಲು ಕಣ್ಣು ಬಿಟ್ಟಿದ್ದು ಕರ್ನಾಟಕದಲ್ಲಿ. ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯವು ೧೯೫೯ ಪುಟ್ಟದಾಗಿ ʼಆಹಾರವಿಜ್ಞಾನʼ ಎನ್ನುವ ಪತ್ರಿಕೆಯನ್ನು ಪ್ರಕಟಿಸಲು ಆರಂಭಿಸಿತ್ತು. ಇಪ್ಪತ್ತನಾಲ್ಕು ವರ್ಷಗಳ ಕಾಲ ಪ್ರಕಟವಾದ ಈ ತ್ರೈಮಾಸಿಕ ಪತ್ರಿಕೆ ಬೆಳ್ಳಿ ಹಬ್ಬವನ್ನು ಕಾಣುವುದಕ್ಕೂ ಮುನ್ನವೇ ಮರೆಯಾಯಿತು. ಇದಕ್ಕೆ ಸಂಸ್ಥೆಯು ಪತ್ರಿಕೆಯ ಬಗ್ಗೆ ಆಸ್ಥೆ ಕಳೆದುಕೊಂಡಿದ್ದು ಕಾರಣ. ಏಕೆಂದರೆ ಅದೇ ವೇಳೆಗೆ ಆಹಾರವಿಜ್ಞಾನದ ಜೊತೆ, ಜೊತೆಗೇ ಸಂಸ್ಥೆ ಪ್ರಕಟಿಸುತ್ತಿದ್ದ ಇಂಗ್ಲೀಷಿನ ಫುಡ್ ಸೈನ್ಸ್ ಮತ್ತು ಹಿಂದಿಯ ಖಾದ್ಯ ವಿಜ್ಞಾನಗಳ ಪ್ರಕಟಣೆ ಮುಂದುವರೆಯಲಿಲ್ಲ.
ಕರ್ನಾಟಕದ ಅತಿ ಹಳೆಯ ವಿಶ್ವವಿದ್ಯಾನಿಲಯವಾದ ಮೈಸೂರು ವಿಶ್ವವಿದ್ಯಾನಿಲಯವೂ ಜನಪ್ರಿಯ ಅಂತಲ್ಲದಿದ್ದರೂ ವಿಜ್ಞಾನ ವಿಷಯಗಳನ್ನು ಕನ್ನಡದಲ್ಲಿ ತಕ್ಕ ಮಟ್ಟಿಗೆ ಸರಳವಾಗಿ ತಿಳಿಸಿಕೊಡುವ ವಿಜ್ಞಾನ ಕರ್ಣಾಟಕ ಪತ್ರಿಕೆಯನ್ನು ಪ್ರಕಟಿಸಲು ಆರಂಭಿಸಿತು. ಇದು 1969ರಲ್ಲಿ. ಆದರೆ ಅನಂತರದ ದಿನಗಳಲ್ಲಿ ಈ ಪತ್ರಿಕೆಯು ಒಮ್ಮೊಮ್ಮೆ ಏಳುತ್ತಾ, ಒಮ್ಮೊಮ್ಮೆ ಬೀಳುತ್ತಾ ಸಾಗಿದೆ. ಕಳೆದ ವರ್ಷ ಇದು ಐದಾರು ವರ್ಷಗಳ ಸಂಪುಟವನ್ನು ಒಮ್ಮೆಲೇ ಪ್ರಕಟಿಸಿತ್ತು. ವಿಜ್ಞಾನ ಕರ್ನಾಟಕದ ಸಮಸ್ಯೆ, ಲೇಖಕರ ಅನಾಸಕ್ತಿ. ಹಾಗೂ ಪತ್ರಿಕೆಯ ವಿತರಣೆಯ ಸಮಸ್ಯೆಗಳು.
ಇವೆಲ್ಲ ಮೊದಲಿಗರ ನಡುವೆ ಜನಪ್ರಿಯ ವಿಜ್ಞಾನ, ಸಂಶೋಧಕ, ವಿಜ್ಞಾನ ಲೋಕ ಮೊದಲಾದ ಪತ್ರಿಕೆಗಳು ಕೆಲವು ಕಾಲ ಪ್ರಕಟವಾದುವು. ಆದರೆ ವಿಜ್ಞಾನ ಕರ್ನಾಟಕದ ಬೆನ್ನಲ್ಲೇ ಹುಟ್ಟಿ ಕರ್ನಾಟಕದ ಮಕ್ಕಳಲ್ಲಿ ಮನೆ ಮಾತಾದ ಮತ್ತೊಂದು ಪತ್ರಿಕೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪ್ರಕಟಿಸುವ ಬಾಲವಿಜ್ಞಾನ. ಇದರ ಪ್ರಕಟಣೆ ಇತ್ತೀಚೆಗಷ್ಟೆ ಕಡಿಮೆಯಾಗಿದೆ. ಆದರೆ ಕಾರಣ ಪತ್ರಿಕೆಯ ಬಗ್ಗೆ ಓದುಗರ ಅನಾಸಕ್ತಿಯಾಗಲಿ, ಸಂಸ್ಥೆಯ ಅನಾಸ್ಥೆಯಾಗಲಿ ಅಲ್ಲ. ಸಂಸ್ಥೆಯ ಆರ್ಥಿಕ ಹಾಗೂ ಆಡಳಿತ ವ್ಯವಹಾರಗಳು ಮುಗ್ಗರಿಸಿರುವುದರಿಂದ ಪತ್ರಿಕೆ ಮುಚ್ಚುವ ಹಂತಕ್ಕೆ ಬಂದಿದೆ.
ಇವೆಲ್ಲವನ್ನೂ ನೋಡಿದಾಗ ಸೈನ್ಸ್ ರಿಪೋರ್ಟರಿನ ಸಾಧನೆಯನ್ನು ಮೆಚ್ಚಲೇ ಬೇಕು. ಏಕೆಂದರೆ ತದನಂತರ ಇಂಗ್ಲೀಷು ಪತ್ರಿಕೆಗಳ ಕ್ಷೇತ್ರದಲ್ಲಿ ಖಾಸಗಿ ಪ್ರಕಾಶನದ ಎರಡು ಪತ್ರಿಕೆಗಳು, ಸುಪ್ರಸಿದ್ಧ ಸಂಪಾದಕ ನೇತೃತ್ವದಲ್ಲಿ ಪ್ರಕಟವಾಗುತ್ತಿದ್ದುವು. 1969ರಿಂದ ಆರಂಭವಾದ ಸೈನ್ಸ್ ಟುಡೇ 1990ರ ವೇಳೆಗೆ ನೆಲ ಕಚ್ಚಿತ್ತು. ತನ್ಮಧ್ಯೆ ಆರಂಭವಾಗಿದ್ದ ಸೈನ್ಸ್ ಏಜ್ ಕೂಡ ನಿಲ್ಲಲಿಲ್ಲ. ದಿನಪತ್ರಿಕೆಗಳೂ ತಮ್ಮ ವಿಶೇಷ ಪುರವಣಿಗಳನ್ನು ನಿಲ್ಲಿಸಿದ ಕಾಲದಲ್ಲಿಯೂ ಸೈನ್ಸ್ ರಿಪೋರ್ಟರ್ ಪ್ರಕಟಣೆ ಅವಿರತವಾಗಿ ಮುಂದುವರೆದಿತ್ತು. ಇಂದಿಗೂ ಈ ಪತ್ರಿಕೆ ವಿಜ್ಞಾನದಲ್ಲಿ ಹೊಸ ವಿಷಯಗಳನ್ನು ಹಾಗೂ ನೀತಿ ನಿಯಮಗಳನ್ನು ತಿಳಿಯಬೇಕೆನ್ನುವವರಿಗೆ ಒಳ್ಳೆಯ ಆಕರವೆನ್ನಿಸಿದೆ.
ಸೈನ್ಸ್ ರಿಪೋರ್ಟರಿನ ಸಾಧನೆಗೆ ಕಾರಣವೇನಿರಬಹುದು? ಅದು ಸರ್ಕಾರೀ ಪತ್ರಿಕೆ ಎಂದು ಹಳಿಯುವ ಮುನ್ನ, ಅದರ ಪ್ರಭಾವವನ್ನು ನೆನಪಿನಲ್ಲಿಡೋಣ. ಪತ್ರಿಕೆ ಅತ್ತ ವಾಣಿಜ್ಯವೂ ಅಲ್ಲದ, ಇತ್ತ ಸರ್ಕಾರದ ಉಚಿತ ಪತ್ರಿಕೆಯೂ ಅಲ್ಲದ ನಡು ಹಾದಿಯಲ್ಲಿ ಸಾಗಿ ಬಂದದ್ದೇ ಇದಕ್ಕೆ ಕಾರಣವಿರಬಹುದೇ? ಜಾಹೀರಾತಿನಿಂದ ಹಾಗೂ ಮಾರಾಟದಿಂದ ತನ್ನ ವೆಚ್ಚದಲ್ಲಿ ಸ್ವಲ್ಪವನ್ನಾದರೂ ಪತ್ರಿಕೆ ಗಳಿಸುತ್ತಿದೆ. ಉಳಿದಂತೆ ವೆಚ್ಚಗಳನ್ನು ಸರ್ಕಾರವೇ ಭರಿಸುತ್ತದೆ ಎನ್ನುವುದು ಇದಕ್ಕೆ ಕಾರಣವಿರಬಹುದೇ?
ಸೈನ್ಸ್ ರಿಪೋರ್ಟರನ್ನು ಕನ್ನಡದಲ್ಲಿಯೂ ಪ್ರಕಟಿಸುವ ಪ್ರಯತ್ನಗಳು ನಡೆದಿದ್ದುವು. ಡಾ. ಚಂದ್ರಶೇಖರ ಕಂಬಾರರು ಕನ್ನಡ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದಾಗ, ಸೈನ್ಸ್ ರಿಪೋರ್ಟರನ್ನು ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸಬೇಕೆಂದಿದ್ದರು. ಆದರೆ ತದನಂತರ ಈ ಪತ್ರಿಕೆಯಲ್ಲಿ ಪ್ರಕಟವಾಗುವ ಲೇಖನಗಳಲ್ಲಿ ಪ್ರಮುಖವಾದುದನ್ನು ಪ್ರಕಟಿಸುವ ಹಾಗೂ ಅದಕ್ಕೆ ಬೇಕಾದ ಚಿತ್ರ ಇತ್ಯಾದಿ ಪೂರಕ ಸಾಮಗ್ರಿಗಳನ್ನು ಪಡೆಯಲು ಒಪ್ಪಂದ ಮಾಡಿಕೊಂಡು ʼವಿಜ್ಞಾನ ಸಂಗಾತಿʼ ಪತ್ರಿಕೆಯನ್ನು ಆರಂಭಿಸಿದರು. ಅದಾಗಿ ಇಪ್ಪತ್ತೈದು ವರ್ಷಗಳಾಗಿವೆ. ವಿಜ್ಞಾನ ಸಂಗಾತಿಯ ಪ್ರಕಟಣೆಯೂ ಅನಿಯತವಾಗಿದೆ.
ಇವೆಲ್ಲವನ್ನೂ ಕಂಡಾಗ ಕನ್ನಡದಲ್ಲಿ ವಿಜ್ಞಾನ ಪತ್ರಿಕೆಗೆ ಸರಕಾರದ ಬೇಷರತ್ತು ಬೆಂಬಲ ಇಲ್ಲದಿದ್ದಲ್ಲಿ ಅವು ಬದುಕಲಾರವು ಎಂಬುದು ವೇದ್ಯವಾಗುತ್ತದೆ. ಕನ್ನಡಿಗರಿಗೆ ವಿಜ್ಞಾನ ಸಾಹಿತ್ಯದಲ್ಲಿ ಆಸಕ್ತಿ ಇಲ್ಲವೆಂದಲ್ಲ. ಆದರೆ ಅದನ್ನು ನಿಯತವಾಗಿ ಪ್ರಕಟಿಸಿ, ಒದಗಿಸುವ ವ್ಯವಸ್ಥೆ ಬೇಕು. ಈ ನಿಟ್ಟಿನಲ್ಲಿ ಹದಿನಾರು ವರ್ಷಗಳಿಂದ ಪ್ರಕಟವಾಗುತ್ತಿರುವ ವಿಜ್ಞಾನ ಲೋಕ ಒಂದು ಉದಾಹರಣೆ. ಹಾಗೆಯೇ ಸಾಂಸ್ಥಿಕ ಆರ್ಥಿಕ ಬೆಂಬಲ ಇಲ್ಲದಿದ್ದಲ್ಲಿ ಏನಾಗಬಹುದು ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ..
ಕುತೂಹಲಿ-ಕನ್ನಡದ ಭವಿಷ್ಯ ಇವುಗಳಿಂದ ಬೇರೆಯಾಗಬಹುದೇ? ಇಲ್ಲವೇ. ಈ ಎಲ್ಲ ಮಬ್ಬು ಸಂಜೆಯಲ್ಲಿ ಇನ್ನೂ ಪ್ರಖರವಾಗಿ ಬೆಳಗುತ್ತಿರುವ ಸೈನ್ಸ್ ರಿಪೋರ್ಟಿರಿಗೆ ಹೀಗಾಗಿ ಕನ್ನಡದ ವತಿಯಿಂದ ಅಭಿನಂದನೆಗಳು. ಕನ್ನಡ ವಿಜ್ಞಾನ ಪತ್ರಿಕೆಯೂ ಹೀಗೆ ಅರವತ್ತು ವರ್ಷಗಳನ್ನು ಸಂಭ್ರಮದಿಂದ, ಯಶಸ್ವಿಯಾಗಿ ಪೂರೈಸಬೇಕಾದರೆ ಓದುಗರ, ಸರಕಾರದ ಹಾಗೂ ನಮ್ಮ, ನಿಮ್ಮೆಲ್ಲರ ಬೆಂಬಲ ಬೇಕೇ ಬೇಕು.
- ಸಂಪಾದಕೀಯ
ಈ ಲೇಖನವು ನವೆಂಬರ್ ತಿಂಗಳ ಕುತೂಹಲಿ ಕನ್ನಡ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪೂರ್ಣ ಸಂಚಿಕೆಯನ್ನು ಕೆಳಗಿನ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ಓದಬಹುದು.
ನವೆಂಬರ್ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ
ಹೊಸ ಚಂದಾದಾರರಾಗಲು ಈ ಫಾರಮನ್ನು ಭರ್ತಿ ಮಾಡಿ. ಮುಂದಿನ ಸಂಚಿಕೆ ನಿಮ್ಮನ್ನು ಈಮೇಲಿನಲ್ಲಿ ತಲುಪುವುದು. https://forms.gle/
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
ಕೊಳ್ಳೇಗಾಲ ಶರ್ಮ (ಎ.ಎಸ್.ಕೆ.ವಿ.ಎಸ್.ಶರ್ಮ)
ಪ್ರಕಾಶಕರು ಹಾಗೂ ಸಂಪಾದಕರು
ಮೊಬೈಲ್: +91-9886640328 | ಸ್ಥಿರ ದೂರವಾಣಿ: 91-0821-2971171