ಬತ್ತಿ ಹಚ್ಚಿದರೆ ಸುರ್ರನೆ ಉರಿಯುತ್ತಾ ಬಂದು ಅನಂತರ ಥಟ್ಟನೆ ಸಿಡಿದ ಪಟಾಕಿ ಸ್ವಲ್ಪ ಹೊತ್ತಾದ ಮೇಲೆ ಗಗನದಲ್ಲಿ ಬಣ್ಣ, ಬಣ್ಣದ ನಕ್ಷತ್ರಗಳನ್ನು ಚಿಮ್ಮುವುದನ್ನು ನೋಡಿದ್ದೀರಲ್ಲ. ಈ ಬಣ್ಣದ ಪಟಾಕಿ ಹೇಗೆ ಮಾಡುತ್ತಾರೆ ಗೊತ್ತೇ? ಇದೋ ಇಲ್ಲಿದೆ ಅದರ ಗುಟ್ಟು.
ನಿಮಗೆ ಗೊತ್ತೇ? ಎರಡು ವರ್ಷಗಳ ಹಿಂದೆ ದೀಪಾವಳಿಯಂದು ನವದೆಹಲಿಯಲ್ಲಿ ಒಂದೇ ದಿನ ಸುಮಾರು ೫೦ ಲಕ್ಷ ಕಿಲೋಗ್ರಾಂನಷ್ಟು ಪಟಾಕಿಯನ್ನು ಸುಟ್ಟಿದ್ದರು.
ಪಟಾಕಿಯ ಒಳಗೆ ಸಿಡಿಯುವ ಮದ್ದು ತುಂಬಿರುತ್ತದೆ. ಅದರ ನಡು, ನಡುವೆ ಅಲ್ಲಲ್ಲಿ ಉರಿದಾಗ ಬಣ್ಣದ ಬೆಳಕನ್ನು ಚಿಮ್ಮುವ ಲೋಹದ ವಸ್ತುಗಳನ್ನು ತುಂಬಿರುತ್ತಾರೆ. ಈ ವಸ್ತುಗಳನ್ನು ಹೇಗೆ ತುಂಬಿರುತ್ತೇವೆ ಎನ್ನುವುದರ ಮೇಲೆ ಬಣ್ಣದ ವಿನ್ಯಾಸ ರೂಪುಗೊಳ್ಳುತ್ತದೆ. ಇಲ್ಲಿ ಎಡಗಡೆ ಇರುವ ಪಟಾಕಿ ಸಿಡಿದಾಗ ಬಣ್ಣದ ನಕ್ಷತ್ರಗಳು ಎಲ್ಲ ದಿಕ್ಕಿನಲ್ಲಿಯೂ ಅಡ್ಡಾದಿಡ್ಡಿ ಚಿಮ್ಮುತ್ತವೆ. ಬಲಗಡೆ ಇರುವ ಪಟಾಕಿ ಸಿಡಿದಾಗ ಅದು ಬೆಂಕಿಯ ಚೆಂಡಿನಂತೆ ಆಗುತ್ತವೆ. ಬತ್ತಿ ನಿಧಾನವಾಗಿ ಹೊತ್ತಿ ಉರಿಯುವಂತೆ ಮಾಡಿರುತ್ತಾರೆ. ಇದು ಉರಿದು, ಒಳಗಿನ ಕರಿಮದ್ದು ಬಿಸಿಯಾಗಿ ನಕ್ಷತ್ರಗಳ ವಸ್ತುಗಳನ್ನು ಉರಿಸಲು ಬೇಕಾಗುವ ತಾಪಮಾನಕ್ಕೆ ತರುತ್ತದೆ. ಅನಂತರ ಸಿಡಿದಾಗ ವಸ್ತುಗಳು ಹೊರ ಚಿಮ್ಮಿ ನಕ್ಷತ್ರಗಳಾಗಿ ತೋರುತ್ತವೆ.
ಒಂದಾದ ಮೇಲೆ ಒಂದು ಬಣ್ಣದ ನಕ್ಷತ್ರವನ್ನು ಸೂಸುವ ಪಟಾಕಿ ಹೀಗಿರುತ್ತದೆ. ಒಂದರ ಮೇಲೊಂದರಂತೆ ವಿವಿಧ ಬಣ್ಣದ ನಕ್ಷತ್ರಗಳಾಗಿ ಉರಿಯುವ ವಸ್ತುಗಳನ್ನು ಪೊಟ್ಟಣ ಕಟ್ಟಿರುತ್ತಾರೆ. ತಳ ಭಾಗದಲ್ಲಿ ಸಿಡಿದು, ಚಿಮ್ಮುವ ಸಿಡಿಮದ್ದು ಇರುತ್ತದೆ. ಇದು ಸಿಡಿದಾಗ ಮೇಲೆ ಚಿಮ್ಮಿದ ಪಟಾಕಿ ಮೊದಲು ಒಂದು ಬಣ್ಣದ ನಕ್ಷತ್ರವನ್ನು ಚಿಮ್ಮುತ್ತದೆ. ಅದು ಉರಿದು ಮುಗಿದ ಕೂಡಲೇ ಇನ್ನೊಂದು ಬಣ್ಣ ಚಿಮ್ಮುತ್ತದೆ. ಕೊನೆಯಲ್ಲಿ ಸದ್ದು ಮಾಡುವ ಸಿಡಿಮದ್ದು ಇರುತ್ತದೆ.
- ಅಮೃತೇಶ್ವರಿ, ಬಿ. ಕುತೂಹಲಿ ಯೋಜನೆಯಲ್ಲಿ ಸಹಾಯಕಿಯಾಗಿದ್ದಾರೆ.
ಪಟಾಕಿಯ ಕುರಿತು ಕೆಲವು ಲೇಖನಗಳು
ದೀಪಾವಳಿ ಪಟಾಕಿ ಮತ್ತು ರಸಾಯನಿಕಗಳು
ಈ ಲೇಖನವು ನವೆಂಬರ್ 2021 ಕುತೂಹಲಿ ಕನ್ನಡ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪೂರ್ಣ ಸಂಚಿಕೆಯನ್ನು ಕೆಳಗಿನ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ಓದಬಹುದು.
ನವೆಂಬರ್ 2021 ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ
ಹೊಸ ಚಂದಾದಾರರಾಗಲು ಈ ಫಾರಮನ್ನು ಭರ್ತಿ ಮಾಡಿ. ಮುಂದಿನ ಸಂಚಿಕೆ ನಿಮ್ಮನ್ನು ಈಮೇಲಿನಲ್ಲಿ ತಲುಪುವುದು. https://forms.gle/
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
ಕೊಳ್ಳೇಗಾಲ ಶರ್ಮ (ಎ.ಎಸ್.ಕೆ.ವಿ.ಎಸ್.ಶರ್ಮ)
ಪ್ರಕಾಶಕರು ಹಾಗೂ ಸಂಪಾದಕರು
ಮೊಬೈಲ್: +91-9886640328 | ಸ್ಥಿರ ದೂರವಾಣಿ: 91-0821-2971171