ಗುದ್ದಲಿಯಿನಾದೀತೆ ಮಲೆ ಕಣಿವೆ ಸಮದ ನೆಲ? |

ಮದ್ದು ತಡೆವುದೆ ಮುಪ್ಪು ಕಳ್ಳನವೊಲಮರೆ? ||

ಯುದ್ಧತಾಪದೆ ಶಾಂತಿಶೀತಲತೆಯುದಿಸೀತೆ? |

ಸಿದ್ಧವಿರು ಸೈರಣೆಗೆ – ಮಂಕುತಿಮ್ಮ ||

ಕಳ್ಳನಂತೆ ಬರುವ ಮುಪ್ಪನ್ನು ಔಷಧಿಗಳು ತಡೆಯುವುವೇ ಎಂದು ಕವಿ ಅಚ್ಚರಿ ಪಟ್ಟಿದ್ದಾರೆ.  ಮುಪ್ಪನ್ನು ತಡೆಯುವುದಕ್ಕಾಗಿ, ಮುಪ್ಪಿನ ಸಮಯದಲ್ಲಿ ಉಂಟಾಗುವ ತೊಂದರೆಗಳನ್ನು ಕುಗ್ಗಿಸುವುದಕ್ಕಾಗಿ, ಮುಪ್ಪು ಅಡರುವುದನ್ನು ನಿಧಾನಿಸುವುದಕ್ಕೆ ಪ್ರಪಂಚದಾದ್ಯಂತ ವಿಜ್ಞಾನಿಗಳು ಶೋಧದಲ್ಲಿ ತೊಡಗಿದ್ದಾರೆ. ಯಯಾತಿಯಂತೆ ಮುಪ್ಪನ್ನು ಗೆಲ್ಲುವ ಔಷಧ ಬೇರಾವುದೇ ಮದ್ದಿಗಿಂತಲೂ ಹೆಚ್ಚು ಮಾರಾಟವಾಗುವ ನಿರೀಕ್ಷೆಯಲ್ಲಿ ವಿವಿಧ ಔಷಧ ಕಂಪೆನಿಗಳು ಮುಪ್ಪಿನ ಕುರಿತು ಸಂಶೋಧನೆಗಳಲ್ಲಿ ಬಂಡವಾಳವನ್ನು ಹೂಡಿವೆ. ಕಳೆದ ವರ್ಷ ವಿಶ್ವಾದ್ಯಂತ ಸುಮಾರು ನಾಲ್ಕುಸಾವಿರದ ಏಳುನೂರು ಕೋಟಿ ಡಾಲರುಗಳಷ್ಟು ಮೊತ್ತದ ಮುಪ್ಪು ತಡೆಯುವ ವಸ್ತುಗಳು ಮಾರಾಟವಾಗಿದ್ದುವು. ಸಂಶೋಧನೆಯ ವಿಷಯಕ್ಕೆ ಬಂದರೆ ಅಮೆರಿಕ ದೇಶ ಮುಪ್ಪಿನ ಸಂಶೋಧನೆಯಲ್ಲಿ ಬಹಳ ಮುಂದಿದೆ. ಪ್ರತಿ ವರ್ಷವೂ ವಿಜ್ಞಾನ ಮತ್ತು ಸಂಶೋಧನೆಗಾಗಿ ವೆಚ್ಚ ಮಾಡುವ ಹಣದಲ್ಲಿ ಶೇಕಡ ಒಂದರಷ್ಟನ್ನು ಕೇವಲ ಮುಪ್ಪಿನ ಸಂಶೋಧನೆ ಕುರಿತಾಗಿಯೇ ಮೀಸಲಿಡಲಾಗಿದೆ ಎನ್ನುತ್ತದೆ ಒಂದು ವರದಿ. 

 

ಇಷ್ಟೊಂದು ಪ್ರಭಾವಿ ಎನ್ನಿಸಿದ ಮುಪ್ಪು ಎಂದರೇನು ಎನ್ನುವುದಕ್ಕೆ ನಿಖರವಾದ ವಿವರಣೆ ಇಲ್ಲ ಎನ್ನುವುದು ವಿಚಿತ್ರ ಆದರೂ ಸತ್ಯ. ವಯಸ್ಸಾಗುವುದನ್ನೇ ನಾವು ಮುಪ್ಪು ಎನ್ನುತ್ತೇವಷ್ಟೆ. ಆದರೆ ಮುಪ್ಪಿಗೆ ಮದ್ದು ಪತ್ತೆಯಾಗಬೇಕಾದರೆ ಮುಪ್ಪು ಎಂದರೇನೆಂಬುದು ಮೊದಲು ಅರ್ಥವಾಗಬೇಕು. ಈ ವಿಷಯದಲ್ಲಿ ಸ್ಪಷ್ಟತೆಗಿಂತಲೂ ಗೊಂದಲವೇ ಹೆಚ್ಚು ಎನ್ನುತ್ತದೆ ಇತ್ತೀಚೆಗೆ ಪಿಎನ್‌ಎಎಸ್‌ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಸಂಶೋಧನೆ. 

ಮುಪ್ಪಿನ ಬಗ್ಗೆ ಸಂಶೋಧನೆಯಲ್ಲಿ ತೊಡಗಿಕೊಂಡಿರುವಂತಹ ವಿಜ್ಞಾನಿಗಳನ್ನು ಸಂಪರ್ಕಿಸಿ ಮುಪ್ಪಿನ ಬಗ್ಗೆ ಅವರಿಗಿರುವ ಪರಿಕಲ್ಪನೆಗಳು ಏನಿರಬಹುದೆಂದು ತಿಳಿಯಲು ಅಮೆರಿಕೆಯ ಹಾರ್ವರ್ಡ್‌ ವೈದ್ಯಕೀಯ ಸಂಸ್ಥೆಯ ವೈದ್ಯ-ವಿಜ್ಞಾನಿ ವಾದಿಮ್‌ ಗ್ಲೇಡಿಶೇವ್‌ ಮತ್ತು ಸಂಗಡಿಗರು ಒಂದು ಸರ್ವೆ ನಡೆಸಿದರು. ಸುಮಾರು ನೂರೈವತ್ತು ಪ್ರತಿಷ್ಠಿತ ಹಾಗೂ ಪರಿಣತ ವಿಜ್ಞಾನಿಗಳಿಗೆ ಹಲವು ಪ್ರಶ್ನೆಗಳನ್ನು ಒಡ್ಡಲಾಯಿತು. ಆ ಪ್ರಶ್ನೆಗಳಿಗೆ ದೊರೆತ ಉತ್ತರವನ್ನು ವಿಶ್ಲೇಷಿಸಿ, ವಿಜ್ಞಾನಿಗಳು ಮುಪ್ಪಿನ ಬಗ್ಗೆ ಏನೆಂದು ಹೇಳುತ್ತಾರೆಂದು ವಿಶ್ಲೇಷಿಸಿದರು. ಈ ವಿವರಗಳನ್ನೇ ಪಿಎನ್‌ಎಎಸ್‌ ಪತ್ರಿಕೆ ಪ್ರಕಟಿಸಿದೆ. 

 

ಮುಪ್ಪು ಎನ್ನುವುದನ್ನು ನೀವು ಹೇಗೆ ವಿವರಿಸುತ್ತೀರಿ? ಇದು ಮೊದಲ ಪ್ರಶ್ನೆ. ನಾವೆಲ್ಲ ಇದನ್ನು ವಯಸ್ಸಾಗುವುದು ಎಂದು ಬಿಡುತ್ತೇವಷ್ಟೆ. ಆದರೆ ಗ್ಲೇಡಿಯೇವ್‌ ತಂಡ ಇದಕ್ಕೆ ಹತ್ತು ವಿಭಿನ್ನ ವಿವರಣೆಗಳನ್ನು ಪಡೆದಿದೆಯಂತೆ. ಕಾಲಾಂತರದಲ್ಲಿ ವಿವಿಧ ಅಂಗಗಳ ಕ್ಷಮತೆ ಕುಗ್ಗುವುದನ್ನೇ ಬಹುತೇಕ ಮಂದಿ ಮುಪ್ಪು ಎಂದು ಗುರುತಿಸಿದ್ದಾರೆ. ವಯಸ್ಸಾಗುತ್ತಿದ್ದಂತೆ ದೇಹದ ಅಂಗಗಳು ಹಾಗೂ ಅಂಗಾಂಶಗಳಲ್ಲಿ ದೋಷಗಳು ಕಾಣಿಸಿಕೊಳ್ಳುತ್ತವೆ ಎನ್ನುವುದು ಎರಡನೆಯ ವಿವರಣೆ. ಮೂರನೆಯ ವಿವರಣೆ ದೇಹದ ಒಟ್ಟಾರೆ ಚಟುವಟಿಕೆಗಳ ಕ್ಷಯ ಅಥವಾ ಶರೀರದ ಅಂಗಗಳ ಕ್ಷಯ ಅಥವಾ ಆರೋಗ್ಯದಲ್ಲಿನ ಕ್ಷಯ ಎಂದು ಗುರುತಿಸಿತ್ತು. ಮುಪ್ಪು ಹೆಚ್ಚಾದಂತೆ ಸಾವಿನ ಸಾಧ್ಯತೆಗಳು ಹೆಚ್ಚಾಗುತ್ತದೆ ಎನ್ನುವುದು ಇನ್ನೊಂದು ವಿವರಣೆಯಾಗಿತ್ತು. 

 

ಮುಪ್ಪಿಗೆ ಕಾರಣಗಳು ಏನಿರಬಹುದು ಎನ್ನುವ ಪ್ರಶ್ನೆಗೂ ಹೀಗೆಯೇ ವೈವಿಧ್ಯಮಯವಾದ ಉತ್ತರಗಳು ದೊರಕಿವೆ. ಕೆಲವರಿಗೆ ಅದು ದೇಹದಲ್ಲಿ ಶೇಖರವಾಗುವ ದೋಷಗಳ ಪರಿಣಾಮ. ಇನ್ನು ಕೆಲವರಿಗೆ ಅದು ವಿಕಾಸದಿಂದುಂಟಾದ ಫಲ. ಮತ್ತೂ ಕೆಲವರು ದೇಹದ ಅಂಗಗಳ ಚಟುವಟಿಕೆಗಳು ಯೋಜಿಸಿದಂತೆ ನಡೆಯದಿರುವುದು ಹಾಗೂ ಅದರಿಂದ ವ್ಯತ್ಯಸ್ತವಾಗಿ ನಡೆಯುವುದರಿಂದಲೇ ಮುಪ್ಪು ಬರುತ್ತದೆ ಎಂದು ನಂಬಿದ್ದರು. ಇದಷ್ಟೇ ಅಲ್ಲ. ಮನುಷ್ಯರಲ್ಲಿ ಮುಪ್ಪು ಆರಂಭವಾಗುವುದು ಯಾವಾಗ ಎನ್ನುವ ಪ್ರಶ್ನೆಗೂ ಹಲವು ಉತ್ತರಗಳು ಬಂದುವು. ಅವರವರ ಭಾವಕ್ಕೆ ತಕ್ಕಂತೆ ಕೆಲವು ವಿಜ್ಞಾನಿಗಳು ಮುಪ್ಪು ಹುಟ್ಟುವಾಗಲೇ ಆರಂಭವಾಗಿರುತ್ತದೆ. ಕ್ರಮೇಣ ತೀವ್ರಗೊಳ್ಳುತ್ತದೆ ಎಂದು ನಿರ್ಧರಿಸಿದರೆ, ಇನ್ನು ಹಲವರು ವಿವಿಧ ವಯಸ್ಸಿನಲ್ಲಿ ಅದು ಆರಂಭವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದರು. 

 

ಬ್ಯಾಕ್ಟೀರಿಯಾ, ಯೀಸ್ಟು ಮೊದಲಾದ ಜೀವಿಗಳಲ್ಲಿ ಜೀನುಗಳನ್ನು ಬದಲಿಸಿ, ಅವು ಹೆಚ್ಚು ಕಾಲ ಬದುಕುವಂತೆ, ಇಲ್ಲವೇ ಅವುಗಳ ತಳಿಗುಣಗಳಲ್ಲಿ ಕಾಣುವ ದೋಷಗಳ ಸಂಖ್ಯೆ ಕುಗ್ಗುವಂತೆ ಮಾಡಲಾಗಿದೆ. ಆದರೆ ಇದಷ್ಟೆ ಮುಪ್ಪು ಎನ್ನಲಾದೀತೇ? ಈ ಕ್ರಮಗಳು ಮುಪ್ಪನ್ನು ತಡೆಯಬಲ್ಲುವೇ ಎನ್ನುವ ಪ್ರಶ್ನೆ ಇದೆ. .ಮುಪ್ಪು ಎಂದರೇನೆಂಬುದು ಸ್ಪಷ್ಟವಾಗಿದ್ದರೆ ಅದಕ್ಕೆ ಮದ್ದು ಹುಡುಕುವುದೂ ಸುಲಭವಾಗಬಹುದು. ಸೋಂಕುರೋಗಗಳು, ಹೃದಯದ ಖಾಯಿಲೆಗಳು ಮೊದಲಾದ ಹಿಂದೊಮ್ಮೆ ಗುಣಪಡಿಸಲಾಗದ ರೋಗಗಳನ್ನು ಈಗ ಗುಣಪಡಿಸುವಷ್ಟು ವೈದ್ಯವಿಜ್ಞಾನ ಮುಂದುವರೆದಿದೆ. ಕೋವಿಡ್‌ ಸಂದರ್ಭದಲ್ಲಿ ಹೊಸ ಲಸಿಕೆಯನ್ನು ಅತ್ಯಲ್ಪ ಕಾಲದಲ್ಲಿ ಸಿದ್ಧಪಡಿಸಿದ್ದು ಮಾನವತೆಯ, ವಿಜ್ಞಾನಿಗಳ ಸಾಧನೆಗೆ ಸಾಕ್ಷಿ. ಆದರೆ ಇದು ಸಾಧ್ಯವಾಗಬೇಕಾದರೆ ಸಮಸ್ಯೆಯ ಸಂಪೂರ್ಣ ಅರಿವು ಇರಬೇಕಷ್ಟೆ. 

 

ಮುಪ್ಪಿನ ವಿಷಯದಲ್ಲಿ ಒಟ್ಟಾರೆ ಮುಪ್ಪು ಎಂದರೆ ಏನು, ಏಕಾಗುತ್ತದೆ ಎನ್ನುವ ಬಗ್ಗೆ ಒಮ್ಮತವಿಲ್ಲ ಎಂದು ಈ ಸಂಶೋಧನೆ ತಿಳಿಸುತ್ತಿದೆ. ಅಂದರೆ ನಾವು ಮುಪ್ಪಿನ ಬಗ್ಗೆ ಕೇಳುತ್ತಿರುವ ಪ್ರಶ್ನೆಗಳು ಸರಿ ಇಲ್ಲ ಎಂದರ್ಥ. ಮುಪ್ಪು ಎಂದರೆ ಏನು ಎಂಬುದನ್ನು ಸ್ಪಷ್ಟವಾಗಿ ವಿವರಿಸದೇ,. ಅದಕ್ಕೆ ಕಾರಣಗಳನ್ನಾಗಲಿ, ಚಿಕಿತ್ಸೆಯನ್ನಾಗಲಿ ಹುಡುಕುವುದು ಎಷ್ಟರ ಮಟ್ಟಿಗೆ ಸರಿ? ಬಹುಶಃ ಈ ಪ್ರಶ್ನೆಯನ್ನು ವಿಜ್ಞಾನಿಗಳು ಕೇಳಿಕೊಂಡು, ನಾಳೆ ಮುಪ್ಪಿನ ಬಗ್ಗೆ ಎಲ್ಲರೂ ಒಪ್ಪುವಂತಹ ವಿವರಣೆಯೊಂದನ್ನು ಕೊಡುತ್ತಾರೆ ಎನ್ನುವುದೇ ಆಶಯ.

  • ಸಂಪಾದಕೀಯ

ಈ ಲೇಖನವು ಡಿಸೆಂಬರ್ ತಿಂಗಳ ಕುತೂಹಲಿ ಕನ್ನಡ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪೂರ್ಣ ಸಂಚಿಕೆಯನ್ನು ಕೆಳಗಿನ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ಓದಬಹುದು.

ಡಿಸೆಂಬರ್ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ

ಹೊಸ ಚಂದಾದಾರರಾಗಲು  ಈ ಫಾರಮನ್ನು ಭರ್ತಿ ಮಾಡಿ. ಮುಂದಿನ ಸಂಚಿಕೆ ನಿಮ್ಮನ್ನು ಈಮೇಲಿನಲ್ಲಿ ತಲುಪುವುದು. https://forms.gle/gnSbAybCHL9wu1k46.   ನಿಮ್ಮ ಗೆಳೆಯರನ್ನೂ ಚಂದಾದಾರರನ್ನಾಗಿಸಲು ಈ ಲಿಂಕನ್ನು ಶೇರ್‌ ಮಾಡಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
ಕೊಳ್ಳೇಗಾಲ ಶರ್ಮ (ಎ.ಎಸ್.ಕೆ.ವಿ.ಎಸ್.ಶರ್ಮ)
ಪ್ರಕಾಶಕರು ಹಾಗೂ ಸಂಪಾದಕರು
ಮೊಬೈಲ್: +91-9886640328 | ಸ್ಥಿರ ದೂರವಾಣಿ: 91-0821-2971171

Leave a Reply

Your email address will not be published. Required fields are marked *

Close
Sign in
Close
Cart (0)

No products in the cart. No products in the cart.





0