(ಚಿತ್ರ ಕೃಪೆ: ಪೆಕ್ಸೆಲ್ಸ್‌/ ಖ್ಯಾತಿ ಟ್ರೆಹಾನ್‌)

ಪ್ರಜ್ಞೆ ಎನ್ನುವ ಗೋಜಲನ್ನು ವಿಜ್ಞಾನ ಬಿಡಿಸಬಹುದೇ?

11980ರ ದಶಕದಲ್ಲಿ ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದ ಇಬ್ಬರು ವಿಜ್ಞಾನಿಗಳು ಪಿಎಸ್‌ ಎಂಬ ಹೆಸರಿನ ರೋಗಿಯನ್ನು ಪರೀಕ್ಷಿಸುತ್ತಿದ್ದರು. ರೋಗಿಯ ಮಿದುಳಿನ ಬಲ ಭಾಗಕ್ಕೆ ಘಾಸಿಯಾಗಿತ್ತು. ಇದರಿಂದಾಗಿ ಆಕೆಗೆ ತನ್ನ ಎಡಕ್ಕೆ ಇರುವ ವಸ್ತುಗಳ ಪರಿವೆ ಇರುತ್ತಿರಲಿಲ್ಲ. ಆಕೆ ವಸ್ತುಗಳನ್ನು ಚಿತ್ರಿಸುವಾಗ, ವಸ್ತುವಿನ ಬಲಭಾಗವನ್ನು ತಪ್ಪಿಲ್ಲದೆ ಬರೆಯುತ್ತಿದ್ದಳು. ಆದರೆ ಎಡಭಾಗವನ್ನು ಬಿಟ್ಟೇ ಬಿಡುತ್ತಿದ್ದಳು. ತಾನು ಬರೆದ ಚಿತ್ರ ಅಪೂರ್ಣವೆಂದು ಆಕೆಗೆ ಅರಿವೇ ಆಗುತ್ತಿರಲಿಲ್ಲ. ಆಕೆಗೆ ಎಡದಲ್ಲಿರುವ ವಸ್ತುಗಳ ಅಸ್ತಿತ್ವವೇ ಕಾಣೆಯಾಗಿಬಿಟ್ಟಂತೆ ಇತ್ತು. 

ಆ ವಿಜ್ಞಾನಿಗಳು ಆಕೆಗೆ ಎರಡು ಮನೆಗಳ ಚಿತ್ರಗಳನ್ನು ತೋರಿಸಿ ಪರೀಕ್ಷಿಸಿದರು. ಒಂದು ಮನೆಯ ಎಡಭಾಗಕ್ಕೆ ಬೆಂಕಿ ಹೊತ್ತಿತ್ತು. ಆದರೆ ಪಿಎಸ್‌ ಆ ಎರಡೂ ಚಿತ್ರಗಳಲ್ಲಿಯೂ ಯಾವ ವ್ಯತ್ಯಾಸವನ್ನೂ ಕಾಣಲಿಲ್ಲ. ಆಕೆ ವಾಸಿಸಲು ಯಾವ ಮನೆಯನ್ನು ಆಯ್ದುಕೊಳ್ಳುತ್ತಾಳೆಂದು ಪ್ರಶ್ನಿಸಿದಾಗ ಮಾತ್ರ ಸ್ಪಷ್ಟವಾಗಿ ಬೆಂಕಿ ಹೊತ್ತಿಕೊಳ್ಳದ ಮನೆಯತ್ತ ಬೆರಳು ಮಾಡಿ ತೋರಿಸುತ್ತಿದ್ದಳು. ಪ್ರತಿಬಾರಿ ಕೇಳಿದಾಗಲೂ ಹೀಗೆಯೇ ಉತ್ತರಿಸುತ್ತಿದ್ದಳು. ಆಕೆಯ ಮಿದುಳು ಮನೆಯ ಎಡಭಾಗಕ್ಕೆ ಬೆಂಕಿ ಬಿದ್ದಿದೆ ಎಂಬ ಮಾಹಿತಿಯನ್ನು ಸಂಸ್ಕರಿಸಿದ್ದರೂ, ಆಕೆಗೆ ಅದರ ಪರಿವೆಯೇ ಆದಂತೆ ಇರಲಿಲ್ಲ. 

ವಿವರಣೆಗೆ ನಿಲುಕದ ಈ ವಿಚಿತ್ರವಿದೆಯಲ್ಲ, ಅದು ನಮ್ಮೊಳಗೇ ಇರುವ ವಿದ್ಯಮಾನ.  ಪ್ರಜ್ಞೆ ಎನ್ನುವುದರ ಪ್ರಮುಖ ಅಂಶ. 

ಪ್ರಜ್ಞೆ ಎನ್ನುವುದು ನಮ್ಮ ಅಸ್ತಿತ್ವದಲ್ಲಿರುವುದರ ಅರಿವಿನಂತೆ. ಚಿಂತನೆ, ಗ್ರಹಿಕೆ ಅಥವಾ ಸಂವೇದನೆಯನ್ನು ಅರಿಯುವ ಬಗೆ,” ಎನ್ನುತ್ತಾರೆ  ಬೆಂಗಳೂರಿನ ನ್ಯಾಶನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಅಡ್ವಾನ್‌ಸ್‌ಡ್‌ ಸ್ಟಡೀಸ್‌ (ಎನ್‌ಐಎಎಸ್‌-ನಿಯಾಸ್‌) ಸಂಸ್ಥೆಯಲ್ಲಿ ಪ್ರಜ್ಞೆಯ ಅಧ್ಯಯನದಲ್ಲಿ ತೊಡಗಿರುವ ನಿತಿನ್‌ ನಾಗರಾಜ್.‌ ನಾವೆಲ್ಲರೂ ಒಳಗೊಳಗೇ ಅದನ್ನು ಅನುಭವಿಸಿರುತ್ತೇವಾದರೂ ಅದಕ್ಕೊಂದು ವ್ಯಾಖ್ಯಾನ ಕೊಡುವುದು ಕಷ್ಟ ಎಂದೂ ಹೇಳುತ್ತಾರೆ. 

ಪ್ರಜ್ಞೆ ಎನ್ನುವುದು ನಮ್ಮ ಅಸ್ತಿತ್ವದಲ್ಲಿರುವುದರ ಅರಿವಿನಂತೆ. ಚಿಂತನೆ, ಗ್ರಹಿಕೆ ಅಥವಾ ಸಂವೇದನೆಯನ್ನು ಅರಿಯುವ ಬಗೆ,” 

ಪ್ರಜ್ಞೆಯಿಂದಿರುವುದು ನಮ್ಮ ಬದುಕಿನ ಜೊತೆಗೆ ನಿಕಟವಾಗಿ ತಳುಕಿಕೊಂಡಿರುವ ಅನುಭವ. ಹಾಗಿದ್ದೂ ನಾವು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಪ್ರಜ್ಞೆ ಎನ್ನುವುದರ ಒಂದು ವ್ಯಾಖ್ಯಾನ ಹೀಗೂ ಇದೆ: “ನಮ್ಮಂತೆ ಇರುವುದು ಎಂದರೆ ಹೇಗೆ?”. ನಮ್ಮ ಮನಸ್ಸಿನೊಳಗೇ ಆಗುವ ಅನುಭವಗಳು ಹಾಗೂ ಸುತ್ತಲಿನ ಎಲ್ಲದರ ಪ್ರಜ್ಞೆ ಇದು. ನಾವು ಹೊರಗಿನ ಸಂವೇದನೆಗಳ ಬಗ್ಗೆ ಎಚ್ಚರದಿಂದಿರುತ್ತೇವೆ. ಹಾಗೆಯೇ ನಮ್ಮ ಯೋಚನೆಗಳೂ, ಭಾವನೆಗಳೂ, ನೋವಿನ ಬಗ್ಗೆಯೂ ನಮಗೆ ಅರಿವಿರುತ್ತದೆ. ಎಚ್ಚರದಿಂದಿದ್ದಾಗ ನಮಗೆ ಪ್ರಜ್ಞೆ ಇರುತ್ತದೆ. ಆದರೆ ನಿದ್ರಿಸುವಾಗಿನ ಕನಸುಗಳೂ, ಭ್ರಾಮಕ ಸ್ಥಿತಿಯೂ ವಾಸ್ತವ ಅನುಭವದಂತೆಯೇ ತೋರುತ್ತವೆ.  ನಾವು ಪ್ರತಿಯೊಬ್ಬರೂ ನಾಯಕ, ನಾಯಕಿಯರಾಗಿರುವ, ನಮ್ಮ ಸುತ್ತಲೂ ಇರುವ ಪರಿಸರದಲ್ಲಿ ನಡೆಯುತ್ತಿರುವ ʼನಾಟಕʼವನ್ನು ನಾವು ಮನಸ್ಸಿನೊಳಗೇ ಅನುಭವಿಸುವಂತೆ ಇದು. 

ಆದರೆ ನಮ್ಮ ಮಿದುಳು ಈ “ಒಳ ನಾಟಕವನ್ನು” ಹೇಗೆ ಹುಟ್ಟಿಸುತ್ತದೆ? ಅದು ನಮಗೆ ಅರಿವಾಗುವ ಹಾಗೆ ಹೇಗೆ ಮಾಡುತ್ತದೆ ಎನ್ನುವುದು ದಶಕಗಳ ಪ್ರಯತ್ನದ ನಂತರವೂ ವಿಜ್ಞಾನಿಗಳಿಗೆ ಇನ್ನೂ ನಿಗೂಢವಾಗಿದೆ. ಕಾರಣ, ಇದು ಪ್ರತಿಯೊಬ್ಬ ವ್ಯಕ್ತಿಯ ಆತ್ಮಾನುಭವ. 

“ನನಗೆ ಪ್ರಜ್ಞೆ ಇದೆ ಅನ್ನುವುದು ನನಗೆ ಗೊತ್ತು. ಆದರೆ ನಿಮಗೆ, ಅಥವಾ ಇನ್ಯಾರಿಗೂ, ಪ್ರಜ್ಞೆ ಇದೆ ಎಂಬುದು ನನಗೆ ತಿಳಿಯುವುದು ಅಸಾಧ್ಯ.” ಎನ್ನುತ್ತಾರೆ ಬೆಂಗಳೂರಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸಸಿನಲ್ಲಿ ನರವಿಜ್ಞಾನ ಕೇಂದ್ರದ (ಸಿಎನ್‌ಎಸ್‌) ಮುಖ್ಯಸ್ಥರಾಗಿರುವ ಎಸ್‌.ಪಿ. ಅರುಣ್‌. “ನೀವು ಒಡನಾಡುತ್ತಿರುವ ಎಲ್ಲರಿಗೂ ಪ್ರಜ್ಞೆ ಇದೆ ಎಂದು ನೀವು ಭಾವಿಸಿರುತ್ತೀರಿ, ಆದರೆ ನೀವಾಗಲಿ, ಅವರಾಗಲಿ ಪ್ರಜ್ಞೆಯಿಂದ ಇದ್ದೀರಿ ಎನ್ನುವುದನ್ನು ಪರೀಕ್ಷಿಸುವ ವಿಧಾನ ನನಗೆ ಗೊತ್ತಿಲ್ಲ. ” 

ನೀವು ಪ್ರಜ್ಞೆಯಿಂದಿದ್ದೀರೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸುವ ವಿಧಾನ ಯಾವುದೆಂದು ನನಗೆ ಗೊತ್ತಿಲ್ಲ.

ಸಿಎನ್‌ಎಸ್ಸಿನಲ್ಲಿಯೇ ಪ್ರೊಫೆಸರಾಗಿರುವ ಆದಿತ್ಯ ಮೂರ್ತಿಯೂ ಇದನ್ನು ಒಪ್ಪುತ್ತಾರೆ. ಅವರ ಪ್ರಕಾರ ಯಾವುದೇ ಘಟನೆಯನ್ನೂ ವ್ಯಕ್ತಿಯೊಬ್ಬರು ವೈಯಕ್ತಿಕವಾಗಿ ಅನುಭವಿಸುವಂತೆ ಮಾಡುವ ಒಳಗ್ರಹಿಕೆ ಹೇಗೆ ಹುಟ್ಟುತ್ತದೆನ್ನುವುದನ್ನು ಕೇವಲ ಮಿದುಳಿನ ವಿದ್ಯುತ್‌ ಚಟುವಟಿಕೆಗಳನ್ನು ದಾಖಲಿಸಿ ತಿಳಿಯುವುದು ಸಾಧ್ಯವಿಲ್ಲ. 

“ಪ್ರಜ್ಞೆ ಎನ್ನುವುದು ನಾವು ಪ್ರತಿಯೊಬ್ಬರೂ ವೈಯಕ್ತಿಕವಾಗಿ, ಖಾಸಗಿಯಾಗಿ ಅನುಭವಿಸುವ ವಿದ್ಯಮಾನ. ಆದರೆ ಮಿದುಳಿನ ನರಗಳು ವಿದ್ಯುತ್‌ ಸಂಕೇತಗಳನ್ನು ಸೃಷ್ಟಿಸುವುದನ್ನೋ, ಡೋಪಮಿನ್‌ ರಾಸಾಯನಿಕವನ್ನು ಸ್ರವಿಸುವುದನ್ನೋ, ಅಥವಾ ಯಾವುದೇ ನಡವಳಿಕೆಯನ್ನೋ ಅಧ್ಯಯನ ಮಾಡುವುದು ಪರಕೀಯರೊಬ್ಬರು ವಸ್ತುನಿಷ್ಠವಾಗಿ ಮಾಡುವ ಅಧ್ಯಯನ.” ಎಂದು ವಿವರಿಸುತ್ತಾರೆ ಆದಿತ್ಯ. “ಭೌತವಿಜ್ಞಾನ ಅಥವಾ ಜೀವಕ್ರಿಯೆಗಳ ಮೊದಲಾದ ವಿಜ್ಞಾನದ ಶಾಖೆಗಳಲ್ಲಿ, ವೈಯಕ್ತಿಕ ಅನುಭವಗಳನ್ನು ಹೊರಗಿಟ್ಟು ಅಧ್ಯಯನ ಮಾಡುವುದು ಸಾಕಷ್ಟು ಯಶಸ್ಸನ್ನು ದೊರಕಿಸಿದೆ. ಆದರೆ ನರವಿಜ್ಞಾನಕ್ಕೆ ಅಥವಾ ಪ್ರಜ್ಞೆಯ ಅಧ್ಯಯನದ ವಿಷಯಕ್ಕೆ ಬಂದರೆ, ಈ ವಿದ್ಯಮಾನದ ವಿವರಣೆಯಲ್ಲಿಯೇ ದೊಡ್ಡ ಕಂದರಗಳಿವೆ. ನರಗಳ ಚಟುವಟಿಕೆಯನ್ನು ವೈಯಕ್ತಿಕ ಅನುಭವಗಳ ಜೊತೆಗೆ ಸರಿಹೊಂದಿಸುವುದರಿಂದ ಈ ಕಂದರವನ್ನು ಕಡಿಮೆ ಮಾಡಬಹುದು,” ಎನ್ನುತ್ತಾರೆ ಆದಿತ್ಯ.

ವಸ್ತುನಿಷ್ಠವಾದ ಪರಕೀಯರಿಂದ ನಡೆಯುವ ಅಧ್ಯಯನ ಹಾಗೂ ವೈಯಕ್ತಿಕ ಅನುಭವದಿಂದಾದ ಗ್ರಹಿಕೆಗಳ ನಡುವಣ ಕಂದರದ ನಡುವೆ ಸೇತುವೆ ಕಟ್ಟುವುದು ಹೇಗೆ ಎನ್ನುವುದೇ ಪ್ರಜ್ಞೆಯ ಬಗ್ಗೆ ನಡೆಯುತ್ತಿರುವ ಎಲ್ಲ ಅಧ್ಯಯನಗಳ ಮೂಲ ಉದ್ದೇಶವಾಗಿದೆ.

ಈ ನಿಟ್ಟಿನಲ್ಲಿ ವಿಜ್ಞಾನಿಗಳ ಪ್ರಯತ್ನ ನಿಂತಿಲ್ಲ. ಈಗ ಈಗ ಅಮೆರಿಕೆಯ ಸಿಯಾಟಲ್‌ ನಲ್ಲಿರುವ ಅಲೆನ್‌ ಮಿದುಳು ವಿಜ್ಞಾನ ಸಂಶೋಧನಾಲಯದಲ್ಲಿ ಸಂಶೋಧಕರಾಗಿರುವ ಸುಪ್ರಸಿದ್ಧ ನರವಿಜ್ಞಾನಿ ಕ್ರಿಸ್ಟಾಫ್‌ ಕಾಕ್‌ ಅವರನ್ನು, 1990 ದಶಕದಲ್ಲಿ ಮಿದುಳಿನ ಚಿತ್ರಣ ಹಾಗೂ ಮಿದುಳಿನ ಚಟುವಟಿಕೆಗಳನ್ನು ದಾಖಲಿಸುವ ತಂತ್ರಗಳಲ್ಲಿ ಆದ ಸುಧಾರಣೆಗಳು ಹುರಿದುಂಬಿಸಿದ್ದುವು. ಈ ನಿಟ್ಟಿನಲ್ಲಿ ಆಶಾವಾದಿಯಾಗಿದ್ದರು.

ವಿಜ್ಞಾನಿಗಳು ಮ್ಯಾಗ್ನೆಟಿಕ್‌ ರೆಸೊನೆನ್ಸ್‌ ಇಮೇಜಿಂಗ್‌ (ಎಂಆರ್‌ಐ) ಚಿತ್ರಗಳ ಮೂಲಕ ಪ್ರಜ್ಞೆ ಇರುವ ಮಿದುಳಿನ ರಚನೆ ಹಾಗೂ ಚಟುವಟಿಕೆಗಳನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಾರೆ. (ಚಿತ್ರಕೃಪೆ: ಸ್ವಾಗತ ಹಾಲ್ದರ್‌, ಕಾಗ್ನಿಶನ್‌ ಲ್ಯಾಬ್‌, ಐಐಎಸ್ಸಿ)

1998ರಲ್ಲಿ ಜರ್ಮನಿಯ ಬಾರೊಂದರಲ್ಲಿ ಖುಷಿಯಾಗಿ ಪಾನೀಯ ಸೇವಿಸುತ್ತಿದ್ದ ಕ್ರಿಸ್ಟಾಫ್‌, ತಮ್ಮೊಡನಿದ್ದ ಗೆಳೆಯ ಡೇವಿಡ್‌ ಶಾಮರ್ಸ್‌ ಜೊತೆಗೆ ಒಂದು ಪಂದ್ಯ ಕಟ್ಟಿದ್ದರು. ಇನ್ನು ಇಪ್ಪತ್ತೈದು ವರ್ಷಗಳಲ್ಲಿ ವಿಜ್ಞಾನಿಗಳು ಪ್ರಜ್ಞೆಯ ಕುರಿತಾದ ಒಂದಾದರೂ ಪ್ರಮುಖ ಸಮಸ್ಯೆಯನ್ನು ಬಗೆಹರಿಸಿರುತಾರೆ. ಪ್ರಜ್ಞೆಯನ್ನು ಪ್ರತಿನಿಧಿಸುವ ನರವಿದ್ಯಮಾನಗಳು ಅಂದರೆ ವಿಜ್ಞಾನಿಗಳು ʼನ್ಯೂರಲ್‌ ಕೊರಿಲೇಟ್ಸ್‌ ಆಫ್‌ ಕಾಂಶಿಯಸ್‌ನೆಸ್‌ʼ ಅಥವಾ ಪ್ರಜ್ಞೆಯ ಯಾವುದೇ ಘಟನೆಯನ್ನು ವಿವರಿಸಬಹುದಾದ ನರಗಳ ಚಟುವಟಿಕೆಗಳಲ್ಲಿ,  ಒಂದನ್ನಾದರೂ ಪತ್ತೆ ಮಾಡಿರುತ್ತಾರೆ ಎಂದು ಬಾಜಿ ಕಟ್ಟಿದ್ದರು. 

ಸದ್ಯಕ್ಕೆ ನ್ಯೂಯಾರ್ಕ್‌ ವಿಶ್ವವಿದ್ಯಾನಿಲಯದ ಮನಸ್ಸು, ಮಿದುಳು ಹಾಗೂ ಪ್ರಜ್ಞೆಗಳ ಕೇಂದ್ರದ ಸಹನಿರ್ದೇಶಕರಾಗಿರುವ ಡೇವಿಡ್‌ಗೆ ಆಗ ಈ ಬಗ್ಗೆ ಸ್ವಲ್ಪ ಸಂದೇಹವಿತ್ತು.  ಈ ಹಿಂದಿನ ಸೈಂಟಿಫಿಕ್‌ ಅಮೆರಿಕನ್‌ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನವೊಂದರಲ್ಲಿ ಹಾಗೂ ಇತ್ತೀಚೆಗೆ ನಡೆದ ವಿಶ್ವ ವಿಜ್ಞಾನ ಹಬ್ಬದಲ್ಲಿಯೂ ಅವರು ಈ ಸಂದೇಹವೇಕೆ ಎಂದು ಅವರು ವಿವರಿಸಿದ್ದಾರೆ. ಅವರ ಪ್ರಕಾರ ಪ್ರಜ್ಞೆಯ ಅನುಭವಗಳು ಅತ್ಯಂತ ಗಾಢವಾದ, ಖಾಸಗಿ ಅನುಭವಗಳು. ತಾವು ಹಾಗೂ ಕ್ರಿಸ್ಟಾಫ್‌ ಒಂದೇ ಗುಲಾಬಿಯನ್ನು ನೋಡಿದಾಗ, ಇಬ್ಬರಿಗೂ ಒಂದೇ ತೆರನ ಅನುಭವ ಆಗಲಿಕ್ಕಿಲ್ಲ. ಅಷ್ಟೇ ಯಾಕೆ. ಆ ಗುಲಾಬಿಯ ಬಣ್ಣ ಕೆಂಪೇ ಇದ್ದರೂ ಇಬ್ಬರೂ ಒಂದೇ ಬಗೆಯ ಕೆಂಪನ್ನು ಕಂಡಿರಲಿಕ್ಕಿಲ್ಲ. ವಸ್ತುನಿಷ್ಠವಾದ ಸಂಗತಿಗಳಲ್ಲಿಯೂ ಅಡಗಿರುವ ಇಂತಹ ವೈಯಕ್ತಿಕ ಗ್ರಹಿಕೆಗಳನ್ನು ನಮ್ಮ ಮಿದುಳಿನ ಚಟುವಟಿಕೆಗಳನ್ನು ದಾಖಲಿಸಿ ಕಾಣುವುದು ಅಸಾಧ್ಯ ಎಂದು ಅವರ ಯೋಚನೆಯಾಗಿತ್ತು. 

ಡೇವಿಡ್ಡರ ಈ ಯೋಚನೆ ಸತ್ಯ. 2023ರಲ್ಲಿ ಕ್ರಿಸ್ಟಾಫ್‌ ತಾನು ಬಾಜಿ ಸೋತೆ ಎಂದು ಒಪ್ಪಿಕೊಂಡು, ಡೇವಿಡ್ಡರಿಗೆ ಎಲ್ಲರ ಮುಂದೆ ಸಾರ್ವಜನಿಕವಾಗಿ ಒಂದು ಡಬ್ಬಿ ವೈನ್‌ ಕೊಟ್ಟಿದ್ದರು. ಬಾಜಿಯ ಪಣ ಅದಾಗಿತ್ತು. ವಿಜ್ಞಾನಿಗಳು ಇಂದಿಗೂ ಪ್ರಜ್ಞೆಯ ಅನುಭವಕ್ಕೆ ಜೈವಿಕ ಕಾರಣಗಳೇನೆಂದು ಪತ್ತೆ ಮಾಡಿಲ್ಲ. 

“ಯಾವ ಭೌತಿಕ ರಚನೆಗಳು ಪ್ರಜ್ಞೆಗೆ ಮೂಲ ಎಂದು ತರ್ಕಿಸುವ ಥಿಯರಿಯೊಂದನ್ನು ಕಟ್ಟುವುದು ಇಂದಿನ ವಿಜ್ಞಾನದ ಅತ್ಯಂತ ಗಾಢವಾದ ಹಾಗೂ ಅದ್ಭುತವಾದ ಸಮಸ್ಯೆಗಳಲ್ಲಿ ಒಂದು.” ಎಂದು ಅಮೆರಿಕೆಯ ಆಸ್ಟಿನ್ನಿನಲ್ಲಿರುವ ಟೆಕ್ಸಾಸ್‌ ವಿಶ್ವವಿದ್ಯಾನಿಲಯದ ಗಣಕ ತಜ್ಞ ಸ್ಕಾಟ್‌ ಆರೋನ್ಸನ್‌ ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ. “ಈ ಸಮಸ್ಯೆಗೆ ಪರಿಹಾರ ಸಿಗದೇ ಇರುವುದಕ್ಕೆ ಯಾವುದೇ ತಾತ್ವಿಕ ಕಾರಣಗಳೂ ಇಲ್ಲ. ಆದರೂ ಮನುಷ್ಯರಿಗೆ ಈ ಸಮಸ್ಯೆಯ ಪರಿಹಾರದ ಬಳಿಯೂ ಸುಳಿದಿಲ್ಲ.” ಎನ್ನುತ್ತಾರೆ ಆರೋನ್ಸನ್‌.

ಪ್ರಜ್ಞೆಯ ಸಮಸ್ಯೆಯನ್ನು ಪರಿಹರಿಸುವುದರಲ್ಲಿ ಕ್ರಿಸ್ಟಾಫಿಗೆ ಇನ್ನೂ ಆಸಕ್ತಿ ಇದೆ. ಇತ್ತೀಚೆಗೆ ಆತ ಡೇವಿಡ್ಡರ ಜೊತೆ ಇನ್ನೊಂದು ಬಾಜಿಯನ್ನು ಕಟ್ಟಿದ. ಗೆದ್ದರೆ ಇಮ್ಮಡಿ ಮೊತ್ತ ಕೊಡುವುದು ಷರತ್ತು. ಆತನ ಪ್ರಕಾರ 2048ನೇ ಇಸವಿಯ ವೇಳೆಗೆ ಪ್ರಜ್ಞೆಯನ್ನು ಗುರುತಿಸುವ ಭಾಗವನ್ನು ಮಿದುಳಿನಲ್ಲಿ ಪತ್ತೆ ಮಾಡಲಾಗುವುದು. 

ಇನ್ನು ಇಪ್ಪತ್ತನಾಲ್ಕು ವರ್ಷಗಳು ಕಳೆಯುವುದರೊಳಗೆ ಈ ಬಾಜಿ ಕಟ್ಟಿದ ಇಬ್ಬರೂ ಮದ್ಯವನ್ನು ಆಸ್ವಾದಿಸುವ ವಯಸ್ಸನ್ನೂ ಮೀರಿಬಿಟ್ಟಿರುತಾರೆ ಎಂದಷ್ಟು ಖಚಿತವಾಗಿ ಪ್ರಜ್ಞೆಯ ವಿಷಯದಲ್ಲಿ ಏನಾಗುತ್ತದೆ ಎಂದು ಹೇಳಲಾಗದು. ಮೂವತ್ತು ವರ್ಷಗಳ ಹಿಂದೆ ಕ್ರಿಸ್ಟಾಫ್‌ ಆರಂಭಿಸಿದ ಪ್ರಜ್ಞೆಯನ್ನು ವಿವರಿಸುವ ವ್ಯಾಖ್ಯಾನದ ಬಗೆಗಿನ ಹೋರಾಟ ಇನ್ನೂ ನಡೆಯುತ್ತಲೇ ಇದೆ. 

ಪ್ರಜ್ಞೆಯ ಎಲ್ಲ ಮಗ್ಗುಲುಗಳನ್ನು ವಿವರಿಸುವ ಏಕತತ್ವ ಎಲ್ಲಿದೆ?

ಆರಂಭದಲ್ಲಿ ನರವಿಜ್ಞಾನಿಗಳು ಪ್ರಜ್ಞೆಯ ಈ ಸಮಸ್ಯೆಯನ್ನು ದೂರವೇ ಇಟ್ಟಿದ್ದರು. ಇಪ್ಪತ್ತನೆಯ ಶತಮಾನದ ಬಹುಪಾಲು ಅವಧಿಗೆ ನಮ್ಮ ಬಗ್ಗೆ ಹಾಗೂ ಸುತ್ತಲಿನ ಪ್ರಪಂಚದ ಬಗೆಗಿನ ವೈಯಕ್ತಿಕ ಗ್ರಹಿಕೆ ವಿಜ್ಙಾನದ ಅಳವಿಗೆ ಸಿಗದ ಅಸ್ಪಷ್ಟ ವಿಷಯವೆನ್ನಿಸಿತ್ತು

ಆದರೆ 1990ರಲ್ಲಿ, ಡಿಎನ್‌ಎಯ ರಚನೆಯನ್ನು ಬಿಡಿಸಿದವನೆಂದು ಖ್ಯಾತಿ ಪಡೆದ ಫ್ರಾನ್ಸಿಸ್‌ ಕ್ರಿಕ್‌ ಪ್ರಜ್ಞೆಯ ಅಧ್ಯಯನಕ್ಕೆ ಇಳಿಯಲು ತೀರ್ಮಾನಿಸಿದ. ಈತ ಹಾಗೂ ಕ್ರಿಸ್ಟಾಫ್‌ ಜೊತೆಗೂಡಿ, ಪ್ರಜ್ಞೆಯ ಕುರಿತ ನರವಿಜ್ಞಾನ-ಜೈವಿಕ ತತ್ವ” ಎಂಬ ಪ್ರಬಂಧವನ್ನು ಪ್ರಕಟಿಸಿದ. ಕೇವಲ ತತ್ವಜ್ಞಾನಿಗಳು ಹಾಗೂ ಮನೋವಿಜ್ಞಾನಿಗಳಷ್ಟೆ ಅಧ್ಯಯನ ಮಾಡುತ್ತಿದ್ದ ಪ್ರಜ್ಞೆ ಎನ್ನುವ ಪದ ನರವಿಜ್ಞಾನಿಗಳ ಮನಸ್ಸನ್ನೂ ಹೀಗೆ ಪ್ರವೇಶಿಸಿತು. ಈ ಪ್ರಬಂಧದಲ್ಲಿ ಪ್ರಜ್ಞೆಯ ಬೇರುಗಳು ನಮ್ಮ ಮಿದುಳಿನಲ್ಲಿರುವ ನರಮಂಡಲಗಳ ಜೊತೆಗೆ ತಳುಕಿಕೊಂಡಿರಬೇಕು ಎಂದು ತರ್ಕಿಸಲಾಗಿತ್ತು. ನರಮಂಡಲದಲ್ಲಿ ಪ್ರಜ್ಞೆಯ ಪ್ರತಿನಿಧಿಗಳನ್ನು ಹುಡುಕುವುದು ಬಾಕಿಯಿತ್ತು. 

 ಪ್ರಜ್ಞೆಯ ಬೇರುಗಳು ನಮ್ಮ ಮಿದುಳಿನಲ್ಲಿರುವ ನರಮಂಡಲಗಳ ಜೊತೆಗೆ ತಳುಕಿಕೊಂಡಿರಬೇಕು ಎಂಬುದು ತರ್ಕ. ನರಮಂಡಲದಲ್ಲಿ ಪ್ರಜ್ಞೆಯ ಪ್ರತಿನಿಧಿಗಳನ್ನು ಹುಡುಕುವುದು ಬಾಕಿಯಿತ್ತು. 

ಇದರಿಂದ ಹುರುಪುಗೊಂಡ ಪ್ರಪಂಚದೆಲ್ಲೆಡೆಯ ವಿಜ್ಞಾನಿಗಳೂ ಪ್ರಜ್ಞೆಯ ಜೊತೆಗೆ ಸಂಬಂಧವಿರಬಹುದಾದ ಕುರುಹುಗಳಿಗಾಗಿ ಮಿದುಳಿನ ವಿವಿಧ ಭಾಗಗಳನ್ನು ಅನ್ವೇಷಿಸಲು ಆರಂಭಿಸಿದರು. ಕೆಲವರು ಹೀಗೆ ಸಂಗ್ರಹವಾದ ಮಾಹಿತಿಗಳನ್ನು ಒಟ್ಟಾಗಿಸಿ, ನಮ್ಮ ವೈಯಕ್ತಿಕ ಗ್ರಹಿಕೆಯ ಮೂಲವನ್ನು ಸರಾಗವಾಗಿ ತಿಳಿಸುವ ಸುಂದರ ತತ್ವಗಳನ್ನು ರೂಪಿಸಿದರು. 

ಪ್ಯಾರಿಸ್ಸಿನಲ್ಲಿರುವ ಕಾಲೇಜ್‌ ಡೆ ಫ್ರಾನ್ಸ್‌ ವಿವಿಯ ಗ್ರಹಿಕೆಯ ವಿಜ್ಞಾನಿ ಸ್ನಾಟಿಸ್ಲಾಸ್‌ ದಹೀನ್‌ ಇಂತಹುದೊಂದು ತತ್ವವನ್ನು ಮುಂದಿಟ್ಟರು. ಅದುವೇ ಗ್ಲೋಬಲ್‌ ವರ್ಕ್‌ಸ್ಪೇಸ್‌ ಥಿಯರಿ ಅಥವಾ ಜಿಡಬ್ಲ್ಯೂಟಿ. ಇದನ್ನು ಕನ್ನಡದಲ್ಲಿ ಸಾರ್ವತ್ರಿಕ ಕ್ರಿಯಾರಂಗ ತತ್ವ ಎನ್ನಬಹುದು. 

ಜಿಡಬ್ಲ್ಯೂಯ ತಟಿಯ ಪ್ರಕಾರ ನಮ್ಮ ಮಿದುಳಿಗೆ ಎಲ್ಲ ಬಗೆಯ ಮಾಹಿತಿಯೂ ಬಂದು ಕೂಡಿಕೊಳ್ಳುತ್ತವೆ. ಆದರೆ ಇದರಲ್ಲಿ ಕೆಲವಷ್ಟೆ ಅಡೆತಡೆಗಳನ್ನು ದಾಟಿ ಮುಂದುವರೆದು ಸಾರ್ವತ್ರಿಕ ಎನ್ನಿಸುವ ಜಾಗವನ್ನು ಸೇರುತ್ತವೆ. ಹೀಗೆ ನಮಗೆ ಆ ಮಾಹಿತಿಯ ಪರಿವೆ ದೊರಕುತ್ತದೆ. ಅನಂತರ ಈ ಮಾಹಿತಿಯು ಇತರೆ ಮಾಹಿತಿಗಳ ಜೊತೆಗೆ ಕೂಡಿಸಲ್ಪಟ್ಟು ಮಿದುಳಿನ ಬೇರೆ ಭಾಗಗಳಿಗೆ ಪಸರಿಸುತ್ತದೆ. ತೀರ್ಮಾನಗಳನ್ನು ರೂಪಿಸಲು ನೆರವಾಗುತ್ತದೆ. ಈ ಪ್ರಕ್ರಿಯೆಯು ಬಹುತೇಕ ಮಿದುಳಿನ ಮುಂಭಾಗದಲ್ಲಿರುವ ಪ್ರಿಫ್ರಾಂಟಲ್‌ ಕಾರ್ಟೆಕ್ಸ್‌ ಎಂಬ ಮುಂಮಿದುಳಿನ ಭಾಗದಲ್ಲಿರುವ ನರಗಳ ಜಾಲದಲ್ಲಿ ಆಗುತ್ತದೆಂದು ಮಿದುಳಿನ ಚಿತ್ರಗಳ ಅಧ್ಯಯನಗಳು ಸೂಚಿಸಿವೆ. ಮಿದುಳಿನ ಇತರೆ ಭಾಗಗಳೂ ಈ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ. 

ಆದರೆ ಈ ಬಗ್ಗೆ ಕ್ರಿಸ್ಟಾಫ್‌ ಗೆ ವಿಶ್ವಾಸವಿರಲಿಲ್ಲ. ಹೀಗಾಗಿ ಆತ ಅಮೆರಿಕೆಯ ಮೇಡಿಸನ್ನಿನಲ್ಲಿರುವ ವಿಸ್ಸಾನ್ಸಿನ್‌ ವಿಶ್ವವಿದ್ಯಾನಿಲಯದ ನರವಿಜ್ಞಾನಿ ಜೂಲಿಯೊ ಟೊನೊನಿ ಮತ್ತೊಂದು ತತ್ವವನ್ನು ಪ್ರತಿಪಾದಿಸಿದರು. ಇದನ್ನು ಸಮಗ್ರ ಮಾಹಿತಿ ತತ್ವ ಅಥವಾ ಇಂಟಿಗ್ರೇಟೆಡ್‌ ಇನ್‌ಫರ್ಮೇಶನ್‌ ಥಿಯರಿ -ಐಐಟಿ- ಎಂದು ಹೆಸರಿಸಿದರು. ಜೂಲಿಯೊ ಪ್ರಕಾರ ಪ್ರಜ್ಞೆ ಎನ್ನುವುದು ಮಿದುಳಿನ ನರಜಾಲಗಳ ಆಂತರಿಕ ಗುಣ. ಕಾರ್ಯ-ಕಾರಣ ಸಂಬಂಧದಿಂದ ಇದು ಉಂಟಾಗುತ್ತದೆ. ಯಾವುದೋ ಕಾರಣದಿಂದ ನರಜಾಲದಲ್ಲಿ ಆಗುವ ಬದಲಾವಣೆಗಳು ಇದಕ್ಕೆ ಮೂಲ. ಈ ಬದಲಾವಣೆಗಳು ಕಾರಣ. ಇವು ನರಜಾಲಗಳ ಭವಿಷ್ಯದ ಸ್ಥಿತಿಯ ಮೇಲೂ ಪ್ರಭಾವ ಬೀರುತ್ತವೆ. ಅದು ಕಾರ್ಯ. ಐಐಟಿ ಪರ ವಾದಿಸುವವರ ಪ್ರಕಾರ ಮಿದುಳಿನ ಹಿಂಭಾಗದಲ್ಲಿ ಇರುವ ಜಾಲರಿಯಂತೆ ತೋರುವ ನರಗಳ ಜಾಲ ಇದಕ್ಕೆ ತಕ್ಕುದಾಗಿದೆ. ಮಿದುಳಿನ ಈ ಭಾಗವನ್ನು ಇವರು “ಹಾಟ್‌ ಜೋನ್‌” ಎಂದು ಕರೆದಿದ್ದಾರೆ.

ಪ್ರಜ್ಞೆಯ ಕುರಿತ ಎರಡು ಥಿಯರಿಗಳ ಪ್ರಸ್ತುತಿ (ಚಿತ್ರ: ಹರೀಶ್‌ ಕಪೂರ್‌)

ಪ್ರಜ್ಞೆಯ ಕುರಿತ ಇವೆರಡೂ ತತ್ವಗಳ ಪರ-ವಿರೋಧ ವಾದಿಗಳು ಪರಸ್ಪರ ಸಹಕಾರದೊಂದಿಗೆ ಸ್ಪರ್ಧಿಸಿದರು! ಎರಡೂ ಪಂಗಡಗಳ ವಿಜ್ಞಾನಿಗಳು ಜೊತೆಯಾಗಿ ಪ್ರಯೋಗಗಳನ್ನು ರೂಪಿಸಿ, ಪ್ರಜ್ಞೆಯ ಬಗೆಗಿದ್ದ ತಮ್ಮ ಪರಿಕಲ್ಪನೆಗಳನ್ನು ಪರೀಕ್ಷೆಗೊಡ್ಡಿದರು. ಯಾವ ತರ್ಕ ಫಲಿತಾಂಶಗಳಿಗೆ ಒಪ್ಪುತ್ತದೆ ಎಂದು ಪರೀಕ್ಷಿಸಿದರು. 

ಕಳೆದ ವರ್ಷ ಈ ಸಹಕಾರೀ ಪ್ರಯೋಗಗಳ ಫಲಿತಾಂಶಗಳು ಬಯಲಾದುವು. ಆದರೆ ಗೆಲುವು ಸ್ಪಷ್ಟವಾಗಿರಲಿಲ್ಲ. ಯಾವ ತತ್ವವೂ ಫಲಿತಾಂಶಗಳಿಗೆ ಹೊಂದಿಕೊಳ್ಳುವಂತಿರಲಿಲ್ಲ. 

ಸಾಕಷ್ಟು ಪ್ರಚಾರ ಪಡೆದ ಈ ಸ್ಪರ್ಧೆ ನಡೆಯುವ ಮುನ್ನವೇ ವಿಜ್ಞಾನಿಗಳು ಎರಡೂ ಥಿಯರಿಗಳಲ್ಲಿ ಇರುವ ದೋಷಗಳನ್ನು ಹೆಕ್ಕಲು ಆರಂಭಿಸಿದ್ದರು. ಉದಾಹರಣೆಗೆ, ಅಪಸ್ಮಾರದ ರೋಗಿಗಳಲ್ಲಿ ಕೆಲವರ ಮಿದುಳಿನ ಮುಂಭಾಗವನ್ನು ಶಸ್ತ್ರಕ್ರಿಯೆಯಿಂದ ತೆಗೆದು ಹಾಕಲಾಗುತ್ತದೆ. ಆದರೂ ಅವರಲ್ಲಿ ಪ್ರಜ್ಞೆ ಪರಿಪೂರ್ಣವಾಗಿತ್ತು. ಇದು ಜಿಡಬ್ಲ್ಯೂಟಿಯ ತರ್ಕಗಳಿಗೆ ತದ್ವಿರುದ್ಧವಾಗಿತ್ತು. ಇನ್ನು ಐಐಟಿ ತತ್ವವೂ ಅಷ್ಟೆ. ಸರಿಯಾದ ಜೋಡಣೆ ಇರುವ ಯಾವುದೇ ನರಜಾಲದಲ್ಲಿಯೂ ಒಂದು ರೀತಿಯ ಪ್ರಜ್ಞೆ ಇದ್ದೇ ಇರುತ್ತದೆ ಎಂದು ತರ್ಕಿಸುತ್ತದೆ. ಅಂದರೆ ಪುಟ್ಟದೇ ಆದ ಜಾಲಗಳು ಇರುವ ನಮ್ಮ ಫೋನು, ಲ್ಯಾಪ್‌ಟಾಪುಗಳಿಗೂ ತಮ್ಮ ಆಂತರ್ಯದ ಪರಿವೆ ಇರಬೇಕು. ತತ್ವವಿಜ್ಞಾನಿಗಳು ಹೇಳುವ ಪ್ಯಾನ್‌ಸೈಕಿಸಂ ಅಥವಾ ವಿಶಾಲ ಮನೋವೃತ್ತಿಯಂತೆ ಇದು. ಹೀಗಾಗಿ ಬಹಳಷ್ಟು ವಿಜ್ಞಾನಿಗಳು ಇದನ್ನು ಒಪ್ಪದೆ ಗೋಣು ಅಡ್ಡಹಾಕುವುದುಂಟು. 

ಪ್ರಜ್ಞೆಯ ಕುರಿತು ಈ ಎರಡು ತತ್ವಗಳಲ್ಲದೆಯೇ ಇನ್ನೂ ಇಪ್ಪತ್ತಾದರೂ ವ್ಯಾಖ್ಯಾಣಗಳಿವೆ.  ಪ್ರಜ್ಞೆಗೆ “ಉನ್ನತ ಶ್ರೇಣಿಯ” ಮಿದುಳು ಕಾರಣ ಇರಬೇಕು ಎನ್ನುವ ತರ್ಕದಿಂದ ಹಿಡಿದು, ಕ್ವಾಂಟಂ ತತ್ವಗಳೇ ಮೂಲ ಎನ್ನುವವರೆಗೂ ಹಲವು ವ್ಯಾಖ್ಯಾನಗಳಿಗೆ. 

ಈ ಎಲ್ಲ ತತ್ವಗಳೂ ಪ್ರಜ್ಞೆ ಅಥವಾ ಪರಿವೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿವರಸಬಲ್ಲವೇ ಹೊರತು, ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುವುದಿಲ್ಲ. 

“ನಿರಾಶೆಯೇ ಬಹಳ,” ಎನ್ನುತ್ತಾರೆ ಆದಿತ್ಯ. “ಸಹಜವಾಗಿಯೇ ನಮ್ಮೊಳಗಿರುವ ವಿದ್ಯಮಾನವೊಂದರ ಬಗ್ಗೆ ಏನನ್ನೂ ಹೇಳಲು ನಮಗೆ ಸಾಧ್ಯವಾಗುತ್ತಿಲ್ಲ. ನಾವೀಗ ಏಕಕಾಲದಲ್ಲಿ ಸಹಸ್ರ ಕೋಟಿ ನರತಂತುಗಳ ಚಟುವಟಿಕೆಗಳನ್ನು ಗಮನಿಸಬಲ್ಲೆವು. ಆದರೆ ಈ ಚಟುವಟಿಕೆಗಳೆಲ್ಲವೂ ನಮಗೆ ಹೇಗೆ ಪರಿವೆಯನ್ನುಂಟು ಮಾಡುತ್ತಿವೆ ಎನ್ನುವುದನ್ನು ಅರಿತುಕೊಳ್ಳದಿದ್ದರೆ, ನಮ್ಮನ್ನು ಮಾನವರನ್ನಾಗಿ ಮಾಡಿದ್ದೇನು ಎನ್ನುವುದನ್ನು ತಿಳಿಯುವ ಅವಕಾಶವೇ ಕೈ ತಪ್ಪಿಹೋಗುತ್ತದೆ.” ಎನ್ನುತ್ತಾರೆ ಆದಿತ್ಯ. 

 ಮಿದುಳಿನೊಳಗಿನ ಪ್ರಜ್ಞೆ

ಮುಂಭಾಗ ಹಾಗೂ ಹಿಂಭಾಗಗಳಲ್ಲಿ ಅಷ್ಟೆ ಅಲ್ಲದೆ, ಮಿದುಳಿನ ಇನ್ನೂ ಹಲವು ಭಾಗಗಳನ್ನೂ ಪ್ರಜ್ಞೆಯ ವಿಭಿನ್ನ ಅನುಭವಗಳಿಗೆ ತಳುಕಿಸಲಾಗಿದೆ. 

  1. ಕ್ಲಾಸ್ಟ್ರಮ್‌: ದೊಡ್ಡ ಮಿದುಳು ಅಥವಾ ಕಾರ್ಟೆಕ್ಸಿನ ತಳಭಾಗದಲ್ಲಿ ಇರುವ ಕ್ಲಾಸ್ಟ್ರಮ್‌ ಎನ್ನುವ ಹಾಳೆಯಂತಹ ಭಾಗವನ್ನು ವಿದ್ಯುತ್ತಿನಿಂದ ಪ್ರಚೋದಿಸಿದಾಗ ಮಹಿಳೆಯೊಬ್ಬಳು ಪ್ರಜ್ಞೆಯೇ ಇಲ್ಲದ ಹಾಗ ನಿರ್ಭಾವುಕವಾಗಿ ನೆಟ್ಟದೃಷ್ಟಿಯಿಂದ ನೋಡುತ್ತಿದ್ದ ಬಗ್ಗೆ 2014ರಲ್ಲಿ ವರದಿಯಾಗಿತ್ತು. ಆದರೆ ಮಿದುಳು ಜ್ವರದಿಂದಾಗಿ ಈ ಕ್ಲಾಸ್ಟ್ರಮ್‌ ಭಾಗ ನಾಶವಾಗಿಹೋಗಿದ್ದ ಮತ್ತೊಬ್ಬ ರೋಗಿಯ ಪ್ರಜ್ಞೆಗೆ ಏನೂ ಬಾಧೆ ಆಗಿರಲಿಲ್ಲ. 
  2. ಮುಂಭಾಗದ ಇನ್ಯುಲಾ ; ಮಿದುಳಿನೊಳಗೆ ಆಳದಲ್ಲಿ ಹುದುಗಿರುವ ಈ ಭಾಗವು ಹಲವಾರು ವೈಯಕ್ತಿಕ ಅನುಭವಗಳಲ್ಲಿ ಪಾತ್ರ ವಹಿಸಿದ್ದು ಗಮನಕ್ಕೆ ಬಂದಿದೆ. ಬಹುತೇಕ  ನಮ್ಮ ಮಾನಸಿಕ ಸ್ಥಿತಿಗಳನ್ನು ಹಾಗೂ ಭಾವಗಳನ್ನು ಹೊರಗಿನ ಸಂವೇದನೆಗಳೊಂದಿಗೆ ತಳುಕಿಸುವುದರಲ್ಲಿ ಇದರ ಪಾತ್ರವಿದೆ. ಹೀಗಾಗಿ ಇದು “ಸ್ವೋಪಜ್ಞೆ” ಅಥವಾ ನಮ್ಮಬಗೆಗೆ ನಮಗಿರುವ ಪರಿವೆಯ ಕೇಂದ್ರ ಎನ್ನುವ ಬಿರುದಿಗೆ ಪ್ರಮುಖ ಅಭ್ಯರ್ಥಿ. 
  3. ಥಲಾಮಸ್‌ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಕೆಲವರ ಥಲಾಮಸನ್ನು ಅಲ್ಟ್ರಾಸೌಂಡ್‌ ತರಂಗಗಳಿಂದ ಪ್ರಚೋದಿಸಿದ್ದಕ್ಕೂ, ಅವರು ಎಚ್ಚರಗೊಳ್ಳುವುದಕ್ಕೂ ಸಂಬಂಧವನ್ನು ಕಾಣಲಾಗಿದೆ. ಥಲಾಮಸ್‌ ಮಿದುಳಿನ ವಿವಿಧ ಭಾಗಗಳನ್ನು ಜೋಡಿಸುವ ಕೇಂದ್ರಸ್ಥಾನ. 

 ಪ್ರಜ್ಞೆಯ ಅಂಶಗಳು

ಇಂಗ್ಲೆಂಡಿನ ಸಸೆಕ್ಸ್‌ ವಿಶ್ವವಿದ್ಯಾನಿಲಯದಲ್ಲಿ ಕಾಗ್ನಿಟಿವ್‌ ನರವಿಜ್ಞಾನಿ ಆಗಿರುವ ಅನಿಲ್‌ ಸೇಠ್‌ ಇಯಾನ್‌ ಪತ್ರಿಕೆಯಲ್ಲಿ ಪ್ರಕಟಿಸಿರುವ ಮತ್ತೊಂದು ಪ್ರಬಂಧದಲ್ಲಿ ಪ್ರಜ್ಞೆಯನ್ನು ಅರ್ಥಮಾಡಿಕೊಳ್ಳುವ ಬಗ್ಗೆ ಬೇರೆಯದೇ ವಿಧಾನವನ್ನು ಸೂಚಿಸಿದ್ದಾರೆ. ನೇರವಾಗಿ ಪ್ರಜ್ಞೆ ಎಂದರೆ ಏನು ಎಂದು ಪ್ರಶ್ನಿಸಿ, ಪರಿಹಾರ ಹುಡುಕುವ ಬದಲಿಗೆ, ಅದರ ವಿವಿಧ ಮಗ್ಗುಲುಗಳನ್ನು ಒಂದೊಂದನ್ನಾಗಿ ಅಧ್ಯಯನ ಮಾಡಿಕೊಳ್ಳಬಹುದು ಎನ್ನುವುದು ಇವರ ವಾದ. ಜೀವದ ಅಧ್ಯಯನದ ಬಗ್ಗೆಯೂ ಒಂದಾನೊಂದು ಕಾಲದಲ್ಲಿ ಹೀಗೆಯೇ ಗೊಂದಲವಿತ್ತು. ಸರಳವಾದ ಜೀವರಾಸಾಯನಿಕ ಕ್ರಿಯೆಗಳು ನಮ್ಮನ್ನು ಜೀವಂತವಾಗಿಡುವ ಹಲವು ವಿದ್ಯಮಾನಗಳಿಗೆ ಕಾರಣ ಎಂದು ಆಗ ಯಾರೂ ನಂಬಲು ತಯಾರಿರಲಿಲ್ಲ. ಕಾಲ ಕಳೆದ ಹಾಗೆಲ್ಲ, ಇದನ್ನೂ ಜನರು ಒಪ್ಪಿಕೊಂಡರು. ಜೀವವನ್ನು ಅದರ ಅಂಶಗಳಾದ ಪ್ರಜನನ, ಬೆಳೆವಣಿಗೆ, ಚಯಾಪಚಯ ಮೊದಲಾದ ಜಟಿಲ ಕ್ರಿಯೆಗಳ ಮೂಲವಾದ ಜೀವರಾಸಾಯನಿಕ ಕ್ರಿಯೆಗಳನ್ನು ತಿಳಿದುಕೊಳ್ಳುವ ಮೂಲಕ ಅರ್ಥ ಮಾಡಿಕೊಳ್ಳಬಹುದು ಎಂದು ತಿಳಿಯಿತು. ಜೀವರಾಸಾಯನಿಕ ಕ್ರಿಯೆಗಳಿಂದಲೇ ಜೀವವ್ಯವಸ್ಥೆ ಹುಟ್ಟುವ ರೀತಿಯನ್ನು ನಾವು ಅರ್ಥ ಮಾಡಿಕೊಳ್ಳದೇ ಇರಬಹುದು. ಆದರೆ ಹೀಗೆ ಅದರ ಅಂಶಗಳನ್ನಷ್ಟೆ ಅರಿತುಕೊಳ್ಳುವುದನ್ನೇ ಗುರಿಯಾಗಿಟ್ಟುಕೊಂಡಿದ್ದರಿಂದ, ಜೀವವನ್ನು ಹೆಚ್ಚೆಚ್ಚು ಅರ್ಥ ಮಾಡಿಕೊಳ್ಳಲಂತೂ ಸಾಧ್ಯವಾಗಿದೆ.

ಬೆಂಗಳೂರಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸಸ್‌ (ಭಾರತೀಯ ವಿಜ್ಞಾನ ಭವನ)ದಲ್ಲಿ 2023ನೇ ಇಸವಿಯಲ್ಲಿ “ನರ ಮತ್ತು ಪ್ರಜ್ಞೆ” ಯೋಜನೆಯೊಂದನ್ನು ಆರಂಭಿಸಲಾಗಿದೆ. ಐಐಎಸ್ಸಿಯ ಹಳೆಯ ವಿದ್ಯಾರ್ಥಿಯೂ ನ್ಯೂಯಾರ್ಕ್‌ ವಿಶ್ವವಿದ್ಯಾನಿಲಯದಲ್ಲಿ ಟಂಡನ್‌ ಸ್ಕೂಲ್‌ ಆಫ್‌ ಇಂಜಿನಿಯರಿಂಗ್‌ನಲ್ಲಿ ಎಮೆರಿಟಸ್‌ ಡೀನ್‌ ಆಗಿರುವ ಶ್ರೀ ಕೆ. ಆರ್‌. ಶ್ರೀನಿವಾಸನ್‌ ಅವರ ನೆರವು ಇದಕ್ಕೆ ದೊರೆತಿದೆ. ಈ ಯೋಜನೆಯ ಅಂಗವಾಗಿ ಸಿಎನ್‌ಎಸ್‌ ಕೇಂದ್ರದ ಹಲವು ವಿಭಾಗಗಳು ನಮ್ಮ ಒಳವ್ಯಕ್ತಿತ್ವವನ್ನು ರೂಪಿಸುತ್ತವೆ ಎನ್ನಲಾದ ನರಮಂಡಲದ ವಿವಿಧ ಸ್ವರೂಪಗಳ ಅಧ್ಯಯನದಲ್ಲಿ ತೊಡಗಿಕೊಂಡಿವೆ. 

ಉದಾಹರಣೆಗೆ, ಆದಿತ್ಯರವರ ಪ್ರಯೋಗಾಲಯದಲ್ಲಿ ಸ್ವೋಪಜ್ಞೆ ಅಥವಾ ತನ್ನತನದ ಪರಿವೆ ಎನ್ನುವ ಪ್ರಜ್ಞೆಯ ಅಂಶದ ಬಗ್ಗೆ ಪ್ರಶ್ನೆಗಳನ್ನು ಶೋಧಿಸಲಾಗುತ್ತಿದೆ. ತನ್ನತನದ ಪರಿವೆಗೆ ನಾವು ಗಟ್ಟಿಯಾಗಿ ಅಂಟಿಕೊಂಡಿರುತ್ತೇವೆ ಎನ್ನುತ್ತಾರೆ ಅನಿಲ್‌. ನಮ್ಮ ಸಂವೇದನೆಗಳನ್ನು ಸ್ವಪರಿವೆಯ ಜೊತೆಗೆ ಸೇರಿಸುವ ಈ ಪ್ರಜ್ಞೆ ಎನ್ನುವ ಮಾಧ್ಯಮ ಯಾವುದು? ನಮ್ಮ ತೀರ್ಮಾನಗಳ ಬಗ್ಗೆ ಆಲೋಚಿಸುವಂತೆ ಹಾಗೂ ನಮ್ಮ ಚಟುವಟಿಕೆಗಳ ಫಲಗಳನ್ನು ಅದು ಹೇಗೆ ಊಹಿಸುತ್ತದೆ?

ಉದಾಹರಣೆಗೆ, ನಾವು ಕಣ್ಣನ್ನು ಆಡಿಸಿದಾಗ, ಕಣ್ಣಿನಲ್ಲಿರುವ ಸುತ್ತಲಿನ ಬಿಂಬವೂ ಚಲಿಸುತ್ತದೆ ಎನ್ನುವುದು ನಮಗೆ ಗೊತ್ತು. ನಮ್ಮ ಮಿದುಳು ಕಣ್ಣಿನ ಚಲನವಲನಗಳನ್ನು ಗಮನಿಸುತ್ತಿರುವ ಹಾಗೆಯೇ, ಕಣ್ಣಪರದೆಯ ಮೇಲಿನ ಚಲನೆಗಳು ನಮ್ಮ ಚಲನೆಯಿಂದಲೇ ಆಗಿದ್ದು, ಬೇರಾವ ಕಾರಣದಿಂದಲೂ ಅಲ್ಲ ಎಂದೂ ಗ್ರಹಿಸಿರುತ್ತೇವೆ.  ಅಂದರೆ ನಾವು ಸುತ್ತಲೂ ಆಗುತ್ತಿರುವ ಬದಲಾವಣೆಗಳು ಬೇರೆ. ಅವು ನಮ್ಮ ನಡವಳಿಕೆಯ ಫಲವಲ್ಲ ಎಂದು ತೀರ್ಮಾನಿಸುತ್ತೇವೆ. ಈ ಗ್ರಹಿಕೆಯೇ ತತ್ವಶಃ ಪ್ರಜ್ಞೆಯ ವಸ್ತು.” 

ಸ್ಕೀಜೋಫ್ರೀನಿಯಾದಂತಹ ಪ್ರಜ್ಞಾ ಮಾಧ್ಯಮದ ದೋಷಗಳಿರುವ ವ್ಯಕ್ತಿಗಳು ಹೊರ ಪರಿಸರದಲ್ಲಿನ ಬದಲಾವಣೆಗಳನ್ನು ಒಳಗಿನ ಕ್ರಿಯೆಗಳ ಜೊತೆಗೆ ಭಿನ್ನವಾಗಿ ನೋಡಲಾರರು. ಅವರಿಗೆ ಏನೇನೋ ಮಾತುಗಳು ಕೇಳಿಸಬಹುದು. ಅದು ಭ್ರಮೆಯೇ ಆದರೂ ಹೊರಗಿನಿಂದ ಯಾರೋ ತಮಗೆ ಏನನ್ನೋ ಹೇಳುತ್ತಿದ್ದಾರೆ ಎಂದು ಭಾವಿಸಿ ಅದಕ್ಕೆ ತಕ್ಕಂತೆ ಅವರು ನಡೆದುಕೊಳ್ಳುತ್ತಾರೆ. 

ಪ್ರಜ್ಞಾ ಮಾಧ್ಯಮ ಎನ್ನುವ ಈ ಪರಿಕಲ್ಪನೆ ನಾವು ಕೈಗೊಳ್ಳುವ ನಿರ್ಧಾರಗಳ ಜೊತೆಗೆ ಭದ್ರವಾಗಿ ತಳುಕಿಕೊಂಡಿದೆ. ನಾವೇ ಆ ಮಾಧ್ಯಮವಾಗಿರಬಹುದು ಎನ್ನುವುದೇ ಗಂಭೀರ ವಿಷಯ ಅಲ್ಲವೇ? ನಮ್ಮ ಚಟುವಟಿಕೆಗಳ ಕಡಿವಾಣ ನಮ್ಮ ಕೈಯಲ್ಲಿಯೇ ಇರುತ್ತದೆ.” ಎನ್ನುತ್ತಾರೆ ಆದಿತ್ಯ. “ಇದು ಸ್ವಪರಿವೆಯ ಮೊದಲ ಪದರ. ನಮಗೆ ನಮ್ಮ ದೇಹದ ಪರಿವೆ ಇರುವಂತೆಯೇ ಅದನ್ನು ನಿಯಂತ್ರಿಸಬಹುದು ಎನ್ನುವ ಅರಿವೂ ಇರುತ್ತದೆ.”

ಯೋಜಿತ ಚಟುವಟಿಕೆ

ಯಾವುದಾದರೂ ಚಲನೆಯನ್ನು ಮಿದುಳು ಯೋಜಿಸಿದಾಗ ಸ್ನಾಯುಗಳಿಗೆ ಅದರಿಂದ ಒಂದು ನಿರ್ದೇಶವು ಹೋಗುತ್ತದೆ. ಅದೇ ಸಂದೇಶದ ಒಂದು “ಪ್ರತಿ” ಮಿದುಳಿಗೆ “ಚಲನೆಯ ನೆರಳಾಗಿ” ಮರಳುತ್ತದೆ. ಈ ಪ್ರತಿಯನ್ನು ಮಿದುಳು ನಮ್ಮ ನಡವಳಿಕೆಯಿಂದ ಆಗುವ ಸಂವೇದನೆಗಳನ್ನು ತರ್ಕಿಸುತ್ತದೆ. ಕಣ್ಣಿನ ಚಲನೆಯ ಸಂದರ್ಭದಲ್ಲಿ ವಿಜ್ಞಾನಿಗಳು ಇದನ್ನು ಗುರುತಿಸಿದ್ದಾರೆ. ಯಾವುದೇ ಚಟುವಟಿಕೆಯ ನಂತರ, ಸ್ನಾಯುಗಳಿಂದ ಒಂದು ಸಂಕೇತವು ಮಿದುಳಿಗೆ ಮರಳುತ್ತದೆ. ಅಲ್ಲಿ ಅದು ಪ್ರಯೋಗದಲ್ಲಿ ಭಾಗವಹಿಸಿದವರ ಕಣ್ಣುಗಳನ್ನು ಚಲನೆಗೆ ತಕ್ಕಂತೆ ಹೊಂದಿಕೊಳ್ಳುವಂತೆ ಮಾಡುತ್ತದೆ. ಅವರ ದೃಷ್ಟಿ ಹೀಗೆ ಅವರ ಚಲನವಲನಗಳನ್ನು ಹಿಂಬಾಲಿಸುತ್ತದೆ. ಆದಿತ್ಯ ಅವರ ತಂಡ, ಈ ಚಲನೆಯ ನೆರಳಿನ ತತ್ವವನ್ನು ಪ್ರಜ್ಞಾ ಮಾಧ್ಯಮದ ಸ್ವರೂಪವನ್ನು ತಿಳಿಯಲು ಬಳಸಲು ಯೋಜಿಸಿದ್ದಾರೆ.

ಈ ಯೋಜನೆಯ ಸಹಭಾಗಿಯಾದ ಅರುಣ್‌ ಪ್ರಜ್ಞೆಯ ಮತ್ತೊಂದು ಮಗ್ಗುಲಾದ ದೃಷ್ಟಿ ಪರಿವೆಯ ಬಗ್ಗೆ ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ನಾವು ಕಾಣುವ ಬಿಂಬಗಳನ್ನು ಮಿದುಳು ಹೇಗೆ ವಸ್ತುಗಳನ್ನಾಗಿ ಗ್ರಹಿಸುತ್ತದೆ ಎನ್ನುವುದು ಅವರ ಪ್ರಶ್ನೆ. 

“ನಾವು ಕಾಣುವ ವಸ್ತುಗಳೆಲ್ಲವೂ ನಮ್ಮ ಕಣ್ಣಿನಲ್ಲಿ ಬಿಂಬವಾಗಿ ರೂಪಗೊಳ್ಳುತ್ತವೆ. ಅಲ್ಲವೇ? ಆದರೆ ಈ ಬಿಂಬವನ್ನು ಸಂಸ್ಕರಿಸಿ, ಅದೇನೆಂದು ಅರ್ಥ ಮಾಡಿಕೊಳ್ಳಲು ಮಿದುಳು ಹೆಚ್ಚೂ ಕಡಿಮೆ ತನ್ನ ಅರ್ಧ ಭಾಗವನ್ನು ಮೀಸಲಿಟ್ಟಿದೆ,” ಎನ್ನುತ್ತಾರೆ ಅರುಣ್‌. “ಅಂದರೆ ಮಿದುಳು ಈ ಬಿಂಬದಲ್ಲಿರುವ ಮಾಹಿತಿಯನ್ನು ಇನ್ನೂ ಜಟಿಲವಾದ ಸ್ವರೂಪಕ್ಕೆ ಬದಲಿಸುತ್ತಿದೆಯಷ್ಟೆ. ಈ ಸ್ವರೂಪ ಯಾವುದು ಎಂದು ಅರಿಯುವುದೇ ನಮ್ಮ ಪ್ರಯತ್ನ.” ಎನ್ನುತ್ತಾರೆ ಅರುಣ್‌. 

ನನ್ನ ಮಟ್ಟಿಗೆ ಗ್ರಹಿಕೆ, ನಿಶ್ಚಯ-ನಿರ್ಧಾರಗಳು ಹಾಗೂ ಗಮನ ಎನ್ನುವ ವಿದ್ಯಮಾನಗಳು ಗ್ರಹಿಕೆಯ ಮೂಲ ವಸ್ತುಗಳು. ಒಂದು ರೀತಿಯಲ್ಲಿ ಇವುಗಳೇ ಪ್ರಜ್ಞೆಯ ಮೂಲ ಕೂಡ.” ಎನ್ನುತ್ತಾರೆ.

Image courtesy: Vision Lab, IISc)

ಕನ್ನಡಿಯ ಗೊಂದಲ

ಮಿದುಳು ಹಲವೊಮ್ಮೆ ತನ್ನದೇ ಸಂಸ್ಕರಣೆಯಿಂದ ಗೊಂದಲಗೊಳ್ಳುವುದುಂಟು. ಉದಾಹರಣೆಗೆ ಕನ್ನಡಿಯಲ್ಲಿನ ಬಿಂಬಗಳು. ಕೆಲವು ಮಕ್ಕಳು ಕನ್ನಡಿಯ ಪ್ರತಿಬಿಂಬದಂತೆ ತೋರುವ ಅಕ್ಷರಗಳನ್ನು ತೋರಿದಾಗ ಗೊಂದಲಗೊಳ್ಳುತ್ತಾರೆ. ಅವರಿಗೆ “b” ಮತ್ತು ‘d” ಒಂದೇ ರೀತಿ ತೋರುತ್ತದೆ. “ಈ ಗೊಂದಲಕ್ಕೆ ಕಣ್ಣಿನಲ್ಲಿ ರೂಪುಗೊಳ್ಳುವ ಬಿಂಬ ಕಾರಣವಲ್ಲ. ಅದು ನಮ್ಮ ಮಿದುಳು ಆ ಬಿಂಬವನ್ನು ಸಂಸ್ಕರಿಸುವ ರೀತಿಯಿಂದಾಗಿ,” ಎನ್ನುತ್ತಾರೆ ಅರುಣ್‌. 

ಬಾಲ್ಯದಲ್ಲಿಯೋ ಅಥವಾ ನಾವು ವಿಕಾಸವಾಗುವಾಗಲೋ ನಮ್ಮ ಮಿದುಳು ಒಂದಿನ್ನೊಂದರ ಪ್ರತಿಬಿಂಬದಂತೆ ಕಾಣುವ ಬಿಂಬಗಳು ಬೇರೆ, ಬೇರೆ ಸ್ಥಾನದಿಂದ ಗಮನಿಸಿದಾಗ ಕಾಣುವ ಒಂದೇ ವಸ್ತುವಿನ ಬಿಂಬಗಳು ಎಂದು ಕಲಿತಿರುತ್ತದೆ. ಇಂಗ್ಲೀಷು ಬರೆವಣಿಗೆಯಲ್ಲಿ ತೊಡಗಿಕೊಳ್ಳುವ ಮಕ್ಕಳು ಆರಂಭದಲ್ಲಿ ಇಂತಹ ಅಕ್ಷರಗಳ ಬಗ್ಗೆ ಗೊಂದಲಗೊಳ್ಳುವುದುಂಟು. ಏಕೆಂದರೆ ಅವರು ಈ ಅಕ್ಷರಗಳು ಒಂದಿನ್ನೊಂದರ ಪ್ರತಿಬಿಂಬದಂತೆ ಇರುವುದರಿಂದ ಒಂದೇ ಅಕ್ಷರ ಎಂದು ತಿಳಿಯುತ್ತಾರೆ. ಬೆಳೆಯುತ್ತಿದ್ದಂತೆ, ಹೆಚ್ಚೆಚ್ಚು ಪಾಠಗಳನ್ನು ಓದುತ್ತಿದ್ದಂತೆ ನಾವು ಇದನ್ನು ಮರೆಯಲು ಕಲಿಯುತ್ತೇವೆ. 

ಅರುಣ್‌ ರವರ ಪ್ರಕಾರ ದೊಡ್ಡವರೂ ಕೂಡ ಪ್ರತಿಬಿಂಬಗಳನ್ನು ಕಂಡಾಗ ಗೊಂದಲಗೊಳ್ಳಬಹುದು. ಅದರಲ್ಲಿಯೂ ಇವು ಎಡ-ಬಲ ಬದಲಿಸಿದ ಬಿಂಬಗಳಾಗಿದ್ದಾಗ, ಅಂದರೆ ಉದ್ದನೆಯ ಅಕ್ಷದಲ್ಲಿ ಪಲ್ಲಟಗೊಂಡಂತೆ ತೋರುವ ಬಿಂಬಗಳ ವಿಷಯದಲ್ಲಿ ಈ ಗೊಂದಲ ಹೆಚ್ಚು. ಅಡ್ಡಲಾಗಿರುವ ಅಕ್ಷದಲ್ಲಿ ಪಲ್ಲಟಗೊಂಡ ಬಿಂಬಗಳು, ಅರ್ಥಾತ್‌, ಮೇಲ್ಭಾಗ ಕೆಳಭಾಗದ ಪ್ರತಿಬಿಂಬದಂತೆ ತೋರುವ ವಸ್ತುಗಳ ವಿಷಯದಲ್ಲಿ ನಮ್ಮ ಗ್ರಹಿಕೆ ಚೆನ್ನಾಗಿರುತ್ತದೆ. ಆದರೆ ಮಂಗಗಳು ಇಂತಹ ಪ್ರತಿಬಿಂಬಗಳನ್ನು ಬೇರೆಯದೇ ರೀತಿಯಲ್ಲಿ ಕಾಣುತ್ತವೆ. ಎರಡೂ ಬಗೆಯ ಪ್ರತಿಬಿಂಬಗಳಿಂದಲೂ ಅವಕ್ಕೆ ಗೊಂದಲವಾಗುತ್ತದೆ. ಈ ವ್ಯತ್ಯಾಸ ಏಕೆ? ನರಮಂಡಲದಲ್ಲಿ ಇದಕ್ಕೆ ಏನಾದರೂ ಸುಳಿವು ಸಿಗಬಹುದೋ ಎಂದು ಅರುಣ್‌ ತಂಡ ಪ್ರಶ್ನಿಸುತ್ತಿದೆ. 

ಸಿಎನ್‌ಎಸ್‌ ನಲ್ಲಿಯೇ ಇರುವ ಮತ್ತೊಬ್ಬ ವಿಜ್ಞಾನಿ ಸುಪ್ರತಿಮ್‌ ರಾಯರಿಗೆ ಧ್ಯಾನದ ಬಗ್ಗೆ ಕುತೂಹಲ. ಅದರಲ್ಲಿಯೂ ಧ್ಯಾನ ಮಾಡುವ ಮೂಲಕ ಪ್ರಜ್ಞೆಯನ್ನು ಚುರುಕುಗೊಳಿಸಿಕೊಳ್ಳುವವರ ಬಗ್ಗೆ ಬಹಳವೇ ಆಸಕ್ತಿ. 

“ಸಾವಿರಾರು ವರ್ಷಗಳಿಂದ, ಮಿದುಳನ್ನು ಚಂಚಲವಾಗಿರಲು ಬಿಡದೆ ನಿಯಂತ್ರಿಸುವಂತಹ, ಶಾಂತ ಸ್ಥಿತಿಯಲ್ಲಿ ಇರುವಂತಹ ಸಂಪ್ರದಾಯಗಳು ಬೆಳೆದಿವೆ. ನರವಿಜ್ಞಾನಕ್ಕೆ ಇದರ ಬಗ್ಗೆ ವಿಶೇಷವಾದ ಕುತೂಹಲವಿದೆ,” ಎನ್ನುತ್ತಾರೆ ಸುಪ್ರತಿಂ. 

ಧ್ಯಾನದ ಸ್ಥಿತಿಯಲ್ಲಿ ಮಿದುಳಿನಲ್ಲೇನಾಗುತ್ತಿದೆ ಎನ್ನುವುದನ್ನು ತಿಳಿಯಲು ಈತನಿಗೆ ಕುತೂಹಲ.  ಮಿದುಳಿನಲ್ಲಿರುವ ಹಲವಾರು ನರಕೋಶಗಳು 40ಹರ್ಟ್ಸ್‌ ಕಂಪನಾಂಕವಿರುವ ಅಲೆಗಳನ್ನು ಏಕಕಾಲದಲ್ಲಿ ಹೊಮ್ಮಿಸುವ ಗ್ಯಾಮಾ ತರಂಗಗಳು ಎನ್ನುವ ವಿದ್ಯಮಾನದ ಬಗ್ಗೆ ಈತನಿಗೆ ವಿಶೇಷ ಆಸಕ್ತಿ. ಯಾವುದಾದರೂ ವಿಷಯದತ್ತ ಗಮನ ಕೇಂದ್ರೀಕರಿಸುವಂತಹ ಉನ್ನತ ಅಥವಾ ಬೌದ್ಧಿಕ ಚಟುವಟಿಕೆಗಳ ಸಂದರ್ಭದಲ್ಲಿ ಈ ಗ್ಯಾಮಾ ತರಂಗಗಳಲ್ಲಿ ಬದಲಾವಣೆ ತೋರುತ್ತದೆ. ಅರಿವಳಿಸಿದ ಪ್ರಾಣಿಗಳಲ್ಲಿ ಹಾಗೂ ಪ್ರಜ್ಞಾಹೀನ ಸ್ಥಿತಿಯಲ್ಲಿಯೂ ಮಿದುಳಿನಲ್ಲಿ ಈ ತರಂಗಗಳು ಹುಟ್ಟುತ್ತವೆ ಎನ್ನುವುದು ತಿಳಿಯುವವರೆಗೂ, ಪ್ರಜ್ಞಾಸ್ಥಿತಿಗೆ ಈ ತರಂಗಗಳೇ ಕಾರಣವಿರಬಹುದು ಎಂದು ಊಹಿಸಲಾಗಿತ್ತು.

“ಮಿದುಳು ಹಾಗೂ ಅದರ ಮೇಲೆ ಧ್ಯಾನದ ಪರಿಣಾಮವನ್ನು ತಿಳಿಯಬೇಕೆಂಬುದು ನಮ್ಮ ಉದ್ದೇಶ. ಧ್ಯಾನದ ಆಚರಣೆಗಳು ನರಮಂಡಲವನ್ನು ರಕ್ಷಿಸುವ ಕೆಲಸ ಮಾಡುತ್ತಿರಬಹುದು. ಅದು ನರವಿಜ್ಞಾನಿಗಳಾದ ನಮಗೆ ಅಧ್ಯಯನ ಮಾಡಲು ಅನುಕೂಲಕರ,” ಎನ್ನುತ್ತಾರೆ ಸುಪ್ರತಿಂ.

 

ಸುಪ್ರತಿಂ ಅವರ ಪ್ರಯೋಗಾಲಯದಲ್ಲಿ ವಿಜ್ಞಾನಿಗಳು ಎಲೆಕ್ಟ್ರೊ ಎನ್‌ಕೆಫಲೋಗ್ರಾಂ (ಇಇಜಿ)ಯನ್ನು ಬಳಸಿ ಧ್ಯಾನಸ್ಥಿತಿಯಲ್ಲಿ ಮಿದುಳಿನಲ್ಲಿ ನಡೆಯುವ ಚಟುವಟಿಕೆಗಳನ್ನು ಅಧ್ಯಯನ ಮಾಡುತ್ತಿದ್ದಾರೆ. (ಚಿತ್ರ ಕೃಪೆ: ಅಂಕನ್‌ ಬಿಸ್ವಾಸ್‌)

ಪ್ರಜ್ಞೆಯ ಈ ವಿವಿಧ ಮಗ್ಗುಲುಗಳನ್ನು ಅಧ್ಯಯನ ಮಾಡುವುದರಿಂದ ಭಾವನೆಗಳು ಎನ್ನುವ ಗೋಜಲನ್ನು ಬಿಡಿಸಲೂ ನೆರವಾಗುತ್ತದೆ. ಇದು ವಿವಿಧ ರೀತಿಯ ಭಯ ಹಾಗೂ ಮಾನಸಿಕ ರೋಗಗಳ ಬಗ್ಗೆ ನಮಗೆ ಇನ್ನಷ್ಟು ತಿಳಿವು ಮೂಡಿಸಬಹುದು. ಮಿದುಳಿನಲ್ಲಿ ಇರುವ ಪ್ರಜ್ಞೆಗೆ ಕಾರಣವಾದ ನರವ್ಯೂಹಗಳು ಹಾಗೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಟುವಟಿಕೆಯಿಂದಿರುವ ನರವ್ಯೂಹಗಳ ನಡುವಿನ ತಿಕ್ಕಾಟದಿಂದಾಗಿ ಖಿನ್ನತೆ, ಆತಂಕವೇ ಮೊದಲಾದ ಸ್ಥಿತಿಗಳು ಉಂಟಾಗುತ್ತಿರಬಹುದು ಎಂಬುದು ವಿಜ್ಞಾನಿಗಳ ಅಂದಾಜು. ಕೋಮ ಅಂದರೆ ಪ್ರಜ್ಞಾಹೀನರಾಗಿರುವವರು, ಮಿದುಳಿಗೆ ಪೆಟ್ಟು ಬಿದ್ದುದರಿಂದಾಗಿ ಎಚ್ಚರವಿದ್ದರೂ ಪರಿವೆ ಇಲ್ಲದಂತಾಗುವವರಿಗೆ ಚಿಕಿತ್ಸೆ ನೀಡಲೂ ಈ ಅಧ್ಯಯನಗಳು ಬಹುಶಃ ನೆರವಾಗಬಹುದು. ಈ ಸ್ಥಿತಿಯಲ್ಲಿ ಇರುವವರು ಎಚ್ಚರವಾಗಿದ್ದರೂ ಸಂವೇದನೆಗಳಿಗೆ ಪ್ರತಿಕ್ರಯಿಸಲಾರರು. ಹೀಗೆ ನಿಶ್ಚೇತರಾಗಿಬಿಟ್ಟವರಲ್ಲಿ ಪ್ರಜ್ಞೆ ಇದ್ದರೂ, ಸಂವೇದನೆಗಳಿಗೆ ಸ್ಪಂದಿಸುವ ಸಾಮರ್ಥ್ಯ ಸಂಪೂರ್ಣವಾಗಿ ನಾಶವಾಗಿರುತ್ತದೆ. ಅವರಲ್ಲಿ ಎಷ್ಟರ ಮಟ್ಟಿಗೆ ಪ್ರಜ್ಞೆ ಇದೆ ಎಂಬುದನ್ನು ತಿಳಿಯುವುದು ಸಾಧ್ಯವಾದರೆ, ದೇಹದೊಳಗೆ ʼಅವರುʼ ಇನ್ನೂ ಇದ್ದಾರೆಯೋ ಎನ್ನುವುದನ್ನು ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳಲೂ ಆಗಬಹುದು

ಯಾಂತ್ರಿಕ ಬುದ್ಧಿಮತ್ತೆಗೆ ಪ್ರಜ್ಞೆ ಇರಬಹುದೇ? 

ಯಾಂತ್ರಿಕ ಬುದ್ಧಿಮತ್ತೆ ಅಥವಾ ಏಐ ಮುಂದೆ ಎಂದಾದರೂ ಪ್ರಜ್ಞಾವಂತೆನ್ನಿಸಿಕೊಂಡರೆ ಎನ್ನುವ ಆತಂಕ ಹಲವು ವಿಜ್ಞಾನಿಗಳಲ್ಲಿ ಇದೆ. ಈಗಾಗಲೇ  ಪ್ರಜ್ಞೆ ಇದೆಯೋ ಎನ್ನುವಂತೆ ನಡೆದುಕೊಳ್ಳುತ್ತಿವೆ ಎನ್ನುವವರೂ ಇದ್ದಾರೆ.  ಈ ಬಗ್ಗೆ ಚಿಂತಿಸಬೇಕಿಲ್ಲ ಎನ್ನುವವರೂ ಇದ್ದಾರೆ.  

ಏಐ ಎಷ್ಟೇ ಚತುರವೆನ್ನಿಸಿದರೂ, ಅದು ನಾವು ಅರ್ಥ ಮಾಡಿಕೊಳ್ಳುವಂತೆ ಅರ್ಥ ಮಾಡಿಕೊಳ್ಳಲಾರದು,” ಎನ್ನುತ್ತಾರೆ ನಿತಿನ್‌. “ಯಾವುದೇ ಜೋಕ್‌ ಹೇಳಿದಾಗ ಯಾಂಬು ಅಥವಾ ಏಐ ನಗಲಾರದು. ಅದು ಕೇವಲ ಆ ಜೋಕನ್ನು ಸಂಸ್ಕರಿಸುತ್ತದೆ ಅಷ್ಟೆ.” ಎನ್ನುತ್ತಾರೆ. ಮನುಷ್ಯರು ಹಾಗೂ ಪ್ರಾಣೀಗಳಂತೆ ತನ್ನರಿವನ್ನು ಏಐ ಬೆಳೆಸಿಕೊಳ್ಳಲು ಸಾಧ್ಯವಿಲ್ಲ ಎಂದು ಆದಿತ್ಯ ಕೂಡ ಹೇಳುತ್ತಾರೆ. ಹಾಗೆ ಬೆಳೆಸಿಕೊಳ್ಳಲು ಮೊದಲು ಅದಕ್ಕೆ ದೇಹದಂತಹ “ಮಾಧ್ಯಮ”ವನ್ನು ಬೇಕಾಗುತ್ತದೆ. 

ಯಾಂಬುವಿಗೆ ಪ್ರಜ್ಞೆ ಇರಬಹುದೇ ಎಂದು ಪ್ರಶ್ನಿಸುವ ಬದಲು ಅದು ಜಗತ್ತನ್ನು ನಾವು ಅರಿಯುವಂತೆಯೇ ಅರಿಯುತ್ತದೆಯೇ ಎನ್ನುವುದು ಸೂಕ್ತ ಎನ್ನುತ್ತಾರೆ ಅರುಣ್‌.  ಆತನ ಪ್ರಕಾರ “ಇಲ್ಲ” ಎನ್ನುವುದೇ ಇದಕ್ಕೆ ಉತ್ತರ. ಸದ್ಯಕ್ಕಂತೂ ಖಂಡಿತ ಇಲ್ಲ ಎನ್ನುತ್ತಾರೆ ಅರುಣ್‌. “ಸದ್ಯಕ್ಕೆ ಮನುಷ್ಯರಿಗಿಂತಲೂ ಏಐ ಬುದ್ಧಿವಂತನಾಗುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಅವು ಕಾಣಲಾರವು, ಮಾತನ್ನು ಕೇಳಿ ಅರ್ಥ ಮಾಡಿಕೊಳ್ಳಲಾರವು. ಅಲ್ಲದೆ ಲೋಕದ ಜೊತೆಗೆ ನಮ್ಮಂತೆ ವ್ಯವಹರಿಸಲಾರವು. ಕ್ಯಾಲ್ಕುಲೇಟರುಗಳು ಪ್ರಪಂಚವನ್ನು ಆಳಬಹುದೇ? ಎಂದಂತೆ ಈ ಪ್ರಶ್ನೆ ಇದೆ.” ಎನ್ನುತ್ತಾರೆ. ಅರುಣ್‌. 

ಚಾಟ್‌-ಜಿಪಿಟಿಯಂತಹ ಮಹಾಭಾಷಾ ಮಾದರಿಗಳಿಗೆ (ಲಾರ್ಜ್‌ ಲ್ಯಾಂಗ್ವೇಜ್‌ ಮಾಡೆಲ್ಸ್‌) ಮನುಷ್ಯರಂತಲ್ಲದಿದ್ದರೂ, ಸ್ವಲ್ಪವಾದರೂ ಅರಿವು ಇರಬಹುದೇ ಎಂದು ವಿಜ್ಞಾನಿಗಳು ಚರ್ಚಿಸುತ್ತಿದ್ದಾರೆ.  ಯಂತ್ರಗಳಿಗೂ  “ಬುದ್ದಿಮತ್ತೆ” ಇದೆ ಎನ್ನುವುದರ ಅರ್ಥ ವೈವಿಧ್ಯಮಯವಾದ ಗ್ರಹಿಕೆಯ ಮೂಲಕ ನಮ್ಮ ಅರಿವನ್ನು ಇನ್ನಷ್ಟು ಹೆಚ್ಚಿಸಬಲ್ಲುವು ಎಂದಷ್ಟೆ ಎನ್ನುವುದು ವಿಜ್ಞಾನಿಗಳ ವ್ಯಾಖ್ಯಾನ.  

ಆದರೂ ಪ್ರಜ್ಞೆಯ ಹಲವು ಮಜಲುಗಳು ಇನ್ನೂ ನಿಗೂಢವಾಗಿಯೇ ಇವೆ. 2014ರಲ್ಲಿ ನೀಡಿದ ಟೆಡ್‌ ಭಾಷಣವೊಂದರಲ್ಲಿ ಡೇವಿಡ್‌ ಇದನ್ನು ವಿವರಿಸಿದ್ದು ಹೀಗೆ: “ನಾವು ಯಾವಾಗ ನಡೆಯಬೇಕು ಎಂದು ನಿರ್ಧರಿಸುವುದು ಹೇಗೆ?” ಹಾಗೂ “ವಸ್ತುಗಳನ್ನು ಗ್ರಹಿಸುವ ವಿಧಾನ ಹೇಗೆ?” ಎನ್ನುವ ಪ್ರಶ್ನೆಗಳು ಕೇವಲ ಕುತೂಹಲಕಾರಿಯಷ್ಟೆ ಅಲ್ಲ, ಅಮೂಲ್ಯವಾದಂಥವುಗಳು ಕೂಡ. ಇವೆಲ್ಲವೂ ಪ್ರಜ್ಞೆಯ ಕುರಿತಾದ ಸಮಸ್ಯೆಗಳಲ್ಲಿ ಸರಳವಾದಂಥವು. ಸಾಕಷ್ಟು ಸಮಯ ಹಾಗೂ ಬಂಡವಾಳವಿದ್ದಲ್ಲಿ, ಈ ಪ್ರಶ್ನೆಗಳಿಗೆ ಪರಿಣತರು ಉತ್ತರವನ್ನು ಖಂಡಿತ ಕಂಡುಕೊಳ್ಳಬಲ್ಲರು. 

ಕ್ರಿಸ್ಟಾಫನ ಜೊತೆಗೆ ಬಾಜಿ ಕಟ್ಟುವುದಕ್ಕೆ ಕೆಲವು ವರ್ಷಗಳ ಹಿಂದೆ, 1994ರಲ್ಲಿ, ಅರಿಜೋನಾದಲ್ಲಿ ನಡೆದ ಸಮಾವೇಶವೊಂದರಲ್ಲಿ “ಪ್ರಜ್ಞೆಯ ಕುರಿತ ಕಠಿಣ ಪ್ರಶ್ನೆಗಳ”ನ್ನು ಪಟ್ಟಿ ಮಾಡಿ ಡೇವಿಡ್‌ ಗಮನ ಸೆಳೆದಿದ್ದ.  ಇವು ಹೀಗಿವೆ: ಸುತ್ತಲಿನ ಪ್ರಚೋದನೆಗಳನ್ನು ಸಂವೇದಿಸಿ, ಗ್ರಹಿಸಿ, ಪ್ರತಿಕ್ರಯಿಸುವಾಗ, ನಮಗೆ ಹೀಗೆ ಸಂವೇದನೆಗಳು ಹಾಗೂ ಗ್ರಹಿಕೆಯ ಅನುಭವ ಆಗುವುದು ಹೇಗೆ? ನಮ್ಮೊಳಗೆ ಈ ರೀತಿಯ ಪರಿವೆಯನ್ನು ಮಿದುಳು ಹೇಗೆ ಹುಟ್ಟಿಸುತ್ತದೆ? ಈ ಬಗ್ಗೆ ದಿ ಗಾರ್ಡಿಯನ್‌ ಪತ್ರಿಕೆಯ ವರದಿಗಾರ ಆಲಿವರ್‌ ಬರ್ಕಮನ್‌ ಜೊತೆಗೆ ಮಾತನಾಡಿದ ಡೇವಿಡ್‌ ತಾತ್ವಿಕ ಮರಣ ಎನ್ನುವ ಭಾವನೆಗಳ ಹಾಗೂ ಅನುಭವಗಳ ಪ್ರಜ್ಞೆಯೇ ಇಲ್ಲದ ಸ್ಥಿತಿಯನ್ನು ಪರಿಕಲ್ಪಿಸಿದ್ದಾನೆ. ಇಂತಹವರು ಗುರುಗುಟ್ಟುತ್ತಾ, ಮೇಲೆ ಬೀಳುವ ಕ್ರೂರ ಮೃಗಗಳಂತಲ್ಲ. ಆದರೆ ನಮ್ಮಂತೆಯೇ ನಡೆ, ನುಡಿ ಇರುವ, ಆದರೆ ಆಂತರಿಕವಾಗಿ ಪೊಳ್ಳೆನ್ನಿಸುವ ವ್ಯಕ್ತಿ. ಇಂತಹ ಯಾಂತ್ರಿಕವೆನ್ನಿಸುವ ಜೀವಿಗಳು ಕೂಡ ವಿಕಾಸವಾಗಬಹುದಿತ್ತು. ಆದರೆ ಹಾಗೆ ಆಗಿಲ್ಲ. ಬದಲಿಗೆ ನಾವು ಹುಟ್ಟಿದೆವು. ನಮಗೆ ಈ ಲೋಕದ ಬಗ್ಗೆಯಷ್ಟೆ ಪರಿವೆ ಇಲ್ಲ. ಕೆಲವೊಮ್ಮೆ ನಮಗೇ ತೊಂದರೆ ಎನ್ನಿಸುವ ತನ್ನರಿವೂ ಇದೆ. 

ಪ್ರಜ್ಞೆಯ ವಿಭಿನ್ನ ಮಜಲುಗಳನ್ನು ನಾವು ಅಧ್ಯಯನ ಮಾಡಿದರೂ, ಈ “ಕಠಿಣ ಸಮಸ್ಯೆ”ಗಳಿಗೆ ವೈಜ್ಞಾನಿಕ ಪರಿಹಾರ ನೀಡುವುದು ಅಸಾಧ್ಯವೆನ್ನಿಸಬಹುದು. ವಿಜ್ಞಾನವೊಂದೇ ಇದನ್ನು ಅರ್ಥೈಸಲು ನೆರವಾಗಬಲ್ಲುದೇ ಎನ್ನುವ ಬಗ್ಗೆ ಹಲವು ವಿಜ್ಞಾನಿಗಳಿಗೆ ಅನುಮಾನವೂ ಇದೆ. 

ಮಿದುಳಿನಾಚೆಗಿನ ಪ್ರಜ್ಞೆ

ನರವಿಜ್ಞಾನಿಗಳ ಅಧ್ಯಯನಗಳಲ್ಲದೆ ಐಐಎಸ್ಸಿಯಲ್ಲಿ ನಡೆಯುತ್ತಿರುವಂತೆ ವಿಭಿನ್ನ ಕೋನಗಳಿಂದ ನರ-ಪ್ರಜ್ಞೆಯ ಸಮಸ್ಯೆಯನ್ನು ಕಾಣುವುದು ಒಳ್ಳೆಯದು ಎನ್ನುತ್ತಾರೆ ಶ್ರೀನಿವಾಸನ್‌. ಐಐಎಸ್ಸಿಯ ಈ ನರ-ಪ್ರಜ್ಞೆ ಯೋಜನೆಯು ಪ್ರಜ್ಞೆಯನ್ನು ವಿಭಿನ್ನ ದೃಷ್ಟಿಕೋನಗಳಿರುವ ಪ್ರಜ್ಞೆಯ ಸಂಶೋಧಕರು ಒಟ್ಟಾಗಿ ಚರ್ಚಿಸುವುದಕ್ಕೆ ಅನುಕೂಲ ಮಾಡಿಕೊಡುವ ಕಮ್ಮಟಗಳನ್ನು ಪ್ರತಿವರ್ಷವೂ ಏರ್ಪಡಿಸುತ್ತದೆ. ಇಲ್ಲಿ ಚರ್ಚಿಸುವ ವಿಭಿನ್ನ ದೃಷ್ಟಿಕೋನಗಳಲ್ಲಿ ಪುರಾತನ ಉಪನಿಷತ್ತುಗಳು ಹಾಗೂ ಬೌದ್ಧ ಪರಂಪರೆಗಳಲ್ಲಿ ಪ್ರಜ್ಞೆಯನ್ನು ಒಂದು ಮೂಲಭೂತ ಗುಣದಂತೆ ಕಾಣುವದರ ಬಗ್ಗೆಯೂ ಇದೆ. 

ನಿತಿನ್‌ ಹೇಳುವ ಪ್ರಕಾರ ಇದು ಪ್ರಜ್ಞೆಯನ್ನು ಸರ್ವಾಂತರ್ಯಾಮಿಯಾಗಿ ಪರಿಗಣಿಸುತ್ತದೆ. ನಮ್ಮ ಮಿದುಳು ಕೇವಲ ಈ ಪರಿವೆಯನ್ನು ತಿಳಿಸುತ್ತದೆ. ಹುಟ್ಟಿಸುವುದಿಲ್ಲ. 

ನಮ್ಮ ಮಿದುಳು ರೇಡಿಯೋ ಗ್ರಾಹಕದಂತೆ,” ಎನ್ನುತ್ತಾರೆ ನಿತಿನ್.‌ “ರೇಡಿಯೋದಲ್ಲಿ ರೇಡಿಯೊ ನಿಲಯಗಳು ಹಾಡನ್ನು ಪ್ರಸಾರ ಮಾಡುತ್ತಿವೆ ಎಂದಿಟ್ಟುಕೊಳ್ಳೋಣ. ಆ ನಿಲಯಕ್ಕೆ ನಾನು ಟ್ಯೂನ್‌ ಮಾಡಿದ್ದರೆ ಆ ಹಾಡನ್ನು ಕೇಳಲಾರೆ. ಅದಕ್ಕೆ ರೇಡಿಯೊ ಬೇಕು. ಆದರೆ ರೇಡಿಯೋವೇ ಹಾಡನ್ನು ಹುಟ್ಟಿಸುವುದಿಲ್ಲ. ಅಲ್ಲವೇ?”

ಮಿದುಳನ್ನೂ ಮೀರಿ ಪ್ರಜ್ಞೆ ಎನ್ನುವುದು ಇರಬಲ್ಲುದು ಎನ್ನುವ ಈ ಪರಿಕಲ್ಪನೆಯನ್ನು ವೈಜ್ಞಾನಿಕ ವಿಧಾನಗಳ ಮೂಲಕ ಪರೀಕ್ಷಿಸುವುದು ಅಸಾಧ್ಯ ಎನ್ನುವವರಿದ್ದಾರೆ. ಆದರೆ ಕೆಲವು ವಿಜ್ಞಾನಿಗಳೂ, ಮನೋವಿಜ್ಞಾನಿಗಳೂ, ಸತ್ತಂತಹ ಅನುಭವ ಅಥವಾ ನಿಯರ್‌ಡೆತ್‌ ಎಕ್ಸ್‌ಪೀರಿಯೆನ್ಸ್‌ ಎನ್ನುವ ಅನುಭವಗಳು ಇದಕ್ಕೆ ಉದಾಹರಣೆ ಎಂದು ನಂಬಿದ್ದಾರೆ.  ಹೃದಯದ ಬಡಿತ ಇನ್ನೇನು ನಿಂತು ಹೋಯಿತು ಎನ್ನುವಾಗ ಮತ್ತೆ ಅದರ ಚಟುವಟಿಕೆಯನ್ನು ಮರಳಿಸಿದ ಹೃದಯರೋಗಿಗಳಲ್ಲಿ ಹಲವರು ಇನ್ಯಾವುದೋ ಲೋಕದಲ್ಲಿ ಇದ್ದಂತಹ ಅನುಭವಗಳನ್ನು ದಾಖಲಿಸಿದ್ದಾರೆ. ಮಿದುಳಿಗೆ ರಕ್ತ ಪರಿಚಲನೆಯೇ ನಿಂತಿರುವಂತಹ ಈ ಸಂದರ್ಭದಲ್ಲಿಯೂ ಇಂತಹ ಅನುಭವಗಳು ಆಗುತ್ತಿವೆಯಾದರೆ, ಬಹುಶಃ ಪ್ರಜ್ಞೆ ಎನ್ನುವುದು ನರಗಳ ಚಟುವಟಿಕೆ ನಿಂತ ಮೇಲೆಯೂ ಮುಂದುವರೆಯಬಹುದೇನೋ ಎನ್ನುವುದು ಕೆಲವು ವಿಜ್ಞಾನಿಗಳ ಅನಿಸಿಕೆ. 

ಮಿದುಳನ್ನೂ ಮೀರಿ ಪ್ರಜ್ಞೆ ಎನ್ನುವುದು ಇರಬಲ್ಲುದು ಎನ್ನುವ ಈ ಪರಿಕಲ್ಪನೆಯನ್ನು ವೈಜ್ಞಾನಿಕ ವಿಧಾನಗಳ ಮೂಲಕ ಪರೀಕ್ಷಿಸುವುದು ಅಸಾಧ್ಯ ಎನ್ನುವುದು ಹಲವು ವಿಜ್ಞಾನಿಗಳ ಅಭಿಪ್ರಾಯ. 

ರಕ್ತ ಪರಿಚಲನೆ ನಿಂತ ತಕ್ಷಣವೇ ಮಿದುಳು ಸಾಯುವುದಿಲ್ಲ. ಅದರ ಸಾವು ನಿಧಾನವಾಗಿ ಆಗುವ ಕ್ರಿಯೆ ಎನ್ನುವವರೂ ಇದ್ದಾರೆ. ಇವರ ಪ್ರಕಾರ ಸಾವಿನಂತಹ ಅನುಭವಗಳು ಆದಾಗಲೆಲ್ಲ ಮಿದುಳಿನ ಚಟುವಟಿಕೆಯೂ ಅತಿಯಾಗಿರುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಆಗುವ ಯಾವುದೇ ಪ್ರಜ್ಞೆಯ ಅನುಭವವನ್ನೂ ಮಿದುಳೇ ಕಾರಣವಿರಬೇಕು ಎನ್ನುವುದು ಅವರ ತರ್ಕ. ಇದು ಮಿದುಳು ಬದುಕಿ ಉಳಿಯಲು ಕೈಗೊಳ್ಳುವ ಅತೀವ ಕ್ರಮ. ಸಾಯುವ ಮುನ್ನ ಹೇಗಾದರೂ ಉಳಿಸಿಕೊಳ್ಳಬೇಕು ಎಂದು ಮಿದುಳು ನಡೆಸುವ ಪ್ರಯತ್ನ ಇರಬೇಕು ಎನ್ನುವುದು ಅವರ ತರ್ಕ. 

ಪ್ರಜ್ಞೆ ಎನ್ನುವುದು ಮಾನವನ ದೇಹ ವ್ಯವಸ್ಥೆಯನ್ನು, ಅದರಲ್ಲಿಯೂ ವಿಶೇಷವಾಗಿ ಮಿದುಳಿನ ಜಟಿಲತೆಯನ್ನು ಅರ್ಥ ಮಾಡಿಕೊಳ್ಳುವದರಿಂದಾಗಿ ಉದ್ಭವಿಸಿದ ಪ್ರಶ್ನೆ ಎಂಬ ಅನಿಸಿಕೆಯೂ ಇದೆ. ಮತ್ತೊಂದು ವಾದದ ಪ್ರಕಾರ ಇದು ಗ್ರಹಿಕೆಗೆ ನಿಲುಕದ ವಿದ್ಯಮಾನ,” ಎನ್ನುತ್ತಾರೆ ಶ್ರೀನಿವಾಸನ್‌. “ಯಾವುದು ಸತ್ಯ ಇರಬಹುದು ಎನ್ನುವುದು ನನಗಂತೂ ಗೊತ್ತಿಲ್ಲ. ಈ ಎರಡೂ ನಿಲುವುಗಳನ್ನೂ ಪರಸ್ಪರ ಹೊಂದಿಸಿ ಅರ್ಥ ಮಾಡಿಕೊಳ್ಳುವ ಪ್ರಯತ್ನಗಳು ಬಹುಶಃ ಫಲ ಕೊಡಬಹುದು.” ಎನ್ನುವುದು ಅವರ ಅಭಿಪ್ರಾಯ. 

ನಿಗೂಢ ಪ್ರಶ್ನೆ

 “ ವಿಜ್ಞಾನದ ಮಟ್ಟಿಗೆ ಕೆಲವು ಸಮಸ್ಯೆಗಳು ಎಷ್ಟು ಕಠಿಣವಾಗಿರುತ್ತವೆ ಎಂದರೆ ಅವುಗಳ ಬಗ್ಗೆ ಎಂತಹ ಪ್ರಶ್ನೆಗಳನ್ನು ಕೇಳಬೇಕೆಂದೇ ಗೊಂದಲವಾಗುತ್ತದೆ. ಅಥವಾ ವಿಜ್ಞಾನ ಅವಕ್ಕೆ ಉತ್ತರ ನೀಡಬಲ್ಲುದೇ ಎನ್ನುವ ಸಂದೇಹವೂ ಬರುತ್ತದೆ. ಎನ್ನುತ್ತಾರೆ ವಿಜ್ಞಾನ ಲೇಖಕ ಫಿಲಿಪ್‌ ಬಾಲ್‌. 

ಸದ್ಯಕ್ಕಂತೂ ವಿಜ್ಞಾನಿಗಳು ವಿಜ್ಞಾನಕ್ಕೆ ನಿಲುಕಬಹುದಾದ, ಸುಲಭವೆನ್ನಿಸುವ, ಪ್ರಜ್ಞೆಯ ಅಂಶಗಳನ್ನೇ ಗುರಿಯಾಗಿಟ್ಟುಕೊಂಡು ಅಧ್ಯಯನಗಳನ್ನು ಮುಂದುವರೆಸಿದ್ದಾರೆ.  ಅಂತೆಯೇ ಅಸಂಖ್ಯವಾದ ವೈಜ್ಞಾನಿಕ, ತಾತ್ವಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಚರ್ಚೆಗಳನ್ನೂ ಪ್ರಶ್ನೆಗಳನ್ನೂ ಹುಟ್ಟು ಹಾಕಿದ್ದಾರೆ. 

ಈ ಪ್ರಯತ್ನಗಳ ಫಲವಾಗಿ ಈಗ ಜನರಿಗೆ ಈ ಸಮಸ್ಯೆ ಎಷ್ಟು ಕಠಿಣ ಎಂದು ತಿಳಿಸಬಹುದು ಎನ್ನುವ ಭರವಸೆ ಇದೆ,” ಎನ್ನುತ್ತಾರೆ ಅರುಣ್‌. 

ಪ್ರಜ್ಞೆಯ ನಿಗೂಢತೆಯನ್ನು ವಿಜ್ಞಾನಿಗಳು ಪರಿಪೂರ್ಣವಾಗಿ ಬಿಡಿಸದೇ ಹೋಗಬಹುದು. ಆದರೆ ಈ ಕಾರ್ಮೋಡದಲ್ಲಿಯೂ ಒಂದು ಬೆಳ್ಳಿಗೆರೆಯಿದೆ. ಇಷ್ಟೆಲ್ಲ ಅಸ್ಪಷ್ಟತೆ, ವಾದ, ವಿವಾದಗಳು ಇದ್ದಾಗಲೂ ಮಿದುಳಿನ ಬಗ್ಗೆ ಹಾಗೂ ನಮ್ಮ ಬಗ್ಗೆ ಸಾಕಷ್ಟು ಅರಿತುಕೊಳ್ಳಲಿದ್ದೇವೆ. ವಾದ=ವಿವಾದಗಳೂ ಅಮೂಲ್ಯವಾದಂಥವು ಎನ್ನುತ್ತಾರೆ ಸುಪ್ರತಿಂ. “ಈ ವಾದವಿವಾದಗಳೇ ನಮ್ಮ ಬೌದ್ಧಿಕತೆಯನ್ನು ಚುರುಕಾಗಿಸಿರುತ್ತದೆ. ಅದು ಕೊನೆಯಾಗಬಾರದು.” ಎನ್ನುತ್ತಾರೆ. 

“ಪ್ರಜ್ಞೆ ಎಂದರೇನೆಂದು ಉತ್ತರ ಸಿಕ್ಕಿಬಿಟ್ಟಮೇಲೆ ಮಾಡಲು ಏನುಳಿಯುತ್ತದೆ?” ಎಂದು ಹಾಸ್ಯ ಮಾಡುವ ಸುಪ್ರತಿಂ ಪ್ರಕಾರ ಅನಂತರ ಅಧ್ಯಯನಕ್ಕೆ ಏನೂ ಉಳಿದಿರುವುದಿಲ್ಲ!

__________________

ಇಂಗ್ಲೀಷ್‌ ಮೂಲ: ರೋಹಿಣಿ ಸುಬ್ರಹ್ಮಣ್ಯಂ.

ಕನ್ನಡಕ್ಕೆ: ಕೊಳ್ಳೇಗಾಲ ಶರ್ಮ;

ಮೂಲ ಇಂಗ್ಲೀಷ್‌ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ 

ಮೂಲ ಇಂಗ್ಲೀಷ್‌ ಲೇಖನವು ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸಸಿನ ಪ್ರಕಟಣೆ “ಕನೆಕ್ಟ್‌” ಪತ್ರಿಕೆಯಲ್ಲಿ ಡಿಸೆಂಬರ್‌ 2024ರಲ್ಲಿ ಪ್ರಕಟವಾಗಿತ್ತು. ಚಿತ್ರಗಳು ಹಾಗೂ ಲೇಖನ ಕೃಪೆ: ಕಮ್ಯೂನಿಕೇಷನ್ಸ್‌ ಕಛೇರಿ, ಐಐಎಸ್ಸಿ.

ಈ ಲೇಖನವು ಡಿಸೆಂಬರ್ ತಿಂಗಳ ಕುತೂಹಲಿ ಕನ್ನಡ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪೂರ್ಣ ಸಂಚಿಕೆಯನ್ನು ಕೆಳಗಿನ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ಓದಬಹುದು.

ಜನವರಿ ಮತ್ತು ಫೆಬ್ರವರಿ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ

ಹೊಸ ಚಂದಾದಾರರಾಗಲು  ಈ ಫಾರಮನ್ನು ಭರ್ತಿ ಮಾಡಿ. ಮುಂದಿನ ಸಂಚಿಕೆ ನಿಮ್ಮನ್ನು ಈಮೇಲಿನಲ್ಲಿ ತಲುಪುವುದು. https://forms.gle/gnSbAybCHL9wu1k46.   ನಿಮ್ಮ ಗೆಳೆಯರನ್ನೂ ಚಂದಾದಾರರನ್ನಾಗಿಸಲು ಈ ಲಿಂಕನ್ನು ಶೇರ್‌ ಮಾಡಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
ಕೊಳ್ಳೇಗಾಲ ಶರ್ಮ (ಎ.ಎಸ್.ಕೆ.ವಿ.ಎಸ್.ಶರ್ಮ)
ಪ್ರಕಾಶಕರು ಹಾಗೂ ಸಂಪಾದಕರು
ಮೊಬೈಲ್: +91-9886640328 | ಸ್ಥಿರ ದೂರವಾಣಿ: 91-0821-2971171

 

Leave a Reply

Close
Sign in
Close
Cart (0)

No products in the cart. No products in the cart.





0