ಅಕ್ಟೋಬರ್-ನವೆಂಬರ್‌ ತಿಂಗಳು ಬಂತೆಂದರೆ ಹಬ್ಬಗಳದ್ದೇ ಸಾಲು. ಪ್ರತೀ ಹಬ್ಬವೂ ಒಂದೊಂದು  ವಿಶೇಷವನ್ನು ಹೊತ್ತು ತಂದು ಮನೆ-ಮನಗಳಲ್ಲಿ  ಸಂಭ್ರಮವನ್ನು ಮೂಡಿಸುತ್ತದೆ. ಶರತ್ಕಾಲದಲ್ಲಿ ಬರುವ ಬೆಳಕಿನ ಹಬ್ಬ ಎಂದೇ ಹೆಸರಾದ ದೀಪಾವಳಿಯಂತೂ, ಮಕ್ಕಳಿಂದ ವಯಸ್ಸಾದವರ ತನಕ ಎಲ್ಲರೂ ಪಂಜು-ದೀಪಗಳನ್ನು ಹಚ್ಚುತ್ತಾ ಪಟಾಕಿ ಹೊಡೆಯುತ್ತಾ ಸಂತಸ ಪಡುವ ಹಬ್ಬ. ಎಲ್ಲೆಡೆ ಮತಾಪು, ಸುರುಸುರು ಬತ್ತಿ, ಭೂಚಕ್ರ, ಹೂಕುಂಡ, ರಾಕೆಟ್‌, ಲಕ್ಷ್ಮಿ ಪಟಾಕಿ, ಸರ ಪಟಾಕಿ, ಹೀಗೆ ಬಗೆಬಗೆಯ ಪಟಾಕಿಗಳ ಬೆಳಕು, ಸದ್ದುಗಳದ್ದೇ ಹಾವಳಿ. 

ಅನೇಕ ಇತಿಹಾಸಕಾರರು ಪಟಾಕಿಗಳನ್ನು ೨ನೇ ಶತಮಾನದಲ್ಲಿಯೇ ಬಳಸಲಾಗಿತ್ತೆಂದು ನಂಬಿದ್ದಾರೆ. ಬಿದಿರಿನ ಕಾಂಡವನ್ನು ಬೆಂಕಿಗೆ ಹಾಕಿದಾಗ ಅದರೊಳಗಿನ ಟೊಳ್ಳಾದ ಗಾಳಿರಂಧ್ರಗಳು ಬಲವಾಗಿ ಸ್ಫೋಟಿಸಿದ್ದರಿಂದ ಅವನ್ನೇ ಮೊದಲಿಗೆ ಪಟಾಕಿಗಳೆಂದು ಚೀನೀಯರು ನಂಬಿದ್ದರು. ಮತ್ತು ಈ ನೈಸರ್ಗಿಕ ಪಟಾಕಿಗಳು ದುಷ್ಟಶಕ್ತಿಯನ್ನು ಓಡಿಸುತ್ತವೆಂದು ಅವರ ನಂಬಿಕೆಯಾಗಿತ್ತು. ಮುಂದೆ ಈ ಜ್ಞಾನವೇ ಇಂದಿನ ನಮ್ಮ ಇಷ್ಟದ, ಬಣ್ಣಬಣ್ಣದ ಬೆಳಕನ್ನು ಸೂಸುವ, ಕಣ್ಣುಗಳಿಗೆ ಮುದನೀಡುವ,  ಶಬ್ದ ಮಾಡುತ್ತಾ ನಮ್ಮನ್ನು ಬೆರಗುಗೊಳಿಸುವ ಬಗೆಬಗೆಯ ಪಟಾಕಿಗಳ ಆವಿಷ್ಕಾರಕ್ಕೆ ನಾಂದಿಯಾಯಿತು.

ಪಟಾಕಿಗಳು ಹಲವಾರು ಸಾವಯವ ಮತ್ತು ಅಸಾವಯವ ರಸಾಯನಿಕಗಳಿಂದ ಮಾಡಲ್ಪಟ್ಟಿವೆ. ಇವನ್ನು ಇದ್ದಿಲು, ಗಂಧಕ, ಪೊಟ್ಯಾಷಿಯಂ ನೈಟ್ರೇಟ್ಸ್,‌ ಪೊಟ್ಯಾಷಿಯಂ ಕ್ಲೋರೇಟ್ಸ್‌, ಪೊಟ್ಯಾಷಿಯಂ ಪರ್ಕ್ಲೋರೇಟ್‌, ಮ್ಯಾಂಗನೀಸ್‌, ಸೋಡಿಯಂ ಆಕ್ಸಲೇಟ್‌, ಸೀಸ, ಅಲ್ಯುಮಿನಿಯಂ,‌ ತಾಮ್ರ, ಕಬ್ಬಿಣ, ಸ್ಟ್ರಾಂಶಿಯಂ ನೈಟ್ರೇಟ್ ಮತ್ತು ಬೇರಿಯಂ ನೈಟ್ರೇಟ್‌ ಇವುಗಳಿಂದ ಮಾಡಿದ ರಾಸಾಯನಿಕಗಳ ಪೊಟ್ಟಣಗಳೆಂದು ಹೇಳಬಹುದು. ಸೋಡಿಯಂ  ಮತ್ತು ಪೊಟ್ಯಾಷಿಯಂ ಅಯಾನುಗಳನ್ನು ಆಕ್ಸಿಡೈಸರ್‌ ಗಳಾಗಿಯೂ, ಸತುವನ್ನು ಭರ್ರನೆ ಚಲನೆಯನ್ನುಂಟು ಮಾಡುವ ಹೊಗೆಯನ್ನು ತರಿಸಲೂ, ಸ್ಟ್ರಾಂಶಿಯಂ ಅನ್ನು ಪಟಾಕಿಗಳನ್ನು ಸ್ಥಿರವಾಗಿಸಲೂ ಬಳಸಲಾಗುತ್ತದೆ. ಅವುಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳು ಪೊಟ್ಟಣದೊಳಗೆ ಬಚ್ಚಿಟ್ಟ ವಿವಿಧ ನಕ್ಷತ್ರಗಳಾಗುವ ಸಿಡಿದ್ದುಗಳನ್ನು ಗಾಳಿಗೆ ನೂಕಿ ಸಿಡಿಸುತ್ತವೆ. ಈ ರಾಸಾಯನಿಕ ಕ್ರಿಯೆಯನ್ನೇ ನಾವು ಆನಂದಿಸುತ್ತೇವೆ!

ಕ್ರಿ.ಶ ಸುಮಾರು ೬೦೦-೯೦೦ರ ವೇಳೆಗೆ  ಚೀನೀ ರಸವಿಜ್ಞಾನಿಯೊಬ್ಬ ಪೊಟ್ಯಾಶಿಯಂ ನೈಟ್ರೇಟ್‌, ಗಂಧಕ ಮತ್ತು ಇದ್ದಿಲನ್ನು ಬೆರೆಸಿ ಕಪ್ಪು ಪುಡಿ-ಬಂದೂಕಿನ ಸಿಡಿಮದ್ದನ್ನು ತಯಾರಿಸಿದ. ಅದನ್ನೇ ಬಿದಿರಿನ ಕಡ್ಡಿಗಳೊಳಗಿನ ಗಾಳಿರಂಧ್ರಗಳೊಳಗೆ ತುಂಬಿಸಿ ಸಿಡಿಸಿದ. ಅದೇ ಮೊದಲ ಬಾರಿಗೆ ಪಟಾಕಿಗಳ ಪ್ರಯೋಗ  ಆರಂಭವಾಯಿತೆನ್ನಬಹುದು. ಇದೇ ಪಟಾಕಿಗಳಲ್ಲಿಯೂ, ಬಂದೂಕುಗಳಲ್ಲಿಯೂ ಬಳಕೆಯಾಗುವ ಸಿಡಿಮದ್ದು. ಸಿಡಿಮದ್ದು ೧೩ನೇ ಶತಮಾನದಲ್ಲಿ ಯುರೋಪನ್ನು ತಲುಪಿ, ೧೫ನೇ ಶತಮಾನದ ಹೊತ್ತಿಗೆ, ಧಾರ್ಮಿಕ ಆಚರಣೆಗಳಿಗೆ ಮತ್ತು ಸಾರ್ವಜನಿಕ ಮನರಂಜನೆಗೆ ಪಟಾಕಿಗಳನ್ನು ಬಳಸುವುದು ಆರಂಭವಾಗಿತ್ತು.

ರಕ್ಷಣೆ, ಮನರಂಜನೆ ಹಾಗೂ ಇನ್ನಿತರ ಧಾರ್ಮಿಕ ಆಚರಣೆಗಳಿಗೆಂದು ಉಪಯೋಗಿಸಲು ತಯಾರಿಸಲಾಗುತ್ತಿದ್ದ ಪಟಾಕಿಗಳ ಮೇಲೆ ಇಂದು ನಮ್ಮ ಸರ್ಕಾರವೇ ನಿಷೇಧ ಹೇರುವಂತಾಗಿದೆ. ಅದಕ್ಕೆ ಕಾರಣ ಅವುಗಳಲ್ಲಿ ತುಂಬಿರುವ ರಾಸಾಯನಿಕಗಳು ಪರಿಸರವನ್ನು ಮಲಿನಗೊಳಿಸುತ್ತಿರುವುದು,  ಹಾಗೂ ಅವುಗಳಿಂದಾಗುತ್ತಿರುವ ಆಸ್ತಮಾ ಮತ್ತು ಬ್ರಾಂಕೈಟಿಸ್‌ನಂತಹ ಉಸಿರಾಟ ಸಂಬಂಧೀ ಖಾಯಿಲೆಗಳು. ಪ್ರಪಂಚದ ಅತ್ಯಂತ ಕಲುಷಿತ ನಗರಗಳಲ್ಲಿ ಹನ್ನೊಂದನೆಯದು ಎನ್ನುವ ಕುಖ್ಯಾತಿ ಪಡೆದ ನಮ್ಮ ರಾಜಧಾನಿ ದೆಹಲಿಯಲ್ಲಿ ದೀಪಾವಳಿಯಂದು ಕೇವಲ ಹಸಿರು ಪಟಾಕಿಗಳನ್ನಷ್ಟೆ ಸುಡುವಂತೆ ಸುಪ್ರೀಂ ಕೋರ್ಟ್‌ ನಿಷೇಧ ಹೇರಿದೆ.

ಬ್ರಾಕ್ಸ್ ಎಂಬ ರಸಾಯನವಿಜ್ಞಾನಿಯ ಪ್ರಕಾರ ಮೊದಲ ಬಾರಿಗೆ ಪಟಾಕಿಗಳಲ್ಲಿ ಬಣ್ಣವನ್ನು ತಂದಿದ್ದು ಹತ್ತೊಂಭತ್ತನೇ ಶತಮಾನದ ಆರಂಭದಲ್ಲಿ. ಅದುವರೆವಿಗೂ ಪಟಾಕಿಗಳು ಕೇವಲ ಬಿಳಿ ಅಥವಾ ಹಳದಿ ಬಣ್ಣದ ಕಿಡಿಗಳನ್ನಷ್ಟೆ ಸಿಡಿಸುತ್ತಿದ್ದುವು. ಆದರೆ ಅವುಗಳಲ್ಲಿ ಪೊಟ್ಯಾಷಿಯಂ ಕ್ಲೋರೇಟ್‌ ಅನ್ನು ಬೆರೆಸಿದ ನಂತರ ಹೊಳೆಯುವ ಬಣ್ಣಗಳನ್ನು ತರಲು ಸಾಧ್ಯವಾಯಿತು ಎಂದು ಹೇಳಲಾಗುತ್ತದೆ. ಪೊಟ್ಯಾಷಿಯಂ ಕ್ಲೋರೇಟ್‌ ಲವಣವು ಪಟಾಕಿಯು ದಹಿಸಲು ಪೊಟ್ಯಾಷಿಯಂ ನೈಟ್ರೇಟಿಗಿಂತ ಹೆಚ್ಚು ಶಕ್ತಿಯನ್ನೊದಗಿಸಬಲ್ಲ ಆಕ್ಸಿಡೈಸರ್‌ ಆಗಿದೆ.  ಪಟಾಕಿಗಳನ್ನು ತಯಾರಿಸುವಾಗ ಅಂದಿನ ರಸಾಯನವಿಜ್ಞಾನಿಗಳು ಬಣ್ಣಗಳ ಮೇಲೆ ಹೆಚ್ಚು ಒತ್ತನ್ನು ನೀಡಿದ್ದರಿಂದಾಗಿಯೇ ಇಂದು ನಾವು ವಿಧವಿಧವಾದ ಬಣ್ಣದ ಪಟಾಕಿಗಳನ್ನು ಸಂಭ್ರಮಿಸುತ್ತಿರುವುದು. ಹಾಗೆ ಮಾಲಿನ್ಯವನ್ನು ಅನುಭವಿಸುತ್ತಿರುವುದು.

ಫ್ರೆಂಚ್‌ ಕ್ರಾಂತಿಕಾರಿಯಾದ ಕ್ಲಾಡೆ ಫಾರ್ಚ್ಯೂನ್‌ ರಗೀರಿ ಎಂಬಾತನು ಅಮೋನಿಯಂ ಕ್ಲೋರೈಡ್‌ ನಂತಹ ಲೋಹದ ಲವಣಗಳನ್ನು ಜ್ವಾಲೆಯಲ್ಲಿ ಬಣ್ಣವನ್ನು ತರಲು ಬಳಸಿದ್ದರಲ್ಲಿ ಮೊದಲಿಗ. ೧೮೫೦ ರ ಸಮಯಕ್ಕೆ ಸ್ಟ್ರಾಂಶಿಯಂ ನೈಟ್ರೇಟ್‌ ಅನ್ನು ಕೆಂಪು ಬಣ್ಣದ, ಕಾಪರ್‌ ನೈಟ್ರೇಟ್ ಅನ್ನು ನೀಲಿ ಬಣ್ಣದ, ಬೇರಿಯಂ ನೈಟ್ರೇಟ್ ಅನ್ನು ಹಸಿರು ಬಣ್ಣದ ಜ್ವಾಲೆಯನ್ನು ಉತ್ಪಾದಿಸಲು ಬಳಸುವುದು ಆರಂಭವಾಗಿತ್ತು.

ಸಂಶೋಧನೆಯೊಂದರ ಪ್ರಕಾರ ದೀಪಾವಳಿಯ ದಿನಗಳಲ್ಲಿ ವಾತಾವರಣದ ಗಾಳಿಯಲ್ಲಿ ಲೋಹಗಳು, ಧನ ಅಯಾನುಗಳು(ಕೇಟಯಾನು) ಮತ್ತು ಋಣ ಅಯಾನುಗಳ (ಏನಯಾನು) ಸಾಂದ್ರತೆಯು ಇಂಡಿಯನ್‌ ನ್ಯಾಷನಲ್‌ ಆಂಬಿಯಂಟ್‌ ಏರ್‌ ಕ್ವಾಲಿಟಿ ಸ್ಟ್ಯಾಂಡರ್ಡ್ಸ್‌ ನ ೩.೧ ಪಟ್ಟು ಹೆಚ್ಚಾಗಿರುತ್ತದೆ ಹಾಗೂ ಉಸಿರಾಟದ ಸಮಸ್ಯೆಗಳಿಂದ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆಯೂ ಏರಿಕೆಯಾಗಿರುತ್ತದೆಯಂತೆ. ಗಾಳಿಯಲ್ಲಿ ತೇಲುವ ಲೋಹಗಳ ಪ್ರಮಾಣದಲ್ಲಿಯೂ ಹೆಚ್ಚಳವಾಗುವುದರಿಂದ,  ಅಪಾಯದ ಸೂಚ್ಯಂಕವೂ ಪ್ರತಿಶತ ೦.೫ ರಷ್ಟು ಏರಿಕೆಯಾಗುತ್ತದೆ ಎಂಬುದು ಗಂಭೀರವಾದ ವಿಷಯ! 

ಈಶಾನ್ಯ ಭಾರತದ ವೇಗವಾಗಿ ಬೆಳೆಯುವ ನಗರವಾದ ಗುವಾಹಟಿಯಲ್ಲಿ ದೀಪಾವಳಿಯ ದಿನ, ಅದರ ಹಿಂದಿನ ದಿನ ಮತ್ತು ಮಾರನೇ ದಿನದಲ್ಲಿ ವಾತಾವರಣದ ಗಾಳಿಯನ್ನು ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯು ಪರೀಕ್ಷೆ ಮಾಡಿತ್ತು. ಆ ಮಾಹಿತಿಯ ಪ್ರಕಾರ ಮಾಲಿನ್ಯಕಾರಕಗಳ ಪ್ರಮಾಣವನ್ನು ಕೆಳಗಿನ ರೇಖಾಚಿತ್ರದಲ್ಲಿ ಕಾಣಬಹುದು.

        ನಮ್ಮಲ್ಲಿ ದೀಪಾವಳಿಗೆ ಹಚ್ಚುವಂತೆ, ಅಮೇರಿಕಾದಲ್ಲಿ ಜುಲೈ ೪ ರಂದು ಸ್ವಾತಂತ್ರ್ಯೋತ್ಸವದ ಆಚರಣೆಗಾಗಿ ಪಟಾಕಿಗಳನ್ನು ಹಚ್ಚಿ ಸಂಭ್ರಮಿಸುವುದು ಪದ್ಧತಿ. ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿನ ಅಧ್ಯಯನವೊಂದರ ಪ್ರಕಾರ ಈ ಆಚರಣೆಯು ಮಾಲಿನ್ಯಕಾರಕ ರಾಸಾಯನಿಕಗಳ ಪ್ರಮಾಣದ ಏರಿಕೆಗೆ ಸಾಕ್ಷಿಯಾಗುತ್ತಿದೆ. ʼನೀಲಿ ಬಣ್ಣದ ಬೆಳಕು ಸೂಸುವ ರಾಕೆಟ್‌ʼ ಮತ್ತು ʼಫೌಂಟೇನ್‌ʼ ಗಳಂತಹ ಪಟಾಕಿಗಳ ಪ್ರದರ್ಶನದಿಂದ ಬಹಳ ವಿಷಕಾರಿ ಮಾಲಿನ್ಯಕಾರಕಗಳಾದ ಪಾಲಿಕ್ಲೋರಿನೇಟೆಡ್‌ ಡೈಆಕ್ಸಿನ್ಸ್‌ ಮತ್ತು ಫ್ಯೂರಾನ್ ಗಳೂ ವಾತಾವರಣಕ್ಕೆ ಬಿಡುಗಡೆಯಾಗುತ್ತವೆ ಎಂದೂ  ಈ ಅಧ್ಯಯನ ವರದಿ ಮಾಡಿದೆ.

ಭಾರತದಲ್ಲಿಯೂ ಪಟಾಕಿಗಳ ಪ್ರದರ್ಶನದ ಸಮಯದಲ್ಲಿ ಗಾಳಿಯ ಗುಣಮಟ್ಟವನ್ನು ಪರೀಕ್ಷಿಸಿ, ಕ್ಯಾಲ್ಸಿಯಂ, ಅಮೋನಿಯಂ, ಸೋಡಿಯಂ, ಪೊಟ್ಯಾಷಿಯಂ, ಕ್ಲೋರೈಡ್, ನೈಟ್ರೇಟ್‌ ಮತ್ತು ಸಲ್ಫೇಟ್‌ ಅಯಾನುಗಳ ಸಾಂದ್ರತೆಯು ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿದ್ದುದನ್ನೂ, ಹಾಗೂ ಅತ್ಯಂತ ಹಾನಿಕಾರಕ ಆಕ್ಸಿಡೀಕಾರಕವಾದ ಓಜೋನ್‌ (O3) ಬಿಡುಗಡೆಯಾಗುತ್ತದೆಂದು ದಾಖಲಿಸಿದ್ದಾರೆ. ಈ ಎಲ್ಲಾ ಸಂಶೋಧನೆಗಳೂ ನಾವು ಪಟಾಕಿಗಳ ಬಳಕೆಯನ್ನು ಕಡಿಮೆ ಮಾಡಬೇಕೆಂದು ಹೇಳುತ್ತಿವೆಯಷ್ಟೆ. ಇತ್ತೀಚೆಗೆ ಅಮೆರಿಕದಲ್ಲಿ ಹಸಿರು ಪಟಾಕಿಗಳ ಹಾಗೂ ಸಾಮಾನ್ಯ ಪಟಾಕಿಗಳನ್ನು ಸಿಡಿಸಿದಾಗ ವಾತಾವರಣದಲ್ಲಿ ಆಗುವ ಬದಲಾವಣೆಗಳನ್ನು ಚಿನ್ ಫುಂಗ್ ಲೀ ಮತ್ತು ಸಂಗಡಿಗರು ಅಧ್ಯಯನ ಮಾಡಿದ್ದರು. ಸುಪ್ರೀಂ ಕೋರ್ಟು ಹೇಳಿದಂತೆ ಕೇವಲ ಹಸಿರು ಪಟಾಕಿಗಳನ್ನಷ್ಟೆ ಬಳಸಿದರೂ ಪ್ರಯೋಜನವಿರಲಿಕ್ಕಿಲ್ಲ  ಎಂದು ಎನ್ವಿರಾನ್ಮೆಂಟ್ ಸೈನ್ಸ್ ಅಂಡ್‍ ಟೆಕ್ನಾಲಜಿ ಪತ್ರಿಕೆಯಲ್ಲಿ ಪ್ರಕಟವಾದ  ಅಧ್ಯಯನ ಸೂಚಿಸುತ್ತದೆ. ಇದರ ಪ್ರಕಾರ ಹಸಿರು ಪಟಾಕಿಗಳನ್ನು ಬಳಸಿದಾಗ ಮಲಿನ ಗಾಳಿಯಲ್ಲಿ ಇರುವ 2.5 ಮೈಕ್ರೊಮೀಟರಿಗಿಂತಲೂ ಸಣ್ಣದಾದ ವಸ್ತುಗಳ ಪ್ರಮಾಣ ಅರ್ಧಕ್ಕರ್ಧ ಕಡಿಮೆ ಆಗುತ್ತದೆ. ಆದರೆ ಇದರಿಂದ ಗಾಳಿ ಆರೋಗ್ಯಕರವಾಗೇನೂ ಆಗುವುದಿಲ್ಲ. ಅದರ ಹಾನಿಕಾರಕ ಗುಣದಲ್ಲಿ ವ್ಯತ್ಯಾಸವೇನೂ ಆಗುವುದಿಲ್ಲ. ಮಾಲಿನ್ಯ ಕಡಿಮೆ ಮಾಡಬೇಕು ಎಂದರೆ ಒಟ್ಟಾರೆ ಬಳಸುವ ಪಟಾಕಿಗಳ ಪ್ರಮಾಣ ಕಡಿಮೆ ಆಗಬೇಕು ಎನ್ನುತ್ತದೆ ಈ ಸಂಶೋಧನೆ. ಆಟದಲ್ಲಿ ಗೆದ್ದಾಗಲೂ, ಮದುವೆ ಮನೆ ಮುಂದೆಯೂ ಪಟಾಕಿ ಹೊಡೆಯುವ ನಮ್ಮ ಚಾಳಿಗೆ ಕಡಿವಾಣ ಹಾಕುವುದು ಸಾಧ್ಯವೇ?

ಅದೇನೆ ಇರಲಿ,ಪಟಾಕಿಗಳು ನಮ್ಮ ಸಂಭ್ರಮದ ಕಾರಣವೂ ಹೌದು! ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವೂ ಹೌದು! ಅದರ ಅತಿಯಾದ ಬಳಕೆಯು ನಮ್ಮ ಪರಿಸರದ ಸ್ವಾಸ್ಥ್ಯಕ್ಕೆ ಕಂಟಕವೂ ಹೌದು!

ಹಾಗಾಗಿ ಹಬ್ಬದ ಹೆಸರಿನಲ್ಲಿ ನಾವು ನಮ್ಮ ಪರಿಸರಕ್ಕೆ ಕೊಡುತ್ತಿರುವ ಉಡುಗೊರೆ ಬಹಳ ಅಪಾಯಕಾರಿಯಾಗಿದೆ ಎಂಬುದನ್ನು ಅರಿತುಕೊಳ್ಳೋಣ. ಸಾಂಪ್ರದಾಯಿಕ ಪಟಾಕಿಗಳಿಂದ ಆಧುನಿಕ ಪಟಾಕಿಗಳವರೆಗೆ ನಾವು ಬೆಳೆದು ಸಾಧಿಸಿದ್ದು, ಸಂತಸ ಪಟ್ಟಿದ್ದು, ನಮ್ಮ ಅರಿವಿನ ಸಂಕೇತವಾಗಿದೆ. ಅದೇ ಅರಿವನ್ನು ನಮ್ಮ ವಿಪರೀತ ಚಟುವಟಿಕೆಗಳಿಂದ ನಮ್ಮ ಆರೋಗ್ಯ ಮತ್ತು ಪರಿಸರವನ್ನು ಕಾಪಾಡಿಕೊಳ್ಳಲು ಬಳಸಿಕೊಳ್ಳೋಣ ಮತ್ತು ಪಂಜು, ದೀಪ ಹಾಗೂ ಹಸಿರು ಪಟಾಕಿಗಳನ್ನು ಹಚ್ಚುತ್ತಾ ಹಬ್ಬವನ್ನು ಆಚರಿಸೋಣ, ಆ ಬೆಳಕಿನಿಂದ ನಮ್ಮ ಜ್ಞಾನವನ್ನು ಬೆಳಗಿಸೋಣ. ಎಲ್ಲರಿಗೂ ಸುರಕ್ಷಿತ ದೀಪಾವಳಿಯ ಶುಭಾಶಯಗಳು!!

ಅಮೃತೇಶ್ವರಿ, ಬಿ. ಕುತೂಹಲಿ ಯೋಜನೆಯಲ್ಲಿ ಸಹಾಯಕಿಯಾಗಿದ್ದಾರೆ. 

ಪಟಾಕಿಯ ಕುರಿತು ಕೆಲವು ಲೇಖನಗಳು

ಪಟಾಕಿಯೊಳಗೊಂದು ಇಣುಕುನೋಟ.

ಹಸಿರು ಪಟಾಕಿಗಳು ಎಂದರೇನು?

ಈ ಲೇಖನವು ನವೆಂಬರ್ 2021 ಕುತೂಹಲಿ ಕನ್ನಡ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪೂರ್ಣ ಸಂಚಿಕೆಯನ್ನು ಕೆಳಗಿನ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ಓದಬಹುದು.

ನವೆಂಬರ್ 2021 ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ

ಹೊಸ ಚಂದಾದಾರರಾಗಲು  ಈ ಫಾರಮನ್ನು ಭರ್ತಿ ಮಾಡಿ. ಮುಂದಿನ ಸಂಚಿಕೆ ನಿಮ್ಮನ್ನು ಈಮೇಲಿನಲ್ಲಿ ತಲುಪುವುದು. https://forms.gle/gnSbAybCHL9wu1k46.   ನಿಮ್ಮ ಗೆಳೆಯರನ್ನೂ ಚಂದಾದಾರರನ್ನಾಗಿಸಲು ಈ ಲಿಂಕನ್ನು ಶೇರ್‌ ಮಾಡಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
ಕೊಳ್ಳೇಗಾಲ ಶರ್ಮ (ಎ.ಎಸ್.ಕೆ.ವಿ.ಎಸ್.ಶರ್ಮ)
ಪ್ರಕಾಶಕರು ಹಾಗೂ ಸಂಪಾದಕರು
ಮೊಬೈಲ್: +91-9886640328 | ಸ್ಥಿರ ದೂರವಾಣಿ: 91-0821-2971171

 

Leave a Reply

Your email address will not be published. Required fields are marked *

Close
Sign in
Close
Cart (0)

No products in the cart. No products in the cart.





0