ಪಟಾಕಿಗಳು ಎಂದರೆ ಇನ್ನೇನಲ್ಲ. ಫಟ್ಟನೆ ಸಿಡಿಯುವ ಬೆಂಕಿಕಡ್ಡಿಯ ಮದ್ದು ಎನ್ನಬಹುದು. ಮದ್ದು ಯಾವುದ ಇರಲಿ, ಉರಿಯುವ ವಸ್ತು ಹಾಗೂ ಅದು ಉರಿಯಲು ಶಕ್ತಿ ಒದಗಿಸುವ ಆಕ್ಸಿಡೈಸರು ಬೇಕು. ಸಾಮಾನ್ಯವಾಗಿ ಆಕ್ಸಿಜನ್ನ ದಹನಕ್ರಿಯೆಗೆ ಆಕ್ಸಿಡೈಸರು. ಆದರೆ ಪಟಾಕಿಯಲ್ಲಿ ಇದು ತಕ್ಷಣವೇ ಒದಗಬೇಕಾದ್ದರಿಂದ ಪೊಟ್ಯಾಶಿಯಂ ನೈಟ್ರೇಟು, ಪೊಟ್ಯಾಶಿಯಂ ಕ್ಲೋರೇಟನ್ನು ಬಳಸುತ್ತಾರೆ. ಇದರ ಜೊತೆಗೆ ಉರಿಯಲು ಇದ್ದಿಲು, ಬಣ್ಣ ಕೊಡಲು ಸ್ಟ್ರಾಂಶಿಯಂ, ಬೇರಿಯ, ಅಲ್ಯೂಮಿನಿಯಂ, ತಾಮ್ರ ಮೊದಲಾದ ಲೋಹಗಳನ್ನ ಬಳಸುತ್ತಾರೆ. ಇವೆಲ್ಲವನ್ನ ಕಾಗದದಲ್ಲಿ ಸುತ್ತಿ, ಒಂದಿಷ್ಟು ಮಣ್ಣನ್ನ ಸೇರಿಸಿ ಪಟಾಕಿ ಮಾಡುತ್ತಾರೆ. ಪಟಾಕಿ ಸಿಡಿದಾಗ, ಸದ್ದು, ಬೆಳಕಿನ ಜೊತೆಗೆ ಈ ಎಲ್ಲ ವಸ್ತುಗಳ ಸುಟ್ಟು ಹುಟ್ಟಿದ ಹೊಗೆ ಮತ್ತು ದೂಳು ಗಾಳಿಯನ್ನು ಸೇರುತ್ತವೆ. ಗಾಳಿ ಮಲಿನವಾಗುತ್ತದೆ.
ದುರದೃಷ್ಟವೆಂದರೆ ಪಟಾಕಿಯನ್ನು ಸುಂದರಗೊಳಿಸುವ ವಸ್ತುಗಳೆಲ್ಲವ ನಮಗೆ ಹಾನಿಯುಂ ಟುಮಾಡುವ ವಸ್ತುಗಳೇ. ಆಕ್ಸಿಡೈಸರುಗಳಲ್ಲಿ ಇರುವ ನೈಟ್ರೇಟು ಮತ್ತು ಕ್ಲೋರೇಟುಗಳೂ ಉರಿದು ಹುಟ್ಟುವ ನೈಟ್ರೋಜನ್ ಆಕ್ಸೈಡು ಮತ್ತು ಕ್ಲೋರೀನು ವಿಷಾನಿಲಗಳು. ಬೇರಿಯಂ, ಸ್ಟ್ರಾಂಶಿಯಂ, ಅಲ್ಯುಮಿನಿಯಂ, ಕ್ರೋಮಿಯಂ ಮೊದಲಾದ ಲೋಹಗಳು ದೂಳಿನಲ್ಲಿ ಬೆರೆಯುತ್ತವೆ. ಇವು ಕೂಡ ವಿಷಗಳೇ. ದೇಹದಲ್ಲಿ ಕೂಡಿಕೊಂಡು ಹಾನಿಯುಂಟು ಮಾಡಬಲ್ಲವು. ಇನ್ನು ಇವುಗಳನ್ನೆಲ್ಲ ಪೊಟ್ಟಣ ಕಟ್ಟಿಟ್ಟ ಕಾಗದವೂ ಸಾಮಾನ್ಯವಲ್ಲ. ದೀಪಾವಳಿಯಾದ ಮರುದಿನ ರಸ್ತೆಯಲ್ಲೆಲ್ಲ ಕಸವಾಗುವುದಷ್ಟೆ ಅಲ್ಲ, ಸಿಡಿದಾಗ ಸುಟ್ಟು, ಇದ್ದಿಲಾಗಿ, ಮಸಿಯಾಗಿ, ಸಣ್ಣ ದೂಳಾಗಿ ಹರಡುತ್ತವೆ. ಇದ್ದಿಲಿನ ಕಣಗಳೂ ಅತಿ ಸಣ್ಣದಾಗಿದ್ದಾಗ ತೊಂದರೆ ಕೊಡುವಂಥವೇ. ಇವುಗಳ ತೊಂದರೆ ಇಲ್ಲದಂತೆ ಮಾಡುವ ಪಟಾಕಿಯೇ ಹಸಿರು ಪಟಾಕಿ.
ಅಂದರೆ ಹಸಿರು ಪಟಾಕಿಯೂ ಸಿಡಿಯಬೇಕು. ಉರಿಯಬೇಕು. ಬಣ್ಣ ಹೊಮ್ಮಿಸಬೇಕು. ಢಂ ಎನ್ನಬೇಕು. ರಾಕೆಟ್ಟಿನಂತೆ ಹಾರಬೇಕು. ಬೆಂಕಿಯ ಚಿಲುಮೆ ಚಿಮ್ಮಬೇಕು. ಹಾಗಿದ್ದೂ ಮಾಲಿನ್ಯವುಂಟುಮಾಡಬಾರದು. ಇದು ಸಮಸ್ಯೆಯ ಮೂಲ. ಇದರಲ್ಲಿ ಅತ್ಯಂತ ಜಟಿಲವಾದ ರಸಾಯನವಿಜ್ಞಾನ ಇರುವುದೂ ಅಷ್ಟೇ ಸತ್ಯ. ಮಾಲಿನ್ಯಕ್ಕೆ ಅತಿಯಾದ ಕೊಡುಗೆ ನೀಡುವ ಪಟಾಕಿಯ ವಸ್ತುಗಳು ಎಂದರೆ ಆಕ್ಸಿಡೈಸರುಗಳು ಹಾಗೂ ಲೋಹದ ವಸ್ತುಗಳು. ಅದರಲ್ಲಿಯೂ ಪೊಟ್ಯಾಶಿಯಂ ನೈಟ್ರೇಟು ಮತ್ತು ಕ್ಲೋರೇಟುಗಳಿಗೆ ಬದಲಿಯಾಗುವ ವಸ್ತುಗಳಿಗಾಗಿ ಹುಡುಕಾಟ ನಡೆದಿದೆ. ಇವು ಶಕ್ತಿಯನ್ನು ಒದಗಿಸಿದರೂ, ಮಲಿನ ವಸ್ತುಗಳಾಗಬಾರದು. ಉದಾಹರಣೆಗೆ ಹಸಿರು ಬಣ್ಣ ಚೆಲ್ಲುವ ಬೇರಿಯಂ ಬದಲಿಗೆ ಬೋರಾನ್ ಬಳಸಬಹುದು. ಆದರೆ ಇದು ಬಲು ಬೇಗನೆ ಉರಿದು ಬೂದಿಯಾಗುವುದರಿಂದ ಹಸಿರು ಬಣ್ಣದ ನಕ್ಷತ್ರಗಳು ಬಲು ಬೇಗ ಮಿಂಚಿ ಮರೆಯಾಗುತ್ತವೆ. ಹಾಗೆಯೇ ಪಟಾಕಿ ಸಿಡಿಯಲು ಹಾಗೂ ರಾಕೆಟ್ಟು ಹಾರಲು ನೆರವಾಗುವಂತೆ ಅಗಾಧ ಪ್ರಮಾಣದಲ್ಲಿ ಅನಿಲಗಳನ್ನು ಉತ್ಪಾದಿಸುವಂತಹ ವಸ್ತುಗಳಿಗಾಗಿಯೂ ಹುಡುಕಾಟ ನಡೆದಿದೆ. ಸಾವಯವ ಪದಾರ್ಥಗಳಲ್ಲಿ ಈ ಸಾಮರ್ಥ್ಯಗಳಿರುವಂಥವು ಇವೆಯೇ? ಸಾಮಾನ್ಯ ರಸಾಯನಿಕಗಳನ್ನೇ ಬದಲಿಸಿ ಇಷ್ಟು ಶಕ್ತಿ ತುಂಬಬಹುದೇ ಎನ್ನುವುದೇ ಹಸಿರು ಪಟಾಕಿಗಳ ಸಂಶೋಧನೆಗೆ ಮೂಲ.
ಭಾರತದಲ್ಲಿಯೂ ಹಸಿರು ಪಟಾಕಿಗಳನ್ನು ಅಭಿವೃದ್ಧಿ ಪಡಿಸಲಾಗಿವೆ. ಪುಣೆಯಲ್ಲಿರುವ ನ್ಯಾಶನಲ್ ಕೆಮಿಕಲ್ ಲ್ಯಾಬೊರೇಟರಿ ಹಾಗೂ ನಾಗಪುರದಲ್ಲಿರುವ ರಾಷ್ಟ್ರೀಯ ಪರಿಸರ ಇಂಜಿನೀಯರಿಂಗ್ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ಆಕ್ಸಿಡೈಸರುಗಳಿಗೆ ಹಾಗೂ ಕೆಲವು ಇಂಧನ ವಸ್ತುಗಳಿಗೆ ಪರ್ಯಾಯ ವಸ್ತುಗಳನ್ನು ಬಳಸಿದ್ದಾರೆ. ಕಾಗದಗಳ ಬದಲಿಗೆ ಉರಿದಾಗ ಪೂರ್ತಿ ಹೊಗೆಯಾಗಿಬಿಡುವ ಪಾಲಿಮರುಗಳನ್ನೂ, ಆಕ್ಸಿಡೈಸರುಗಳಾಗಿ ಸಾವಯವ ಸಂಯುಕ್ತಗಳನ್ನೂ ಉಪಯೋಗಿಸಿದ್ದಾರೆ. ಈ ವಸ್ತುಗಳ ಬಳಕೆಯಿಂದಾಗಿ ಪಟಾಕಿಗಳು ಸೂಸುವ ಹೊಗೆಯಲ್ಲಿ ಹಾಗೂ ಚಿಮ್ಮುವ ದೂಳಿನ ಕಣಗಳಲ್ಲಿ ಶೇಕಡ ಮೂವತ್ತರಷ್ಟು ಕಡಿಮೆ ಆಗಿದೆ. ಹೀಗಾಗಿ ಇದು ಹಸಿರು ಪಟಾಕಿ ಎನ್ನಿಸಿದೆ. ಹಳೆಯ ಪಟಾಕಿಗಳ ಮುಂದೆ ಇವು ಸ್ವಲ್ಪ ಮಬ್ಬು ಇಲ್ಲವೇ ಕಡಿಮೆ ಸದ್ದಿನವೆನ್ನಿಸಬಹುದು. ಹಾಗಿದ್ದರೂ ಗಾಳಿಯನ್ನು ಹಾಗೂ ಪರಿಸರವನ್ನು ಮಲಿನಗೊಳಿಸದ ಹಸಿರು ಪಟಾಕಿ ಇಲ್ಲವೇ ಇಲ್ಲ ಎನ್ನಬಹುದು.
- ಅಮೃತೇಶ್ವರಿ, ಬಿ. ಕುತೂಹಲಿ ಯೋಜನೆಯಲ್ಲಿ ಸಹಾಯಕಿಯಾಗಿದ್ದಾರೆ.
ಪಟಾಕಿಯ ಕುರಿತು ಕೆಲವು ಲೇಖನಗಳು
ದೀಪಾವಳಿ ಪಟಾಕಿ ಮತ್ತು ರಸಾಯನಿಕಗಳು
ಈ ಲೇಖನವು ನವೆಂಬರ್ 2021 ಕುತೂಹಲಿ ಕನ್ನಡ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪೂರ್ಣ ಸಂಚಿಕೆಯನ್ನು ಕೆಳಗಿನ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ಓದಬಹುದು.
ನವೆಂಬರ್ 2021 ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ
ಹೊಸ ಚಂದಾದಾರರಾಗಲು ಈ ಫಾರಮನ್ನು ಭರ್ತಿ ಮಾಡಿ. ಮುಂದಿನ ಸಂಚಿಕೆ ನಿಮ್ಮನ್ನು ಈಮೇಲಿನಲ್ಲಿ ತಲುಪುವುದು. https://forms.gle/
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
ಕೊಳ್ಳೇಗಾಲ ಶರ್ಮ (ಎ.ಎಸ್.ಕೆ.ವಿ.ಎಸ್.ಶರ್ಮ)
ಪ್ರಕಾಶಕರು ಹಾಗೂ ಸಂಪಾದಕರು
ಮೊಬೈಲ್: +91-9886640328 | ಸ್ಥಿರ ದೂರವಾಣಿ: 91-0821-2971171