ಪ್ರತಿ ವರ್ಷವೂ ಜೂನ್‌ ೫ನೆಯ ತಾರೀಖು ವಿಶ್ವ ಪರಿಸರ ದಿನವನ್ನು ಆಚರಿಸುತ್ತೇವೆ. ಇದು ಸಂಭ್ರಮದ ಆಚರಣೆಯೂ ಅಲ್ಲ. ಕಾಳಜಿಯ ಆಚರಣೆಯೂ ಅಲ್ಲ ಎನಿಸುವಂತಾಗಿದೆ. ಆ ದಿನ ಕೆಲವರು ಮರಗಳನ್ನು ನೆಡುತ್ತಾರೆ. ಇನ್ನು ಕೆಲವರು ಕಸ ಆಯ್ದು ಬಿಸಾಡುತ್ತಾರೆ. ಇನ್ನು ಕೆಲವರು ಸೀಡ್‌ ಬಾಲ್‌ ಗಳನ್ನು ಮಾಡಿ ಅಲ್ಲಲ್ಲಿ ಬಿಸಾಡುತ್ತಾರೆ. ಅರಣ್ಯ ಇಲಾಖೆಯವರು ಉಚಿತವಾಗಿ ಸಸಿಗಳನ್ನು ವಿತರಿಸುತ್ತಾರೆ. ಇವೆಲ್ಲವೂ ಕೇವಲ ಆಚರಣೆಗಳು. ಪರಿಸರವನ್ನು ಇವು ನಿಜಕ್ಕೂ ಸುಧಾರಿಸಿವೆಯೇ ಎಂದರೆ ಹೌದೆನ್ನಲು ಕಷ್ಟವಾಗುತ್ತದೆ.  ಪರಿಸರವನ್ನು ನಿಜಕ್ಕೂ ಸಂರಕ್ಷಿಸಬಯಸುವವರು ಮಾಡಬೇಕಾದದ್ದು ಈ ಆಚರಣೆಗಳನ್ನಲ್ಲ. ಬದಲಿಗೆ ನಿತ್ಯದ, ಸಣ್ಣ, ಪುಟ್ಟ ಚಟುವಟಿಕೆಗಳನ್ನು ಬದಲಿಸಿಕೊಂಡರೂ ಸಾಕು ಪರಿಸರವನ್ನು ಸಂರಕ್ಷಿಸುವತ್ತ ಸಾಕಷ್ಟು ಕೊಡುಗೆ ನೀಡಬಹುದು. 

ದೈನಂದಿನ ಚಟುವಟಿಕೆಗಳಲ್ಲಿ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಕೆಲವು ಅಂಶಗಳಿವೆ. ಅವುಗಳನ್ನು ಇಲ್ಲಿ ಒತ್ತಿ ಹೇಳುವುದು ಬಹು ಮುಖ್ಯ. ಮೊದಲನೆಯದು ನೀರಿನ ಅಪಬಳಕೆ, ಅತಿಬಳಕೆ. ಎರಡನೆಯದು ಆಹಾರವನ್ನು ವ್ಯರ್ಥ ಮಾಡುವುದು. ಮೂರನೆಯದು ಖರೀದಿ ವ್ಯವಹಾರ. ಈ ಎಲ್ಲ ಚಟುವಟಿಕೆಗಳಲ್ಲಿಯೂ ಇತ್ತೀಚೆಗೆ ನಮ್ಮ ಅಭ್ಯಾಸಗಳು ಬದಲಾಗಿವೆ. ಇವೆಲ್ಲವೂ ಪರಿಸರವನ್ನು ಅತ್ಯಂತ ಶೀಘ್ರವಾಗಿ ಹಾಳುಗೆಡಿಸುತ್ತಿರುವ ಪ್ಲಾಸ್ಟಿಕ್ಕು, ತ್ಯಾಜ್ಯಗಳ ಸಮಸ್ಯೆಯನ್ನು ಇನ್ನಷ್ಟು ಗಂಭೀರವಾಗಿಸುತ್ತಿವೆ. 

ಆನ್‌ಲೈನ್‌ ಆಹಾರ ಖರೀದಿ ಇತ್ತೀಚೆಗೆ ಈ ಸಮಸ್ಯೆಯ ಗುಡ್ಡವನ್ನು ಎತ್ತರವಾಗಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ಆನ್‌ಲೈನ್‌ ಖರೀದಿ ವ್ಯವಹಾರ ಪ್ರತಿ ವರ್ಷವೂ ಶೇಕಡ ಮೂವತ್ತರಿಂದ ನಲವತ್ತರಷ್ಟು ಅಧಿಕವಾಗುತ್ತಿತ್ತು. ಇದಕ್ಕಾಗಿ ಬೇಕಾದ ಪ್ಯಾಕೇಜಿಂಗ್‌ ವಸ್ತುಗಳ ಬೇಡಿಕೆಯೂ ಅಷ್ಟೇ ಪ್ರಮಾಣದಲ್ಲಿ ಹೆಚ್ಚಿದೆ. ಇವುಗಳಲ್ಲಿ ಅತಿ ಹೆಚ್ಚಿನವು ರಟ್ಟಿನ ಡಬ್ಬಿಗಳು, ಪ್ಲಾಸ್ಟಿಕ್‌ ಚೀಲ, ಹೊದಿಕೆ ಹಾಗೂ ಒಳಪದರಗಳು. ಫ್ರಿಜ್ಜು, ಫೋನು, ಸಾಬೂನು, ಕ್ರೀಂ ಮೊದಲಾದ ಕೊಳೆಯದ ವಸ್ತುಗಳ ಪ್ಯಾಕೇಜಿಂಗಿನಲ್ಲಿ ಬಹುತೇಕವನ್ನು ಮರುಬಳಕೆಗೆಂದು ರದ್ದಿಯಾಗಿ ಕೊಡುವ ಅವಕಾಶವಿದೆ. ಆದರೆ ಆಹಾರದ ಪ್ಯಾಕೇಜಿಂಗ್‌ ಬೇರೆಯದೇ ಸಮಸ್ಯೆಯನ್ನು ತಂದೊಡ್ಡುತ್ತದೆ. 

ಆಹಾರದ ಪ್ಯಾಕೇಜಿಂಗಿನ ವಸ್ತುಗಳಲ್ಲಿ ಅತಿ ಹೆಚ್ಚಿನವು ಒಮ್ಮೆ ಬಳಸಿ ಬಿಸಾಡುವಂತಹ ವಸ್ತುಗಳಾದ್ದರಿಂದ ಇವುಗಳೊಡ್ಡುವ ಸಮಸ್ಯೆಯ ಪ್ರಮಾಣ ಇನ್ನೂ ಹೆಚ್ಚು. ಭಾರತದಲ್ಲಿ ಆಹಾರ ಉದ್ಯಮವೊಂದೇ ಸುಮಾರು ಐದು ಲಕ್ಷ ಟನ್ನುಗಳಿಂದ ಆರು ಲಕ್ಷ ಟನ್ನುಗಳ ಪ್ರಮಾಣದ ಪ್ಯಾಕೇಜಿಂಗ್‌ ವಸ್ತುಗಳನ್ನು ಬಿಸಾಡುತ್ತದೆ. ಈ ವರ್ಷ ಇದು ಇನ್ನೂ ಎರಡು ಲಕ್ಷ ಟನ್ನುಗಳಷ್ಟು ಹೆಚ್ಚಾಗುತ್ತದೆಂದು ಅಂದಾಜಿದೆ. ಇದಕ್ಕೆ ಮುಖ್ಯ ಕಾರಣ, ಜೊಮಾಟೊ, ಸ್ವಿಗ್ಗಿ ಮೊದಲಾದ ಆನ್‌ಲೈನ್‌ ಆಹಾರ ಖರೀದಿ ಸೇವೆಗಳನ್ನು ಹೆಚ್ಚೆಚ್ಚು ಜನರು ಬಳಸಲು ಆರಂಭಿಸಿದ್ದಾರೆ. ಐದು ವರ್ಷಗಳಲ್ಲಿ ಹೀಗೆ ಆನ್‌ಲೈನ್‌ ಆಹಾರವನ್ನು ಖರೀದಿಸುವವರ ಸಂಖ್ಯೆ ಹತ್ತು ಪಟ್ಟು ಹೆಚ್ಚಿದೆ. ಕಳೆದ ವರ್ಷ ಪ್ರತಿದಿನವೂ ಏನಿಲ್ಲವೆಂದರೂ ಎಂಭತ್ತರಿಂದ ತೊಂಭತ್ತು ಲಕ್ಷ ಮಂದಿ ಆನ್‌ಲೈನಿನಲ್ಲಿ ಆಹಾರವನ್ನು ಕೊಂಡಿದ್ದರು. 

ಆನ್‌ಲೈನ್‌ ಆಹಾರವನ್ನು ಒದಗಿಸುವ ಸೇವೆಗಳು ಬಳಸುವ ಪ್ಯಾಕೇಜಿಂಗ್‌ ವಸ್ತುಗಳಲ್ಲಿ ಪ್ಲಾಸ್ಟಿಕ್ಕು ವಸ್ತುಗಳೇ ಅಧಿಕ. ಇವು ಒಟ್ಟಾರೆ ಬಳಕೆಯಾಗುವ ಪ್ಯಾಕೇಜಿಂಗು ವಸ್ತುಗಳಲ್ಲಿ ಶೇಕಡ ಅರವತ್ತರಷ್ಟು ಇರುತ್ತವೆ. ನಂತರದ ಸ್ಥಾನ ಪೇಪರು ಮತ್ತು ರಟ್ಟಿನದ್ದು. ಇನ್ನು ಅಲ್ಯುಮಿನಿಯಂ ಮತ್ತು ಪರಿಸರಸ್ನೇಹಿ ಎನ್ನಿಸುವ ಪ್ಯಾಕೇಜಿಂಗುಗಳ ಪ್ರಮಾಣ ಕೇವಲ ಶೇಕಡ ಹತ್ತರಷ್ಟು ಅಷ್ಟೆ. ಇದಲ್ಲದೆ ಒಮ್ಮೆ ಬಳಸಿ ಬಿಸಾಡುವ ಸ್ಪೂನುಗಳ ಹಾವಳಿಯೂ ಇದೆ. ಇದು ಪ್ಯಾಕೇಜಿಂಗ್‌ ಭಾಗವಲ್ಲ. ಆಹಾರ ಪ್ಯಾಕೇಜಿಂಗ್‌ ತ್ಯಾಜ್ಯಗಳಲ್ಲಿ ಮುಕ್ಕಾಲು ಪಾಲು ಕೇವಲ ಪಿಜ್ಜಾ ಪ್ಯಾಕ್‌ ಮಾಡಲು ಬಳಸುವ ರಟ್ಟು ಹಾಗೂ ಬಿರಿಯಾನಿ, ಪಲ್ಯ ಮೊದಲಾದವು ಸೋರದಂತೆ ಬಳಸುವ ಪ್ಲಾಸ್ಟಿಕ್ಕು ಸಾಮಗ್ರಿ. 

ಇತ್ತೀಚೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶದಂತೆ ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ಕುಗಳ ಬಳಕೆ ಕಡಿಮೆ ಮಾಡಬೇಕಾಗಿರುವುದರಿಂದ ಆನ್‌ಲೈನ್‌ ಆಹಾರ ಸೇವೆಗಳ ಕಂಪೆನಿಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಉದಾಹರಣೆಗೆ ಜೊಮ್ಯಾಟೊ ಪ್ಲಾಸ್ಟಿಕ್ಕು ಡಬ್ಬಿಗಳ ಬದಲಿಗೆ ಕಬ್ಬಿನನಾರಿನಿಂದ ಮಾಡಿದ, ಬಯೋಡಿಗ್ರೇಡಬಲ್‌ ಮುಚ್ಚಳಗಳನ್ನು ಬಳಸುತ್ತಿರುವುದಾಗಿ ಹೇಳಿದೆ. ಇದರಿಂದ ಸುಮಾರು 12000 ಟನ್ನುಗಳಷ್ಟು ಪ್ಲಾಸ್ಟಿಕ್‌ ಬಳಕೆ ಕಡಿಮೆ ಆಗಿದೆಯಂತೆ. ಇನ್ನು ಸ್ವಿಗ್ಗಿ ಕಂಪೆನಿಯು ಪ್ಯಾಕೇಜಿಂಗುಗಳ ಮೇಲೆ ವಿವರಗಳನ್ನು ಮುದ್ರಿಸಲು ತಿನ್ನಲು ಯೋಗ್ಯವಾದ ಶಾಯಿಯನ್ನು ಬಳಸುತ್ತಿದೆ. ಅಲ್ಲದೆ ಕಂಪೋಸ್ಟಿಗೆ ಯೋಗ್ಯವಾದಂತಹ ಪ್ಯಾಕೇಜಿಂಗ್‌ ವಸ್ತುಗಳನ್ನು ಬೆಂಗಳೂರು ಮತ್ತು ಮುಂಬಯಿಯಲ್ಲಿ ಬಳಸುತ್ತಿದೆ. ಡಬ್ಬಾಡ್ರಾಪ್‌ ಎನ್ನುವ ಯೋಜನೆಯಡಿ, ಬೃಹತ್‌ ಪ್ರಮಾಣದಲ್ಲಿ ಸರಬರಾಜು ಬಯಸುವ ಗ್ರಾಹಕರಿಗೆ ಸ್ಟೀಲಿನ ಡಬ್ಬಿಗಳಲ್ಲಿ ಆಹಾರವನ್ನು ಒದಗಿಸುತ್ತಿದೆ. 

ಇವೆಲ್ಲ ಕ್ರಮಗಳೂ ಸ್ವಾಗತಾರ್ಹವೇ. ಆದರೂ ಪ್ರತಿವರ್ಷವೂ ಶೇಕಡ ಮೂವತ್ತರಷ್ಟು ಪ್ರಮಾಣದಲ್ಲಿ ಹೆಚ್ಚುತ್ತಿರುವ ಗ್ರಾಹಕರಿಂದಾಗಿ ಪರಿಸರದ ಮೇಲೆ ಈ ಒತ್ತಡ ಹೆಚ್ಚುತ್ತಲೇ ಹೋಗಲಿದೆ. ಹಾಗಿದ್ದರೆ ಗ್ರಾಹಕರಾಗಿ ನಾವೇನು ಮಾಡಬಹುದು? ಒಮ್ಮೆ ಬಳಸಿ ಬಿಸಾಡಬಹುದಾದ ಪ್ಲಾಸ್ಟಿಕ್ಕನ್ನು ಬಳಸುವ ಕಂಪೆನಿಗಳಿಂದ ಆಹಾರ ಪಡೆಯುವುದನ್ನು ಕಡಿಮೆ ಮಾಡಬಹುದು. ಅವಶ್ಯಕವಲ್ಲದೇ ಇಂತಹ ಸೇವೆಗಳಿಂದ ಆಹಾರ ತರಿಸಿಕೊಳ್ಳುವುದನ್ನು ತಡೆಯಬಹುದು. ಅಥವಾ ಅತಿ ಹೆಚ್ಚು ಪ್ಯಾಕೇಜಿಂಗ್‌ ಬಳಸುವ ಪಿಜ್ಜಾ ಅಥವಾ ಬಿರಿಯಾನಿ, ಕರಿ ಮೊದಲಾದವುಗಳನ್ನು ಆನ್‌ಲೈನ್‌ ತರಿಸಿಕೊಳ್ಳುವುದನ್ನು ಕಡಿಮೆ ಮಾಡಬಹುದು. ಪರಿಸರದ ಬಗ್ಗೆ ಹೋರಾಡದಿದ್ದರೂ, ಒಂದು ಹೊತ್ತಿನ ಉಪವಾಸವನ್ನು ಮಾಡಿಯಾದರೂ ಕಾಳಜಿ ತೋರಿಸಬಹುದು.

ಈ ಲೇಖನವು ಜುಲೈ ತಿಂಗಳ ಕುತೂಹಲಿ ಕನ್ನಡ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪೂರ್ಣ ಸಂಚಿಕೆಯನ್ನು ಕೆಳಗಿನ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ಓದಬಹುದು.

ಜುಲೈ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ

ಹೊಸ ಚಂದಾದಾರರಾಗಲು  ಈ ಫಾರಮನ್ನು ಭರ್ತಿ ಮಾಡಿ. ಮುಂದಿನ ಸಂಚಿಕೆ ನಿಮ್ಮನ್ನು ಈಮೇಲಿನಲ್ಲಿ ತಲುಪುವುದು. https://forms.gle/gnSbAybCHL9wu1k46.   ನಿಮ್ಮ ಗೆಳೆಯರನ್ನೂ ಚಂದಾದಾರರನ್ನಾಗಿಸಲು ಈ ಲಿಂಕನ್ನು ಶೇರ್‌ ಮಾಡಬಹುದು.

Leave a Reply

Close
Sign in
Close
Cart (0)

No products in the cart. No products in the cart.