ಪುಟ್ಟ ಹಣತೆಯಿಂದ ಎಲ್‌ಇಡಿ ದೀಪಗಳವರೆಗೂ ಬೆಳಗುವ ಸಾಧನಗಳ ವಿಕಾಸ ಎನ್ನುವುದು ತಂತ್ರಜ್ಞಾನ ಸವೆಸಿದ ಹಾದಿಯನ್ನು ತೋರುತ್ತದೆ ಎನ್ನುತ್ತಾರೆ ಕೊಳ್ಳೇಗಾಲ ಶರ್ಮ

ದೀಪಾವಳಿ ಬಂತು. ಎಲ್ಲೆಡೆ ದೀಫಗಳನ್ನು ಹಚ್ಚಿ ಸಂಭ್ರಮಿಸುವ ದಿನಗಳು ಇವು. ಸಾಮಾನ್ಯವಾಗಿ ದೀಪಾವಳಿಯಲ್ಲಿ ಮನೆಯ ಮುಂದೆ ಹಣತೆಗಳನ್ನು ಸಾಲಾಗಿ ಹಚ್ಚಿ ಅಲಂಕರಿಸುವ ಪರಿಪಾಠವಿದೆ. ದೀಪವನ್ನು ಜ್ಞಾನ ಹಾಗೂ ಅರಿವಿನ ಸಂಕೇತವಾಗಿ ಕಾಣುತ್ತೇವಷ್ಟೆ.  ದೀಪಾವಳಿಯ ಕೇಂದ್ರ ಬಿಂದು ಎನ್ನಿಸಿದ ಈ ಹಣತೆ ಬರೇ ಮಣ್ಣಿನ ದೀಪವಲ್ಲ. ಅಮೋಘ ಅರಿವಿನ ಸಾಕಾರ.  ಏಕೆಂದರೆ ಈ ಪುಟ್ಟ ಸಾಧನದ ಹುಟ್ಟು ಸರಳವಾಗಿ ಆಗಿರಲಿಕ್ಕಿಲ್ಲ. ನವಶೋಧ ಅಥವಾ ಇನ್ವೆಂಶನ್ ಯಾ ಇನ್ನೊವೇಶನ್ ಎನ್ನುವುದು ಹೊಸ ಜ್ಞಾನವಿಲ್ಲದೆ ಆಗದು ಎನ್ನುವುದಕ್ಕೆ ಈ ಪುಟ್ಟ ಬೆಳಗುವ ಸಾಧನಕ್ಕಿಂತ ಬೇರೆ ಉದಾಹರಣೆ ಇಲ್ಲ. ಅಷ್ಟು ಸೋಜಿಗದ ವಸ್ತು ಹಣತೆ. ಹಣತೆಯಷ್ಟೇ ಏಕೆ. ದೀಪಾವಳಿಯಲ್ಲಿ ನಾವು ಬಳಸುವ ಎಲ್ಲ ಬೆಳಗುವ ಸಾಧನಗಳ ಹುಟ್ಟೂ ರೋಚಕ. ಅರಿವಿನ ಮುನ್ನಡೆಗೆ ದ್ಯೋತಕ. 

ಪುರಾತನ ಹಣತೆಗಳು ಕಲೆ ಸಂಸ್ಕೃತಿಯ ರಾಯಭಾರಿಗಳಾಗಿದ್ದುವು

ನಂಬಿಕೆ ಬರಲಿಲ್ಲವೇ? ಹಣತೆಯಲ್ಲಿನ ವಸ್ತುಗಳನ್ನು ಗಮನಿಸಿ. ಅವು ಯಾವುವೂ ಇನ್ವೆಂಶನ್ ಅಲ್ಲ. ಹಣತೆಯಲ್ಲಿರುವ ಎಣ್ಣೆ, ಹತ್ತಿ ಅಥವಾ ನಾರು ಹಾಗೂ ಜ್ವಾಲೆಯಾಗಿ ಉರಿಯುವ ಬೆಂಕಿ ಇವೆಲ್ಲವೂ ಮೊದಲೇ ಇದ್ದ ವಸ್ತುಗಳು. ಇವನ್ನು ಮಾನವ ಹೊಸದಾಗಿ ಶೋಧಿಸಲಿಲ್ಲ.  ಉಗಮವಾದಾಗಿನಿಂದಲೂ ಅವನಿಗೆ ಪರಿಚಿತವಿದ್ದ ವಸ್ತುಗಳಿವಿವು. ಆದರೆ ಇವೆಲ್ಲವನ್ನೂ ಸರಿಯಾಗಿ ಜೊತೆಗೂಡಿಸಿದರೆ, ನಿಧಾನವಾಗಿ ಬೆಳಗುವ ಜ್ವಾಲೆಯನ್ನು ಪಡೆಯಬಹುದು ಎನ್ನುವ ಅರಿವು ಬಂದದ್ದು ಯಾವಾಗಲೋ ಗೊತ್ತಿಲ್ಲ. 

ದಾಖಲೆಗಳ ಪ್ರಕಾರ ಸುಮಾರು 70000 ವರ್ಷಗಳ ಹಿಂದೆಯೇ ದೀಪದ ಬಳಕೆ ಇತ್ತು. ಅಷ್ಟು ಹಳೆಯ ಮಾನವ ಅವಶೇಷಗಳ ಜೊತೆಗೆ ಆಲಿವ್ ಎಣ್ಣೆ ಉರಿದಾಗ ದೊರೆಯುವ ಉಳಿಕೆಗಳು ಮೆಡಿಟರೇನಿಯನ್ ಪ್ರದೇಶದಲ್ಲಿ ಸಿಕ್ಕಿವೆ.  ಬೆಂಕಿಯ ಅಗ್ಗಿಷ್ಟಿಕೆಗಳು ಅದಕ್ಕೂ ಹಿಂದಿನವು. ಸುಮಾರು ಒಂದೂವರೆ ಲಕ್ಷ ವರ್ಷಗಳ ಹಿಂದೆ, ಮಾನವನ ಪೂರ್ವಜರು ಮಾಂಸ ಬೇಯಿಸುವುದಕ್ಕಾಗಿ ಬೆಂಕಿ ಹೊತ್ತಿಸುತ್ತಿದ್ದರು.  ನಾರು ಕೂಡ ಇಷ್ಟೇ ಹಳೆಯದು. ಆದರೆ ಗಮನಿಸಿ. ಕಡಲೆ ಎಣ್ಣೆ, ಕೊಬ್ಬರಿ ಎಣ್ಣೆ ಇಲ್ಲವೇ ಆಲಿವ್ ಎಣ್ಣೆಯನ್ನು ನೆಲದಲ್ಲಿ ಸುರಿದು ಬೆಂಕಿ ಹೊತ್ತಿಸಿದರೆ ಅವು ದೀಪವಾಗುವುದಿರಲಿ ಹೊತ್ತಿ ಉರಿಯುವುದೂ ಇಲ್ಲ. ಹುಲ್ಲೋ, ಜೊಂಡೋ, ಬಟ್ಟೆಯೋ, ಕಟ್ಟಿಗೆಯೋ ಬೇಕೇ ಬೇಕು. ಮಾಂಸದ ನೆಣವೂ ಅಷ್ಟೆ. ಬೆಂಕಿ ಹಚ್ಚಿದರೆ ಉರಿಯುವುದಿಲ್ಲ. ಬಟ್ಟೆಯಂತಹ ವಸ್ತು ಬೇಕೇ ಬೇಕು. ಹೀಗಾಗಿ ದೀಪ ಎನ್ನುವ ಸಾಧನದ ಶೋಧಕ್ಕೆ ನಾರಿನ ಉಪಯೋಗ ತಿಳಿದಿರಬೇಕು.

     ಮೊದಲ ದೀಪಗಳು. ಕಲ್ಲಿನ ಗುಳಿಯಲ್ಲಿ ಹುಲ್ಲನ್ನಿಟ್ಟು ಹೊತ್ತಿಸುತ್ತಿದ್ದ ಅಗ್ಗಿಷ್ಟಿಕೆಗಳು

ಮೊದಲ ದೀಪಗಳು ಬಹುತೇಕ ತಗ್ಗಿರುವ ಕಲ್ಲುಗಳಲ್ಲಿ ಒಣ ಹುಲ್ಲನ್ನೋ, ಬೆರಣಿಯನ್ನೋ ತುಂಬಿ ಹಚ್ಚಿದ ದೀಪಗಳಾಗಿದ್ದುವು. ಅನಂತರ ಬಂದದ್ದು ಸೂಡಿ ಅಥವಾ ಪಂಜು ಆಗಿದ್ದವು ಎನ್ನುವ ಊಹೆ ಇದೆ. ಕಡ್ಡಿಯ ತುದಿಗೆ ಹುಲ್ಲಿನ ಕುಚ್ಚು ಕಟ್ಟಿ, ಅದನ್ನು ಎಣ್ಣೆಯೋ ಅಥವಾ ಮಾಂಸದಲ್ಲಿನ ಕೊಬ್ಬಿನಲ್ಲಿಯೋ ಅದ್ದಿ ಬೆಂಕಿ ಹೊತ್ತಿಸಿದರೆ ಸೂಡಿಯಾಗುತ್ತಿತ್ತು. ಬಹುತೇಕ ಇವುಗಳೇ ರಾತ್ರಿಯ ಕತ್ತಲನ್ನು ದೂರವಿಡುವ ಮೊದಲ ದೀಪಗಳು ಆಗಿದ್ದುವು. ಹತ್ತೊಂಭತ್ತನೆಯ ಶತಮಾನದವರೆಗೂ ಸೂಡಿಗಳು ಬಳಕೆಯಲ್ಲಿದ್ದುವು ಎಂದರೆ ದೀಪದ ತಂತ್ರಜ್ಞಾನದ ಉಪಯುಕ್ತತೆ ಅರಿವಾಗುತ್ತದೆ.  ಇಲ್ಲಿಂದ ಮುಂದೆ ದೀಪದ ಬೆಳೆವಣಿಗೆ ದಾಪುಗಾಲನ್ನಿಟ್ಟಿತು. ಮೊತ್ತ ಮೊದಲ ಮೋಂಬತ್ತಿಯಂತಹ ದೀಪದ ಅನ್ವೇಷಣೆ ಆಗಿತ್ತು. ಪ್ರಾಣಿಗಳ ಕೊಬ್ಬಿನಲ್ಲಿ ನಾರನ್ನು ಅದ್ದಿ ತೆಗೆದು ಒಣಗಿಸಿ, ಕೊಬ್ಬು ಗಟ್ಟಿಯಾದ ಮೇಲೆ ಅದಕ್ಕೆ ಬೆಂಕಿ ಹಚ್ಚಿ ದೀಪವನ್ನಾಗಿ ಬಳಸಲಾಗುತ್ತಿತ್ತು. ಇಂತಹ ಪುರಾತನ ಮೋಂಬತ್ತಿಗಳು ಕ್ರಿಸ್ತಶಕ ಒಂದನೆಯ ಶತಮಾನದ ಸಂದರ್ಭದಲ್ಲಿ ಬಳಕೆಗೆ ಬಂದಿದ್ದುವು ಎನ್ನುತ್ತದೆ ಚರಿತ್ರೆ.

ಹಣತೆ ಅನಂತರದ ಶೋಧ. ಇದಕ್ಕೆ ಕುಂಬಾರಿಕೆಯ ಅಗತ್ಯವಿತ್ತು. ಎಣ್ಣೆಯ ಸೂಡಿಗಳ ಬದಲಿಗೆ ತೆಳುವಾದ ನಾರನ್ನು ಎಣ್ಣೆ ತುಂಬಿದ ಮಣ್ಣಿನ ಪಾತ್ರೆಯಲ್ಲಿ ಇಟ್ಟರೆ ದೀಪವಾಗುತ್ತದಷ್ಟೆ. ಮೊತ್ತ ಮೊದಲ ಹಣತೆ ಯಾವಾಗ ಶೋಧವಾಯಿತೋ ಬರೆದಿಟ್ಟವರಿಲ್ಲ. ಕಥೆ ಹೇಳಿದವರೂ ಇಲ್ಲ. ಆದರೆ ಪ್ರಪಂಚದ ಎಲ್ಲ ನಾಗರೀಕತೆಗಳಲ್ಲಿಯೂ ದೀಪಗಳ ಬಳಕೆ ಬಹಳವೇ ಇತ್ತು. ದೀಪಗಳು ಎಲ್ಲೋ ಒಂದೆಡೆ ಶೋಧವಾಗಿ ಬೇರೆ ಬೇರೆಡೆಗೆ ಹರಡಿದುವೋ, ಅಥವಾ ಬೇರೆ ಬೇರೆಡೆ ಪ್ರತ್ಯೇಕವಾಗಿ ಶೋಧವಾದುವೋ ಖಚಿತವಾಗಿ ಹೇಳಲಾಗದು. ಆದರೆ ಕುಂಬಾರಿಕೆ ತಂದ ಈ ಬದಲಾವಣೆ ಎಲ್ಲ ಸಂಸ್ಕೃತಿಯಲ್ಲಿಯೂ ಎಷ್ಟು ಬೆರೆತು ಹೋಯಿತೆಂದರೆ ದೀಪಗಳನ್ನು ಕಲೆ ಹಾಗೂ ಸಂಸ್ಕೃತಿಯ ದಾಖಲೆಯಾಗಿ ಬಳಸಿದ್ದನ್ನು ಕಾಣಬಹುದು. ಅತಿ ಪುರಾತನವಾದ ಹಣತೆಯಂತಹ ದೀಪಗಳು ಸುಮಾರು ಐದುಸಾವಿರ ವರ್ಷಗಳಷ್ಟು ಹಿಂದಿನವು. ಹರಪ್ಪ-ಮೊಹೆಂಜೊದಾರೋ ನಾಗರೀಕತೆಗಳಲ್ಲಿ, ಮೆಸೊಪೊಟೇಮಿಯಾದಲ್ಲಿ, ಚೀನಾದಲ್ಲಿ ಎಲ್ಲ ಕಡೆಯೂ ಇಂತಹ ದೀಪಗಳು ಪತ್ತೆಯಾಗಿವೆ.   ದೀಪಗಳ ಮೇಲೆ ಶಾಸನಗಳು, ರಾಜರ ವಿವರಗಳು, ದೇವದೇವತೆಗಳ-ಪ್ರಾಣಿಪಕ್ಷಿ, ಹೂಗಳ ಚಿತ್ರಗಳನ್ನು ಬರೆಯಲಾಗುತ್ತಿತ್ತು.

ನೇಪಾಳದ ಪುರಾತನ ದೀಪ

ದೀಪ ಎನ್ನುವ ತಂತ್ರಜ್ಞಾನದಲ್ಲಿ ಮುಂದಿನ ಬೆಳವಣಿಗೆ ಕೇವಲ ಎಣ್ಣೆಯ ಪಾತ್ರೆಯ ತಯಾರಿಕೆಯಲ್ಲಿ ಆದ ಬದಲಾವಣೆಯಷ್ಟೆ. ಮಣ್ಣಿನ ಹಣತೆಯ ಬದಲಿಗೆ ಲೋಹದ ಹಣತೆಗಳು, ದೀಪಗಳು ಬಂದುವು. ಅದೇ ಎಣ್ಣೆ, ಅದೇ ಬತ್ತಿಯನ್ನು ವಿವಿಧ ಲೋಹಗಳಿಂದ ತಯಾರಿಸಿದ ದೀಪಗಳಲ್ಲಿ ಬಳಸಿದ್ದನ್ನು ಬಿಟ್ಟರೆ ತಂತ್ರಜ್ಞಾನದಲ್ಲಿ ಸುಮಾರು ಮೂರ್ನಾಲ್ಕು ಸಾವಿರ ವರ್ಷಗಳವರೆಗೆ ಹೊಸತೇನೂ ಕಾಣಲಿಲ್ಲ. ದೀಪಗಳ ಪಾತ್ರೆಗಳಲ್ಲಿನ ಎಣ್ಣೆಯನ್ನು ಬತ್ತಿಗೆ ಸೇರಿಸುವ ವಿಧಾನದಲ್ಲಿ ಅಷ್ಟಿಷ್ಟು ಚಾತುರ್ಯವನ್ನು ಈ ಅವಧಿಯಲ್ಲಿ ನೋಡಬಹುದು. ಪಾತ್ರೆ ಮೇಲಿದ್ದು ಜ್ವಾಲೆ ಕೆಳಗಿರುವುದು, ಸಿಗರೇಟು ಲೈಟರಿನಂತೆ ಒತ್ತಿದರೆ ಕಿಡಿ ಹೊತ್ತಿ ತನ್ನಂತಾನೇ ಬೆಳಗುವ ದೀಪಗಳು, ಬೆಂಕಿ ಹೊತ್ತಿಸಲು ಬೆಂಕಿಕಡ್ಡಿಯ ಬಳಕೆ ಹೊಸ ಆವಿಷ್ಕಾರಗಳಾಗಿದ್ದುವು.

ಹಣತೆಯ ಜೊತೆ ಜೊತೆಗೇ ಮೋಂಬತ್ತಿಯ ದೀಪಗಳಲ್ಲಿಯೂ ಬದಲಾವಣೆಗಳಾದುವು. ಮೋಂಬತ್ತಿಯ ಸುತ್ತಲೂ ಗಾಜಿನ ಬುರುಡೆಯನ್ನು ಇಟ್ಟು, ದೀಪವನ್ನು ಗಾಳಿಯಿಂದ ರಕ್ಷಿಸುವ ಉಪಾಯ ಮಾಡಿದರು. ಇಂತಹ ಬುಡ್ಡಿ ದೀಪಗಳು ಕ್ರಿಸ್ತಪೂರ್ವ 1700ರ ಆಸುಪಾಸಿನಲ್ಲಿಯೂ ಪತ್ತೆಯಾಗಿವೆ. ಅನಂತರದ ದಿನಗಳಲ್ಲಿ ಹೆಚ್ಚೇನೂ ಬದಲಾವಣೆಗಳು ಕಾಣದೆ, ಎಣ್ಣೆ ದೀಪಗಳೂ, ಕೊಬ್ಬಿನ ಮೋಂಬತ್ತಿಗಳ ದೀಪಗಳ ಅಲಂಕಾರವಷ್ಟೆ ಬದಲಾದುವು ಎನ್ನಬೇಕು. ವಿವಿಧ ಸಸ್ಯಮೂಲದ ಎಣ್ಣೆಗಳಲ್ಲದೆ ತಿಮಿಂಗಲದ ಕೊಬ್ಬಿನಿಂದ ಪಡೆದ ಎಣ್ಣೆಯನ್ನು ಬಳಸುವುದು ಸಾಮಾನ್ಯವಾಗಿತ್ತು. ಭಾರತದಲ್ಲಿ ವಿಶೇಷ ಸಂದರ್ಭಗಳಲ್ಲಿ ತುಪ್ಪದ ಜ್ಯೋತಿ ಹಚ್ಚುವ ವಾಡಿಕೆಯೂ ಇತ್ತು. ತುಪ್ಪವೂ ಒಂದು ರೀತಿ ಪ್ರಾಣಿಯ ಕೊಬ್ಬಷ್ಟೆ!

ಗಾಜಿನ ಚಿಮಣಿಯ ರಕ್ಷಣೆ ಪಡೆದ ಎಣ್ಣೆ ದೀಪ

ದೀಪಗಳಲ್ಲಿ ಮತ್ತೊಂದು ಬೃಹತ್‌ ಬದಲಾವಣೆ ಆಗಿದ್ದು ಕಲ್ಲೆಣ್ಣೆಯ ಶೋಧವಾದ ಮೇಲೆ. 1846ರಲ್ಲಿ ಕೆನಡಾದ ಭೂವಿಜ್ಞಾನಿ ಹಾಗೂ ವೈದ್ಯನಾದ ಅಬ್ರಹಾಂ ಪಿನಿಯೋ ಗೆಸ್ನರ್‌ ಕಲ್ಲಿದ್ದಲಿನಿಂದ ಎಣ್ಣೆಯನ್ನು ತೆಗೆಯುವ ವಿಧಾನವನ್ನು ರೂಪಿಸಿದ. ಈ ಎಣ್ಣೆಯನ್ನು ಉರಿಸಿದಾಗ ಸಾಮಾನ್ಯ ಎಣ್ಣೆ ಉರಿದಾಗ ಹೊತ್ತಿಕೊಳ್ಳುವ ಜ್ವಾಲೆಗಿಂತಲೂ ನೀಲಿಯಾದ ಜ್ವಾಲೆ ಉರಿಯುವುದನ್ನು ಕಂಡ. ಈ ಎಣ್ಣೆಗೆ ಗ್ರೀಕ್‌ ಭಾಷೆಯಲ್ಲಿ ಮೇಣದ ಎಣ್ಣೆ ಎನ್ನುವ ಪದವಾದ ಕೆರೋಸಿಲೈನ್‌ ಎಂದು ಹೆಸರಿಟ್ಟ. ಹೀಗೆ ಸೀಮೆಣ್ಣೆಯ ಯುಗ ಆರಂಭವಾಯಿತು. ದೀಪಗಳಲ್ಲಿ ಇನ್ನೊಂದು ಹೊಸ ಬದಲಾವಣೆಗೆ ಹಾದಿಯಾಯಿತು.

1953 ಪೋಲ್ಯಾಂಡಿನ ಇಗ್ನಾಸಿ ಲ್ಯುಕೋವಿಕ್ಸ್‌ ಎಂಬಾತ ಕಲ್ಲಿದ್ದಲಿನಿಂದ ಸೀಮೆಣ್ಣೆಯನ್ನು ತಯಾರಿಸಲು ಆರಂಭಿಸಿದ. ಜೊತೆಗೇ ಈ ಎಣ್ಣೆಯನ್ನು ಬಳಸಿಕೊಂಡು ಉರಿಯುವ ಮೊದಲ ಬುಡ್ಡಿ ದೀಪವನ್ನು ರಚಿಸಿದ. ಇದಾದ ಮೂರೇ ವರ್ಷಗಳಲ್ಲಿ ಈತ ಪೆಟ್ರೋಲಿಯಂ ಇಂಧನವನ್ನೂ ಪತ್ತೆ ಮಾಡಿದ. ಅದನ್ನು ಸಂಸ್ಕರಿಸಿ ಪೆಟ್ರೋಲಿಯಮಿನಲ್ಲಿ ಇರುವ ವಿವಿಧ ಹೈಡ್ರೊಕಾರ್ಬನುಗಳನ್ನು ಪ್ರತ್ಯೇಕಿಸುವ ರಿಫೈನರಿಯನ್ನೂ ಸ್ಥಾಪಿಸಿದ. ಸೀಮೆಣ್ಣೆ ಹೀಗೆ ಹೆಚ್ಚು ದೊರೆಯುವಂತಾಯಿತು. ಅದರ ಬಳಕೆಗೆ ಒಂದು ಹಾದಿಯೂ ಸಿಕ್ಕಿತ್ತು. ಇದು ದೀಪಗಳ ಜಗತ್ತಿನಲ್ಲಿ ಪ್ರಖರವಾದ ಸಂಶೋಧನೆ. ಈ ಹಿಂದೆ ಅರಿತಿದ್ದ ದೀಪಕಲೆಯ ಎಲ್ಲ ಉಪಾಯಗಳನ್ನೂ ಇದರಲ್ಲಿಯೂ ಬಳಸಲಾಯಿತು. ಜ್ವಾಲೆ ನಿಧಾನವಾಗಿ ಉರಿಯಲು ಬತ್ತಿ,  ಉರಿಯನ್ನು ಗಾಳಿ ಆರಿಸದಂತೆ ಗಾಜಿನ ಕವಚ, ಎಣ್ಣೆಯನ್ನು ಶೇಖರಿಸುವ ವಿವಿಧ ರೀತಿಯ ಪಾತ್ರೆಗಳ ಆಕಾರಗಳು, ವಿನ್ಯಾಸಗಳು ಪುನಃ ಕಂಡು ಬಂದವು. ಲಾಂದ್ರ ಎನ್ನುವ ದೀಪ ಸರ್ವೇ ಸಾಮಾನ್ಯವಾಯಿತು.

                        ಲಾಂದ್ರ

 

ಆದರೆ ಸೀಮೆಣ್ಣೆಯ ಆವಿಷ್ಕಾರದಿಂದ ದೀಪದಲ್ಲಾದ ಬದಲಾವಣೆ ಇಷ್ಟಕ್ಕೇ ಮುಗಿಯಲಿಲ್ಲ. ಹೈಡ್ರೊಕಾರ್ಬನ್ನುಗಳ ಆವಿಷ್ಕಾರ, ಅದು ಬೆಂಕಿಯ ಬಗ್ಗೆ, ಜ್ವಾಲೆಗಳ ಬಗ್ಗೆ ಇನ್ನಷ್ಟು ಅರಿವನ್ನು ತಂದಿತು. ಹೈಡ್ರೊಕಾರ್ಬನ್ನುಗಳಿಗೂ ಸಾಂಪ್ರದಾಯಿಕ ಕೊಬ್ಬಿಗೂ ಸಾಕಷ್ಟು ವ್ಯತ್ಯಾಸವಿದೆ. ಸೀಮೆಣ್ಣೆ, ಪೆಟ್ರೋಲುಗಳಂತಹ ಹೈಡ್ರೊಕಾರ್ಬನ್ನುಗಳಿಗೆ ಕಿಡಿ ಸೋಂಕಿಸಿದರೆ ಸಾಕು ಅವು ಹೊತ್ತಿಕೊಂಡು ಉರಿಯುತ್ತವೆ. ಆದರೆ ತುಪ್ಪ, ಕೊಬ್ಬರಿ, ಕಡಲೆ, ಸಾಸಿವೆ ಎಣ್ಣೆಗಳು ಹಾಗಲ್ಲ. ಇವುಗಳನ್ನು ಮೊದಲು ಬಿಸಿಯಾಗಿಸಿ, ಆವಿಯಾಗಿಸಬೇಕು. ಅನಂತರ ಉರಿಸಬೇಕು. ಮೋಂಬತ್ತಿಯ ಮೇಣವೂ ಅಷ್ಟೆ. ಬಿಸಿಯಾಗಿ, ಕರಗಿ ಆವಿಯಾದ ಮೇಲಷ್ಟೆ ಉರಿದು ದೀಪವಾಗುತ್ತದೆ. ಹೀಗಾಗಿ ಇವುಗಳನ್ನು ಉರಿಸಲು ಇನ್ನೊಂದು ಜ್ವಾಲೆ ಬೇಕು. ಸಮಾರಂಭಗಳಲ್ಲಿ ದೀಪಗಳನ್ನು ಹೊತ್ತಿಸಲು ಹೆಣಗಾಟವಾಗುವುದು ಇದೇ ಕಾರಣಕ್ಕೇ. ಆದರೆ ಅದೇ ಬತ್ತಿಗೆ ಒಂದಿಷ್ಟು ಕರ್ಪೂರ ಹಚ್ಚಿದ್ದರೆ ಕೂಡಲೇ ಅದು ಹೊತ್ತಿಕೊಳ್ಳುವುದನ್ನು ಕಂಡಿದ್ದೀರಿ. ಕರ್ಪೂರ ಒಂದು ಹೈಡ್ರೊಕಾರ್ಬನ್ನು. 

ಹೈಡ್ರೊಕಾರ್ಬನ್ನುಗಳ ಈ ಗುಣಗಳ ಅರಿವು ದೀಪಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿತು. ಸೀಮೆಣ್ಣೆಯ ಮೇಲೇ ಒತ್ತಡವನ್ನು ಹೇರಿದರೆ, ಅದು ಅನಿಲವಾಗುತ್ತದೆ. ಎಣ್ಣೆಗಿಂತಲೂ ಅನಿಲದ ಉರಿ ಪ್ರಖರ. ನಷ್ಟವೂ ಕಡಿಮೆ. ಕ್ಷಮತೆಯೂ ಹೆಚ್ಚು. ಹೀಗಾಗಿ ಸೀಮೆಣ್ಣೆ ಬುಡ್ಡಿಗಳ ನಂತರದ ದಿನಗಳಲ್ಲಿ ಅನಿಲದ ದೀಪಗಳು ಬಳಕೆಗೆ ಬಂದವು. ಇಂತಹುದೇ ಒಲೆಯೂ ಬಳಕೆಯಲ್ಲಿತ್ತು. ಅನಿಲದ ಉರಿ ಇನ್ನಷ್ಟು ಪ್ರಖರವಾಗಿ ಕಾಣಲೆಂದು ವಿಶಿಷ್ಟ ಲೋಹಗಳು ಇರುವ ಬಟ್ಟೆಯ ಬತ್ತಿಗಳನ್ನೂ ಆವಿಷ್ಕರಿಸಲಾಯಿತು. ಪೆಟ್ರೋಮ್ಯಾಕ್ಸ್‌ ಎನ್ನುವ ದೀಪ ಬೆಳಕಿಗೆ ಬಂತು. ಇದು ಆಗಿದ್ದು 1910ನೇ ಇಸವಿಯಲ್ಲಿ. 

ಇಪತ್ತನೆಯ ಶತಮಾನದ ಆರಂಭದ ಆವಿಷ್ಕಾರ: ಪೆಟ್ರೊಮ್ಯಾಕ್ಸ್‌ ದೀಪ

ಇದಕ್ಕೂ ಮೊದಲೇ ಬೆಳಕಿನ ಸಾಧನಗಳಲ್ಲಿ ಅಭೂತಪೂರ್ವವೆನ್ನಿಸುವ ಬದಲಾವಣೆಗಳಾಗಿತ್ತು. ವಿದ್ಯುತ್ತು ಎನ್ನುವ ವಿದ್ಯಮಾನದಿಂದ ಶಾಖವನ್ನೂ, ಶಾಖದಿಂದ ಬೆಳಕನ್ನೂ ಉತ್ಪಾದಿಸಬಹುದು ಎಂದು ತಿಳಿಯಿತು. ವಿದ್ಯುತ್‌ ದೀಪದ ಆವಿಷ್ಕಾರವಾಯಿತು. ಅಮೆರಿಕೆಯ ಥಾಮಸ್‌ ಆಲ್ವ ಎಡಿಸನ್‌ 1879ರಲ್ಲಿಯೂ, ಹಾಗೂ ಇಂಗ್ಲೆಂಡಿನ ಜೋಸೆಫ್‌ ಸ್ವಾನ್‌ ಅದಕ್ಕೂ ಸ್ವಲ್ಪ ಮೊದಲೂ ಈ ಆವಿಷ್ಕಾರವನ್ನು ಪ್ರತ್ಯೇಕವಾಗಿ ಮಾಡಿದ್ದರು. ಆದರೆ ಇದರ ಬಳಕೆ ವ್ಯಾಪಕವಾಗಲು ಹಲವು ತೊಂದರೆಗಳಿದ್ದುವು. ಮೊದಲನೆಯದಾಗಿ ದೀಪದಲ್ಲಿ ಬಳಸುತ್ತಿದ್ದ ಕಾರ್ಬನಿನ ತಂತಿ ವಿದ್ಯುತ್ತು ಹರಿದಾಗ ಹುಟ್ಟಿದ ಶಾಖಕ್ಕೆ ಬಲು ಬೇಗನೆ ಉರಿದು ಹೋಗುತ್ತಿತ್ತು. ದೀಪದಿಂದ ಬರುವ ಬೆಳಕೂ ಕೂಡ ಮಸುಕಾಗಿರುತ್ತಿತ್ತು. 

ಅರಿವೇ ಶೋಧದ ಮೂಲವಷ್ಟೆ. ಇದೇ ಸಮಯದಲ್ಲಿ ಟಂಗ್‌ಸ್ಟನ್‌ ಎನ್ನುವ ಲೋಹ ಪತ್ತೆಯಾಗಿದ್ದೂ, ಅದು ಬಲು ತಾಪರೋಧಕವೆಂದು ತಿಳಿದದ್ದೂ ಎಡಿಸನ್ನನ ದೀಪಕ್ಕೆ ಹೊಸ ಹುರುಪು ಕೊಟ್ಟಿತು ಎನ್ನಬಹುದು. ಟಂಗ್‌ಸ್ಟನ್‌ ಲೋಹದ ಸುರುಳಿ ತಂತಿಯನ್ನು ಬಳಸಿದ ದೀಪಗಳು ದೀರ್ಘಕಾಲ ಉರಿಯಲಾರಂಭಿಸಿದವು. ವಿದ್ಯುತ್‌ ದೀಪದ ಹೊಸ ಯುಗ ಆರಂಭವಾಯಿತು.  ಮೊತ್ತ ಮೊದಲ ಬಾರಿಗೆ ಮಾನವನ ನಾಗರೀಕತೆಯೇ ಪಲ್ಲಟವಾಯಿತು. ನಿದ್ರೆಗೆ, ವಿರಾಮಕ್ಕೆ ಮೀಸಲಾಗಿದ್ದ ರಾತ್ರಿ ಹಗಲಿನಂತೆಯೇ ಚಟುವಟಿಕೆಯ ಕಾಲವಾಯಿತು. ಪಾಳಿಗಳಲ್ಲಿ ವ್ಯಾಪಾರ, ವಹಿವಾಟುಗಳು ನಡೆಯಲು ಅವಕಾಶವಾಯಿತು. ವಿದ್ಯುತ್‌ ದೀಪ ಮೊತ್ತ ಮೊದಲ ಎಣ್ಣೆ ರಹಿತ ದೀಪವಾಯಿತು.

ಎಡಿಸನ್‌ ಸೃಷ್ಟಿಸಿದ ಮೊದಲ ವಿದ್ಯುತ್‌ ಬಲ್ಬು

ದೀಪದ ಕಥೆ ನಿಲ್ಲುವುದೇ?  ಇಲ್ಲ.  ಇಂದಿಗೂ ಮುಂದುವರೆಯುತ್ತಿದೆ. ಎಲೆಕ್ಟ್ರಿಕ್‌ ಬಲ್ಬ್‌ ಎಂದು ಹೆಸರಾದ ಆರಂಭದ ವಿದ್ಯುತ್‌ ದೀಪಗಳ ಕ್ಷಮತೆ ಬಹಳ ಕಡಿಮೆ. ಅದರಲ್ಲಿ ಹರಿದ ವಿದ್ಯುತ್ತಿನ ಶೇಕಡ ಐದರಷ್ಟನ್ನಷ್ಟೆ ಅದು ಬೆಳಕಾಗಿ ಪರಿವರ್ತಿಸುತ್ತಿತ್ತು. ಉಳಿದ ತೊಂಭತ್ತೈದು ಶೇಕಡ ಶಾಖವಾಗಿ ನಷ್ಟವಾಗುತ್ತಿತ್ತು. ವಿದ್ಯುತ್‌ ದೀಪಗಳ ಬಳಕೆ ವ್ಯಾಪಕವಾದಂತೆಲ್ಲ, ಈ ನಷ್ಟ ಭಾರಿ ಎನಿಸತೊಡಗಿತು. ಉದಾಹರಣೆಗೆ, ಇಡೀ ಭಾರತದ ಎಲ್ಲ ಮನೆಗಳಲ್ಲಿಯೂ ಒಂದೊಂದೇ ದೀಪ ಇಡೀ ದಿನ ಬೆಳಗಿದರೆ ಆಗುವ ವಿದ್ಯತ್ತಿನ ನಷ್ಟ ಎಷ್ಟೆಂದರೆ ಆ ವಿದ್ಯುತ್ತಿನಿಂದ ಕೋಟ್ಯಂತರ ಮನೆಗಳಿಗೆ ಒಂದು ಗಂಟೆ ಅಡಿಗೆ ಮಾಡಲು ಬೇಕಾದಷ್ಟು ವಿದ್ಯುತ್ತನ್ನು ಇಡೀ ವರ್ಷ ಒದಗಿಸಬಹುದು. ಈ ನಷ್ಟವನ್ನು ಕಡಿಮೆ ಮಾಡುವ ಸಾಧನಗಳು ಬಂದಿದ್ದು ದೀಪಗಳ ವಿಕಾಸದಲ್ಲಿ ಮುಂದಿನ ಹೆಜ್ಜೆಗಳು. 

ಬಲ್ಬು ದೀಪಗಳ ನಂತರ ಬಂದಿದ್ದು ಫ್ಲೂರೆಸೆಂಟ್‌ ಅಥವಾ ಹೊಳೆಯುವ ವಿದ್ಯುತ್‌ ದೀಪಗಳು. ನಮ್ಮ, ನಿಮ್ಮ ಮನೆಯಲ್ಲಿ ಇತ್ತೀಚಿನವರೆಗೂ ಕಾಣುತ್ತಿದ್ದ ಕೊಳವೆ ದೀಪಗಳು ಈ ವರ್ಗದ ದೀಪಗಳು. ಇವುಗಳ ಆವಿಷ್ಕಾರವಾಗಿದ್ದೂ ಹೊಸ ಅರಿವಿನಿಂದ. ಅನಿಲಗಳೊಳಗೆ ವಿದ್ಯುತ್‌ ಹರಿದಾಗ ಏನಾಗುತ್ತದೆ ಎನ್ನುವ ಅರಿವು ಈ ದೀಪಗಳಿಗೆ ಮೂಲವಾಯಿತು. ವಿರಳವಾದ ಒತ್ತಡದಲ್ಲಿ ಇರುವ ಅನಿಲಗಳೊಳಗೆ ವಿದ್ಯುತ್ತು ಹರಿದಾಗ, ಅನಿಲ ಅಯಾನುಗಳಾಗುತ್ತದೆ. ಕೆಲವು ಅನಿಲಗಳು ಹೀಗಾದಾಗ ನೇರಳಾತೀತ ಕಿರಣಗಳನ್ನು ಸ್ಫುರಿಸುತ್ತವೆ. ಈ ಹೊಸ ಅರಿವು ಹೊಸ ದೀಪಕ್ಕೆ ಮೂಲವಾಯಿತು. ನೇರಳಾತೀತ ಕಿರಣಗಳನ್ನು ಹೀರಿಕೊಂಡು ಬೆಳಕನ್ನು ಚಿಮ್ಮುವ ಫಾಸ್ಫಾರುಗಳೆಂಬ ರಸಾಯನಿಕಗಳನ್ನು ಕೊಳವೆಯ ಒಳಗೆ ಲೇಪಿಸಿದರೆ ಸಾಕು. ದೀಪ ಬೆಳಗುತ್ತಿತ್ತು. ಫಾಸ್ಫಾರುಗಳು ಹೀಗೆ ಬೆಳಕನ್ನು ಚಿಮ್ಮುವುದನ್ನೇ ಫ್ಲೂರೆಸೆನ್ಸ್‌ ಎನ್ನುತ್ತಾರೆ. 

ಮೊತ್ತ ಮೊದಲ ಕೊಳವೆ ದೀಪ ಬಳಕೆಗೆ ಬಂದಿದ್ದು 1901 ರಲ್ಲಿ. ಪೀಟರ್‌ ಕೂಪರ್‌ ಹೆವಿಟ್‌ ಎಂಬಾತ ಮೊತ್ತ ಮೊದಲ ಬಾರಿಗೆ ಪಾದರಸದ ಆವಿಯನ್ನು ತುಂಬಿದ ಗಾಜಿನ ಬುಡ್ಡಿಯೊಳಗೆ ವಿದ್ಯುತ್ತು ಹರಿಸಿ ಬೆಳಕು ಬೆಳಗಿದ್ದ. ಹೀಗೆ ಬಳಕೆಗೆ ಬಂದ  ಫ್ಲೂರೆಸೆಂಟ್‌ ದೀಪಗಳು ಬಲ್ಬು ದೀಪಗಳಿಗಿಂತ ಹೆಚ್ಚು ಕ್ಷಮತೆಯವಾಗಿದ್ದರೂ, ತಮ್ಮೊಳಗೆ ಹರಿದ ವಿದ್ಯುತ್ತಿನ ಶೇಕಡ ಹತ್ತರಿಂದ ಹದಿನೈದರಷ್ಟನ್ನಷ್ಟೆ ಬೆಳಕಾಗಿಸುತ್ತಿದ್ದುವು. ಅಂದರೆ ಇನ್ನೂ ಎಂಭತ್ತರಿಂದ ತೊಂಭತ್ತು ವಿದ್ಯುತ್ತು ನಷ್ಟವಾಗುತ್ತಿತ್ತು. ಇಲ್ಲಿಂದ ಮುಂದಿನ ಬೆಳೆವಣಿಗೆಗಳೆಲ್ಲವೂ, ದೀಪಗಳ ಪ್ರಖರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಹೊಸ, ಹೊಸ ಫಾಸ್ಫರುಗಳನ್ನು ರೂಪಿಸುವುದರತ್ತ ಗಮನ ಹರಿಸಿದವು. ಅನಂತರ ದೀಪದಲ್ಲಿ ಬಳಸುವ ಕೊಳವೆಯನ್ನು ಸುರುಳಿ ಸುತ್ತಿ ಉದ್ದ ಮಾಡಿ, ಪುಟ್ಟ ದೀಪಗಳಿಂದಲೇ ಹೆಚ್ಚು ಬೆಳಕನ್ನು ಪಡೆಯುವ ಪ್ರಯತ್ನ ನಡೆಯಿತು. ಇದುವೇ ಕೆಲವು ವರ್ಷಗಳ ಹಿಂದೆ ಪ್ರಸಿದ್ಧಿ ಪಡೆದಿದ್ದ ಕಾಂಪಾಕ್ಟ್‌ ಫ್ಲೂರೆಸೆಂಟ್‌ ದೀಪಗಳು. ಈ ದೀಪಗಳು ಜನಪ್ರಿಯವೆನ್ನಿಸಿದರೂ ಪರಿಸರದ ದೃಷ್ಟಿಯಿಂದ ಇನ್ನೂ ಅಪಾಯಕಾರಿಯಾಗಿದ್ದುವು. ಹಳೆಯ ಬಲ್ಬುಗಳಲ್ಲಿ ಇರುವ ಫಾಸ್ಫರುಗಳು, ವಿಶೇಷವಾಗಿ ಪಾದರಸದ ಆವಿ ವಿಷವಾದ್ದರಿಂದ, ಇದಕ್ಕೆ ಪರ್ಯಾಯ ಮಾರ್ಗಗಳ ಹುಡುಕಾಟ ಆರಂಭವಾಯಿತು. 

ಇದರ ಮುಂದಿನ ಹಾದಿ ನಿಜಕ್ಕೂ ಅದ್ಭುತವೆನ್ನಿಸುವ ಬೆಳೆವಣಿಗೆ. ಈ ಬೆಳೆವಣಿಗೆಯ ಉದಾಹರಣೆಗೆ ಬಹಳ ದೂರ ಹೋಗಬೇಕಿಲ್ಲ. ಕರ್ನಾಟಕದ ಹೆಮ್ಮೆಯ ದಸರಾ ಉತ್ಸವ ಹಾಗೂ ಮೈಸೂರು ಅರಮನೆಯ ದೀಪಾಲಂಕಾರಗಳತ್ತ ಹೊರಳಿ ನೋಡಿದರೆ ಸಾಕು. ಕೆಲವೇ ವರ್ಷಗಳ ಹಿಂದೆ ಮೈಸೂರು ಅರಮನೆಯನ್ನು 98000 ಬಲ್ಬುಗಳಿಂದ ಬೆಳಗಲಾಗುತ್ತಿತ್ತು. ಪ್ರತಿಯೊಂದು ಬಲ್ಬೂ ಮೂವತ್ತು ವ್ಯಾಟ್‌ ಶಕ್ತಿಯದಾಗಿತ್ತು. ಅಂದರೆ ಪ್ರತಿಯೊಂದು ಬಲ್ಬೂ ಸುಮಾರು ಮೂರುನೂರು ವ್ಯಾಟ್‌ ಶಕ್ತಿಯನ್ನು ಬಳಸುತ್ತಿತ್ತು. ಹೀಗಾಗಿ ಅರಮನೆ ಬೆಳಗುತ್ತಿದ್ದಾಗ, ಮೈಸೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜು ಕಡಿತವಾಗುತ್ತಿತ್ತು. ಆದರೆ ಕಾಲ ಬದಲಾಗಿದೆ.  ಈ ಬಲ್ಬುಗಳ ಬದಲಿಗೆ ಎಲ್‌ ಇ ಡಿ ಬಲ್ಬುಗಳನ್ನು ಉಪಯೋಗಿಸುವ ಆಲೋಚನೆ ಇತ್ತು. ಆದರೆ ಎಲ್‌ ಇ ಡಿ ಬಲ್ಬುಗಳು ವಿದ್ಯುತ್‌ ಉಳಿಸುತ್ತವಾದರೂ ದೀಪಾಲಂಕಾರದ ಚಿನ್ನದ ಬಣ್ಣದ ಬೆಳಕನ್ನು ಅವು ಸೂಸುವುದಿಲ್ಲವಾದ್ದರಿಂದ ಸದ್ಯಕ್ಕೆ ಆ ಯೋಚನೆಯನ್ನು ಕೈ ಬಿಟ್ಟು ಮೊದಲಿದ್ದ ಬಲ್ಬುಗಳ ಪ್ರಖರತೆಯ ಅರ್ಧದಷ್ಟು ಪ್ರಖರವಾದ ಬಲ್ಬನ್ನಷ್ಟೆ ಬಳಸಲಾಗುತ್ತಿದೆ. 

ಎಲ್‌ಇಡಿ ಬಲ್ಬುಗಳು ಈಗ ಎಲ್ಲ ಕಡೆಯೂ ದೊರೆಯುತ್ತವೆ. ಆಸ್ಟ್ರೇಲಿಯಾ ಹಾಗೂ ಭಾರತ ಗೃಹಬಳಕೆಗೆ, ಅದರಲ್ಲೂ ದೀಪವನ್ನಾಗಿ ಬಳಸಲು ಎಲ್‌ ಇ ಡಿ ಗಳನ್ನೇ ಉಪಯೋಗಿಸಬೇಕೆಂದು ಕಡ್ಡಾಯವನ್ನೂ ಮಾಡಿವೆ. ಎಲ್‌ಇಡಿ ಎಂದರೆ ಹೊಸದೊಂದು ತಂತ್ರಜ್ಞಾನವೇ ಸರಿ. ಎಲ್‌ಇಡಿ ಬಲ್ಬುಗಳ ಆವಿಷ್ಕಾರಕ್ಕೆ ಎಲೆಕ್ಟ್ರೊ ಲ್ಯುಮಿನೆಸೆನ್ಸ್‌ ಎನ್ನುವ ವಿದ್ಯಮಾನ ಪತ್ತೆಯಾದದ್ದು ಕಾರಣ. ಎರಡು ವಿದ್ಯುತ್‌ ಎಲೆಕ್ಟ್ರೋಡುಗಳ ಮಧ್ಯೆ ಫಾಸ್ಫರನ್ನು ಇರಿಸಿದರೆ, ಇಲೆಕ್ಟ್ರೋಡುಗಳಿಂದ ವಿದ್ಯುತ್‌ ಹರಿಯುವಾಗ ಫಾಸ್ಫರು ಹೊಳೆಯುತ್ತದೆ ಎನ್ನುವ ಅರಿವನ್ನು 1936 ರಲ್ಲಿಯೇ ದೆಸ್ತ್ರೈ ಎಂಬಾತ ಪತ್ತೆ ಮಾಡಿದ್ದ. ಅನಂತರದ ದಿನಗಳಲ್ಲಿ ಅರೆವಾಹಕಗಳೆನ್ನುವ ಲೋಹಗಳ ಪತ್ತೆಯಾಯಿತು. ಇಂತಹ ಎರಡು ವಿಭಿನ್ನ ಅರೆವಾಹಕಗಳನ್ನು ವಿದ್ಯುತ್‌ ಧ್ರುವಗಳನ್ನಾಗಿ ಬಳಸಿ, ಅವುಗಳ ನಡುವೆ ವಿದ್ಯುತ್‌ ಹರಿಸಿದರೆ ಬೆಳಕು ಚಿಮ್ಮುವುದನ್ನು ಕಾಣಬಹುದು. ಬೆಳಕಿನ ಬಣ್ಣ ಅರೆವಾಹಕಗಳನ್ನು ಅವಲಂಬಿಸಿರುತ್ತದೆ. ವಿವಿಧ ಅರೆವಾಹಕ ಲೋಹಗಳನ್ನೂ, ಅವುಗಳ ಮಿಶ್ರಣಗಳನ್ನೂ ತಯಾರಿಸಿ, ವಿವಿಧ ಬಣ್ಣದ ಎಲ್‌ ಇ ಡಿ ಗಳನ್ನು ತಯಾರಿಸಬಹುದು. ಈ ಬಲ್ಬುಗಳು ಬೆಳಗುವಾಗಲೂ ತಣ್ಣಗೇ ಇರುತ್ತವೆಯಾದ್ದರಿಂದ, ಈ ವಿದ್ಯಮಾನವನ್ನು ಶೀತಲ ಬೆಳಕು ಎನ್ನುವುದೂ ಉಂಟು. 

ಎಲ್‌ಇಡಿಗಳ ಪತ್ತೆಯಾಗಿ ಸುಮಾರು ಐವತ್ತು ವರ್ಷಗಳಾಗಿವೆ. ಆದರೆ ಮನೆಯನ್ನು ಬೆಳಗುವ ದೀಪಗಳಾಗಿ ಇವುಗಳ ಬಳಕೆ ಆರಂಭವಾಗಿದ್ದು ಈಗಷ್ಟೆ. ಏಕೆಂದರೆ ಪುಟ್ಟ ಎಲ್‌ಇಡಿಗಳು ಪ್ರಖರವಾಗಿ ಹೊಳೆಯುತ್ತವೆಯಾದರೂ, ಅವುಗಳಿಂದ ಚಿಮ್ಮುವ ಬೆಳಕು ಸುತ್ತಲಿನ ಪರಿಸರವನ್ನು ಬೆಳಗುವಷ್ಟು ಶಕ್ತಿಯುತವಾಗಿರುವುದಿಲ್ಲ. ಜೊತೆಗೆ ಸಾಮಾನ್ಯವಾಗಿ ನೀಲಿಯೋ, ಕೆಂಪೋ ಬೆಳಕಷ್ಟೆ ಹೊಮ್ಮುತ್ತದೆ. ವಿದ್ಯುತ್‌ ಬಲ್ಬಿನಿಂದ ಹೊಮ್ಮುವಂತೆ ಎಲ್ಲ ಬಣ್ಣದ ಬೆಳಕೂ ಸಿಗಲಿಕ್ಕಿಲ್ಲ. ಹೀಗಾಗಿ ಹಲವು ಎಲ್‌ಇಡಿ ಬಲ್ಬುಗಳನ್ನು ಕೂಡಿಸಿ ಬಿಳಿ ಬಣ್ಣವನ್ನು ಪಡೆಯಬೇಕಾಗುತ್ತಿತ್ತು. ಇತ್ತೀಚೆಗೆ ಎಲ್‌ಇಡಿ ಹೊಮ್ಮಿಸುವ ಬೆಳಕನ್ನು ಬಿಳಿಯದನ್ನಾಗಿಸುವ ಫಾಸ್ಫರುಗಳನ್ನು ಉಪಯೋಗಿಸಿ ಬಲ್ಬುಗಳು ದೊರೆಯುತ್ತಿವೆ. ಇವು ಅತಿ ಕಡಿಮೆ ವಿದ್ಯುತ್ತನ್ನು ಬಳಸುವುದರಿಂದ ಜನಪ್ರಿಯವೂ ಹೌದು. ಆದರೆ ಒಂದು ಇಲೆಕ್ಟ್ರಿಕ್‌ ಬಲ್ಬು ಬಳಸುವ ಜಾಗದಲ್ಲಿ ಹಲವು ಎಲ್‌ಇಡಿ ಬಲ್ಬುಗಳನ್ನು ಬಳಸಬೇಕಾಗುತ್ತದೆ. ಹಾಗಿದ್ದರೂ ಇದು ವಿದ್ಯುತ್‌ ಉಳಿಸುವ ಸಾಧನವೇ ಸರಿ. 

ಇಂದು ಇನ್ನೂ ಒಂದು ಹೆಜ್ಜೆ ಮುಂದುವರೆದು, ಲೋಹಗಳಿಲ್ಲದ ಸಾವಯವ ವಸ್ತುಗಳಿಂದಲೇ ಎಲ್‌ ಇ ಡಿ ತಯಾರಿಸುವ ಪ್ರಯತ್ನಗಳು ನಡೆದಿವೆ. ಇವನ್ನು ಓಎಲ್‌ಇಡಿ ಎನ್ನುತ್ತಾರೆ. ಸದ್ಯಕ್ಕೆ ಇವು ಪ್ರದರ್ಶನ ಸಾಧನಗಳಾದ ಟೀವಿ ಹಾಗೂ ಸ್ಮಾರ್ಟ್‌ ಫೋನುಗಳ ಪರದೆಗಳಲ್ಲಿ ಹೆಚ್ಚು ಬಳಕೆಯಾಗುತ್ತಿವೆ.  ಕೈದೀಪದಂತೆ ಪ್ರಖರವಾಗಿ ಬೆಳಕನ್ನು ಬೀಸುವ ಓಎಲ್‌ಇಡಿ ದೀಪಗಳು ಇನ್ನೂ ಬಂದಿಲ್ಲ. ಆದರೆ ಸೂರ್ಯನ ಬೆಳಕಿನಿಂದ ದೊರೆಯುವ ಕಿಂಚಿತ್ತು ವಿದ್ಯುತ್ತಿನಿಂದಲೇ ಬೆಳಕನ್ನು ಹೊಮ್ಮಿಸುವ ಎಲ್‌ಇಡಿ ಟಾರ್ಚುಗಳು, ಪುಟ್ಟ ಪುಟ್ಟ ದೀಪಗಳನ್ನೇ ಪೋಣಿಸಿ ಸರಮಾಲೆಯಾಗಿ ಮಾಡಿದ ಎಲ್‌ ಇ ಡಿ ಪಟ್ಟಿಗಳು ಎಲ್ಲೆಡೆ ಬಳಕೆಯಾಗುತ್ತಿವೆ. ಹಣತೆಗಳನ್ನು ಬೆಳಗುತ್ತಿದ್ದ ದೀಪಾವಳಿಯಲ್ಲಿ ಈ ವಿದ್ಯುತ್‌ ಉಳಿಸುವ ಬಲ್ಬುಗಳು ಬೆಳಗುತ್ತಿವೆ. ಎಷ್ಟರ ಮಟ್ಟಿಗೆ ಎಂದರೆ, ಸೂರ್ಯನ ಬೆಳಕನ್ನೇ ಹಿರಿದು ಹಣತೆಯಲ್ಲಿ ಬೆಳಗುವ ಎಲ್‌ ಇ ಡಿ ದೀಪಗಳೂ ಬಂದಿವೆ. ಅರಮನೆಯ ದೀಪಾಲಂಕಾರಕ್ಕೆ ಒಗ್ಗದಿದ್ದರೆ ಏನಾಯಿತು, ಜನಸಾಮಾನ್ಯರ ಮನೆಗಳನ್ನು ಬೆಳಗುವುದರಲ್ಲಿ, ದಸರಾದ ರಸ್ತೆ ಅಲಂಕಾರಗಳಿಗೆ ಎಲ್‌ ಇ ಡಿ ದೀಪಗಳು ಒಗ್ಗಿಕೊಂಡಿವೆ. 

ಹಣತೆಯನ್ನೇ ಹಚ್ಚಿ ಸಂಭ್ರಮಿಸುತ್ತೇವೆಯೋ, ಎಲ್‌ಇಡಿ ದೀಪಮಾಲೆಯನ್ನೋ, ಅವರವರ ಇಷ್ಟಕ್ಕೆ ಬಿಟ್ಟದ್ದು. ಆದರೆ ಇವು ಎರಡೂ ಕೂಡ ಮಾನವ ತನಗೆ ದೊರೆತ ಅರಿವನ್ನು ಅತ್ಯಂತ ಫಲಕಾರಿಯನ್ನಾಗಿ ಬಳಸಿದ ಸಂಕೇತಗಳು. ಹಾಗೆಯೇ ಇವುಗಳು ಮರೆಯಾಗಿದ್ದೂ ಹೊಸ ಅರಿವಿನ ಅಲೆಯಿಂದಲೇ! ಹುಟ್ಟುವುದೂ ಹೊಸ ಅರಿವಿನಿಂದಲೇ!

  • ಶ್ರೀ ಕೊಳ್ಳೇಗಾಲ ಶರ್ಮ, ಪ್ರಕಾಶಕರು ಹಾಗೂ ಸಂಪಾದಕರು

ಈ ಲೇಖನವು ನವೆಂಬರ್ 2021 ಕುತೂಹಲಿ ಕನ್ನಡ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪೂರ್ಣ ಸಂಚಿಕೆಯನ್ನು ಕೆಳಗಿನ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ಓದಬಹುದು.

ನವೆಂಬರ್ 2021 ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ

ಹೊಸ ಚಂದಾದಾರರಾಗಲು  ಈ ಫಾರಮನ್ನು ಭರ್ತಿ ಮಾಡಿ. ಮುಂದಿನ ಸಂಚಿಕೆ ನಿಮ್ಮನ್ನು ಈಮೇಲಿನಲ್ಲಿ ತಲುಪುವುದು. https://forms.gle/gnSbAybCHL9wu1k46.   ನಿಮ್ಮ ಗೆಳೆಯರನ್ನೂ ಚಂದಾದಾರರನ್ನಾಗಿಸಲು ಈ ಲಿಂಕನ್ನು ಶೇರ್‌ ಮಾಡಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
ಕೊಳ್ಳೇಗಾಲ ಶರ್ಮ (ಎ.ಎಸ್.ಕೆ.ವಿ.ಎಸ್.ಶರ್ಮ)
ಪ್ರಕಾಶಕರು ಹಾಗೂ ಸಂಪಾದಕರು
ಮೊಬೈಲ್: +91-9886640328 | ಸ್ಥಿರ ದೂರವಾಣಿ: 91-0821-2971171

 

Leave a Reply

Your email address will not be published. Required fields are marked *

Close
Sign in
Close
Cart (0)

No products in the cart. No products in the cart.





0