ಗಂಗಪಾಣಿ | Gangapaani
Written by S Gangadaraiah
Published by Jirunde Pustaka
‘ಗಂಗಪಾಣಿ’ ನನ್ನಿಂದ ಬರೆಸಿಕೊಂಡ ಮೊದಲ ದೀರ್ಘ ಕಥನ. ನಾನು ಬೆಳೆದ ಹಾಗೂ ನನ್ನನ್ನು ರೂಪಿಸಿದ ಸೀಮೆ ಹಲವು ರೀತಿಯಲ್ಲಿ ವೈಶಿಷ್ಟ್ಯ ಹೊಂದಿರುವಂಥದು. ಇದು ಸ್ವಾತಂತ್ರ್ಯ ಚಳುವಳಿಯ ಬಿಸಿಯಲ್ಲಿ ಬೆಂದಿದೆ. ಭೂದಾನದಂಥ ಮಾನವೀಯ ಸಂಗತಿಗೆ ಸಾಕ್ಷಿಯಾಗಿದೆ. ಸ್ವಾತಂತ್ರ್ಯಕ್ಕೋಸ್ಕರ ಇಡೀ ಬದುಕನ್ನು ಮೂಡುಪಾಗಿಟ್ಟಿದ್ದ, ಜೀವ ತೆತ್ತ ನೂರಾರು ನಿದರ್ಶನಗಳಿವೆ.ಸಾಮರಸ್ಯದ ಬದುಕೊಂದನ್ನು ಬಾಳಿದ ತಾತಯ್ಯನಂಥ ಸಂತನ ಹೆಜ್ಜೆಗಳು ಈ ಇಲ್ಲಿವೆ. ತತ್ವಲೋಕದ ದಟ್ಟ ದಾರಿಗಳಿವೆ. ಇಲ್ಲಿನ ಜಾನಪದ ಹಾಗೂ ಕೃಷಿ ಬದುಕಿನ ಒಡನಾಟದ ವೈಭವಕ್ಕೆ ಸಾಕ್ಷಿಗಳಿವೆ. ಜುಂಜಪ್ಪನ ಕಾವ್ಯದಂಥ ಮಹಾಕಾವ್ಯ ಈ ಮಣ್ಣಿನಿಂದ ಚಿಗುರಿದೆ. ಮದಲಿಂಗನ ಕಣಿವೆಯ ಐತಿಹ್ಯವಿದೆ. ಅದೇರೀತಿ ಅಪಾರ ಜೀವ ಸಂಕುಲವನ್ನು ಪೊರೆಯುತ್ತಿದ್ದ ತುಂಬಾ ವಿಶೇಷವಾದ ಮಲ್ಲಿಗೆ ಗುಡ್ಡ, ಹಂದಿ ಗುಡ್ಡ, ಹುಲ್ಲೇ ಗುಡ್ಡ, ಜಾಲಗಿರಿ ಗುಡ್ಡ ಮುಂತಾದ ಗುಡ್ಡಗಳ ಸಾಲೇ ಇದೆ. ದುರಂತವೆಂದರೆ, ಅಂಥ ಗುಡ್ಡಗಳ ಎದೆಗಳನ್ನು ಬಗೆದು ನಡೆಸಿದ ಗಣಿಗಾರಿಕೆ ದುಃಸ್ವಪ್ನ ನನ್ನಂಥವನನ್ನು ಮಾಯದ ಗಾಯವಾಗಿ ನೋಯುಸುತ್ತಲೇ ಇದೆ. ಇಲ್ಲಿ ‘ಗತ ‘ಮತ್ತು ಸದ್ಯ’ಗಳು ಇನ್ನಿಲ್ಲದಂತೆ ಒಡನಾಡಿವೆ. ಅಂಥ ಒಡನಾಟದೊಂದಿಗೆ ಮೈದಾಳಿರುವ ಈ ದೀರ್ಘ ಕಥನ ನನ್ನನ್ನು ತಾರಾಡಿಸಿದ, ಘಾಸಿಗೊಳಿದ ಪರಿಗೆ ತತ್ತರಿಸಿದ್ದೇನೆ. ಇದರೊಂದಿಗಿನ ಕಳೆದ ಆರೇಳು ತಿಂಗಳಿನ ಒಡನಾಟ ಬರಯುವ ಹಾಗೂ ಬರೆಸಿಕೊಳ್ಳುವುದರ ನಡುವಿನ ಖುಷಿಯ ಗೆರೆಯನ್ನು ಹಾಗೂ’ನಾನು ಬರೆದೆ ಅಥವಾ ಬರೆಯುತ್ತೆನೆ’ಅನ್ನುವ ಹಮ್ಮಿಕೆಯ ದಾರ್ಷ್ಟ್ಯವನ್ನು ಮನದಟ್ಟು ಮಾಡಿಕೊಟ್ಟಿದೆ. ಹಿಂಗೆ ಬರೆಸಿಕೊಂಡ ‘ಗಂಗಪಾಣಿ’ಯ ಲೋಕ ನಿಮ್ಮಳಗನ್ನೂ ಹೊಕ್ಕರೆ ತುಂಬಾ ಸಂತೋಷ.
-ಎಸ್. ಗಂಗಾಧರಯ್ಯ
Reviews
There are no reviews yet.