ಜನಪ್ರಿಯ ಸಾಧನವಾದ ಬಾಲ್ ಪಾಯಿಂಟ್ ಪೆನ್ನು ಎಂಬ ಲೇಖನಿ ಬೆಳೆದು ಬಂದ ಬಗೆಯನ್ನು ವಿವರಿಸಿದ್ದಾರೆ ಅಮೃತೇಶ್ವರಿ. ಬಿ.
ಲೇಖನಿ ಅಥವಾ ಪೆನ್ನಿನ ಮಹತ್ವದ ಬಗ್ಗೆ ಹೇಳಬೇಕಿಲ್ಲ. “ಲೇಖನಿ ಕತ್ತಿಗಿಂತ ಹರಿತ” ಎನ್ನುವ ಒಂದು ನುಡಿಗಟ್ಟೇ ಅದನ್ನು ವಿವರಿಸಿಬಿಡುತ್ತದೆ. ಈ ಬ್ರಹ್ಮಾಂಡದೊಳಗೇ ಸೃಷ್ಟಿಯಾಗಿರುವ ಈ ಪುಟ್ಟ ವಸ್ತುವು ತಾನಿರುವ ಇಡೀ ಬ್ರಹ್ಮಾಂಡವನ್ನೇ ಬೇಕಾದರೂ ಬರೆದು ಚಿತ್ರಿಸಿಬಿಡುತ್ತದೆ. ಈ ಪುಟ್ಟ ಸಾಧನಕ್ಕೆ ಅಷ್ಟು ಶಕ್ತಿ ಇದೆ. ಕಲೆ, ಸಾಹಿತ್ಯ, ಶಿಕ್ಷಣ, ವಿಜ್ಞಾನ, ಹೀಗೆ ಎಲ್ಲಾ ಕ್ಷೇತ್ರಗಳ ಅಭಿವೃದ್ದಿಗೆ ಈ ಲೇಖನಿ ಕೊಟ್ಟಿರುವ ಕೊಡುಗೆ ಅಷ್ಟಿಷ್ಟಲ್ಲ. ನಮ್ಮ ಮನದೊಳಗಿನ ಆಲೋಚನೆ, ಜ್ಞಾನ ಹಾಗೂ ಸೃಜನಾತ್ಮಕ ಕಲ್ಪನೆಗಳನ್ನು ಎಲ್ಲರ ಮುಂದೆ ಚಿತ್ರಿಸಲಿರುವ ಅದ್ಭುತ ಮಾಧ್ಯಮವಿದು. ಯಾವುದೇ ತಂತ್ರಜ್ಞಾನಗಳು ನೀಡಲಾಗದಂತಹ ಒಂದು ವಿಶೇಷ ಅನುಭವವನ್ನು ಈ ಲೇಖನಿ ನಮಗೆ ಆಸ್ವಾದಿಸಗೊಡುತ್ತದೆ. ಈ ಡಿಜಿಟಲ್ ಯುಗದಲ್ಲಿಯೂ ಪೆನ್ನು ಮತ್ತು ಕಾಗದ ಮಾತ್ರ ತನ್ನ ವಿಶೇಷತೆಯಿಂದಾಗಿ ಪ್ರೀತಿಯಿಂದ ಬಳಸಲ್ಪಡುತ್ತಿದೆ. ಬರೆಯಲೋ, ಚಿತ್ರಕಲೆಗಾಗಿಯೋ, ಒಟ್ಟಾರೆ ನಮ್ಮ ದೈನಂದಿನ ಜೀವನ ಮತ್ತು ಕ್ರಿಯಾಶೀಲ ಪ್ರಯತ್ನಗಳಿಗೆ ಒಂದು ಅನಿವಾರ್ಯ ಹಾಗೂ ಅವಶ್ಯಕ ಸಾಧನವಾಗಿ ತನ್ನ ಸ್ಥಾನವನ್ನುಳಿಸಿಕೊಂಡಿದೆ ಈ ಲೇಖನಿ.
ಲೇಖನಿಯ ಅನ್ವೇಷಣೆಯಾಗಿದ್ದು 4 ನೇ ಶತಮಾನದಲ್ಲಿ. ಮೊದಲ ಬಾರಿಗೆ ಪರಿಚಿತವಾದ ಪೆನ್ ಕೊಳವೆಯ ಹಾಗಿರುವ ರೀಡ್ ಸಸ್ಯಗಳಿಂದ ಮಾಡಿದುದಾಗಿತ್ತು (ಚಿತ್ರ 1). ಹಾಗಾಗಿ ರೀಡ್ ಪೆನ್ ಎನ್ನುವ ಹೆಸರಿನಲ್ಲಿಯೇ ಮೊದಲ ಲೇಖನಿ ಬರವಣಿಗೆ ಲೋಕಕ್ಕೆ ಕಾಲಿಟ್ಟಿತು. ಈಜಿಪ್ಟಿಯನ್ನರು ಪಪೈರಸ್ ಮರದ ಕಾಂಡಗಳ ಮೇಲೆ ವಿಷಯಗಳನ್ನು ದಾಖಲಿಸಲು ಈ ರೀಡ್ ಪೆನ್ ಅನ್ನು ಬಳಸುತ್ತಿದ್ದರು. ನಂತರ ಬಾತುಕೋಳಿಗಳ ಗರಿಗಳನ್ನೇ ಲೇಖನಿಗಳಾಗಿ ಬಳಸಿಕೊಂಡರು. ಗರಿಯ ತುದಿಯನ್ನು ಚೂಪಾಗಿಸಿ ಮಸಿ(ಇಂಕು)ಯಲ್ಲಿ ಅದ್ದಿ ಕಾಗದದ ಮೇಲೆ ಬರೆಯುತ್ತಿದ್ದರು (ಚಿತ್ರ 2). ಮುಂದೆ 1822 ರಲ್ಲಿ ಸ್ಟೀಲ್ ಪಾಯಿಂಟ್ ಪೆನ್ನುಗಳು ಬಂದವು (ಚಿತ್ರ 3). ಇವುಗಳೂ ಮಸಿಯಲ್ಲಿ ಅದ್ದಿಯೇ ಬರೆಯಬೇಕಾಗಿದ್ದ ಲೇಖನಿಗಳು. ಅದುವರೆಗೂ ಒಂದು ಬಾಟಲಿಯಲ್ಲಿ ಮಸಿಯನ್ನಿಟ್ಟುಕೊಂಡು ಪೆನ್ನಿನಿಂದ ಅದ್ದಿ ಬರೆಯಬೇಕಿತ್ತು. ಆದರೆ 1844 ರಲ್ಲಿ ಮೊದಲ ಬಾರಿಗೆ ಲೇಖನಿಯ ಒಳಗೇ ಮಸಿಯನ್ನಿರಿಸಿದ, ಅದು ಕಾಗದವನ್ನು ಸಂಪರ್ಕಿಸಿದಾಗ ಮಸಿಯು ಬರೆಯುವಂತಹ ಫೌಂಟೆನ್ ಪೆನ್ನನ್ನು (ಚಿತ್ರ 4) ಲಿವಿಸ್ ಎಡ್ಸನ್ ವಾಟರ್ಮನ್ ಎಂಬಾತ ರೂಪಿಸಿದ. ಇದರಲ್ಲಿ ಮಸಿ ಸರಾಗವಾಗಿ ಹರಿದು ಬರಲು ಅನುಕೂಲವಾಗುವಂತೆ ಮೂರು ವಿಭಾಗಗಳಿದ್ದು ಮೃದುವಾಗಿ ಬರೆಯಲಾಗುವಂತಿತ್ತು. ಇಲ್ಲಿಯವರೆಗೆಗಿನ ಲೇಖನಿಯ ವಿನ್ಯಾಸಗಳಿಗೆ ಹೋಲಿಸಿದರೆ ಲೇಖನಿಗಳ ವಿಕಸನದಲ್ಲಿ ಇದೊಂದು ಮಹತ್ತರ ಬೆಳವಣಿಗೆ ಎನ್ನಬಹುದು.
ಇದರ ನಂತರ ಬಂದುದೇ 1888 ರಲ್ಲಿ ಅಮೇರಿಕಾದ ಜಾನ್ ಜೆ ಲೌಡ್ ರೂಪಿಸಿದ, ಇಂದಿಗೂ ನಮ್ಮನಿಮ್ಮೆಲ್ಲರ ನೆಚ್ಚಿನದಾಗಿರುವ ಬಾಲ್ ಪಾಯಿಂಟ್ ಪೆನ್ (ಚಿತ್ರ 5). 1930 ರಲ್ಲಿ ಹಂಗೇರಿಯಾದ ದೇಶದ ಪತ್ರಕರ್‌ತ ಲ್ಯಾಜ಼್ಲೊ ಬಿರೋ ಎಂಬಾತ ವಾರ್ತಾಪತ್ರಿಕೆಯನ್ನು ಬರೆಯುವಾಗ ಶಾಯಿಯು ಸೋರಿ ಕಿರಿಕಿರಿಯಾಗುತ್ತಿತ್ತು. ಆಗ ಅವನಿಗೆ ಬರೆದ ಕೂಡಲೇ ವೇಗವಾಗಿ ಒಣಗಿ ಹೋಗುವ ಶಾಯಿಯನ್ನು ರೂಪಿಸುವ ಮತ್ತು ಅದರಿಂದ ಲೌಡ್ ಆವಿಷ್ಕರಿಸಿದ್ದ ಬಾಲ್ ಪಾಯಿಂಟ್ ಮೆಕ್ಯಾನಿಸಮ್ ಬಳಸಿಕೊಂಡು ಈಗ ನಾವು ನೋಡುವ ಹೊಸ ಮಾದರಿಯ ಬಾಲ್ ಪಾಯಿಂಟ್ ಲೇಖನಿಗಳನ್ನು ತಯಾರು ಮಾಡುವ ಉಪಾಯ ಹೊಳಿಯಿತು. ಇಲ್ಲಿಗೆ ಮಸಿಯಲ್ಲಿ ಅದ್ದಿಕೊಂಡು ಬರೆಯುವ ಲೇಖನಿಯ ಕಥೆ ಅಂತ್ಯಕಂಡಿತು. ಬಾಲ್ಪಾಯಿಂಟ್ ಪೆನ್ ಅತಿ ಹೆಚ್ಚು ಬಳಸಲ್ಪಡುವ ದೀರ್ಘಕಾಲ ಬಾಳಿಕೆ ಬರುವ ಲೇಖನಿಯಾಯಿತು. ಇದಲ್ಲದೇ ರೋಲರ್ ಬಾಲ್ ಪೆನ್, ಕ್ಲಿಕ್ ಪೆನ್, ನಾವೆಲ್‌ಟಿ ಪೆನ್, ಸ್ಕೆಚ್ ಪೆನ್, ಡಿಜಿಟಲ್ ಪೆನ್, ಹೈಲೈಟರ್ ಪೆನ್, ಟಚ್ ಸ್ಕ್ರೀನು ಫೋನುಗಳನ್ನು ಚಲಾಯಿಸಲೆಂದೇ ಸ್ಟೈಲಸ್ ಪೆನ್, ಹೀಗೆ ಮುಂತಾದ ಅನೇಕ ಲೇಖನಿಯ ವಿಧಗಳನ್ನೂ ನಾವಿಂದು ಬಳಸುತ್ತಿದ್ದೇವೆ.
ಬಾಲ್ ಪಾಯಿಂಟ್ ಲೇಖನಿಯ ವಿಶೇಷತೆಗೆ ಕಾರಣ ಅದರ ವಿನ್ಯಾಸ. ಹೆಸರೇ ಹೇಳುವಂತೆ ಈ ಪೆನ್ನಿನ ಬರೆಯುವ ತುದಿಯಲ್ಲಿ ತಿರುಗುವ ಒಂದು ಪುಟ್ಟ ಚೆಂಡು ಇರುತ್ತದೆ. ಕಾಗದದ ಮೇಲೆ ಬರೆಯುವಾಗ ಆ ಚೆಂಡು ತಿರುಗುತ್ತದೆ. ಮಸಿಯು ಆ ಚೆಂಡಿನ ಮೂಲಕ ಹೊರಬರುತ್ತದೆ. ತಿರುಗುವ ಚೆಂಡು ಶಾಯಿಯು ಒಣಗದಂತೆ ಕಾಯ್ದುಕೊಳ್ಳುವುದಲ್ಲದೇ, ಅದನ್ನು ಹದವಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳುತ್ತದೆ. ಮತ್ತು ಪ್ರತಿ ಬಾರಿ ಚೆಂಡು ತಿರುಗಿದಾಗ ಒಳಗಿನಿಂದ ಸ್ವಲ್ಪ ಸ್ವಲ್ಪವೇ ಶಾಯಿಯನ್ನು ತೆಗೆದುಕೊಂಡು ಹೊರಗಡೆಗೆ ಬಂದು ಬರೆದು ಪುನಃ ತಿರುಗಿ ಒಳಹೋಗುತ್ತದೆ. ಹೀಗೆ ಇದು ತಿರುಗಲು ಅನುಕೂಲಿಯಾಗಲೆಂದೇ ಇದು ಯಾವಾಗಲೂ ವೃತ್ತಾಕಾರದಲ್ಲಿಯೇ ಇರುತ್ತದೆ. ಇದು ಬಾಲ್ ಪಾಯಿಂಟ್ ಮೆಕ್ಯಾನಿಸಮ್ ಎಂದೇ ಪ್ರಸಿದ್ದಿ. ಬಾಲ್ ಪಾಯಿಂಟ್ ಪೆನ್ನಿನ ಆ ಪುಟ್ಟ ಚೆಂಡನ್ನು ಸಾಮಾನ್ಯವಾಗಿ, ಹಿತ್ತಾಳೆ, ಉಕ್ಕು ಅಥವಾ ಟಂಗ್ಸ್ಟನ್ ಕಾರ್ಬೈಡ್ ಇವುಗಳಿಂದ ಮಾಡಲಾಗುತ್ತದೆ. ಜೊತೆಗೆ ಲೇಖನಿಗಳ ನಡುವಿನ ವ್ಯತ್ಯಾಸವನ್ನು ತರುವುದೇ ಬರೆಯುವ ತುದಿ ಹಾಗೂ ಅದರಲ್ಲಿ ಬಳಸುವ ಶಾಯಿ.
ಬಾಲ್ ಪಾಯಿಂಟ್ ಪೆನ್ನುಗಳಲ್ಲಿ ಬಳಸುವ ಶಾಯಿ ಎಣ್ಣೆ ಆಧಾರಿತ. ನಾವು ಬರೆಯುವಾಗ ಈ ಎಣ್ಣೆ ಆಧಾರಿತ ಶಾಯಿ ಹೊರಬರಬೇಕು. ಇದು ಜಿಗುಟಾಗಿರುವುದರಿಂದ (viscosity) ಬರೆಯುವಾಗ ತುಸು ಹೆಚ್ಚಿನ ಒತ್ತಡವನ್ನೇ ಹಾಕಬೇಕಿರುತ್ತದೆ. ಇತರೆ ಲೇಖನಿಗಳ ಶಾಯಿಗಳು ನೀರಿನಾಧಾರಿತವಾಗಿದ್ದು ಇವಕ್ಕೆ ಹೋಲಿಸಿದರೆ ಬಾಲ್ ಪಾಯಿಂಟ್ ಲೇಖನಿಗಳ ಶಾಯಿಯಲ್ಲಿ ಬಳಸುವ ಎಣ್ಣೆಯ ಜಿಗುಟುತನ ಹೆಚ್ಚಿರುತ್ತದೆ. ಆದ್ದರಿಂದಲೇ ಬೇಗನೆ ಒಣಗಿ ಹೋಗುತ್ತದೆ. ಲೇಖನಿಗಳು ಹೇಗೆ ಬರೆಯುತ್ತದೆ ಎನ್ನುವುದು ಶಾಯಿಯ ಜಿಗುಟುತನವನ್ನೇ ಅವಲಂಭಿಸಿರುತ್ತದೆ. ಜೆಲ್ ಪೆನ್ ಗಳ ಶಾಯಿಯ ಜಿಗುಟುತನ ತುಸು ಕಡಿಮೆಯಿರುತ್ತದೆ. ರೋಲರ್ ಬಾಲ್ ಪಾಯಿಂಟ್ ಲೇಖನಿಯ ಶಾಯಿಯ ಜಿಗುಟುತನ ಇನ್ನೂ ಕಡಿಮೆ. ಫೌಂಟೆನ್ ಪೆನ್ನುಗಳ ಶಾಯಿಯ ಜಿಗುಟುತನ ಅತ್ಯಂತ ಕಡಿಮೆ, ನೀರಿನ ಹಾಗೆ. ಬರೆಯುವ ಅನುಭವ ಎಲ್ಲರಿಗೂ ಇದ್ದೇ ಇರುತ್ತಾದ್ದರಿಂದ ಲೇಖನಿಯ ವಿಧಗಳು ಹಾಗೂ ಅವುಗಳಲ್ಲಿನ ವ್ಯತ್ಯಾಸಗಳು ಇಲ್ಲಿ ಕೊಟ್ಟಿರುವ ಚಿತ್ರಗಳನ್ನು ನೋಡಿದರೆ ಅರ್ಥವಾಗುವುದು.
ಸಾಮಾನ್ಯವಾಗಿ ಈ ಬಾಲ್ ಪಾಯಿಂಟ್ ಲೇಖನಿಗಳ ಮಸಿಯಲ್ಲಿ ಶೇಕಡಾ 25 ರಿಂದ 40 ರಷ್ಟು ಬಣ್ಣವಿರುತ್ತದೆ. ಈ ಬಣ್ಣಗಳನ್ನು ಬೆಂಜಾಯಿಲ್ ಆಲ್ಕೊಹಾಲ್ ಅಥವಾ ಫಿನಾಕ್ಸೀಎಥನಾಲುಗಳಂತಹ ಕೆಲವು ದ್ರಾವಣ ಹಾಗೂ ಒಲಿಯಿಕ್ ಆಮ್ಲದಂತಹ ಕೊಬ್ಬಿನಾಮ್ಲಗಳಲ್ಲಿ ಕರಗಿಸಿ ಶಾಯಿಯನ್ನು ತಯಾರಿಸಲಾಗುತ್ತದೆ. ಈ ಕೊಬ್ಬಿನಾಮ್ಲವು ಶಾಯಿಯ ಮಿಶ್ರಣವನ್ನು ಬಹಳ ನಯವಾಗಿ ಬೆರೆಸಿ, ಮೃದುವಾಗಿರಿಸುತ್ತದೆ. ಇದುವೇ ಶಾಯಿಯ ಅತ್ಯಂತ ವಿಶೇಷ ಗುಣ. ಇದು ಬರೆದ ಕೂಡಲೇ ಶಾಯಿ ಒಣಗಿ ಹೋಗುತ್ತದೆ. ಹರಡಿಕೊಳ್ಳುವುದಿಲ್ಲ. ಹಾಗೂ,. ಬಾಲ್ ಪಾಯಿಂಟ್ ವಿನ್ಯಾಸದಿಂದಾಗಿ ಶಾಯಿ ಸ್ವಲ್ಪವೂ ಸೋರದೇ, ಹರಡಿಕೊಳ್ಳದೇ ನಿಯಂತ್ರಿತವಾಗಿ ಹರಿದು ಬರುವುದರಿಂದ ನಿಖರವಾಗಿ ಮತ್ತು ವೇಗವಾಗಿ ಬರೆಯಲೂ ಅನುಕೂಲವಾಗಿದೆ. ಹಾಗಾಗಿಯೇ ಎಲ್ಲರ ನೆಚ್ಚಿನ ಲೇಖನಿಯ ವಿಧ. ಇನ್ನು, ಯಾವ ಕಾಗದದ ಮೇಲೆ ಬರೆದರೂ ಕಾಗದದ ಹಿಂದೆ ಅಥವಾ ಮುಂದಿನ ಪುಟಗಳಿಗೆ ಶಾಯಿ ಸೋರುವುದಾಗಲಿ, ಅಂಟಿಕೊಳ್ಳುವುದಾಗಲಿ ಆಗುವುದಿಲ್ಲ. ಬಹುಶಃ ಶಾಯಿಯ ಈ ಎಲ್ಲ ವಿಶೇಷತೆಗಳಿಂದಾಗಿ ಬಹುತೇಕ ಎಲ್ಲ ಕಡೆಗಳಲ್ಲಿಯೂ ಬಾಲ್ ಪಾಯಿಂಟ್ ಪೆನ್ನುಗಳಿಗೇ ಪ್ರಾಶಸ್ತ್ಯ ಹೆಚ್ಚು.
ಬಾಲ್ ಪಾಯಿಂಟ್ ಲೇಖನಿಯ ಬರೆಹವನ್ನು ಅಳಿಸುವುದು ಕಷ್ಟಸಾಧ್ಯ. ಅದಕ್ಕೆ ಕಾರಣ ಶಾಯಿಯಲ್ಲಿನ ರಾಸಾಯನಿಕ ಮಿಶ್ರಣ ಹಾಗೂ ಕಾಗದ ಅಥವಾ ಇತರೆ ವಸ್ತುಗಳ ಮೇಲ್ಮೈ ಮೇಲೆ ಅದು ಅಂಟಿಕೊಳ್ಳುವ ರೀತಿ. ಪೆನ್ಸಿಲಿನಿಂದ ಬರೆದಾಗ ಅದರಲ್ಲಿನ ಗ್ರಾಫೈಟ್ ಮಸಿ ಕೇವಲ ಕಾಗದದ ಮೇಲ್ಮೈಗೆ ಅಂಟಿಕೊಂಡಿರುತ್ತದಷ್ಟೆ. ಆದರೆ ಬಾಲ್ ಪಾಯಿಂಟ್ ಲೇಖನಿಯ ಶಾಯಿ ಕಾಗದದೊಳಗಿರುವ ಪದರಗಳೊಳಕ್ಕೆ ಇಳಿಯುತ್ತದೆ. ಹಾಗಾಗಿ ಪೆನ್ಸಿಲ್ ನಿಂದ ಬರೆದುದನ್ನು ಸುಲಭವಾಗಿ ಅಳಿಸಬಹುದು. ಮಸಿಯನ್ನು ಅಂಟಿಸಿಕೊಳ್ಳುವ ಮೃದುವಾದ ರಬ್ಬರು ಅದಕ್ಕೆ ಸಾಕು. ಆದರೆ ಬಾಲ್ ಪಾಯಿಂಟ್ ಪೆನ್ನಿನ ಶಾಯಿ ಹಾಗಲ್ಲ. ಅದು ಕಾಗದಕ್ಕೆ ಭದ್ರವಾಗಿ ಅಂಟಿಕೊಳ್ಳುತ್ತದೆ. ಆದರಿದು ನಾವು ಜಾಮಿಟ್ರಿ ಬಾಕ್ಸಿನೊಳಗೆ ಎರೇಸರ್ ಇಟ್ಟುಕೊಂಡು ಬೇಕಾದಾಗ ಅಳಿಸಲು ಬಳಸುವಷ್ಟು ಸುಲಭವಲ್ಲ. ಅಗತ್ಯವಿದ್ದಲ್ಲಿ ಅಸಿಟೋನು ಎನ್ನುವ ಕೊಬ್ಬು ಕರಗಿಸುವ ರಾಸಾಯನಿಕ ದ್ರವವನ್ನು ಬಳಸಿ ಅಳಿಸಬಹುದು. ಆದರೆ ಅದು ಸುಲಭವಲ್ಲ. ಹಾಗಾಗಿ, ಬಾಲ್ಪಾಯಿಂಟ್ ಶಾಯಿಯನ್ನು ಅಳಿಸದೇ ಒಂದು ಗೆರೆ ಎಳೆದು ಮುಂದೆ ಹೋಗುವುದೇ ಒಳಿತೆನ್ನಬಹುದು. ಅಥವಾ ವೈಟನರ್ ಎನ್ನುವ ಬಣ್ಣವನ್ನು ಬರೆಹದ ಮೇಲೆ ಹಚ್ಚಬೇಕಾಗುತ್ತದೆ.
ಬಾಲ್ ಪಾಯಿಂಟ್ ಪೆನ್ನುಗಳಲ್ಲಿ ಹಲವು ವಿಧಗಳಿವೆ. ಎಲ್ಲದರ ಮೂತಿಯಲ್ಲಿಯೂ ಉರುಳುವ ಗುಂಡು ಇರುತ್ತದೆನ್ನುವುದು ವಿಶೇಷ. ಬಾಲ್ ಪಾಯಿಂಟುಗಳಲ್ಲಿ ಮತ್ತೊಂದು ಬಗೆ ಎಂದರೆ ರೋಲರ್ ಬಾಲ್ ಪೆನ್. ಬಾಲ್ ಪಾಯಿಂಟ್ ಪೆನ್ನಿನಂತೆಯೇ ಬರೆಯುವ ಇದರ ತುದಿಯಲ್ಲಿಯೂ ಪುಟ್ಟ ಚೆಂಡು ಇರುತ್ತದೆ.. ಆದರೆ, ಬಳಸುವ ಶಾಯಿ ಮಾತ್ರ ಫೌಂಟೆನ್ ಅಥವಾ ಜೆಲ್ ಪೆನ್ಗಳಲ್ಲಿ ಬಳಸುವಂತಹ ಜಿಗುಟಲ್ಲದ ನೀರಿನಾಧಾರಿತ ಮಸಿ. ಈ ಲೇಖನಿಯಿಂದ ಬರೆಯಲು, ಬಾಲ್ ಪಾಯಿಂಟ್ ಲೇಖನಿಯಂತೆ ಒತ್ತಿ ಬರೆಯುವ ಅಗತ್ಯವಿಲ್ಲ. ಈ ಶಾಯಿಯು ನೀರಿನಂತಿರುವುದರಿಂದ ಕಾಗದದ ಆಳ-ಅಗಲಕ್ಕೆ ಬೇಗನೆ ಹರಡಿಕೊಂಡುಬಿಡುತ್ತದೆ ಮತ್ತು ಬರೆದರೆ ಎದ್ದು ಕಾಣುತ್ತದೆ. ಆದರೆ ಶಾಯಿಯು ಬಾಲ್ ಪಾಯಿಂಟ್ ಲೇಖನಿಯಲ್ಲಿ ಬಳಸುವ ಎಣ್ಣಿ ಆಧಾರಿತ ಶಾಯಿಯಂತೆ ಬೇಗ ಒಣಗುವುದಿಲ್ಲವಾದ್ದರಿಂದ ಎಲ್ಲ ಕಡೆ ಬಳಸಲು ಇದು ಸೂಕ್ತವಲ್ಲ.
ಬಾಲ್ ಪಾಯಿಂಟ್ ಪೆನ್ನು ಶಾಯಿಯ ಪೆನ್ನಿಗೆ ಇಲ್ಲದ ಹಲವು ಅನುಕೂಲಗಳನ್ನು ಒದಗಿಸಿದೆ. ಒಂದೇ ಲೇಖನಿಯಲ್ಲಿ ನೀಲಿ ಹಾಗೂ ಕೆಂಪು ಬಣ್ಣದ ಶಾಯಿಗಳಿರುವ ರೀಫಿಲ್ಗಳನ್ನಿಟ್ಟು ಟು ಇನ್ ಒನ್ ರಿಟ್ರಾಕ್ಟರ್ ಲೇಖನಿಗಳನ್ನೂ ಮಾಡಿದ್ದಾಗಿದೆ. ಜೊತೆಗೆ ಒಂದು ತುದಿಯಲ್ಲಿ ಕಾಗದದ ಮೇಲೆ ಬರೆಯುವ ಲೇಖನಿಯಾಗಿಯೂ ಮತ್ತೊಂದು ತುದಿಯಲ್ಲಿ ಟಚ್ ಸ್ಕ್ರೀನ್ ಫೋನುಗಳನ್ನು ಚಲಾಯಿಸುವ ಸ್ಟೈಲಸ್ ಅನ್ನೂ ಜೋಡಿಸಿರುವ ವಿಭಿನ್ನವಾದ ಬಹುಪಯೋಗಿ ಲೇಖನಿಯಾಗಿಯೂ ಈ ಬಾಲ್ ಪಾಯಿಂಟ್ ಪೆನ್ ನಮಗೀಗ ಲಭ್ಯವಿದೆ. ನಾಲ್ಕು ಬಗೆಯ ಶಾಯಿಗಳಿರುವ ಪೆನ್ನುಗಳೂ ಇವೆ. ಫೌಂಟನು ಪೆನ್ನುಗಳಾಗಿದ್ದರೆ ಒಂದೊಂದು ಶಾಯಿಗೂ ಒಂದೊಂದು ಪೆನ್ನು ಬೇಕಾಗುತ್ತಿತ್ತು.
ಅವಶ್ಯಕತೆಯೇ ಅನ್ವೇಷಣೆಯ ಮೂಲ (Necessity is the Mother of Invention) ಎನ್ನುವ ಹಾಗೆ, ಅಂದು ವಾರ್ತಾಪತ್ರಿಕೆಯನ್ನು ಬರೆಯುವಾಗ ಬಳಸುತ್ತಿದ್ದ ಶಾಯಿಯು ಗಟ್ಟಿ ಹಾಗೂ ಜಿಗುಟಾಗಿರುತ್ತಿದ್ದು, ಲೇಖನಿಯಿಂದ ಕಾಗದದ ಮೇಲೆ ಸಮನಾಗಿ ಹಂಚಿಕೆಯಾಗದೆ ಎದುರಾಗುತ್ತಿದ್ದ ಸಮಸ್ಯೆಗಳನ್ನು ನಿವಾರಿಸಲು ಯಶಸ್ವಿಯಾದ ಬಿರೋ ಎಂಬಾತ ಬಾಲ್ಪಾಯಿಂಟ್ ಮೆಕ್ಯಾನಿಸಮ್ ಅನ್ನು ಬಳಸಿಕೊಂಡು ಸುಲಲಿತವಾಗಿ ಬರೆಯುವ ಲೇಖನಿಯನ್ನು ನಮಗಿಂದು ಕೊಟ್ಟಿದ್ದಾರೆ. ಇದು ನಮ್ಮ ನಿಮ್ಮೆಲ್ಲರ ಬದುಕು ಬರೆಯುವ ಲೇಖನಿಯ ಕಥೆ.
_ _ _ _ _ _
ಈ ಲೇಖನವು ಅಕ್ಟೋಬರ್ ತಿಂಗಳ ಕುತೂಹಲಿ ಕನ್ನಡ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪೂರ್ಣ ಸಂಚಿಕೆಯನ್ನು ಕೆಳಗಿನ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ಓದಬಹುದು.
ಅಕ್ಟೋಬರ್ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
ಕೊಳ್ಳೇಗಾಲ ಶರ್ಮ (ಎ.ಎಸ್.ಕೆ.ವಿ.ಎಸ್.ಶರ್ಮ)
ಪ್ರಕಾಶಕರು ಹಾಗೂ ಸಂಪಾದಕರು
ಮೊಬೈಲ್: +91-9886640328 | ಸ್ಥಿರ ದೂರವಾಣಿ: 91-0821-2971171